ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸ್ತಕ್ಷೇಪ ಸಲ್ಲದು

Last Updated 18 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ರಾಜ್ಯದ ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಅವರ ರಾಜೀನಾಮೆಗೆ ಕಾರಣವಾದ ವಿದ್ಯಮಾನ, ರಾಜ್ಯದ ಒಟ್ಟಾರೆ ಹಿತ­ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ.  ಚುನಾವಣೆ ಹೊಸ್ತಿಲಲ್ಲಿ ಇರು­ವಾಗ ಪ್ರೊ. ಕುಮಾರ್ ಅವರು ಇಟ್ಟ ಈ ಹೆಜ್ಜೆಯಿಂದ ಸರ್ಕಾರ ಬಹಳಷ್ಟು ಮುಜುಗರವನ್ನು ಅನುಭವಿಸಬೇಕಿದೆ. ಪ್ರತಿಪಕ್ಷಗಳಿಗಂತೂ ಸರ್ಕಾರವನ್ನು ಬಡಿ­ಯಲು ಕೈಗೆ ಒಂದು ಕೋಲು ಸಿಕ್ಕಂತಾಗಲೂಬಹುದು. ಆದರೆ ಈ ವಿಷಯ­ದಲ್ಲಿ ರಾಜಕೀಯವನ್ನು ಮೀರಿ ನಿಲ್ಲಬೇಕಾಗಿದೆ.

ಏಕೆಂದರೆ ಅಡ್ವೊ­ಕೇಟ್ ಜನರಲ್ ಅವರು ವ್ಯಕ್ತಪಡಿಸಿದ ಅಭಿಪ್ರಾಯ, ಎತ್ತಿದ ಪ್ರಶ್ನೆಗಳಲ್ಲಿ ರಾಜ್ಯದ ಹಿತಾಸಕ್ತಿ ಅಡಗಿದೆ. ಜಲವಿವಾದಗಳಿಗೆ ಸಂಬಂಧಿಸಿದಂತೆ ವಿವಿಧ ನ್ಯಾಯಮಂಡಳಿಗಳ ಮುಂದೆ ರಾಜ್ಯವನ್ನು ಪ್ರತಿನಿಧಿಸಬೇಕಾದ ಸರ್ಕಾರಿ ವಕೀಲರ ನೇಮಕದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಮತ್ತು ಕೆಲ ಸಚಿವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವುದೇ ಅವರ ರಾಜೀನಾಮೆಗೆ ಕಾರಣ. ಈ ವಿಷಯದಲ್ಲಿ ಕಾನೂನು ಸಚಿವ ಟಿ.ಬಿ. ಜಯಚಂದ್ರ ಮತ್ತು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರ ಬಗ್ಗೆ ಅವರು ಅಸಮಾಧಾನ­ಗೊಂಡಿ­ದ್ದಾರೆ ಎನ್ನಲಾಗುತ್ತಿದೆ.

ಅಬಕಾರಿ ಸಚಿವ ಸತೀಶ ಜಾರಕಿಹೊಳಿ ಕೂಡ ನ್ಯಾಯಮಂಡಳಿಗೆ ನೇಮಕ ಮಾಡಬೇಕಾದ ವಕೀಲರ ಪಟ್ಟಿ ಕೊಟ್ಟಿದ್ದರು ಎಂದು ಹೇಳಲಾಗುತ್ತಿದೆ. ಸಚಿವರ ಶಿಫಾರಸು ಆಧರಿಸಿ ವಕೀಲರನ್ನು ನೇಮಕ ಮಾಡುತ್ತ ಹೋದರೆ ಶಿಸ್ತು ಎಲ್ಲಿರುತ್ತದೆ? ತಮ್ಮ ಅಭಿಪ್ರಾಯವನ್ನೂ ಕೇಳುವ ಸೌಜನ್ಯ ತೋರದಿದ್ದರೆ ಆ ಸ್ಥಾನದಲ್ಲಿ ತಾವು ಇದ್ದು ಪ್ರಯೋಜನ ಏನು ಎಂಬ ಅವರ ಪ್ರಶ್ನೆಯಲ್ಲಿ ಅರ್ಥವೂ ಇದೆ, ರಾಜ್ಯದ ಹಿತ ಕಾಯಬೇಕು ಎಂಬ ಕಳಕಳಿಯೂ ಎದ್ದು ಕಾಣುತ್ತದೆ.

ಮಂತ್ರಿ ಸ್ಥಾನ ಎನ್ನುವುದು ತಮ್ಮ ಜಹಗೀರು, ತಾವು ಮಾಡಿದ್ದೇ ಸರಿ ಎಂದು ಭಾವಿಸುವ ರಾಜಕಾರಣಿಗಳಿಂದಲೇ ಇಂಥ ಎಲ್ಲ ಅನಾಹುತ ನಡೆ­ಯು­ತ್ತಿದೆ. ತಾವು ಆ ಸ್ಥಾನಕ್ಕೆ ಏರಿದ್ದೇ ತಮ್ಮ ನೆಂಟರಿಷ್ಟರು,  ಕುಲ­ಬಾಂಧವರ ಹಿತ ಕಾಯಲು ಎಂದೇ ಅನೇಕ ಮಂತ್ರಿಗಳು ತಿಳಿದುಕೊಂಡಿದ್ದಾರೆ. ಅವರಿಗೆ ವೃತ್ತಿ ಪರಿಣತಿಗಿಂತ ಸ್ವಜನ ಪಕ್ಷಪಾತ, ಸ್ವಹಿತವೇ ಮುಖ್ಯವಾಗುತ್ತಿದೆ. ಅವರ ಹಮ್ಮು, ಅಹಂಕಾರಕ್ಕೆ ರಾಜ್ಯದ ಹಿತ ಬಲಿಯಾಗಬೇಕಾಗುತ್ತದೆ.

ನದಿ ನೀರಿಗೆ ಸಂಬಂಧಿ­ಸಿದಂತೆ ನೆರೆಯ ಎಲ್ಲ ರಾಜ್ಯಗಳ ಜತೆ ವಿವಾದ ನಡೆಯುತ್ತಿದೆ. ಹೀಗಿ­ರು­ವಾಗ ನ್ಯಾಯಯುತ ಹಕ್ಕುಗಳನ್ನು ಪ್ರತಿಪಾದಿಸಿ ನೀರು ಪಡೆಯುವುದು ಬಹಳ ಮುಖ್ಯ. ಇಲ್ಲಿ ನಾವು ಸ್ವಲ್ಪ ಎಡವಿದರೂ ರಾಜ್ಯದ ಕೋಟ್ಯಂತರ ರೈತರ ಬದುಕೇ ಏರುಪೇರಾಗುತ್ತದೆ. ಇಂಥ ಚೆಲ್ಲಾಟ ಬೇಡ. 

ನ್ಯಾಯ­ಮಂಡಳಿಗಳ ಮುಂದೆ ನಮ್ಮನ್ನು ಪ್ರತಿನಿಧಿಸಬೇಕಾದ ವಕೀಲರ ನೇಮಕಾತಿ ವಿಷಯದಲ್ಲಿ ಅಧಿಕಾರಸೂತ್ರ ಹಿಡಿದ ಜನಪ್ರತಿನಿಧಿಗಳು  ಹಸ್ತಕ್ಷೇಪ ಮಾಡು­ವುದು  ಖಂಡಿತಾ ಸಲ್ಲದು. ರವಿವರ್ಮ ಕುಮಾರ್ ಅವರು ಅಡ್ವೊಕೇಟ್ ಜನರಲ್ ಹುದ್ದೆಗೆ ಬಂದ ಹತ್ತೇ ತಿಂಗಳೊಳಗೆ ರಾಜೀನಾಮೆಗೆ ಮುಂದಾ­ಗ­ಬೇಕಾದ ಸ್ಥಿತಿ ತಂದಿಟ್ಟದ್ದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಈ ಕಹಿ ವಿದ್ಯ­ಮಾನದ ನಂತರ  ಈಗ ಇಬ್ಬರು ವಕೀಲರು ರಾಜೀನಾಮೆ ನೀಡಿದ್ದು ಸರ್ಕಾರ ಅದನ್ನು ಅಂಗೀಕರಿಸಿದೆ. ಆದರೆ ಮುಖ್ಯಮಂತ್ರಿಗಳು ಇಷ್ಟಕ್ಕೇ ಸುಮ್ಮನಾಗದೆ ಮಧ್ಯ ಪ್ರವೇಶಿಸಬೇಕು. ಮಂತ್ರಿಗಳ ಕಿವಿಹಿಂಡಿ ಸ್ವಜನಪಕ್ಷಪಾತಕ್ಕೆ ಲಗಾಮು ಹಾಕಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT