ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರಿನೂರು ಮುನ್ನಾರು

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹಸಿರ ಚಪ್ಪರಕೆ ಬೆಳ್ಳಿಯ ಹೊದಿಕೆ ಹಾಸಿದಂಥ ಗಿರಿ ಶಿಖರ. ಗಿಡ ಮರಗಳ ಗಾಢ ಹಸಿರನ್ನು ಮಸುಕಾಗಿಸಿದ ತೇಲುವ ಬಿಳಿ ಮೋಡಗಳು. ಮುಖಕ್ಕೆ ಮೇಘರಾಜನ ಮುತ್ತು. ಅವನನ್ನು ಎಟುಕಿಸಲು ತಂತಾವೇ ಚಾಚಿಕೊಳ್ಳುವ ಕೈಗಳು.
 
ಆಗೀಗ ಪಟಪಟನೆ ಉದುರುವ ಮಳೆ ಹನಿ. ಭೂರಮೆಗೆ ಕೇಶವಿನ್ಯಾಸ ಮಾಡಿದಂತೆ ಎತ್ತರದಿಂದ ಭಾಸವಾಗುವ ಚಹಾ ಗಿಡಗಳಿಂದ ಆವೃತವಾದ ಬೆಟ್ಟಗಳು. ಮಧ್ಯದಲ್ಲಿ ಹಠಾತ್ ಉದ್ಭವವಾದಂತೆ ಚಿಮ್ಮುವ ಬಿಳಿ ನೊರೆಯಂತಹ ಸಣ್ಣ ಜಲಪಾತ. ಕೇರಳದ ಮುನ್ನಾರು ಮುಂಗಾರಿನಲ್ಲಿ ಕಣ್ಣುಕೋರೈಸುವುದು ಹೀಗೆ.

ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವವರಿಗೆ ಇದಕ್ಕಿಂತ ಮಿಗಿಲಾಗಿ ಇನ್ನೇನು ಬೇಕು? ನಿಜ, `ದೇವರ ನಾಡು~ ಎಂದೇ ಕರೆಯಲಾಗುವ ಕೇರಳಕ್ಕೆ ಅಲ್ಲಿನ ನೈಸರ್ಗಿಕ ಸೌಂದರ್ಯವೇ ಕಿರೀಟ. ಅದರಲ್ಲೂ ಇಡುಕ್ಕಿ ಜಿಲ್ಲೆಯಲ್ಲಿರುವ ಮುನ್ನಾರು ಪ್ರದೇಶವಂತೂ ಕೇರಳಿಗರ ಹೆಮ್ಮೆ.

ಸಮುದ್ರ ಮಟ್ಟದಿಂದ ಸುಮಾರು 1600 ಮೀಟರ್ ಎತ್ತರದ ಪ್ರದೇಶದಲ್ಲಿ ಈ ಪ್ರದೇಶ ಮುದ್ರಾಪುಳ, ಕುಂಡಲಾ, ನಲ್ಲಥನ್ನಿ ಎಂಬ ಮೂರು ನದಿಗಳಿಂದ ಆವರಿಸಿರುವುದರಿಂದ ಮುನ್ನಾರ್ (ಮುನು-ಮೂರು, ಆರು-ನದಿ) ಎಂಬ ಹೆಸರು ಬಂದಿದೆ ಎನ್ನಲಾಗಿದೆ.

ಬೆಟ್ಟಗಳ ಮಧ್ಯದಲ್ಲಿನ ಕಡಿದಾದ ಪ್ರಯಾಣದ ಹಾದಿ ನೀಡುವ ಕಷ್ಟವನ್ನು ರಸ್ತೆಯ ಇಕ್ಕೆಲಗಳಲ್ಲಿ ಹರಡಿರುವ ಭವ್ಯವಾದ ಹಸಿರ ರಾಶಿ ಮರೆಸುತ್ತದೆ. ಚಹಾ ಪಟ್ಟಣವೆಂದೇ ಖ್ಯಾತಿಗಳಿಸಿರುವ ಮುನ್ನಾರ್‌ನಲ್ಲಿ ಮೈಲುಗಟ್ಟಲೆ ಹರಡಿರುವ ಚಹಾ ಪ್ಲಾಂಟೇಷನ್ ಎತ್ತ ಕಣ್ಣು ಹಾಯಿಸಿದರೂ ಹಸಿರಿನದ್ದೆ ದರ್ಶನ ಮಾಡಿಸುತ್ತದೆ.

ಮಳೆಗಾಲದಲ್ಲಿ ಸೂರ್ಯನ ದರ್ಶನ ಅಪರೂಪ. ವಿಪರೀತ ಸುರಿಯುವ ಮಳೆಯ ನಡುವೆ ಅಲ್ಲಿನ ಸೌಂದರ್ಯವನ್ನು ಸವಿಯುವುದು ಕಷ್ಟ. ಸೆಪ್ಟೆಂಬರ್ ನಂತರದ ಮುನ್ನಾರ್‌ನ ಅಂದ ಮತ್ತಷ್ಟು ಹೆಚ್ಚುತ್ತದೆ. ಬಿರು ಬೇಸಗೆಯಲ್ಲೂ ಮುನ್ನಾರ್ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಮೀರುವುದಿಲ್ಲ.

ಮುನ್ನಾರ್ ಸುತ್ತಮುತ್ತಲೂ ನೂರಾರು ವೈವಿಧ್ಯಮಯ ಪ್ರವಾಸಿ ತಾಣಗಳಿವೆ. ಎತ್ತರದ ಎನ್ನಲಾಗುವ 2695 ಮೀಟರ್ ಎತ್ತರದ ಅನಗುಡಿ ಬೆಟ್ಟ ಅದ್ಭುತ ಪ್ರವಾಸಿ ತಾಣ. ಮತ್ತುಪೆಟ್ಟಿಯಲ್ಲಿನ ಸರೋವರ ಮತ್ತು ಅಣೆಕಟ್ಟು, ಕುಂಡಲದಲ್ಲಿನ ಸರೋವರ, ದೇವಿಕುಲಂ, ಪಲ್ಲಿವೆಯಲ್, ಅಟ್ಟುಕಳ್, ಪೋತಮೇಡು, ರಾಜಮಾಲಗಳಲ್ಲಿನ ಗಿರಿ ಪರ್ವತಗಳು ಸೊಬಗಿನ ತಾಣಗಳಾಗಿವೆ. ರಾಜಮಾಲದಲ್ಲಿನ ಎರವಿಕುಲಂ ರಾಷ್ಟ್ರೀಯ ಉದ್ಯಾನದಲ್ಲಿ ಅಪರೂಪದ ನೀಲಗಿರಿ ಜಿಂಕೆಗಳನ್ನು ನೋಡಬಹುದು.

ಮುನ್ನಾರ್ ಮತ್ತು ರಾಜಮಾಲಗಳ ನಡುವೆ ಇರುವ ನ್ಯಾಯಾಮಕಡ್ ಪ್ರದೇಶದಲ್ಲಿ ಸುಮಾರು 1,600 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ರಮಣೀಯ ಜಲಪಾತವಿದೆ. ಕುತುಂಕಲ್, ಅತಿರಪಳ್ಳಿ, ಅಟ್ಟುಕಲ್, ಚಿನ್ನಕನಲ್‌ಗಳು ಅದ್ಭುತ ಜಲಪಾತವಿರುವ ಸ್ಥಳಗಳಾಗಿವೆ.

ಮುನ್ನಾರಿನಿಂದ 27 ಕಿ.ಮೀ ದೂರದಲ್ಲಿರುವ 1900 ಮೀಟರ್ ಎತ್ತರದ ಟಾಪ್ ಸ್ಟೇಷನ್ ನಿಸರ್ಗದ ಮನೋಹರ ಪರಿಸರವನ್ನು ಕಣ್ಣಳತೆಯಲ್ಲಿ ಸೆರೆಹಿಡಿಯಲು ಹೇಳಿ ಮಾಡಿಸಿದಂತಹ ಸ್ಥಳ. ಮುನ್ನಾರ್‌ನಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆಗೆ ನಿಷೇಧವಿದೆ. ತಣ್ಣನೆ ನಡುಗಿಸುವ ಚಳಿಯಲ್ಲಿ ಹೊಂಬಿಸಿಲಿನಡಿ ನಿಸರ್ಗದ ಸೊಬಗನ್ನು ಆಸ್ವಾದಿಸಲು ಮುನ್ನಾರ್ ಅದ್ಭುತ ತಾಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT