ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರುಡುಗೆಯ ಸಿಂಹಾಚಲ

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹಸಿರು ಗಿರಿಯ ಸಾಲುಗಳ ನಡುವೆ ಹಾವಿನ ದಾರಿಯಂತಿರುವ ಬೆಟ್ಟದ ರಸ್ತೆ. ಇಕ್ಕೆಲಗಳಲ್ಲಿ ತೂಗಾಡುವ ಹಸಿರೆಲೆಗಳು. ಇದೆಲ್ಲವನ್ನೂ ದಾಟಿ ಗಿರಿಯ ಶಿಖರ ತಲುಪುವ ವೇಳೆಗೆ ಮೋಡಗಳ ಮರೆಯಲ್ಲಿ, ಹಸಿರು ಪ್ರಭಾವಳಿಯಲ್ಲಿ ಕಂಗೊಳಿಸುವ ದೇವಾಲಯದ ಗೋಪುರಗಳು...
ಅದೇ `ಸಿಂಹಾಚಲ~!

ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ 18 ಕಿಮೀ ದೂರದಲ್ಲಿ ಸಿಂಚಾಚಲ ಇದೆ. ಈ ದೇವಾಲಯ ತಲುಪಲು 4 ಕಿಮೀಗಳಷ್ಟು ಬೆಟ್ಟದ ದಾರಿಯಲ್ಲಿ ಸಾಗಬೇಕು. ಅದ್ಭುತ ಹಸಿರು ಸಿರಿಯ ವೀಕ್ಷಣೆಯೊಂದಿಗೆ ಬೆಟ್ಟ ತಲುಪುವುದು ಒಂದು ಅನನ್ಯ ಅನುಭವ.

`ವರಹಾ ನರಸಿಂಹಸ್ವಾಮಿ~ ನೆಲಸಿರುವುದರಿಂದ ಈ ಬೆಟ್ಟಕ್ಕೆ ಸಿಂಹಾದ್ರಿ, ಸಿಂಹಾಚಲ ಎಂದೆಲ್ಲ ಹೆಸರಿದೆ. ಇದು ಮಹಾವಿಷ್ಣು - ವರಾಹ ನರಸಿಂಹನಾಗಿ ಅವತಾರವೆತ್ತಿದ ಕ್ಷೇತ್ರ. ಭಾರತದ `18 ನರಸಿಂಹ ಕ್ಷೇತ್ರ~ಗಳಲ್ಲಿ ಪ್ರಮುಖವಾದ ದೇವಾಲಯ ಸಿಂಹಾಚಲ.

ಬೆಟ್ಟದ ತುದಿಯಲ್ಲಿ ನೆಲಸಿರುವ `ವರಾಹ ನರಸಿಂಹಸ್ವಾಮಿ ಕ್ಷೇತ್ರ~ಕ್ಕೆ ಲಕ್ಷಾಂತರ ಭಕ್ತರಿದ್ದಾರೆ. ಶಿವಲಿಂಗವನ್ನು ಹೋಲುವ ನರಸಿಂಹದೇವರ ದರ್ಶನ ವರ್ಷಕ್ಕೆ 12 ಗಂಟೆಗಳು ಮಾತ್ರ. ಅದು ಅಕ್ಷಯ ತೃತೀಯ ದಿನ ಭಕ್ತರಿಗೆ `ನರಸಿಂಹನ ನಿಜರೂಪ ದರ್ಶನ~ವಾಗುತ್ತದೆ. ಉಳಿದ ದಿನಗಳಲ್ಲಿ ದೇವರ ಮೂರ್ತಿಯನ್ನು ಶ್ರೀಗಂಧಲೇಪನದಿಂದ ಮುಚ್ಚಿರುತ್ತಾರೆ. 

ನರಸಿಂಹ ದೇವರ ನಿರೂಪ ದರ್ಶನವನ್ನು `ಚಂದ್ರಯಾನ ಯಾತ್ರ~ ಅಥವಾ `ಚಂದನೋತ್ಸವಂ~ ಎಂದು ಕರೆಯುತ್ತಾರೆ. ಪ್ರತಿ ವರ್ಷ ವೈಶಾಖ ಮಾಸ ಅಂದರೆ ಮೇ ತಿಂಗಳಲ್ಲಿ ಈ ಉತ್ಸವ ನಡೆಯುತ್ತದೆ.

ಪೌರಾಣಿಕ ಹಿನ್ನೆಲೆ
ಪುರಾಣದಲ್ಲಿ ಅಸುರ ಹಿರಣ್ಯಕಶಿಪು ಪುತ್ರ ಪ್ರಹ್ಲಾದ ವಿಷ್ಣುವಿನ ಭಕ್ತ. ಹಿರಣ್ಯಕಶಿಪು ವಿಷ್ಣು ದ್ವೇಷಿ. ವಿಷ್ಣು ಆರಾಧನೆ ಬಿಡುವಂತೆ ಪುತ್ರನಿಗೆ ಅನೇಕ ಬಾರಿ ಹೇಳಿದರೂ ಮಗ ಪ್ರಹ್ಲಾದ ಬದಲಾಗಲಿಲ್ಲ. ಕೊನೆಗೆ ಹಿರಣ್ಯ ಕಶಿಪು ಮಗನನ್ನು ಕೊಲ್ಲಿಸಲು ಹಲವು ವಿಧಗಳಲ್ಲಿ ಪ್ರಯತ್ನಿಸಿದ. ಒಮ್ಮೆ ಬೆಟ್ಟದಿಂದ ಪ್ರಹ್ಲಾದನನ್ನು ತಳ್ಳಿಸಿ ಕೊಲ್ಲಲು ಪ್ರಯತ್ನಿಸಿದ. ಆಗ ವಿಷ್ಣು ಬೆಟ್ಟವನ್ನೇ ಮುಂದಕ್ಕೆ ಎತ್ತಿಕೊಂಡು ಹೋಗಿ ಪ್ರಹ್ಲಾದದನ್ನು ರಕ್ಷಿಸಿದ. ಆ ಸ್ಥಳವೇ ಈಗಿನ ಸಿಂಹಾಚಲ ಎನ್ನುತ್ತದೆ ಪುರಾಣ ಕಥೆ.

ಪ್ರಹ್ಲಾದನನ್ನು ವಿಷ್ಣು ರಕ್ಷಿಸಿದ ಸ್ಥಳದಲ್ಲೇ `ವರಾಹ ನರಸಿಂಹ~ ದೇಗುಲ ನಿರ್ಮಿಸಲಾಗಿದೆ.
ಈ ದೇಗುಲದಲ್ಲಿ ನರಸಿಂಹ ದೇವರ ಪಾದಗಳು ಕಾಣಿಸುವುದಿಲ್ಲ. ಅವುಗಳು ಭೂಮಿಯಲ್ಲಿ ಹೂತುಕೊಂಡಿವೆ. ಅದಕ್ಕೆ ಪುರಾಣದಲ್ಲಿ ನೀಡಲಾಗುವ ಕಾರಣ- ಬೆಟ್ಟದಿಂದ ತಳ್ಳಿದ ಪ್ರಹ್ಲಾದನನ್ನು ರಕ್ಷಿಸಲು ಧಾವಿಸಿದ ವಿಷ್ಣು, ಗರುಡನ ಮೇಲಿಂದ ಹಾರುತ್ತಾನೆ. ಈ ಪ್ರಕ್ರಿಯೆಯಲ್ಲಿ ವಿಷ್ಣುವಿನ ಕಾಲುಗಳು ನೆಲದಲ್ಲಿ ಹೂತುಕೊಳ್ಳುತ್ತವೆ!

ಶಾಸನಗಳ ದಾಖಲೆ
ದೇವಾಲಯದೊಳಗಿರುವ ವಿಷ್ಣುವಿನ ವಿಗ್ರಹ ವರಾಹ ಅವತಾರದಲ್ಲಿದೆ. ಸಿಂಹದ ಮುಖ. ಎರಡು ಕೈಗಳಲ್ಲಿ ಆಭರಣ. ಉಗ್ರಾವತಾರ. ಇದು ಮೂರ್ತಿಯ ರೂಪ. ಕ್ರಿಸ್ತಶಕ 1098ರ ಶಾಸನದ ಪ್ರಕಾರ ತಮಿಳುನಾಡಿನ ಚೋಳ ರಾಜ ಕುಲೋತ್ತುಂಗ ಈ ದೇವಸ್ಥಾನಕ್ಕೆ ದತ್ತಿ ನೀಡಿದ್ದ. ಕ್ರಿ.ಶ. 1137-56ರಲ್ಲಿ ಕಳಿಂಗ ರಾಜ್ಯದ ಮಹಾರಾಣಿ ನರಸಿಂಹ ದೇವರಿಗೆ ಚಿನ್ನದ ಕವಚ ನೀಡಿದ್ದರು ಎಂಬುದು ಮತ್ತೊಂದು ಶಾಸನದಲ್ಲಿ ಉಲ್ಲೇಖವಾಗಿದೆ. ಇನ್ನೊಂದು ಶಾಸನದ ಪ್ರಕಾರ ಕ್ರಿ.ಶ. 1267ರಲ್ಲಿ ಪೂರ್ವಗಂಗಾದ ರಾಜ ನರಸಿಂಹದೇವ ನರಸಿಂಹ ದೇವಾಲಯವನ್ನು ಹೊಸದಾಗಿ ನಿರ್ಮಿಸಿದ.

ಒರಿಸ್ಸಾದ ಗಜಪತಿ ರಾಜ್ಯದ ರಾಜ ಗಜಪತಿ ಪ್ರತಾಪರುದ್ರ ದೇವ ಅವರನ್ನು ಸೋಲಿಸಿದ ನಂತರ, ವಿಜಯನಗರದ ಅರಸ ಕೃಷ್ಣದೇವರಾಯ ಕ್ರಿ.ಶ 1516 ಮತ್ತು 1519ರಲ್ಲಿ ಎರಡು ಬಾರಿ ಈ ದೇವಾಲಯಕ್ಕೆ ಭೇಟಿ ನೀಡಿದ್ದ ಎನ್ನಲಾಗಿದೆ. ಕೃಷ್ಣದೇವರಾಯ ಅಂದು ಉಡುಗೊರೆಯಾಗಿ ನೀಡಿದ ಚಿನ್ನಾಭರಣಗಳು ಈಗಲೂ ದೇವಾಲಯದಲ್ಲಿವೆಯಂತೆ.

ಇಂಥ ಅಪೂರ್ವ ಇತಿಹಾಸವುಳ್ಳ ಸಿಂಹಾಚಲದ ವರಹಾ ನರಸಿಂಹ ದೇವಾಲಯ, ಭಾರತದ ಅತಿ ಶ್ರೀಮಂತ ದೇವಾಲಯಗಳಲ್ಲೊಂದು.  ಈ ದೇವಾಲಯದ ವಾರ್ಷಿಕ ಆದಾಯ 520 ದಶಲಕ್ಷ ರೂಪಾಯಿ.

ಬೃಹತ್ ಆವರಣ, ಉತ್ತಮ ವ್ಯವಸ್ಥೆ
ಬೆಟ್ಟದ ತುದಿಯಲ್ಲಿದ್ದರೂ, ದೇವಾಲಯದ ಸುತ್ತ ವಿಶಾಲವಾದ ಆವರಣವಿದೆ. ಭಕ್ತರು ಉಳಿದುಕೊಳ್ಳಲು ವಸತಿ ವ್ಯವಸ್ಥೆ ಇದೆ. ಇಲ್ಲಿನ ದರ್ಶನದ ವ್ಯವಸ್ಥೆಯೆಲ್ಲ ತಿರುಮಲ ತಿರುಪತಿ ದೇವಾಲಯದ ದರ್ಶನ ವ್ಯವಸ್ಥೆಯನ್ನೇ ಹೋಲುತ್ತವೆ. ಬೆಳಿಗ್ಗೆ 6ರಿಂದ ಮಧ್ಯಾಹ್ನ 12 ಹಾಗೂ ಸಂಜೆ 4ರಿಂದ ರಾತ್ರಿ 8ರವರೆಗೆ ದೇವಾಲಯಕ್ಕೆ ಪ್ರವೇಶವಿದೆ.
 
ವಿಶಾಖಪಟ್ಟಣದಿಂದ ಸಾಕಷ್ಟು ವಾಹನ ವ್ಯವಸ್ಥೆ ಇದೆ. ಬೈಕ್ ಸವಾರರಿಗೆ ಬೆಟ್ಟದ ದಾರಿಯಲ್ಲಿ ಸಾಗುವುದು ಅದ್ಭುತ ಅನುಭವ ನೀಡುತ್ತದೆ. ಬೆಂಗಳೂರಿನಿಂದ ವಿಶಾಖಪಟ್ಟಣಕ್ಕೆ ಸಾಕಷ್ಟು ರೈಲಿನ ವ್ಯವಸ್ಥೆ ಇದೆ. ಒರಿಸ್ಸಾಗೆ ಹೋಗುವ ಎಲ್ಲ ರೈಲುಗಳಲ್ಲಿ ವಿಶಾಖಪಟ್ಟಣ ತಲುಪಬಹುದು. ವಿಶಾಖಪಟ್ಟಣದಿಂದ ವೈಜಿನಗರಂ ಮೂಲಕ ಸಿಂಹಾಚಲ ಬೆಟ್ಟವನ್ನು ತಲುಪಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT