ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ನೀಡಿದ ವೈದ್ಯ

Last Updated 14 ಜುಲೈ 2013, 7:35 IST
ಅಕ್ಷರ ಗಾತ್ರ

ಕನಕಗಿರಿ:  ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ವೈದ್ಯಕೀಯ ಪದವಿ ಪಡೆದ ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲು ನಿರಾಕರಿಸುತ್ತಿರುವುದು ಪ್ರಮುಖ ಕಾರಣ.

ಇದಕ್ಕೆ ಅಪವಾದ ಎನ್ನುವಂತೆ ಸಮೀಪದ ನವಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಪದವೀಧರ  ವೈದ್ಯರೊಬ್ಬರು ಸದ್ದಿಲ್ಲದೆ ಗ್ರಾಮೀಣ ಜನರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಹದಗೆಟ್ಟಿದ್ದ ನವಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣವನ್ನು ಹಸನುಗೊಳಿಸಿ ಸ್ವಚ್ಛ, ಸುಂದರ ಆಸ್ಪತ್ರೆಯ ಕಲ್ಪನೆಯನ್ನು ಸಾಕಾರಗೊಳಿಸಿದ್ದಾರೆ.

`2002ರಲ್ಲಿ ನೇಮಕಗೊಂಡ ಡಾ.ರಮೇಶ ಅವರು ನವಲಿಗೆ ಬಂದಾಗ ಆಸ್ಪತ್ರೆಯ ಆರೋಗ್ಯ ಹದಗೆಟ್ಟಿತ್ತು, ಆವರಣ ಕಸಕಡ್ಡಿಯಿಂದ ಕೂಡಿತ್ತು. ಈ ಅವ್ಯವಸ್ಥೆಯನ್ನು ಸವಾಲಾಗಿ ಸ್ವೀಕರಿಸಿ ಗಿಡಗಳನ್ನು ನೆಟ್ಟು ಆಸ್ಪತ್ರೆಯ  ಪರಿಸರದ ಚಿತ್ರಣವನ್ನೇ ಬದಲಾಯಿಸಿದ್ದಾರೆ' ಎಂದು ಗ್ರಾಮದ ಯುವ ಮುಖಂಡ ಭೀಮನಗೌಡ ಹರ್ಲಾಪುರ ನೆನಪಿಸುತ್ತಾರೆ.

ಮಂಡ್ಯ ಜಿಲ್ಲೆಯ ಬೆಳ್ಳೂರು ಗ್ರಾಮದವರಾದ ಡಾ.ಬಿ.ಎಚ್.ರಮೇಶ ಅವರು 11 ವರ್ಷಗಳಿಂದಲೂ ಹಳ್ಳಿ ಜನತೆಗೆ ಉತ್ತಮ ಸೇವೆ ನೀಡುತ್ತಿದ್ದಾರೆ.

ಲಭ್ಯವಿರುವ ಹೆರಿಗೆ ಕೊಠಡಿ, ಪ್ರಯೋಗಾಲಯ, ಶಸ್ತ್ರಚಿಕಿತ್ಸಾ ಕೊಠಡಿ, ಸಾಮಾನ್ಯ ವಾರ್ಡ್‌ಗಳಲ್ಲಿ ಸ್ವಚ್ಛತೆ ಕಾಪಾಡಿ ಆರೋಗ್ಯಪೂರ್ಣ ಪರಿಸರ ನಿರ್ಮಿಸಿದ್ದಾರೆ. ರಾಷ್ಟ್ರೀಯ ಕಾರ್ಯಕ್ರಮ `ತಾಯಿ-ಮಗುವಿನ ಮರಣ ಪ್ರಮಾಣ ಕಡಿಮೆ' ಮಾಡುವಲ್ಲಿ ಇವರು ಶಕ್ತಿ ಮೀರಿ ಪ್ರಯತ್ನಿಸಿ ಗುರಿ ಸಾಧಿಸಿದ್ದಾರೆ. 

ಕ್ಷಯ, ಕುಷ್ಠರೋಗ, ಪಲ್ಸ್ ಪೋಲಿಯೊ, ಮಲೇರಿಯಾ ಇತರೆ ಕಾರ್ಯಕ್ರಮಗಳನ್ನು ಚಾಚೂ ತಪ್ಪದೆ ಅನುಷ್ಠಾನಕ್ಕೆ ತಂದು ಇಲಾಖೆಯ ಅಧಿಕಾರಿ ಹಾಗೂ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಜನಸಂಖ್ಯೆ ನಿಯಂತ್ರಣ, ಎಚ್‌ಐವಿ ಏಡ್ಸ್, ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ `ಸೈ' ಎನ್ನಿಸಿಕೊಂಡಿದ್ದಾರೆ.

`ತಿಂಗಳಿಗೆ 30-35 ಹೆರಿಗೆಯನ್ನು ಸರಳವಾಗಿ ಮಾಡಿಸುವ ಮೂಲಕ ಇವರು ಜನರ ಮನ ಗೆದ್ದಿದ್ದಾರೆ. ಆರೋಗ್ಯ ಕೇಂದ್ರದ ವ್ಯಾಪ್ತಿಯ 28 ಗ್ರಾಮಗಳಲ್ಲಿಯೂ ರಮೇಶ ಅವರ ಸೇವೆಯನ್ನು ಜನ ಸ್ಮರಿಸುತ್ತಾರೆ' ಎಂದು ಎಪಿಎಂಸಿ ಮಾಜಿ ಉಪಾಧ್ಯಕ್ಷ ವಿರುಪಣ್ಣ ಕಲ್ಲೂರು ತಿಳಿಸುತ್ತಾರೆ.

ಮಧ್ಯರಾತ್ರಿಯಲ್ಲಿ ಚಿಕಿತ್ಸೆಗೆ ಬಂದರೂ ಇವರು ಬೇಸರಿಸಿಕೊಂಡವರಲ್ಲ, ಆಸ್ಪತ್ರೆಯ ಸ್ಟಾಫ್ ನರ್ಸ್ ಆಗಿರುವ ಪತ್ನಿ ಸರಸ್ವತಿ ಜೊತೆಗೆ ಇವರು ಜನರಿಗೆ ಉತ್ತಮ ಸೇವೆ ನೀಡುತ್ತಿದ್ದಾರೆ.ಇವರ ಸೇವೆ ಪರಿಗಣಿಸಿ ಸರ್ಕಾರ 2010-11ನೇ ಸಾಲಿನಲ್ಲಿ `ತಾಲ್ಲೂಕು ಮಟ್ಟದ ಉತ್ತಮ ಆಸ್ಪತ್ರೆ'

ಪ್ರಶಸ್ತಿ ನೀಡಿದೆ. ಕಳೆದ ವರ್ಷ ಕೊಪ್ಪಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಶಿವರಾಮಗೌಡ ಡಾ.ರಮೇಶ ಅವರಿಗೆ `ಜಿಲ್ಲಾಮಟ್ಟದ ಉತ್ತಮ ವೈದ್ಯ' ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

`ಪ್ರಶಸ್ತಿ, ಬಿರುದುಗಳಿಗಿಂತ ಜನರ ಸೇವೆ ಮುಖ್ಯ' ಎಂದು ರಮೇಶ ತಿಳಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT