ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಮಾನ ಮುನ್ಸೂಚನೆಗೆ ಉಪಗ್ರಹ ಗುಚ್ಛ

Last Updated 4 ಜನವರಿ 2012, 19:30 IST
ಅಕ್ಷರ ಗಾತ್ರ

ಭುವನೇಶ್ವರ: ಹವಾಮಾನ ಮುನ್ಸೂಚನೆಯನ್ನು ಇನ್ನಷ್ಟು ನಿಖರಗೊಳಿಸುವ ನಿಟ್ಟಿನಲ್ಲಿ ಆರು ಲಘು ಉಪಗ್ರಹಗಳ ಗುಚ್ಛವನ್ನು ಅಂತರಿಕ್ಷಕ್ಕೆ ಉಡಾಯಿಸುವ ಚಿಂತನೆಯನ್ನು ಇಲ್ಲಿ ನಡೆಯುತ್ತಿರುವ ವಿಜ್ಞಾನ ಸಮಾವೇಶದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ನಿವೃತ್ತ ಅಧಿಕಾರಿಯೊಬ್ಬರು ಪ್ರತಿಪಾದಿಸಿದ್ದಾರೆ.

ತಿರುಪತಿಯಲ್ಲಿರುವ ಸಂಸ್ಥೆಯ ರಾಷ್ಟ್ರೀಯ ವಾಯುಮಂಡಲ ಸಂಶೋಧನಾ ಪ್ರಯೋಗಾಲಯದ ಮಾಜಿ ನಿರ್ದೇಶಕ ಡಿ.ನಾರಾಯಣ ರಾವ್ ಎಂಬುವವರೇ ಈ ಹೊಸ ಚಿಂತನೆಯ ರೂವಾರಿ. ಆರು ವರ್ಷಗಳ ಹಿಂದೆ ಅಮೆರಿಕದ ಸಹಭಾಗಿತ್ವದಲ್ಲಿ ತೈವಾನ್    `ಕಾಸ್ಮಿಕ್~ ಉಪಗ್ರಹಗಳ ಗುಚ್ಛ ಉಡಾಯಿಸಿ ಹವಾಮಾನ ಸಂಬಂಧಿ ಮಾಹಿತಿಗಳನ್ನು ಕಲೆಹಾಕುತ್ತಿರುವುದು ಅವರ ಯೋಚನೆಗೆ ಪ್ರೇರಣೆಯಾಗಿದೆ.

ತಲಾ 50 ಕೆ.ಜಿ ತೂಕದ ಆರು ಉಪಗ್ರಹಗಳ ಗುಚ್ಛ ಇದಾಗಿರುತ್ತದೆ. ಎಲ್ಲ ಉಪಗ್ರಹಗಳೂ ಸಮೀಪದಲ್ಲಿ, ಅಂದರೆ 700 ಕಿ.ಮೀ ಎತ್ತರದ ಕಕ್ಷೆಯಲ್ಲಿ ಭೂಮಿಯನ್ನು ಸುತ್ತು ಹಾಕಲಿವೆ. ಪ್ರತಿಯೊಂದು ಉಪಗ್ರಹವೂ ದಿನಕ್ಕೆ 30ಕ್ಕಿಂತ ಹೆಚ್ಚು ಬಾರಿ ಅಂಕಿಅಂಶಗಳನ್ನು ರವಾನಿಸಲಿದೆ. ಹೀಗಾಗಿ ಆರು ಉಪಗ್ರಹಗಳಿಂದ ಪ್ರತಿದಿನ 200 ಬಾರಿ ಅಂಕಿಅಂಶ ಕ್ರೋಡೀಕರಿಸಲು ಸಾಧ್ಯವಾಗಲಿದೆ. ಇದರ ಯೋಜನಾ ವೆಚ್ಚ 50 ಕೋಟಿ ರೂಪಾಯಿ ಎಂದು ರಾವ್ ಶನಿವಾರ ವಿಷಯ ಮಂಡಿಸಿದರು. ಈ ಸಂದರ್ಭದಲ್ಲಿ, ಯೋಜನೆಗೆ ಅನುಮತಿ ನೀಡುವ ಅಧಿಕಾರ ಹೊಂದಿರುವ ಕೇಂದ್ರ ಭೂ ವಿಜ್ಞಾನಗಳ ಇಲಾಖೆಯ ಕಾರ್ಯದರ್ಶಿ ಶೈಲೇಶ್ ನಾಯಕ್ ಕೂಡ ವೇದಿಕೆಯಲ್ಲಿದ್ದರು.

ಅಮೆರಿಕದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಮತ್ತು ಸ್ಟಾನ್‌ಫೋರ್ಡ್ ವಿ.ವಿ 1960ರ ದಶಕದ ಅಂತ್ಯದಲ್ಲಿ ಅಭಿವೃದ್ಧಿಪಡಿಸಿದ `ರೇಡಿಯೊ ಅಕಲ್ಟೇಷನ್~ ಎಂಬ ವಿಧಾನ ಅನುಸರಿಸಿ ಈ ಉಪಗ್ರಹ ತಾರಾಗುಚ್ಛ ಕಾರ್ಯ ನಿರ್ವಹಿಸಲಿದೆ.

ಎತ್ತರದ ಕಕ್ಷೆಯಲ್ಲಿ ಪರಿಭ್ರಮಿಸುವ ಜಿಪಿಎಸ್ ಉಪಗ್ರಹಗಳು (ಗ್ಲೋಬಲ್ ಪೊಸಿಷನಿಂಗ್ ಸ್ಯಾಟಲೈಟ್) ರವಾನಿಸುವ ರೇಡಿಯೊ ಸಂಕೇತಗಳು ವಾತಾವರಣದ ಮೂಲಕ ಹಾಯುವಾಗ ಬಾಗುತ್ತವೆ. ಈ ಬಾಗುವಿಕೆ ಪ್ರಮಾಣಕ್ಕೂ ವಾತಾವರಣದ ಸ್ಥಿತಿಗೂ ನೇರ ಸಂಬಂಧವಿದೆ. ಈ ಬಾಗುವಿಕೆಯ ಕೋನವನ್ನು ಲಘು ಉಪಗ್ರಹಗಳು ರೇಡಿಯೊ ಅಕಲ್ಟೇಷನ್ ನೆರವಿನಿಂದ ಅಳೆಯುತ್ತವೆ. ಅದನ್ನು ಆಧರಿಸಿ ವಾಯುಮಂಡಲದಲ್ಲಿನ ಉಷ್ಣತೆ, ಒತ್ತಡ, ತೇವಾಂಶ ಇತ್ಯಾದಿಗಳ ಬಗ್ಗೆ ನಿಖರ ಲೆಕ್ಕಾಚಾರ ಹಾಕಬಹುದು ಎನ್ನುತ್ತಾರೆ   ರಾವ್.

ಪ್ರಸ್ತುತ ರಾಷ್ಟ್ರದ ವಿವಿಧ ಕಡೆ ಭೂಮಿಯ ಮೇಲಿರುವ 35 ಪ್ರಮುಖ ಹವಾಮಾನ ಕೇಂದ್ರಗಳಿಂದ ಪಡೆದ ದತ್ತಾಂಶಗಳನ್ನು ವಿಶ್ಲೇಷಿಸಿ ಹವಾಮಾನ ಮುನ್ಸೂಚನೆ ನೀಡಲಾಗುತ್ತಿದೆ. ಆದರೆ ಈ ಪೈಕಿ ಯಾವ ಕೇಂದ್ರದಲ್ಲೂ ಹಿಂದೂ ಮಹಾಸಾಗರದ ಮೇಲಿನ ಸ್ಥಿತಿಯನ್ನು ಸೂಚಿಸುವ ಅಂಕಿಅಂಶಗಳು ಲಭ್ಯವಾಗುತ್ತಿಲ್ಲ. ಹೀಗಾಗಿ ಈಗಿನ ಮುನ್ಸೂಚನಾ ಪ್ರಕಟಣೆಗೆ ತನ್ನದೇ ಆದ ಮಿತಿ ಇದೆ. ಆದರೆ ತಾವು ಪ್ರಸ್ತಾಪಿಸುವ ಪದ್ಧತಿಯಿಂದ ಈ ಕೊರತೆ ನೀಗುತ್ತದೆ ಎಂಬುದು ರಾವ್ ವಾದ.

ಆದರೆ ಸದ್ಯದಲ್ಲೇ ಕೇಂದ್ರ ಸಂಪುಟದ ಮುಂದೆ ಬರಲಿರುವ ರೂ 350 ಕೋಟಿ ವೆಚ್ಚದ ರಾಷ್ಟ್ರೀಯ ಮುಂಗಾರು ಮಿಷನ್‌ಗೂ ಈ ಪ್ರಸ್ತಾವಕ್ಕೂ ಯಾವ ಸಂಬಂಧವೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT