ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಯ ಮನೆಗಳಲ್ಲಿ ಹಗಲಿರುಳು ಬೆಳಕು

Last Updated 14 ಮೇ 2012, 19:30 IST
ಅಕ್ಷರ ಗಾತ್ರ

ಉತ್ತರ ಕರ್ನಾಟಕದ ಧಾರವಾಡ, ಬೆಳಗಾವಿ, ವಿಜಾಪುರ, ಬಾಗಲಕೋಟೆ, ಹಾವೇರಿ, ಗದಗ ಹಾಗೂ ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 100 ಗ್ರಾಮಗಳ ಸುಮಾರು 35 ಸಾವಿರ ಕುಟುಂಬಗಳಿಗೆ ಈಗ ತಂತಿಗಳಲ್ಲಿ ಹರಿದು ಬರುವ ವಿದ್ಯುತ್ ಅನಿವಾರ್ಯವೇನಲ್ಲ. ಹಾಗಂತ ಅವರೇನೂ ರಾತ್ರಿ ಕತ್ತಲೆಯಲ್ಲಿ ಕಳೆಯುವುದಿಲ್ಲ. ಅವರ ಮನೆಗಳಲ್ಲಿ ಸೌರಶಕ್ತಿಯ ದೀಪಗಳಿವೆ, ವಿದ್ಯುತ್ ಕಡಿತದ ಆತಂಕ ದೂರಾಗಿದೆ.

ಈ ಪರಿವರ್ತನೆ ಗ್ರಾಮಸ್ಥರಿಗಂತೂ ಹೇಳತೀರದಷ್ಟು ಖುಷಿ ಕೊಟ್ಟಿದೆ. ಇಲ್ಲಿ ಹಗಲು ಉರಿಯುವ ಸೂರ್ಯ ರಾತ್ರಿಯೂ ಸೌರದೀಪದ ಮೂಲಕ ಬೆಳಕು ಬೀರುತ್ತಿದ್ದಾನೆ. 
ವ್ಯಾಪಾರಿ ಮನೋಭಾವದ ಜೊತೆಜೊತೆಗೇ ಸಾಮಾಜಿಕ ಜವಾಬ್ದಾರಿಯನ್ನೂ ಪ್ರದರ್ಶಿಸಿದರೆ ಗ್ರಾಮೀಣ ಜನರ ಬದುಕನ್ನು ಒಂದಿಷ್ಟು ಬೆಳಗಲು ಸಾಧ್ಯ ಎಂಬುದನ್ನು ಧಾರವಾಡದಲ್ಲಿ ಕೇಂದ್ರ ಕಚೇರಿ ಹೊಂದಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಈ ಮೂಲಕ ಮಾಡಿ ತೋರಿಸಿದೆ. 

ಒಂಬತ್ತು ಜಿಲ್ಲೆಗಳಲ್ಲಿ ಕಾರ್ಯವ್ಯಾಪ್ತಿ ಹೊಂದಿರುವ ಇದು `ಕೆವಿಜಿ ಬ್ಯಾಂಕ್~ ಎಂದೇ ಹೆಸರುವಾಸಿ. ಸೌರ ಶಕ್ತಿ ಬಳಕೆ ಜನಪ್ರಿಯಗೊಳಿಸಲು ಶ್ರಮಿಸುತ್ತಿರುವ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಡಾ.ಹರೀಶ್ ಹಂದೆ ಅವರ ಸಹಯೋಗ ಪಡೆದುಕೊಂಡು, ಹೆಸ್ಕಾಂ (ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ) ಮತ್ತು ಮೆಸ್ಕಾಂ (ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ) ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳಲು ಗ್ರಾಮಗಳ ಜನತೆಗೆ ಅವಕಾಶ ಕಲ್ಪಿಸಿದೆ.

ಇದಕ್ಕಾಗಿ ಸೌರಶಕ್ತಿಯ ಮಹತ್ವ ಅರಿತುಕೊಂಡ ಬ್ಯಾಂಕ್ ಹಳ್ಳಿ-ಹಳ್ಳಿಗೆ ತೆರಳಿ ಗ್ರಾಮೀಣರ ಮನವೊಲಿಸಿ ಮನೆಗಳಲ್ಲಿ ಸೋಲಾರ್ ಬಲ್ಬ್ ಅಳವಡಿಸಲು `ವಿಕಾಸ ಕಿರಣ~ ಯೋಜನೆ ರೂಪಿಸಿತು.
 
ಕೇಂದ್ರ ಸರ್ಕಾರದ ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ (ಎಂಎನ್‌ಆರ್‌ಇ) ಮಾನ್ಯತೆ ಪಡೆದ ಸೆಲ್ಕೊ, ಟಾಟಾ ಬಿಪಿ ಸೋಲಾರ್, ಓಆರ್‌ಬಿ ಎನರ್ಜಿ ಸಂಸ್ಥೆಗಳಿಂದ ಸೌರ ವಿದ್ಯುತ್ ಸಾಧನ ಖರೀದಿಸಿ ಮನೆಗಳಲ್ಲಿ ಅಳವಡಿಸಿಕೊಳ್ಳಲು ಫಲಾನುಭವಿ ಗ್ರಾಮಸ್ಥರನ್ನು ಪ್ರೋತ್ಸಾಹಿಸಿತು. ಪ್ರತಿ ಕುಟುಂಬಕ್ಕೆ ಸರಾಸರಿ 13,500 ರೂಪಾಯಿ ದೀರ್ಘಾವಧಿ ಸಾಲ ನೀಡಿತು. ಈಗ ಕಾಣುತ್ತಿರುವ ಬದಲಾವಣೆ ಆ ಪ್ರಯತ್ನದ ಫಲ.

`ಯಾವುದೇ ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು~ ಎಂಬ ಮಾತಿದೆ. ಅದರಂತೆ ಕೆವಿಜಿ ಬ್ಯಾಂಕ್ ಹಳ್ಳಿಯ ಜನರಿಗೆ ಸೌರ ವಿದ್ಯುತ್‌ನ ಮಹತ್ವದ ಬಗ್ಗೆ ಉಪದೇಶ ನೀಡುವುದಕ್ಕೆ ಮುನ್ನ ತಾನೇ ಅಳವಡಿಸಿಕೊಂಡು ಮಾದರಿಯಾಗಿದೆ. ಅಂದರೆ ಸೌರದೀಪಗಳನ್ನು ತನ್ನ ಪ್ರಧಾನ ಕಚೇರಿ ಸೇರಿದಂತೆ ಒಟ್ಟು 112 ಶಾಖೆಗಳಲ್ಲಿ ಅಳವಡಿಸಿದೆ.

ಬದಲಾದ ಬದುಕು
`ಸುಮಾರು ಒಂದು ದಶಕದ ಹಿಂದಿನ ಮಾತು. ಆಗ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆ ಈಗಿನಷ್ಟು ಉತ್ತಮವಾಗಿರಲಿಲ್ಲ. ರಾತ್ರಿಯಂತೂ ಯಾವಾಗ ಬೇಕಾದರೂ ಕರೆಂಟ್ ಹೋಗುತ್ತಿತ್ತು. ಶೌಚಕ್ಕಾಗಿ ಬಯಲನ್ನೇ ಅವಲಂಬಿಸಿರುವ ಗ್ರಾಮೀಣರು ಕತ್ತಲಲ್ಲಿ ಹಾವು ಕಚ್ಚಿಸಿಕೊಂಡು ಸಾವಿಗೀಡಾದ ಘಟನೆಗಳೂ ನಡೆಯುತ್ತಿದ್ದವು.

ಅಲ್ಲದೇ, ಚಿಮಣಿ ಎಣ್ಣೆಯ ಬುಡ್ಡಿ ದೀಪ ಹಚ್ಚಿ ಅಡುಗೆ, ದೀಪದ ಹೊಗೆ ಹಲವು ಬಗೆಯ ಕಣ್ಣಿನ ರೋಗಗಳಿಗೆ ಕಾರಣವಾಗುತ್ತಿತ್ತು. ಪರೀಕ್ಷೆ ಎದುರಿಸಬೇಕಿದ್ದ ಮಕ್ಕಳಿಗೆ ಕರೆಂಟ್ ಕೈಕೊಡುತ್ತಿದ್ದುದರಿಂದ ಸರಿಯಾಗಿ ಓದಲೂ ಆಗುತ್ತಿರಲಿಲ್ಲ.

ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಜನ ರೋಸಿಹೋಗಿದ್ದರು~ ಎಂದು ನೆನಪಿಸಿಕೊಳ್ಳುತ್ತಾರೆ ಬ್ಯಾಂಕ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಉಲ್ಲಾಸ ಗುನಗಾ.

`ಇಂಥ ಸಮಯದಲ್ಲಿ ಸೌರ ವಿದ್ಯುತ್ ಪರಿಕಲ್ಪನೆಯನ್ನು ಅವರಲ್ಲಿ ತುಂಬಲು ಬ್ಯಾಂಕ್ ಮುಂದಾಯಿತು. ವಿದ್ಯುತ್ ಸಮಸ್ಯೆಗೆ ಸೂರ್ಯ ಶಕ್ತಿಯೇ ಪರಿಹಾರ ಎಂದು ಮನವರಿಕೆ ಮಾಡಿಕೊಟ್ಟಿತು. ಇದರಿಂದ ಪ್ರಭಾವಿತರಾದ ಗ್ರಾಮಸ್ಥರು ಸೌರ ವಿದ್ಯುತ್ ಸಾಧನ ಖರೀದಿಗೆ ಆಸಕ್ತಿ ತೋರಿಸಿದರು.
 
ಅದರ ಫಲವಾಗಿ ಇದೀಗ ಹಾವಿನ ಕಡಿತಕ್ಕೆ ಒಳಗಾಗುವವರ ಪ್ರಮಾಣ ಕಡಿಮೆಯಾಗಿದೆ. ಮಕ್ಕಳು ಸೂಕ್ತವಾಗಿ ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ. ಸಂಜೆಯವರೆಗೆ ಮಾತ್ರ ಕೆಲಸ ಮಾಡುತ್ತಿದ್ದ ಬಡಗಿಗೆ ಇದೀಗ ಮಧ್ಯರಾತ್ರಿ 12 ಗಂಟೆಯವರೆಗೂ ಕೆಲಸ ಮುಂದುವರಿಸಲು ಸಾಧ್ಯವಾಗಿದೆ.

ಕಂದೀಲಿನ ಮಿಣುಕು ದೀಪದ ಸ್ಥಾನದಲ್ಲಿ ಹೊಳೆವ ವಿದ್ಯುತ್ ಬೆಳಕು ಬಂದಿದೆ, ಅನೇಕ ಸಾಧನ ಸಲಕರಣೆಗಳು ಸೌರಶಕ್ತಿಯಿಂದ ಸುಲಲಿತವಾಗಿ ನಡೆಯುತ್ತಿವೆ. ಇದಕ್ಕೆಲ್ಲ ಸೌರದೀಪದ ಕೊಡುಗೆ ಬಹಳ~ ಎಂದು ಅವರು ಹೇಳುತ್ತಾರೆ.

ಈಗ ಒಂಬತ್ತು ಜಿಲ್ಲೆಗಳ 100 ಗ್ರಾಮಗಳು ಸೌರಗ್ರಾಮ ಎಂದು ಘೋಷಿತವಾಗಿವೆ. ಅಲ್ಲಿಗ ದಿನ ನಿತ್ಯದ ಬದುಕಿನ ಶೈಲಿಯೇ ಬದಲಾಗಿದೆ.

ನೂರಕ್ಕೂ ಹೆಚ್ಚು ಸದಸ್ಯರುಳ್ಳ ಅವಿಭಜಿತ ಕುಟುಂಬ ಎಂದೇ ದೇಶ ವಿದೇಶದಲ್ಲೂ ಹೆಸರಾದ ಧಾರವಾಡ ತಾಲ್ಲೂಕಿನ ಲೋಕೂರು ಗ್ರಾಮದ ನರಸಿಂಗನವರ ಕುಟುಂಬವೂ ಸೌರಶಕ್ತಿಯ ಮೊರೆ ಹೋಗಿದೆ. ನೂರಾರು ಜನಕ್ಕೆ ಆಹಾರ ಸಿದ್ಧಪಡಿಸಲು ಬೇಕಾಗುವ ಮೂಟೆಗಟ್ಟಲೇ ಕಾಳುಕಡಿಗಳನ್ನು ಹಸನು ಮಾಡುವ ಕಾರ್ಯ ಸೌರಶಕ್ತಿ ದೀಪ, ಸಾಧನಗಳಿಂದ ಸರಳವಾಗಿದೆ.

ಸೌರವಿದ್ಯುತ್ ಪ್ರೋತ್ಸಾಹಿಸುವ ಉದ್ದೇಶದಿಂದ ಬ್ಯಾಂಕ್ ಈ ವರ್ಷವೂ ಸುಮಾರು 50 ಗ್ರಾಮಗಳನ್ನು ಸಂಪೂರ್ಣ ಸೌರಗ್ರಾಮಗಳನ್ನಾಗಿ ಪರಿವರ್ತಿಸುವ ಗುರಿ ಹೊಂಡಿದೆ. ಬ್ಯಾಂಕ್‌ನ ಕ್ಷೇತ್ರ ಅಧಿಕಾರಿಗಳು ಈ ಬಗ್ಗೆ ಮನೆ ಮನೆಗೆ ತೆರಳಿ ಮಾಹಿತಿ ನೀಡಿ ಗ್ರಾಮಸ್ಥರ ಮನವೊಲಿಸುತ್ತಿದ್ದಾರೆ ಎನ್ನುತ್ತಾರೆ ಬ್ಯಾಂಕ್ ಅಧ್ಯಕ್ಷ ಸಿ. ಸಾಂಬಶಿವರೆಡ್ಡಿ.

                                               ===

120 ಮೆ.ವಾ ಉಳಿತಾಯ!
ಒಂಬತ್ತು ಜಿಲ್ಲೆಗಳ ನೂರು ಗ್ರಾಮಗಳಲ್ಲಿ ಸುಮಾರು 35 ಸಾವಿರ ಕುಟುಂಬಗಳು ಸೂರ್ಯನ ಬೆಳಕನ್ನು ರಾತ್ರಿಯೂ ಬಳಸಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿವೆ. ಇದರಿಂದ 120 ಮೆಗಾವಾಟ್ ವಿದ್ಯುತ್ ಉಳಿತಾಯವಾಗುತ್ತಿದೆ.

ಸೌರ ವಿದ್ಯುತ್ ಘಟಕ ಅಳವಡಿಸಿಕೊಳ್ಳಲು ಬ್ಯಾಂಕ್ ನೀಡಿದ ಸಾಲದ ಮೊತ್ತ 61.38 ಕೋಟಿ ರೂಪಾಯಿ. ಫಲಾನುಭವಿ ಕುಟುಂಬಗಳು ತಾವು ಪಡೆದ ಸಾಲವನ್ನು 36 ರಿಂದ 54 ಸಮಾನ ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು. ಎರಡು ದೀಪಗಳ ಒಂದು ಘಟಕದ ದರ ಸುಮಾರು 12 ಸಾವಿರ ರೂಪಾಯಿ.

ಕೇಂದ್ರ ಸರ್ಕಾರದ ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂಎನ್‌ಆರ್‌ಇ) ಎರಡು ದೀಪಗಳ ಘಟಕಕ್ಕೆ 1620 ರೂ ಹಾಗೂ ನಾಲ್ಕು ದೀಪಗಳ ಘಟಕಕ್ಕೆ 3330 ರೂ ಸಹಾಯಧನವನ್ನು ನಬಾರ್ಡ್ ಮೂಲಕ ಸಾಲಗಾರರ ಖಾತೆಗೆ ನೇರವಾಗಿ ಜಮಾ ಮಾಡುತ್ತದೆ.

ಹುಡುಗರ ಓದಿಗೆ ಅನುಕೂಲ
`21 ಮಂದಿ ದೊಡ್ಡ ಕುಟುಂಬ ನಮ್ಮದು. ದಿನಾ ರಾತ್ರಿ ಕಾಳು, ಕಡಿ ಹಸನ ಮಾಡೋ ಹೊತ್ತಿಗ ಕರೆಂಟ್ ಹೋಗಿ ತ್ರಾಸಾಗ್ತಿತ್ತು. ಸೋಲಾರ್ ಹಾಕಿಸಿದ ಮೇಲೆ ಆ ಕಷ್ಟ ಇಲ್ಲ. ಹುಡುಗುರೂ ರಾತ್ರಿ ಸರ ಹೊತ್ತಿನ ತನಾನೂ ಓದ್ತಾರ. ಅಡಗಿ ಕೆಲಸಾನೂ ಸುರುಳೀತ ಆಗ್ಯದ~ ಎನ್ನುತ್ತಾರೆ ದೇವಗಿರಿಯ ನಿಂಗಮ್ಮ ಕಬ್ಬೂರ.

ಚಿತ್ರಗಳು: ಬಿ. ಎಂ. ಕೇದಾರನಾಥ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT