ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿದ ಹೊಟ್ಟೆ ತಣಿಸುವ ಕೊಚ್ಚಿಯ ಅನ್ನಪೂರ್ಣೆ

ಆರದಿರಲಿ ಪ್ರೀತಿ, ಆರೈಕೆಯ ಬೆಳಕು
Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬುದ್ಧಿಮಾಂದ್ಯರು, ಬೀದಿ ಬದಿಯ ಭಿಕ್ಷುಕರಿಂದ ತೊಡಗಿ ವೃದ್ಧಾಶ್ರಮದಲ್ಲಿರುವ ವೃದ್ಧರವರೆಗೆ, ಅನಾಥ ಮಕ್ಕಳಿಂದ ತೊಡಗಿ ನಿರಾಶ್ರಿತ ಮಹಿಳೆಯರವರೆಗೆ ನೂರಾರು ಬಡವರ ಒಡಲಾಗ್ನಿಯನ್ನು ತಣಿಸುತ್ತಿರುವ ಎಲ್ಸಿ ಎಂಬ ಅನ್ನಪೂರ್ಣೆ ಹಸಿವಿನ ವಿರುದ್ಧ ಸಾರಿದ ಸಮರದ ಕಥೆ ಇದು.

ಬೀದಿ ಬದಿಗಳಲ್ಲಿ ನಿತ್ಯ ನೂರಾರು ಹಸಿದ ಹೊಟ್ಟೆಗಳನ್ನು ತಣಿಸುತ್ತಿರುವ ಕೊಚ್ಚಿಯ ಈ ಆಧುನಿಕ ಅನ್ನಪೂರ್ಣೆಯಯನ್ನು ಕೇರಳದ ಮಾಧ್ಯಮಗಳು `ಕೊಚ್ಚಿಯ ಆಹಾರ ಪೊಟ್ಟಣಗಳ ಹರಿಕಾರೆ' `ಹಸಿವು ತಣಿಸುವ ಅಮ್ಮ' ಎಂದು ಹಾಡಿ ಹೊಗಳುತ್ತಿವೆ. ಹಸಿವು ತಣಿಸುವ ಈ ಅನ್ನಪೂರ್ಣೆಗಾಗಿ ನಿರಾಶ್ರಿತರು, ಕೂಲಿ ಕಾರ್ಮಿಕರು, ವೃದ್ಧರು, ಅನಾಥರು ನಿತ್ಯ ಕಾಯುತ್ತಿರುತ್ತಾರೆ. 

`ಹಸಿವಿನ ವಿರುದ್ಧ ಯುದ್ಧ' ಸಾರಿರುವ ಕೊಚ್ಚಿಯ ಎಲ್ಸಿ ಸಾಬು ಎಂಬ ಸಾಮಾನ್ಯ ಮಹಿಳೆಯ ಅಸಾಮಾನ್ಯ ಸಾಧನೆಯ ಕಥೆ ಇದು. ಕೊಚ್ಚಿಯ ಬೀದಿಗಳಲ್ಲಿ ಎಲ್ಸಿ ಆಹಾರ ಪೊಟ್ಟಣಗಳನ್ನು ಹಿಡಿದು ಹೊರಟರೆ ಸಾಕು, ಹಸಿದ ಹೊಟ್ಟೆಯಲ್ಲಿ ಕಾಯ್ದು ಕುಳಿತ ನೂರಾರು ಜನರ ಕಣ್ಣಲ್ಲಿ ಚೈತ್ರದ ಸಂಭ್ರಮ ಮನೆ ಮಾಡುತ್ತದೆ. ಆಕೆ ನೀಡುವ ಆಹಾರ ಪೊಟ್ಟಣಗಳು ನೂರಾರು ಜನರ ಹಸಿವನ್ನು ತಣಿಸುತ್ತವೆ. ದಶಕಗಳಿಂದ ನಡೆದುಕೊಂಡು ಬಂದಿರುವ ಪರಿಪಾಠವನ್ನು ಎಲ್ಸಿ ಒಂದು ದಿನವೂ ತಪ್ಪದಂತೆ ವೃತದಂತೆ ಪಾಲಿಸಿಕೊಂಡು ಬಂದಿದ್ದಾರೆ.

ದಶಕಗಳ ಹಿಂದಿನ ಕಥೆ
`ಸುಮಾರು ಹತ್ತು ವರ್ಷಗಳ ಹಿಂದಿನ ಮಾತು. ಬೀದಿಯ ಬದಿಯಲ್ಲಿ ಹಸಿವಿನಿಂದ ಕಂಗೆಟ್ಟಿದ್ದ ಜನರನ್ನು ಕಂಡ ದಿನವೇ ಅವರ ಹಸಿವು ತಣಿಸಲು ನಿರ್ಧರಿಸಿದೆ. ಅಂದಿನಿಂದ ಪ್ರತಿನಿತ್ಯ ತಪ್ಪದೇ ಅಗತ್ಯ ಇರುವವರಿಗೆ ಉಚಿತವಾಗಿ ಆಹಾರ ಪೊಟ್ಟಣ ಹಂಚಲು ಆರಂಭಿಸಿದೆ. ನನ್ನ ಈ ಕಾರ್ಯ ಎಷ್ಟು ದಿನ ಮುಂದುವರಿಯುತ್ತದೆ ಎಂಬ ಸ್ಪಷ್ಟ ಅರಿವು ಆಗ ನನಗಿರಲಿಲ್ಲ. ಹೆಚ್ಚೆಂದರೆ ಒಂದು ತಿಂಗಳು ನಡೆಯಬಹುದು ಎಂದುಕೊಂಡಿದ್ದೆ. ಆಗ ನನ್ನ ಕಣ್ಣ ಮುಂದಿದ್ದು ಹಸಿವಿನಿಂದ ಕಂಗೆಟ್ಟಿದ್ದ ಜನರು ಮೂಕ ವೇದನೆ ಮಾತ್ರ' ಎಂದು ಆರಂಭದ ದಿನಗಳನ್ನು ನೆನೆಯುತ್ತಾರೆ ಎಲ್ಸಿ ಸಾಬು.


ಇಂಥದೊಂದು ಅದ್ಭುತ ಕೆಲಸಕ್ಕೆ ಆಕೆಗೆ ಪ್ರೇರಣೆಯಾದ ಘಟನೆಯೂ ಇನ್ನೂ ಸ್ವಾರಸ್ಯಕರವಾಗಿದೆ. 2003ರ ಸೆಪ್ಟೆಂಬರ್ 2ರಂದು ತಮ್ಮ ಮುದ್ದಿನ ಮಗ ಅಮಲ್‌ನ ಎಂಟನೇ ವರ್ಷದ ಜನ್ಮದಿನಾಚರಣೆಯ ಸಂಭ್ರಮ. ಎಲ್ಲ ಮಧ್ಯಮ ವರ್ಗದ ಅಮ್ಮಂದಿರಂತೆ ಮಗನಿಂದ ಕೇಕ್ ಕತ್ತರಿಸಿ ಸಂಭ್ರಮಿಸುವ ಬದಲು ವಿಭಿನ್ನವಾಗಿ ಜನ್ಮದಿನ ಆಚರಿಸುವ ಯೋಚನೆ ಅವರ ತಲೆ ಹೊಕ್ಕಿತು. ತಡಮಾಡದೆ ಒಂದಿಷ್ಟು ಸಿಹಿ ತಿಂಡಿ, ತಿನಿಸುಗಳೊಂದಿಗೆ ಅನಾಥರು, ಭಿಕ್ಷುಕರನ್ನು ಹುಡುಕಿಕೊಂಡು ಹೊರಟರು.

ಜೀವನದ ಪಥ ಬದಲಿಸಿದ ಆ ಕ್ಷಣ...
ಅಂದು ಬೀದಿಗಿಳಿದ ಎಲ್ಸಿಗೆ ಅದುವರೆಗೂ ಗೊತ್ತಿರದ ಬಡತನ, ಹಸಿವುಗಳ ಹೊಸ ಲೋಕವೊಂದು ಪರಿಚಯವಾಯಿತು. ಕಣ್ಣಿಗೆ ರಾಚಿದ ಕಟು ಸತ್ಯಗಳನ್ನು ಅರಗಿಸಿಕೊಳ್ಳದ ಆಕೆಯ ಮನಸ್ಸು ವಿಲವಿಲ ಒದ್ದಾಡಿತು. ಮನಸ್ಸು ಸಂಪೂರ್ಣವಾಗಿ ಕದಡಿತು. ಮೂಲೆಯಲ್ಲಿ ಎದ್ದ ತಳಮಳದ ಅಲೆಗಳು ಪತಿ ಸಾಬು ಜೋಸ್ ಅವರನ್ನು ತಲುಪಲು ಬಹಳ ಸಮಯ ಬೇಕಾಗಲಿಲ್ಲ. ಅಂದೇ ದಂಪತಿ ಪ್ರತಿದಿನ 25 ಜನರಿಗೆ ಬೇಕಾಗುವಷ್ಟು ಇಡ್ಲಿ, ವಡೆ ಸಿದ್ಧಪಡಿಸಿ ಹಂಚತೊಡಗಿದರು. ಅಂದಿನಿಂದ ಅವರ ಜೀವನದ ಪಥವೇ ಬದಲಾಗಿ ಹೋಯಿತು.

ಸ್ವಲ್ಪ ದಿನಗಳ ನಂತರ ಮತ್ತಷ್ಟು ಜನರಿಗೆ ತಮ್ಮ ಸೇವೆಯನ್ನು ವಿಸ್ತರಿಸಲು ಬಯಸಿದ ದಂಪತಿ ಒಂದು ಹೆಜ್ಜೆ ಮುಂದೆ ಹೋಗಿ ಆಹಾರ ಧಾನ್ಯ ಮತ್ತು ಕಿರಾಣಿ ದಿನಸಿಗಳನ್ನು ಸಂಗ್ರಹಿಸಿ ತಮ್ಮ ಸುತ್ತಮುತ್ತಲಿನ ಕೆಲವು ಕುಟುಂಬಗಳಿಗೆ ಹಂಚಿದರು. ಆ ಕುಟುಂಬದವರು ಸ್ವಯಂ ಪ್ರೇರಿತವಾಗಿ ಆಹಾರ ಸಿದ್ಧಪಡಿಸಿ ಎಲ್ಸಿ ದಂಪತಿಗೆ ಮರಳಿ ನೀಡುತ್ತಿದ್ದರು. ಹೀಗೆ ಸಿದ್ಧವಾದ ಆಹಾರವನ್ನು ಪೊಟ್ಟಣಗಳಲ್ಲಿ ತುಂಬಿ ರಸ್ತೆ ಇಕ್ಕೆಲಗಳ ಅನಾಥರು, ವೃದ್ಧರು, ನಿರಾಶ್ರಿತ ಮಹಿಳೆಯರಿಗೆ ಹಂಚ ತೊಡಗಿದರು.

ನಾನ್ನೂರಾದ ನಾಲ್ಕು ಕೈ: ಅಪಾರ ಸಂಖ್ಯೆಯ ಹಸಿದ ಹೊಟ್ಟೆಗಳಿಗೆ ತುತ್ತು ಬಡಿಸಲು ನಾಲ್ಕು ಕೈಗಳು ಸಾಲದಾದವು. ಇದನ್ನು ಬಹುಬೇಗ ದಂಪತಿ ಮನಗಂಡರು. ಎದುರಾದ ಸವಾಲಿಗೆ ದಂಪತಿ ಸುಲಭವಾದ ಉತ್ತರ ಹುಡುಕಿಕೊಂಡರು. ತಮ್ಮ ನಾಲ್ಕು ಕೈಗಳ ಜೊತೆ ಇನ್ನಷ್ಟು ಕೈಗಳು ಸೇರಿದರೆ ತಮ್ಮ ಕೆಲಸ ಸುಲಭ ಎಂದು ಭಾವಿಸಿದರು. ಅದರಂತೆ ಜನರ ಸಹಭಾಗಿತ್ವದಲ್ಲಿ ಆಹಾರ ಸಿದ್ಧಪಡಿಸಿ, ವಿತರಿಸುವ ಕಾಯಕ ಆರಂಭಿಸಿದರು. ಪುಕ್ಕಟೆಯಾಗಿ ನೂರಾರು ಜನರ ಹಸಿವನ್ನು ತಣಿಸುವ ದಂಪತಿಯ ಫಲಾಪೇಕ್ಷೆ ಇಲ್ಲದ ಕೆಲಸಕ್ಕೆ ಅನೇಕರು ಕೈ ಜೋಡಿಸಿದರು. ನೆರವಿನ ಪ್ರವಾಹ ಹರಿದು ಬಂತು. ಸಹಾಯ ಹಸ್ತ ನೀಡುವ ನಾಲ್ಕು ಕೈಗಳು ನಾನ್ನೂರು ಕೈಗಳಾದವು. 

ಸಹಕಾರದ ಅಲೆ ಏರಿ...
`ಪ್ರೀತಿ ಮತ್ತು ಆರೈಕೆ' ಎಂಬ ಹೆಸರಲ್ಲಿ ಉಚಿತವಾಗಿ ನಡೆಯುತ್ತಿರುವ ಎಲ್ಸಿ ಅವರ ಈ ಕಾರ್ಯಕ್ಕೆ ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯ ನಿವಾಸಿಗಳು, ಸಂಘ, ಸಂಸ್ಥೆಗಳು, ವಿವಿಧ ಸಂಘಟನೆಗಳು, ಪೊಲೀಸರು, ವಕೀಲರು, ನ್ಯಾಯಮೂರ್ತಿಗಳು, ಸರ್ಕಾರಿ ನೌಕರರೂ ಬೆಂಬಲವಾಗಿ ನಿಂತಿದ್ದಾರೆ. ರಿಕ್ಷಾ ಮತ್ತು ಲಾರಿ ಚಾಲಕರು ಉಚಿತವಾಗಿ ಆಹಾರ ಪೊಟ್ಟಣಗಳನ್ನು ಸ್ಥಳಗಳಿಗೆ ತಲುಪಿಸಿ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ಈ ತಂಡಕ್ಕಾಗಿ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಕೊಚ್ಚಿ ಸುತ್ತಮುತ್ತಲಿನ ಗ್ರಾಮದ ಜನರೂ ಈ ಕಾರ್ಯದಲ್ಲಿ ಪಾಲ್ಗೊಳ್ಳಲು ಮುಂದೆ ಬರುತ್ತಿದ್ದಾರೆ.

ಹೀಗಾಗಿ ಎಲ್ಸಿ ಮತ್ತು ಅವರ ತಂಡ ಪ್ರತಿ ದಿನ 600 ಆಹಾರ ಪೊಟ್ಟಣಗಳನ್ನು ಉಚಿತವಾಗಿ ಹಂಚುತ್ತಿದ್ದಾರೆ. ಮಾನಸಿಕ ಅಸ್ವಸ್ಥರು, ನಿರಾಶ್ರಿತರು, ವೃದ್ಧರು, ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಲ್ಲಿರುವವರಿಗೆ ಸಮಯಕ್ಕೆ ಸರಿಯಾಗಿ ಆಹಾರ ಪೊಟ್ಟಣಗಳು ತಲುಪುತ್ತಿವೆ. ಹೈಕೊರ್ಟ್‌ನ ವಕೀಲರು ಪ್ರತಿ ವಾರ 270 ಪೊಟ್ಟಣ, ಸ್ಥಳೀಯ ಕೆಲವು ಕುಟುಂಬಗಳು ಪ್ರತಿದಿನ 20 ಆಹಾರ ಪೊಟ್ಟಣಗಳನ್ನು ಸಿದ್ಧಪಡಿಸಿ ನೀಡುತ್ತಾರೆ. ಎಲ್‌ಐಸಿ ಮತ್ತು ಬಿಎಸ್‌ಎನ್‌ಎಲ್ ಮತ್ತು ಅಬಕಾರಿ ಇಲಾಖೆಯ ಸಿಬ್ಬಂದಿಯೂ ಬೆಂಬಲವಾಗಿ ನಿಂತಿದ್ದಾರೆ.

ಆರೈಕೆಯ ಬೆಳಕು: ಮಳೆ, ಗಾಳಿಯಂತಹ ಪ್ರತಿಕೂಲ ಹವಾಮಾನ, ಪ್ರತಿಭಟನೆ, ಹರತಾಳಗಳ ಮಧ್ಯೆಯೂ ಆಹಾರ ಪೊಟ್ಟಣಗಳನ್ನು ತಲುಪಿಸುವ ಕಾರ್ಯವನ್ನು ಈ ತಂಡ ನಿಲ್ಲಿಸಿಲ್ಲ. ಸ್ಥಳೀಯ ಎಂಟು ಕಾಲೇಜುಗಳು ಎಲ್ಸಿ ಅವರ `ಪ್ರೀತಿ ಮತ್ತು ಆರೈಕೆ'ಯ ತಂಡದ ಜೊತೆಗಿವೆ. ವಿದ್ಯಾರ್ಥಿಗಳು ತಮ್ಮ ಮನೆ, ಸ್ನೇಹಿತರು ಮತ್ತು ಸಂಬಂಧಿಗಳ ಮನೆಯಿಂದ ಸಂಗ್ರಹಿಸಿ ತಂದ ಆಹಾರದ ಪೊಟ್ಟಣಗಳನ್ನು ಶಾಲೆ, ಕಾಲೇಜುಗಳಲ್ಲಿಟ್ಟಿರುವ `ಪ್ರೀತಿ ಮತ್ತು ಆರೈಕೆ' ತಂಡದ ಡಬ್ಬಿಗಳಲ್ಲಿ ಹಾಕುತ್ತಾರೆ.

ಎರಡು ಮಕ್ಕಳ ತಾಯಿಯಾಗಿರುವ ಎಲ್ಸಿ ಜೀವನದ ಮುಖ್ಯ ಧ್ಯೇಯ `ಪ್ರೀತಿ ಮತ್ತು ಆರೈಕೆ'ಯಾಗಿ ಬದಲಾಗಿದೆ. ತಮ್ಮ ಈ ಕಾರ್ಯವನ್ನು ವಿಸ್ತರಿಸುವ ಅಥವಾ ಶಿಸ್ತುಬದ್ಧವಾಗಿ ಕಟ್ಟಿ ಬೆಳೆಸುವ ಯೋಜನೆ ಅವರಿಗಿಲ್ಲ. `ದೇವರು ನಡೆಸಿದಂತೆ ನಡೆಯುತ್ತೇನೆ. ಹಸಿವಿನ ಬಾಧೆ ಮತ್ತು ಅದರ ಪರಿಣಾಮ ಎಲ್ಲರಿಗೂ ಅರಿವಾಗಬೇಕು. ಅದನ್ನು ತೊಡೆದು ಹಾಕಲು ಕೈಜೋಡಿಸಬೇಕು. ಹಾಗಾದಾಗ ನನ್ನ ಶ್ರಮ ಸಾರ್ಥಕ' ಎನ್ನುತ್ತಾ ಎಲ್ಸಿ ಭಾವುಕರಾಗುತ್ತಾರೆ.

ಸ್ಕೂಟರ್ ಕಲಿತ ಎಲ್ಸಿ
ವಯನಾಡ್ ಮೂಲದ ಎಲ್ಸಿ ಅವರಿಗೆ ಕೊಚ್ಚಿಯ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯ ಪರಿಚಯ ಚೆನ್ನಾಗಿದೆ. ತಮ್ಮ ಈ ಕಾರ್ಯಗಳಿಗೆ ಎದುರಾಗುವ ತೊಂದರೆ, ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಕಲೆಯೂ ಕರಗತವಾಗಿದೆ. ಹಣಕಾಸಿನ ಅಡಚಣೆ ಮತ್ತು ಬೇಡಿಕೆ ಹೆಚ್ಚಾದಂತೆ ಅದಕ್ಕೆ ತಕ್ಕಂತೆ ಕಾರ್ಯವೈಖರಿಯನ್ನು ಬದಲಾಯಿಸಿಕೊಂಡಿದ್ದಾರೆ. ಸ್ಕೂಟರ್ ಚಲಾಯಿಸಲು ಹೆದರುತ್ತಿದ್ದ ಎಲ್ಸಿ ಇದೀಗ ತಾವೇ ಖುದ್ದಾಗಿ ಸ್ಕೂಟರ್ ಓಡಿಸುವುದನ್ನು ಕಲಿತಿದ್ದಾರೆ. ಸ್ಕೂಟರ್ ಅಥವಾ ಆಟೊ ರಿಕ್ಷಾಗಳಲ್ಲಿ ತೆರಳಿ ಆಹಾರ ಪೊಟ್ಟಣ ಸಂಗ್ರಹಿಸುತ್ತಾರೆ. ಬೆಳಗಿನ ಸಮಯಕ್ಕೆ ಸರಿಯಾಗಿ ತಿಂಡಿ ಪೊಟ್ಟಣ ಮತ್ತು ಮಧ್ಯಾಹ್ನ 2.30 ಗಂಟೆ ಒಳಗಾಗಿ ನಿರ್ದಿಷ್ಟ ಸ್ಥಳಗಳಿಗೆ ಆಹಾರ ಪೊಟ್ಟಣ ತಲುಪಿಸುತ್ತಿದ್ದಾರೆ.


ಓಣಂ ಮತ್ತು  ಕ್ರಿಸ್‌ಮಸ್‌ನಂತಹ ಹಬ್ಬದ ದಿನಗಳಲ್ಲಿ ಅಡುಗೆ ತಯಾರಕರ ನೆರವು ಪಡೆದು ವಿಶೇಷ ಆಹಾರ, ಸಿಹಿ ತಿಂಡಿ ತಯಾರಿಸಲಾಗುತ್ತದೆ. ಬರುವ ಜನವರಿಯಿಂದ ಕೊಚ್ಚಿಯ ಚರ್ಚ್, ಸಿನಿಮಾ ಮಂದಿರ, ಕಾಲೇಜು, ಮಾಲ್, ಕಚೇರಿಗಳಂತಹ 40 ಸಾರ್ವಜನಿಕ ಸ್ಥಳಗಳಲ್ಲಿ ಜನರ ಕೊಡುಗೆಗಾಗಿ `ಗಿಫ್ಟ್ ಬಾಕ್ಸ್' ಇಡುವ ಯೋಜನೆ ಇದೆ. ಜನರು ತಾವು ಬಯಸಿದ ಬಟ್ಟೆ, ಹಾಸಿಗೆ, ಹೊದಿಕೆ, ಪಾದರಕ್ಷೆ ಮುಂತಾದವುಗಳನ್ನು ಈ ಪೆಟ್ಟಿಗೆಗಳಲ್ಲಿ ಹಾಕಬಹುದು. ಸೂಕ್ತ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಇವನ್ನು ತಲುಪಿಸುವುದು ಎಲ್ಸಿ ತಂಡದ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT