ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಐಸಿರಿಯ ಸೆರಗಿನಲ್ಲಿ ಕಂಗೊಳಿಸುವ ಕಾಶೀಪುರ

Last Updated 23 ಫೆಬ್ರುವರಿ 2012, 7:50 IST
ಅಕ್ಷರ ಗಾತ್ರ

ಅದು ಭದ್ರಾ ಅಚ್ಚುಕಟ್ಟು ಪ್ರದೇಶ. ನಾಲೆ, ಕಿರುನಾಲೆಗಳಲ್ಲಿ ನೀರಿನ ವ್ಯವಸ್ಥೆ. ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಬತ್ತದ ಗದ್ದೆಗಳು. ಹಸಿರಿನ ಸೀರೆಯುಟ್ಟು ಸೆರಗಿನ ಅಂಚಿನಲ್ಲಿ ನಕ್ಕು ಸಂಭ್ರಮಿಸುತ್ತಿರುವ ಭೂರಮೆ. ಮೈಸೂರು ಪ್ರದೇಶದಲ್ಲೋ, ಮಲೆನಾಡಿನ ಹಳ್ಳಿಯಲ್ಲೋ ಸಾಗುತ್ತಿರುವಂತೆ ಭಾಸವಾಗುವ ಅನುಭವ ನೀಡುವ ವಾತಾವರಣ.

ಅಲ್ಲಲ್ಲಿ ಅಡಿಕೆ ತೋಟಗಳ ಒಯ್ಯಾರ. ಕಿಂಗ್‌ಫಿಶರ್ ಹಕ್ಕಿ, ಕೊಕ್ಕರೆಗಳ ಕಲರವ. ಕೃಷಿಯಲ್ಲಿ ತೊಡಗಿರುವ ಸಮುದಾಯ. ಹೈನುಗಾರಿಕೆ ಚಟುವಟಿಕೆಗಳಲ್ಲಿ ನಿರತವಾಗಿರುವ ಕೃಷಿಕರು. ಒಂದು `ನೆಲ್ಲು~ ಚೆಲ್ಲಿದರೆ ರಾಶಿಯಾಗಿಸುವ ಕರುಣೆ- ಪ್ರೀತಿಯನ್ನು ಇಲ್ಲಿ ಭೂಮಿ ತಾಯಿ ತೋರುತ್ತಿದ್ದಾಳೆ.
- ದಾವಣಗೆರೆ ತಾಲ್ಲೂಕಿನ ಕಾಶೀಪುರ ಗ್ರಾಮದಲ್ಲಿರುವ ಸಣ್ಣ ಝಲಕ್ ಇದು.

ದಾವಣಗೆರೆಯಿಂದ ಸುಮಾರು 25 ಕಿ.ಮೀ (ರಾಮಗೊಂಡನಹಳ್ಳಿ ಮಾರ್ಗವಾಗಿ) ಸವೆಸಿದರೆ, ಸುತ್ತಲೂ ಅಚ್ಚ ಹಸಿರು ಹೊನ್ನು ಹೊಂದಿರುವ ಕಾಶೀಪುರ ಗ್ರಾಮ ಸಿಗುತ್ತದೆ. ಸುಮಾರು 2,200 ಜನಸಂಖ್ಯೆ ಇರುವ ಪುಟ್ಟ ಊರು ಅದು. ರಾಜಗಾರ್ ಹಾಗೂ ವೆಂಕಟರಮಣ ಕ್ಯಾಂಪ್ ಸಹ ಈ ಊರಿಗೆ ಸೇರುತ್ತದೆ. ಮಳಲ್ಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಈ ಗ್ರಾಮ ಅಭಿವೃದ್ಧಿ ಪಥದತ್ತ ದಾಪುಗಾಲು ಹಾಕುತ್ತಿದೆ. ಜಾತ್ರೆ, ಸಂಪ್ರದಾಯಗಳ ಕಟ್ಟುನಿಟ್ಟಿನ ಆಚರಣೆಯಿಂದಾಗಿ ಈ ಗ್ರಾಮ ಜನಪ್ರಿಯತೆ ಗಳಿಸಿದೆ.

ಕಾಶೀಪುರ ಎಂಬ ಹೆಸರು ಬಂದಿದ್ದು ಹೇಗೆ ಎಂಬ ಬಗ್ಗೆ ಹಿರಿಯರಲ್ಲಿ ಸ್ಪಷ್ಟ ಮಾಹಿತಿ ಇಲ್ಲ. ಗ್ರಾಮದಲ್ಲಿ ಕಾಶಿಲಿಂಗೇಶ್ವರ ದೇವಸ್ಥಾನವಿದೆ. ಇದರಿಂದಾಗಿ ಕಾಶೀಪುರ ಎಂಬ ಹೆಸರು ಬಂದಿರಬಹುದು ಎನ್ನುತ್ತಾರೆ ಇಂದಿನ ಯುವಕರು. ಇದಕ್ಕೂ ಸ್ಪಷ್ಟ ದಾಖಲೆಗಳಿಲ್ಲ.

ಇಲ್ಲಿ ಪ್ರತಿ ಡಿಸೆಂಬರ್‌ನಲ್ಲಿ ಮಹೇಶ್ವರ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಚೌಡಾಂಬಿಕಾ ದೇವಸ್ಥಾನವಿದ್ದು, ಪ್ರತಿ ಮೂರು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ (ಈ ಬಾರಿ 5 ವರ್ಷಕ್ಕೆ ನಡೆಯಿತು. ವಿಳಂಬವಾದರೆ ಗ್ರಾಮಕ್ಕೆ ಕೆಡಕು ಉಂಟಾಗುತ್ತದೆ. ಬೆಳೆ ಸರಿಯಾಗಿ ಬರುವುದಿಲ್ಲ ಎಂಬ ನಂಬಿಕೆ ಇಲ್ಲಿನವರದು).
 
ಮಹೇಶ್ವರ ಜಾತ್ರೆ ಸಂದರ್ಭ, ಊರಿನ ಹೊರಗಿರುವ ಪುಟ್ಟ ದೇವಸ್ಥಾನವಿರುವ ತೋಟದಲ್ಲಿ ಹೊಸ ಮಡಕೆಯಲ್ಲಿ ಅನ್ನ ಮಾಡಿ ಅದನ್ನು 4-5 ಅಡಿ ಆಳ ಗುಂಡಿ ತೆಗೆದು ಹೂಳಲಾಗುತ್ತದೆ. ಮುಂದಿನ ವರ್ಷ ಅದನ್ನು ತೆಗೆದು, ಭಕ್ತರಿಗೆ ಪ್ರಸಾದವಾಗಿ ವಿತರಿಸುತ್ತಾರಂತೆ.
 
ವರ್ಷದವರೆಗೂ ಅನ್ನ ಕೆಟ್ಟಿರುವುದಿಲ್ಲ; ಒಂದು ವೇಳೆ ಕೆಟ್ಟು ಹೋದರೆ, ಗ್ರಾಮಕ್ಕೆ ಸಂಕಷ್ಟ ಬರುತ್ತದೆ ಎಂಬ ನಂಬಿಕೆ ಇಲ್ಲಿನವರದ್ದಾಗಿದೆ! ಇಲ್ಲಿಗೆ, ಮಹಿಳೆಯರು ಹೋಗುವುದಿಲ್ಲ. ಗ್ರಾಮದಲ್ಲಿರುವ ದೇವಸ್ಥಾನದ ಬಳಿ ನಡೆಯುವ  ಜಾತ್ರೆಯಲ್ಲಿ ಎಲ್ಲರೂ ಭಾಗವಹಿಸುತ್ತಾರೆ.

ಯುಗಾದಿ, ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ದಸರಾ ವೇಳೆ, ಮೈಸೂರು ರೀತಿಯಲ್ಲಿಯೇ ಬನ್ನಿಹಬ್ಬ, ಆಯುಧಪೂಜೆ ಮಾಡಲಾಗುತ್ತದೆ. ಇ್ಲ್ಲಲಿ, ಜಾಲಿ ಹನುಮಂತಪ್ಪನ ದೇವಸ್ಥಾನ, ಕುಕ್ಕುವಾಡೇಶ್ವರಿ ಸೇರಿದಂತೆ ಹಲವು ದೇವಸ್ಥಾನಗಳಿವೆ ಎಂದು ಗ್ರಾಮದ ಆಚರಣೆಗಳ ಬಗ್ಗೆ ತಿಳಿಸುತ್ತಾರೆ ಹಿರಿಯರು.

ಗ್ರಾಮದಲ್ಲಿ ಪ್ರಾಥಮಿಕ ಶಾಲೆ, ಅಂಗನವಾಡಿ ಕಟ್ಟಡವಿದೆ. ಇತ್ತೀಚೆಗೆ ಅವುಗಳಿಗೆ ಕಾಂಪೌಂಡ್ ನಿರ್ಮಿಸಲಾಗಿದೆ. ಪ್ರೌಢಶಾಲೆಗೆ ಕಾಂಪೌಂಡ್ ನಿರ್ಮಾಣಕ್ಕೆ ಜಾಗದ ಗೊಂದಲ ತೊಡಕಾಗಿದೆ. ದಾನಿಗಳು ನೀಡಿದ ಜಾಗದ ಸರ್ವೇ ನಂ, ರಾಜ್ಯಪಾಲರ ಹೆಸರಿಗೆ ಆಗಿರುವ ಜಾಗ ಹಾಗೂ ಪ್ರಸ್ತುತ ಶಾಲೆ ಇರುವ ಜಾಗ ಪ್ರತ್ಯೇಕವಾಗಿದೆ ಎಂಬ ಗೊಂದಲವೇ ಇದಕ್ಕೆ ಕಾರಣ. ಇದನ್ನು ನಿವಾರಿಸಲು ಗ್ರಾಮ ಪಂಚಾಯ್ತಿ ಸದಸ್ಯರಾದ ಕೆ.ಎಸ್. ಮಹೇಶ್ ಹಾಗೂ ಎಚ್. ಕೃಷ್ಣಮೂರ್ತಿ ಶ್ರಮಿಸುತ್ತಿದ್ದಾರೆ. ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಂಡು ಭರವಸೆ ಮೂಡಿಸಿದ್ದಾರೆ.

ಲಿಂಗಾಯತ- ಪಂಚಮಸಾಲಿ ಜನಾಂಗದವರು ಹೆಚ್ಚಿದ್ದಾರೆ. ದಲಿತರು ಸೇರಿದಂತೆ ಇತರ ಸಮುದಾಯಗಳ ಜನರಿದ್ದಾರೆ. ರೆಡ್ಡಿಗಳು ಪ್ರತ್ಯೇಕವಾಗಿ, ರಾಜುಗಾರ ಹಾಗೂ ವೆಂಕಟರಮಣ ಕ್ಯಾಂಪ್‌ನಲ್ಲಿ ಜೀವನ ಕಂಡುಕೊಂಡಿದ್ದಾರೆ. ಹೆಚ್ಚಾಗಿ ಇಲ್ಲಿ ಬತ್ತ, ಅಲ್ಲಲ್ಲಿ ಅಡಿಕೆ ಕಂಡುಬರುತ್ತದೆ. ಹೈನುಗಾರಿಕೆ ಇಲ್ಲಿನವರ ಮುಖ್ಯ ಉಪಕಸುಬು. ನಿತ್ಯ 520 ಲೀ. ಹಾಲು ಉತ್ಪಾದನೆ ಆಗುತ್ತಿದೆ.

 ಗ್ರಾಮದಲ್ಲಿ ನಾವು ಸಣ್ಣವರಿದ್ದಾಗ ಬಹಳಷ್ಟು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಜಾತ್ರೆಗಳು ಪದ್ಧತಿಯಂತೆ ನಡೆದುಕೊಂಡು ಬಂದಿವೆ. ಇಲ್ಲಿ ಕೆ. ಬಸಪ್ಪ ಎಂಬ ಪಂಡಿತರೊಬ್ಬರು ಇದ್ದರು. ಅವರಿಗೆ ಶ್ರೀಶೈಲ ಜಗದ್ಗುರುಗಳು `ಕವಿರತ್ನ~ ಎಂಬ ಬಿರುದು ಕೊಟ್ಟಿದ್ದರು. ಮೈಸೂರು ತಂಬಾಕು ಕಂಪೆನಿಗೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕೆ. ಶಿವಪ್ಪ ಮತ್ತಿತರರು ಉನ್ನತ ಹುದ್ದೆ ಏರಿದವರಿದ್ದಾರೆ.

ಶ್ರೀಶೈಲ ಮಠದ ವಾಗೀಶ ಪಂಡಿತಾರಾಧ್ಯರು 3-4 ತಿಂಗಳ ಕಾಲ ಇಲ್ಲಿ ತಂಗಿದ್ದು, ಜ್ಞಾನ ದಾಸೋಹ ಕಾರ್ಯ ಕೈಗೊಂಡಿದ್ದರು. ಇಲ್ಲಿರುವ ಕಾಶಿಲಿಂಗೇಶ್ವರ ದೇವರ ಮಹಿಮೆ ಅಪಾರ. ಬೇಡಿಕೊಂಡಿದ್ದು ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬುದನ್ನು ಈ ದೇವರು ತಿಳಿಸಿಬಿಡುತ್ತದೆ (ಕುರುಹು) ಎನ್ನುತ್ತಾರೆ ಗ್ರಾಮದ ಹಿರಿಯರಾದ ನಿವೃತ್ತ ಶಿಕ್ಷಕ ಕೆ.ಎಂ. ಕೊಟ್ರಯ್ಯ.

ದಾರಿಯಲ್ಲಿ ಹೋಗುತ್ತಿದ್ದ ಶಿಕ್ಷಣ ಸಚಿವರಾಗಿದ್ದ ನಾಗಮ್ಮ ಕೇಶವಮೂರ್ತಿ ಅವರು ನಡೆದುಕೊಂಡು ಬೇರೆ ಊರಿನ ಶಾಲೆಗಳಿಗೆ ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ಮಾತನಾಡಿಸಿ, ಇಲ್ಲಿಯೇ ಶಾಲೆ ನಿರ್ಮಿಸಿದರೆ ಉತ್ತಮವಾಗಿ ಕಲಿಯುತ್ತೀರಾ ಎಂದು ಕೇಳಿ, ಮಂಜೂರು ಮಾಡಿಸಿದರು.
 
ದಾನಿಗಳು ಜಾಗ ನೀಡಿದ್ದರಿಂದ ಪ್ರೌಢಶಾಲೆ ನಿರ್ಮಾಣವಾಗಿದೆ. ಶಾಸಕರ ಅನುದಾನದಲ್ಲಿ ಸಮುದಾಯ ಭವನ ನಿರ್ಮಿಸಲಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಅವರು ತಿಳಿಸಿದರು.

ತಾವು ಆಯ್ಕೆಯಾದ ನಂತರ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಸರ್ಕಾರಿ ಹಿ.ಪ್ರಾ. ಶಾಲೆಗೆ ಕಾಂಪೌಂಡ್, ಬಾಕ್ಸ್ ಚರಂಡಿ, ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ಕೆಲಸಗಳನ್ನು ಮಾಡಿಸಲಾಗಿದೆ.

ಓವರ್‌ಹೆಡ್ ಟ್ಯಾಂಕ್ ಮಂಜೂರಾಗಿದೆ. ಉದ್ಯೋಗ ಖಾತ್ರಿಯಡಿ ಇಂತಿಷ್ಟು ಅನುದಾನ ಎಂದು ಮಿತಿಗೊಳಿಸಲಾಗಿದೆ. ವರ್ಷಕ್ಕೆ ಕೇವಲ ರೂ. 8-9 ಲಕ್ಷ ಸಾಕಾಗುವುದಿಲ್ಲ. ಹೆಚ್ಚಿನ ಅನುದಾನ ಕಲ್ಪಿಸಬೇಕು.

ಗ್ರಾಮದಲ್ಲಿರುವ ಹೊಂಡದಲ್ಲಿ ಹುಲ್ಲು ಬೆಳೆದಿದ್ದು, ವ್ಯರ್ಥವಾಗುತ್ತಿದೆ. ಅದನ್ನು ಪುಷ್ಕರಿಣಿಯಾಗಿ ಸಿದ್ಧಪಡಿಸಿದರೆ, ಜಾತ್ರೆ ಸಂದರ್ಭದಲ್ಲಿ ಅನುಕೂಲ ಆಗುತ್ತದೆ. ಬಸವಾ ಇಂದಿರಾ ಯೋಜನೆಯಡಿ ರಾಜುಗಾರ ಕ್ಯಾಂಪ್‌ಗೆ 39 ಮನೆಗಳು ಮಂಜೂರಾಗಿವೆ. 25 ಮಂದಿಗೆ ಮನೆ ಕಟ್ಟಲು ನಿವೇಶನವಿಲ್ಲ. ಗೋಮಾಳದಲ್ಲಿ ನಿವೇಶನ ನೀಡಿದರೆ ಅನುಕೂಲ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ಕೆ.ಎಸ್. ಮಹೇಶ್.

ವೆಂಕಟರಮಣ ಕ್ಯಾಂಪ್‌ನಲ್ಲಿರುವ ಶಾಲೆ ಶಿಥಿಲಾವಸ್ಥೆಯಲ್ಲಿದ್ದು, ಕಟ್ಟಡ ನಿರ್ಮಿಸಬೇಕಿದೆ. ಇಲ್ಲಿಗೆ ಅಂಗನವಾಡಿ ಮಂಜೂರಾಗಿದೆ. ಶಿಕ್ಷಕಿ, ಸಹಾಯಕಿಯರನ್ನು ನೇಮಿಸಲಾಗಿದೆ. ಆದರೆ, ಕಟ್ಟಡವಿಲ್ಲ. ಹೀಗಾಗಿ ಶಿಕ್ಷಕಿ ಮನೆಯೆ ಅಂಗನವಾಡಿ ಆಗಿದೆ! ಡಿಡಿಪಿಐಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ತಿಳಿಸುತ್ತಾರೆ ಅವರು.

ಪಂಚಾಯ್ತಿಗೆ ನಿರೀಕ್ಷಿಸಿದಷ್ಟು ಅನುದಾನ ಬರುತ್ತಿಲ್ಲ. ಜನರಿಗೆ ಕೊಟ್ಟ ಆಶ್ವಾಸನೆ ಈಡೇರಿಸಲು ಆಗುತ್ತಿಲ್ಲ. ಅಧಿಕಾರಿಗಳು ಸರಿಯಾಗಿ ಮಾಹಿತಿ ಕೊಡುವುದಿಲ್ಲ. ಅನುದಾನ ಬಿಡುಗಡೆ ವಿಳಂಬದಿಂದ ಹೆಚ್ಚಿನ ಕಾಮಗಾರಿ ಸಾಧ್ಯವಾಗುತ್ತಿಲ್ಲ. ಖಾತ್ರಿ ಯೋಜನೆಯಡಿ ರೂ. 8-9 ಲಕ್ಷ ಬಾಕಿ ಇದೆ.

ಸ್ಮಶಾನದಲ್ಲಿ ಜಂಗಲ್ ಬೆಳೆದಿದ್ದು, ತೆರವುಗೊಳಿಸಿ ರಸ್ತೆ ನಿರ್ಮಿಸಬೇಕು ಹಾಗೂ ಕೊಳವೆಬಾವಿ ಕೊರೆಸಿಕೊಡಬೇಕು. ದಲಿತರ ಕಾಲೊನಿ ಬಳಿ ಬತ್ತದ ಗದ್ದೆಗಳಿವೆ. ಮಳೆಗಾಲದಲ್ಲಿ ನೀರು ಮನೆಗಳಿಗೆ ನುಗ್ಗುತ್ತದೆ. ಹೀಗಾಗಿ ಇಲ್ಲಿ ವ್ಯವಸ್ಥಿತವಾದ ಚರಂಡಿ ನಿರ್ಮಾಣ ಮಾಡಬೇಕಿದೆ ಎಂದು ತಿಳಿಸುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ಎಚ್. ಕೃಷ್ಣಮೂರ್ತಿ.                    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT