ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸ್ತಕಲಾ ವೈಭವ

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮಣ್ಣಿನಿಂದ ಮುದ್ದು ಗಣಪನ ತಯಾರಿಸಿ ತನ್ನ ತಾಯಿಗೆ ತೋರಿಸುತ್ತಿದ್ದ ಮುಗ್ಧ ಬಾಲಕನ ಕಣ್ಣಿನಲ್ಲಿ ತಾನು ಏನೋ ಸಾಧಿಸಿಬಿಟ್ಟಂತಹ ಅನುಭವ.. ಮತ್ತೊಂದೆಡೆ ದೇಶದ ವಿವಿಧ ಭಾಗಗಳ ಕರಕುಶಲ ಕಲಾವಿದರು ಸಿದ್ಧಪಡಿಸಿದ ವಸ್ತುಗಳು. ಉಣ್ಣೆಯ ಉಡುಗೆ, ಬಿದಿರಿನ ಅಲಂಕಾರಿಕ ಗೃಹೋಪಯೋಗಿ ವಸ್ತುಗಳು, ಕಂಚಿನ ವಿಗ್ರಹ, ಇನ್ನಿತರ ವಸ್ತುಗಳು, ಒಡಿಶಾದ ಗುಡ್ಡಗಾಡಿನಲ್ಲಿ ಮಾತ್ರ ಕಾಣಸಿಗುವ ಶೋವೈ (ಗಿಡ)ದಿಂದ ತಯಾರಿಸಿರುವ ಮ್ಯಾಟ್, ವಿವಿಧ ಆಲಂಕಾರಿಕ ವಸ್ತುಗಳು. ಇದು `ಮಾನ್ಯ~ ಸಂಸ್ಥೆ ಆಯೋಜಿಸಿರುವ ಹಸ್ತಕಲಾ ವಸ್ತುಪ್ರದರ್ಶನದ ನೋಟ.

ಮಂಗಳಗಿರಿ, ಲಖನೌನ ಚಿಕನ್ ಪ್ರಿಂಟ್, ಜಯಪುರದ ಬ್ಲ್ಯೂ ಪಾಟರಿ, ಮೈಸೂರಿ ಕಾಟನ್, ಕಾಂಜೀವರಂ, ಬಾಗರ್ ಪ್ರಿಂಟ್ ಮುಂತಾದ ಬಗೆಬಗೆಯ ಸೀರೆಗಳು ಇಲ್ಲಿ ಲಭ್ಯ. ಕಣ್ಣಿಗೆ ತಂಪೆನಿಸುವ ಬಣ್ಣಗಳಲ್ಲಿ, ಸ್ಪರ್ಶಕ್ಕೆ ನಾಜೂಕೆನಿಸುವಷ್ಟು ವೈವಿಧ್ಯದ ಸೀರೆಗಳು ಇಲ್ಲಿವೆ.

ಹೊಟ್ಟೆಯೊಳಗೊಂದು ಮೊಟ್ಟೆ, ಮೊಟ್ಟೆಯೊಳಗೊಂದು ಮೊಟ್ಟೆ ಎಂಬಂತೆ ಒಂದರೊಳಗೊಂದು ಅಳವಡಿಸಲಾದ ಹಲವಾರು ದೇವರ ಮೂರ್ತಿಗಳಿಗರುವ ಬನಾರಸ್‌ನ ವುಡನ್ ಲೇಕರ್ ಪೇಟಿಂಗ್ ಗಮನ ಸೆಳೆಯುತ್ತದೆ.

ಸದಭಿರುಚಿಯ ಮಲಗುವ ಕೋಣೆ ಅಲಂಕಾರಕ್ಕೆ ಕೋಲ್ಕತ್ತದ ಕಾಂತ ಕೈ ಕಸೂತಿ ಇರುವ ಬೆಡ್‌ಶೀಟ್‌ಗಳು ಸಿಗುತ್ತವೆ.

ಹಳೆ ಕಾಲದ ದೀಪಗಳು, ಕಾಶಿಯಾತ್ರೆಗೆ ಹೋಗುವಾಗ ಕುಡಿಯುವ ನೀರಿಗೆ ಕಮಂಡಲದಂಥ ಚೆಂಬನ್ನು ಉಪಯೋಗಿಸುತ್ತಿದ್ದರು. ಇದಕ್ಕೆ ರೈಲು ಚೆಂಬು ಎನ್ನುತ್ತಾರೆ. ಆ ಅಪರೂಪದ ಚೆಂಬುಗಳೂ ಈ ಪ್ರದರ್ಶನದಲ್ಲಿವೆ.

ಎಲ್ಲ ವಯೋಮಾನದವರೂ ಇಷ್ಟ ಪಡುವಂಥ ವೈವಿಧ್ಯಮಯ ಶಾಂತಿನಿಕೇತನ ಬ್ಯಾಗ್, ಉಡುಗೊರೆ ನೀಡಲು ಪೆನ್‌ಸ್ಟ್ಯಾಂಡ್, ಮೇಣದ ಬತ್ತಿ ಸ್ಟ್ಯಾಂಡ್ ಮುಂತಾದವೆಲ್ಲವೂ ಇವೆ. ಇವನ್ನು ಒಡಿಶಾ, ಮಧ್ಯಪ್ರದೇಶ, ಬಿಹಾರ. ಪಶ್ಚಿಮ ಬಂಗಾಳದ ಸ್ವರನ್‌ಕರ್ ಮತ್ತು ಗಧ್ವಾ ಸಮುದಾಯದ ಆದಿವಾಸಿಗಳು ಮಾಡಿದ್ದಾರೆ. ಕಂಚಿನ ಗಂಟೆ,  ಸಾಂಪ್ರಾಯಿಕ ವಸ್ತ್ರಾಭರಣ, ಓಲೆ, ಸರ, ಕಾಯಿನ್ ನೆಕ್ಲೇಸ್ ಒಂದು ಪೈಸೆ, ಎರಡು ಪೈಸೆಯ ಐದು ಪೈಸೆಯ ಸರಗಳು ಎಂಥವರನ್ನೂ ಸೆಳೆದುಬಿಡುತ್ತವೆ.

ಮಣಿಪುರದ ಆದಿವಾಸಿಗಳು ತಯಾರಿಸಿರುವ ಲಾಂಗ್‌ಪೆ ಹಮ್ ಮಣ್ಣಿನಿಂದ ಮಾಡಿರುವ ಪಾಟರಿಗಳು, ಸಂಪೂರ್ಣ ನೈಸರ್ಗಿಕ ಆಹಾರ ಪದಾರ್ಥ. ಟೆರಕೋಟ ಕಲಾಕೃತಿಗಳು,  ಪಶ್ಚಿಮ ಬಂಗಾಳ ಮತ್ತು ಒಡಿಶಾ ಬುಡಕಟ್ಟು ಕಲಾವಿದರ ಗೋಡೆ ಚಿತ್ರಪಟಗಳು, ಕಲಾಕೃತಿಗಳು ಗಮನ ಸೆಳೆಯುತ್ತವೆ. ಸೃಜನಶೀಲ ಮನಸಿಗೆ ಆದಿವಾಸಿಗಳು, ನಾಗರಿಕರು ಎಂಬ ಸೀಮೆ ಎಲ್ಲಿದೆ?

ಬಿಹಾರದ ಆಕರ್ಷಕ ಮಧುಬನಿ ಕಲಾಕೃತಿಗಳು, ಅಶ್ವತ್ಥ ಎಲೆಗಳ ಮೇಲೆ ನಾಜೂಕಿನ ಚಿತ್ರಗಳು ಗಮನ ಸೆಳೆಯುತ್ತವೆ.

ಹಿಮಾಚಲ ಪ್ರದೇಶದಲ್ಲಿ ಕಾಣಬರುವ ಪಾಶ್ಮಿನಾ ಆಡಿನ ಉಣ್ಣೆಯಿಂದ ತಯಾರಿಸಿರುವ ಶಾಲ್ ಈ ಪ್ರದರ್ಶನದ ಹೈಲೈಟ್.

ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದು ಒಳ್ಳೆಯ ವ್ಯಾಪರದ ಜೊತೆಯಲ್ಲೆ  ಕೊಳ್ಳುಗರಿಂದ ಪ್ರತಿಕ್ರಿಯೆ ಸಹ ಉತ್ತಮವಾಗಿದೆ ಎನ್ನುತ್ತಾರೆ ಹಿಸಾರ್‌ನಿಂದ ಬಂದಿರುವ ವ್ಯಾಪಾರಿ ವರುಣ್. 

 `ಇಲ್ಲಿ ವೈವಿಧ್ಯಮಯ ವಸ್ತುಗಳು ಸಿಗುತ್ತವೆ. ಬೆಲೆಯೂ ಕಡಿಮೆ ಇರುತ್ತದೆ.., ಕನಿಷ್ಠ ಬೆಲೆಯಲ್ಲಿ ಕಲಾತ್ಮಕ ಸಂಗ್ರಹ ದೊರೆಯುವುದರಿಂದ ನನಗೆ ಈ ರೀತಿಯ ವಸ್ತುಪ್ರದರ್ಶನದಲ್ಲಿ ಖರೀದಿಸುವುದೆಂದರೆ ತುಂಬಾ ಇಷ್ಟ ಎಂದು ಹೇಳುತ್ತಾರೆ~ ಗೃಹಿಣಿ ಆರತಿ.

ಫೆ.26ರವರೆಗೆ ಹಸ್ತಕಲಾ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಏರ್ಪಡಿಸಲಾಗಿದೆ.  ಸ್ಥಳ: ಚಿತ್ರ ಕಲಾ ಪರಿಷತ್, ಕುಮಾರ ಕೃಪಾ ರಸ್ತೆ. ಬೆಳಿಗ್ಗೆ 10ರಿಂದ ಸಂಜೆ 8. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT