ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಯ ಹೊಸ ಕಥೆ...

Last Updated 14 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

`ಕುರುನಾಡು', `ಶಂಕರ ಪುಣ್ಯಕೋಟಿ', `ಶ್ರೀ ಕ್ಷೇತ್ರ ಸಿದ್ಧಗಂಗಾ' ರೀತಿಯ ವಿಭಿನ್ನ ಚಿತ್ರಗಳನ್ನು ರೂಪಿಸಿದ್ದ ನಿರ್ದೇಶಕ ಜಿ. ಮೂರ್ತಿ ಈಗ `ಹಳ್ಳಿಯ ಮಕ್ಕಳು' ಚಿತ್ರದ ಚಿತ್ರೀಕರಣವನ್ನು ಸದ್ದಿಲ್ಲದೆ ಮುಗಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ `ಹಳ್ಳಿಯ ಮಕ್ಕಳು' ಚಿತ್ರದ ಕಥೆಯನ್ನು ಸಿನಿಮಾ ಮಾಡಲು ಅವರು ಪ್ರಯತ್ನಿಸುತ್ತಿದ್ದರಂತೆ. ಅದಕ್ಕೆ ಗಳಿಗೆ ಕೂಡಿ ಬಂದಿದ್ದು ಈಚೆಗೆ. `ಶ್ರೀ ಕ್ಷೇತ್ರ ಸಿದ್ಧಗಂಗಾ' ಚಿತ್ರದ ನಿರ್ಮಾಪಕ ಮಹಂತಪ್ಪ ಅವರೇ ಈ ಚಿತ್ರವನ್ನೂ ನಿರ್ಮಿಸಿದ್ದಾರೆ.
`ಹಳ್ಳಿಯ ಮಕ್ಕಳು' ಚಿತ್ರದ ಕಥೆ ಗ್ರಾಮ ಭಾರತದ ಅನೇಕ ತವಕತಲ್ಲಣಗಳಿಗೆ ಕನ್ನಡಿ ಹಿಡಿಯಲಿದೆಯಂತೆ.

ಪ್ರಕೃತಿ ಮತ್ತು ಹೆಣ್ಣಿನ ಸಮೀಕರಣ, ವಿದ್ಯೆಯ ಮಹತ್ವ, ಬಾಲ್ಯ ವಿವಾಹದ ಅಪಾಯಗಳು- ಹೀಗೆ, ಅನೇಕ ಸಂಗತಿಗಳನ್ನು ತಳುಕು ಹಾಕಿಕೊಂಡು ಅಂತಿಮವಾಗಿ ಸಮಾಜಕ್ಕೆ ಅಗತ್ಯವಾದ ಸಂದೇಶವೊಂದು ಚಿತ್ರದಲ್ಲಿ ಇದೆಯಂತೆ. ಶಿವಗಂಗೆ ಬೆಟ್ಟಕ್ಕೆ ಹೊಂದಿಕೊಂಡಿರುವ ಹಸಿರು ಪರಿಸರದ, ಕಂಬಳ ಗ್ರಾಮದ ಪರಿಸರವನ್ನು ಚಿತ್ರದಲ್ಲಿ ಸೊಗಸಾಗಿ ತೋರಿಸಲಾಗಿದೆಯಂತೆ.

ಸಿದ್ಧಗಂಗಾ ಚಿತ್ರದಲ್ಲಿ ನಟಿಸಿದ್ದ ತನ್ಮಯ ಈ ಚಿತ್ರದಲ್ಲೂ ನಟಿಸಿದ್ದಾರೆ. `ನನ್ನ ಪಾತ್ರದಲ್ಲಿ ಸಾಕಷ್ಟು ಏರಿಳಿತಗಳಿವೆ. ಇದು ಸವಾಲಿನ ಪಾತ್ರ' ಎನ್ನುವ ಖುಷಿ ಅವರದು. ಆಕಾಶವಾಣಿಯಲ್ಲಿ ನಾಟಕ ವಿಭಾಗದಲ್ಲಿ ದೀರ್ಘ ಕಾಲ ಕೆಲಸ ಮಾಡಿರುವ ವಿಜಯಲಕ್ಷ್ಮಿ ಈ ಚಿತ್ರದಲ್ಲಿ ಅಜ್ಜಿಯ ಪಾತ್ರದಲ್ಲಿದ್ದಾರೆ. ನಾ.ಡಿಸೋಜಾ ಅವರ ಕಥೆಗಳಲ್ಲಿನ ಅಜ್ಜಿಯಂತೆ ಈ ಅಜ್ಜಿಯೂ ಮಕ್ಕಳಿಗೆ ಕಥೆ ಹೇಳುವ, ಹಾಡು ಹೇಳುವ ಅಜ್ಜಮ್ಮ.

ಚಲಪತಿ `ಹಳ್ಳಿಯ ಮಕ್ಕಳು' ಚಿತ್ರದ ನಾಯಕ. ಇದೊಂದು ಅರ್ಥಪೂರ್ಣ ಸಿನಿಮಾ ಎನ್ನುವುದು ಅವರ ಅನಿಸಿಕೆ. ರಮೇಶ್ ಭಟ್, ವೀಣಾ ಸುಂದರ್, ಮಾಸ್ಟರ್ ಮನೋಜ್, ಅನನ್ಯ, ವಿಶಾಲ್, ರವಿಶಂಕರ್ ಮುಂತಾದವರು ತಾರಾಗಣದಲ್ಲಿದ್ದಾರೆ.
ಪಿ.ಕೆ.ಎಚ್. ದಾಸ್ ಛಾಯಾಗ್ರಹಣ, ಪ್ರವೀಣ್ ಗೋಡ್ಕಿಂಡಿ ಸಂಗೀತ, ಸಂಜೀವ್ ರೆಡ್ಡಿ ಅವರ ಸಂಕಲನ ಈ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT