ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಮಾನ ಮುನ್ಸೂಚನೆಗೆ ಹೊಸ ವ್ಯವಸ್ಥೆ

ವಿಜ್ಞಾನ ಲೋಕದಿಂದ

ಮುಂಗಾರಿನ ಮುನ್ಸೂಚನೆಯನ್ನು ನಿಖರವಾಗಿ ಊಹಿಸಲು ಸಹಕಾರಿಯಾದ ವ್ಯವಸ್ಥೆಯನ್ನು ಪುಣೆಯ ಭಾರತೀಯ ಹವಾಮಾನಶಾಸ್ತ್ರ ಸಂಸ್ಥೆ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಹವಾಮಾನ ಬದಲಾವಣೆ ಪರಿಣಾಮಗಳ ಸಾಕ್ಷ್ಯ ಆಧರಿಸಿ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಹವಾಮಾನವನ್ನು ನಿಖರವಾಗಿ ಊಹಿಸುವಲ್ಲಿ ಈ ಮಾದರಿಗಳು ಸಹಾಯಕವಾಗಿವೆ. ವಿಶ್ವಸನೀಯ ಊಹೆಗಳು ದೇಶದ ಮೇಲಾಗುವ ಪರಿಣಾಮ ಗುರುತಿಸಿ, ಅದಕ್ಕೆ ತಕ್ಕ ಕ್ರಮ ಕೈಗೊಳ್ಳುವಲ್ಲಿ ನೆರವಾಗುತ್ತವೆ. ಹೊಸದಾದ ಈ ಮಾದರಿಯಿಂದ ಭಾರತವು ಸಹ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಅಂತರ ಸರ್ಕಾರಿ ಸಮಿತಿ (ಐಪಿಸಿಸಿ)ಯ ಮೌಲ್ಯಮಾಪನ ಕಾರ್ಯಕ್ರಮದ ಭಾಗವಾಗಲು ಸಾಧ್ಯವಾಗುತ್ತದೆ. 

‘ಐಪಿಸಿಸಿ ಮೌಲ್ಯಮಾಪನ ಕಾರ್ಯಕ್ರಮದಲ್ಲಿ ಭಾರತ ಇದೇ ಮೊದಲ ಬಾರಿಗೆ ತನ್ನದೇ ಆದ ಮಾದರಿಯೊಂದಿಗೆ ಭಾಗವಹಿಸಲು ಸಾಧ್ಯವಾಗಿದೆ. ಅನೇಕ ಅಂತರರಾಷ್ಟ್ರೀಯ ನೀತಿಗಳು ಈ ಮೌಲ್ಯಮಾಪನಗಳ ಮೇಲೆ ಅವಲಂಬಿತವಾಗಿದ್ದು, ಈಗ ನಮ್ಮ ದೇಶದ ನೀತಿ ನಿರೂಪಣೆಯನ್ನು ಬೇರೆ ದೇಶಗಳ ಲೆಕ್ಕಾಚಾರ ಆಧರಿಸದೆ ನಮ್ಮ ಲೆಕ್ಕಾಚಾರಗಳನ್ನೇ ಬಳಕೆ ಮಾಡಬಹುದು’ ಎನ್ನುತ್ತಾರೆ ಪ್ರೊ. ಬಿ.ಎನ್ ಗೋಸ್ವಾಮಿ.

ಸದ್ಯ ಪುಣೆಯ ಭಾರತೀಯ ವಿಜ್ಞಾನ ಶಿಕ್ಞಣ ಹಾಗೂ ಸಂಶೋಧನಾ ಸಂಸ್ಥೆಯಲ್ಲಿರುವ ಪ್ರೊ.ಗೋಸ್ವಾಮಿ, ಅಮೆರಿಕದ ಹವಾಮಾನಶಾಸ್ತ್ರ ಒಕ್ಕೂಟ ಪ್ರಕಟಿಸಿದ ಅಧ್ಯಯನವೊಂದರ ಸಹಲೇಖಕರೂ ಹೌದು. ಭಾರತದ ಮುಂಗಾರು ಬಲು ಸಂಕೀರ್ಣ. ಹಾಗಾಗಿ ಬಹುತೇಕ ಮಾದರಿಗಳು ಮುಂಗಾರಿನ ಮುನ್ಸೂಚನೆಯನ್ನು ನಿಖರವಾಗಿ ನೀಡುವಲ್ಲಿ ಸೋಲುತ್ತವೆ.

ಈ ಸಮಸ್ಯೆಯನ್ನು ಬಿಡಿಸಲೆಂದೇ ಪುಣೆ ಸಂಶೋಧಕರು ಹೊಸ ಮಾದರಿಯನ್ನು ನೀಡಿದ್ದಾರೆ. ಈ ಮಾದರಿ ಸಿದ್ಧಪಡಿಸುವಲ್ಲಿ ಅಮೆರಿಕದ ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಕೇಂದ್ರದ (ಎನ್‌ಸಿಇಪಿ) ಸಹಕಾರವೂ ಸಿಕ್ಕಿದೆ. ‘ಮುಂಗಾರು ಪರಿಣಾಮಗಳ ಕುರಿತು ತಜ್ಞರ ಗಮನ ಸೆಳೆಯುವಲ್ಲಿ ಭಾರತೀಯ ವಿಜ್ಞಾನಗಳ ಈ ಕೊಡುಗೆಯು ಮಹತ್ವದ ಪಾತ್ರ ವಹಿಸುತ್ತದೆ’ ಎನ್ನುತ್ತಾರೆ ಹವಾಮಾನ ತಜ್ಞ ಪ್ರೊ. ರಘು. 

‘ಭೂಕೇಂದ್ರಿತ ಮಾದರಿ’ ಎಂದು ಹೆಸರಿಸಬಹುದಾದ ಈ ಹೊಸ ಮಾದರಿ ಭೌಗೋಳಿಕ, ಸಾಗರಿಕ ಮತ್ತು ವಾಯು ಮಂಡಲದ ಪರಿಣಾಮಗಳನ್ನು ಏಕಕಾಲದಲ್ಲಿ ಪರಿಗಣಿಸುತ್ತದೆ. ಈ ಮೂರನ್ನೂ ಒಂದು ಸಮಗ್ರ ವ್ಯವಸ್ಥೆಯ ಭಾಗವನ್ನಾಗಿ ಗ್ರಹಿಸಲು ಹೊಸ ಮಾದರಿ ಶಕ್ತವಾಗಿದೆ. ಹಲವು ಸಾಧ್ಯತೆಗಳ ವಿವರಣೆಯನ್ನೂ ಇದು ನೀಡಬಲ್ಲುದಾಗಿದೆ.

ಉದಾಹರಣೆಗೆ, ಸಮುದ್ರದ ನೀರನ್ನು ಬಿಸಿಗೊಳಿಸಬಲ್ಲ ಹಾಗೂ ಸಾಗರದ ಅಂತಃಪ್ರವಾಹ ಪ್ರಭಾವಿಸಬಲ್ಲ ಫೈಟೋಪ್ಲಾಂಕ್ಟಾನ್‌ಗಳ ಭೂಜೈವಿಕ-ರಾಸಾಯನಿಕ  ಸಮೀಕರಣಗಳನ್ನು ಕೂಡ ಇದು ವಿವರಿಸಬಲ್ಲದು. ‘ಇದು ದೇಸೀ ಮಾದರಿಯೊಂದನ್ನು ಅಭಿವೃದ್ಧಿಪಡಿಸುವ ಮೊದಲ ಪ್ರಯತ್ನವಾಗಿದ್ದು, ಇತರ ಮಾದರಿಗಳ ಅನುಭವದ ಆಧಾರದ ಮೇಲೆ ಆವಿಷ್ಕರಿಸಲಾಗಿದೆ’ ಎಂದು ಗೋಸ್ವಾಮಿ ಹೇಳುತ್ತಾರೆ.

ಮಳೆ ಪ್ರಮಾಣ ಮುನ್ಸೂಚನೆಯ ಊಹೆಗಳಲ್ಲಿ ಹಿಂದೆ ಆಗಿರುವ ತಪ್ಪುಗಳನ್ನು ವಿಶ್ಲೇಷಿಸಿದಾಗ ಸಮುದ್ರ ಘಟಕ ಮಾದರಿಗಳು ಉಷ್ಣತೆಯನ್ನು ಇದ್ದುದಕ್ಕಿಂತ ಕಡಿಮೆ ಊಹಿಸುತ್ತಿದ್ದುದು ಕಂಡು ಬಂತು. ಹೀಗಾಗಿ ಒಟ್ಟಾರೆ ಫಲಿತಾಂಶ ತಪ್ಪಾಗುತ್ತಿತ್ತು. ಭೂಕೇಂದ್ರಿತ ಹೊಸ ಮಾದರಿಯು ಸಮುದ್ರ ಘಟಕದ ಸುಧಾರಿತ ರೂಪವನ್ನು ಒಳಗೊಂಡಿದೆ.

ಈ ಮಾದರಿಯ ಫಲಿತಾಂಶಗಳು ಹೆಚ್ಚು ನಿಖರ ಮತ್ತು ವಿಶ್ವಾಸಾರ್ಹವಾಗಿವೆ. ಹೊಸ ಸುಧಾರಿತ ಸಮುದ್ರ ಘಟಕವು ಜೀವ- ರಾಸಾಯನಿಕ ಪ್ರಕ್ರಿಯೆಗಳನ್ನೂ ಒಳಗೊಂಡಿದೆ. ವಾಯುಗುಣ ಬದಲಾವಣೆಯಿಂದ ಮೀನುಗಾರಿಕೆ ಮೇಲೆ ಬೀರುವ ಪರಿಣಾಮವನ್ನು ನಿಖರವಾಗಿ ಊಹಿಸಬಹುದಾಗಿದೆ.

ಸಾಗರದ ವ್ಯತ್ಯಯಗಳನ್ನು ಸಮರ್ಥವಾಗಿ ಊಹಿಸಬಲ್ಲ ಮಾದರಿ ಇದಾಗಿದೆ. ಈ ಅಂಶಗಳು ಮುಂಗಾರನ್ನು ಪ್ರಭಾವಿಸುವುದರಿಂದ, ಮುಂಗಾರಿನ ವಾರ್ಷಿಕ ವ್ಯತ್ಯಯ ಸ್ಪಷ್ಟವಾಗಿ ತಿಳಿಯುತ್ತದೆ. ಪ್ರೊ. ಗೋಸ್ವಾಮಿ ಅವರು ಈ ಮಾದರಿಯಲ್ಲಿನ ಫಲಿತಾಂಶಗಳಲ್ಲಿ ಶಕ್ತಿ ಸಮತೋಲನದ ಕುರಿತಾದ ದೋಷಗಳು ಇರುವುದನ್ನು ಗುರುತಿಸುತ್ತಾರೆ. ಅಲ್ಲದೆ, ಈ ಮಾದರಿಗೆ ಅಂತಿಮ ರೂಪ ನೀಡುವವೇಳೆಗೆ ಈ ದೋಷವನ್ನೂ ಇಲ್ಲವಾಗಿಸುವ ಭರವಸೆ ಅವರಿಗಿದೆ.

ಈ ಅಧ್ಯಯನವನ್ನು ಬಳಸಿ ನೀತಿ ನಿರೂಪಕರು ವೈಜ್ಞಾನಿಕ ಮತ್ತು ತಾರ್ಕಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ. ಪ್ರೊ. ರಘು ಅವರು ಮಾರ್ಮಿಕವಾಗಿ ಹೀಗೆ ಹೇಳುತ್ತಾರೆ: ‘ಹಿಮಯುಗ ಮತ್ತು ಜಾಗತಿಕ ತಾಪಮಾನ ಏರಿಕೆ – ಎರಡೂ ಭಾರತದ ಮುಂಗಾರಿಗೆ ಅತ್ಯಂತ ಅಪಾಯಕಾರಿ. ವಿಧಿಬರಹವನ್ನು ಅತಿಯಾಗಿ ನೆಚ್ಚುವ ಈ ದೇಶವು ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವತ್ತ ಎಚ್ಚರಿಕೆ ಹೆಜ್ಜೆ ಇಡದಿದ್ದರೆ ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT