ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಂಕಾಂಗ್‌ ಸಮುದ್ರಖಾದ್ಯ ಉತ್ಸವ

ರಸಾಸ್ವಾದ
Last Updated 8 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ತಾಜ್ ವಿವಾಂತದ ‘ದಿ  ಮೆಮೊರಿಸ್‌ ಆಫ್‌ ಚೈನಾ ರೆಸ್ಟೋರೆಂಟ್‌’ ನಲ್ಲಿ ಡಿ.15ರವರೆಗೆ ಮೀನಿನ ಖಾದ್ಯಗಳ ‘ಸೀಫುಡ್‌ ಮಾರ್ಕೆಟ್‌ ನೈಟ್‌’ ಎಂಬ ಹಾಂಕಾಂಗ್‌ ಸೀಫುಡ್‌ ಫೆಸ್ಟ್ ಆಯೋಜಿಸಲಾಗಿದೆ.

ಈ ಚೈನೀಸ್‌ ರೆಸ್ಟೋರೆಂಟಿನ ಮುಖ್ಯ ಬಾಣಸಿಗ, ಚೀನಾದ ಲೈ ಹಿನ್ ಟೊಂಗ್ ವಿಲಿಯಂ ಸುಮಾರು ಹದಿನೈದು ವರ್ಷ ಚೆನ್ನೈನ ರೆಸ್ಟೋರೆಂಟ್‌ನಲ್ಲಿ ಪಾಕ ಪ್ರಾವಿೀಣ್ಯ ಮೆರೆದವರು. ಇದರ ಜೊತೆಗೆ ತಕ್ಕಮಟ್ಟಿಗೆ ತಮಿಳು ಕಲಿತವರು. ‘ಬೆಂಗಳೂರಿಗೆ ಬಂದು ಒಂದು ವರ್ಷವಾಗಿದೆ. ಇನ್ನೂ ಕನ್ನಡ ಸರಿಯಾಗಿ ಬರುತ್ತಿಲ್ಲ. ಕಲಿಯಬೇಕು’ ಎಂದು ಹೇಳುತ್ತಲೇ ಶುದ್ಧ ಇಂಗ್ಲಿಷಿನಲ್ಲಿ ತಮ್ಮ ಪಾಕಶಾಸ್ತ್ರದ ಅರಿವನ್ನು ತೆರೆದಿಟ್ಟರು.

‘ಇಲ್ಲಿಗೆ ಕೊಚ್ಚಿ ಮತ್ತು ಚೆನ್ನೈನಿಂದ ತಾಜಾ ಮೀನು ಖರೀದಿಸುತ್ತೇವೆ. ಶೇ 80ರಷ್ಟು ಮಸಾಲೆಯನ್ನು ಕೂಡ ಚೀನಾದಿಂದಲೇ ತರಿಸುತ್ತೇವೆ’ ಎಂದು ಹೇಳುತ್ತಾ, ‘ನನಗೆ ಮೀನಿನ ಖಾದ್ಯ ತಯಾರಿಸುವುದರಲ್ಲಿ ಬಹಳ ವರ್ಷಗಳ ಅನುಭವವಿದೆ. ನನ್ನದೇ ಆದ ಅನೇಕ ಮಾರ್ಗಗಳನ್ನು ಕಂಡುಕೊಂಡಿದ್ದೇನೆ. ನಮ್ಮ ಎಲ್ಲ ಖಾದ್ಯವೂ ಸಿಗ್ನೇಚರ್‌ ಡಿಶ್‌’ ಎಂದು ಮಾತು ಸೇರಿಸಿದರು.

ನಂತರ ಅತ್ಯಾಧುನಿಕ ಅಡುಗೆ ಮನೆಗೆ ಕರೆದೊಯ್ದು ತಮ್ಮ ಇಡೀ ತಂಡವನ್ನು ಪರಿಚಯಿಸಿದರು. ಅಲ್ಲಿಯೇ ಒಂದು ಮೇಜಿನ ಮೇಲೆ ಬಗೆಬಗೆಯ ಮೀನುಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ದೊಡ್ಡ ಗಾತ್ರದ ಜೀವಂತ ಏಡಿ, ಟೈಗರ್‌ ಪ್ರಾನ್, ಕ್ಯಾಟ್‌ ಫಿಶ್, ಲೇಡಿ ಫಿಶ್, ಆಯ್‌ಸ್ಟರ್ ಮುಂತಾದ ತಾಜಾ ಮೀನುಗಳನ್ನು ತೋರಿಸಿ ಶುದ್ಧತೆಗೆ ಸಾಕ್ಷಿ ಒದಗಿಸಿದರು. ನಂತರ ಒಂದಾದ ಮೇಲೊಂದರಂತೆ ಮೀನಿನ ಖಾದ್ಯಗಳನ್ನು ತಂದು ಬಡಿಸಿದರು.

ಚೀನಾದ ವಿಶೇಷವೆಂದರೆ ಕಡಿಮೆ ಮಸಾಲೆ ಬಳಸಿ ತಯಾರಿಸುವ ಖಾದ್ಯಗಳು. ಹೆಚ್ಚಿನ ರೆಸ್ಟೋರೆಂಟ್‌ಗಳು ಭಾರತಕ್ಕೆ ಬಂದಾಗ ಇಲ್ಲಿನ ರೆಸಿಪಿಯೊಂದಿಗೆ ತಮ್ಮ ರೆಸಿಪಿಯನ್ನೂ ಸೇರಿಸಿ ಗ್ರಾಹಕರನ್ನು ಆಕರ್ಷಿಸುತ್ತವೆ. ಆದರೆ ಇಲ್ಲಿ ಚೀನಾದ ಸಾಂಪ್ರದಾಯಕ ಶೈಲಿಯ ಅಡುಗೆಗಳು ಅದೇ ರುಚಿಯಲ್ಲಿ ಲಭ್ಯ. ಹೆಚ್ಚು ಮಸಾಲೆ ಪದಾರ್ಥಗಳನ್ನು ಬಯಸುವವರಿಗೆ ಸ್ವಲ್ಪ ಸಪ್ಪೆ ಅನಿಸುತ್ತದೆ. ಆದರೆ ಆರೋಗ್ಯ ಕಾಳಜಿ ಇರುವವರು ಇದನ್ನು ತುಂಬ ಇಷ್ಟಪಡುತ್ತಾರೆ. ಮಾಂಸಹಾರವನ್ನು ಸಿಹಿಯಾಗಿ ತಯಾರಿಸುವುದು ನಮಗೆ ಹೊಸದು. ಆದರೆ ಬಾಣಸಿಗ ವಿಲಿಯಂ ತಯಾರಿಸಿದ ಕ್ಯಾಟ್‌ಫಿಷ್‌ ಅನ್ನು ಚೌಕಾಕಾರದಲ್ಲಿ ಕತ್ತರಿಸಿ, ಬೇಯಿಸಿ ಅದನ್ನು ಬ್ಲಾಕ್‌ ಬೀನ್ಸ್‌ ಮತ್ತು ಖರ್ಜೂರದ ಸಾಸ್‌ನಲ್ಲಿ ಅದ್ದಿ, ಪ್ರಿಜ್‌ನಲ್ಲಿಟ್ಟು ತಿನ್ನುವ ‘ಕ್ಯಾಟ್‌ ಫಿಷ್‌ ವಿದ್ ಬ್ಲಾಕ್‌ ಬೀನ್ಸ್ ಅಂಡ್ ಡೇಟ್ಸ್’ ಖಾದ್ಯವನ್ನು ಮುಂದಿಟ್ಟರು. ಅದು ಹಲ್ವಾದಂತೆ ಕಾಣುತ್ತಿತ್ತು. ಮಾಂಸಾಹಾರವನ್ನು ಖಾರವಾಗಿಯೇ ಮಾಡಬೇಕು ಎಂದೇನಿಲ್ಲ, ಸಿಹಿಯಾಗಿಯೂ ತಯಾರಿಸಬಹುದು ಎಂಬುದಕ್ಕೆ ಇದೊಂದು ಉದಾಹರಣೆ.

ಈ ಫೆಸ್ಟ್‌ನಲ್ಲಿ ಸ್ಪೈಸಿ ಬಂರ್ಟ್ ಗಾರ್ಲಿಕ್‌ ಫ್ರೈಡ್‌ ಪ್ರಾನ್, ಫ್ರೈಡ್‌ ಪ್ರಾನ್‌ ವಿದ್‌ ಪ್ರಿಸರ್ವ್‌ಡ್, ಡೀಪ್‌ ಫ್ರೈಡ್‌ ಪ್ರಾನ್‌ ವಿದ್‌ ಜಿಂಜರ್, ಕ್ರಿಸ್ಪಿ ಫ್ರೈಡ್‌ ಫಿಷ್‌ ಫಿಂಗರ್ ಸಾಲ್ಟ್‌ ಅಂಡ್‌ ಪೆಪ್ಪರ್, ಶಾಂಘೈ ಸ್ಮೋಕ್ಡ್ ಫಿಷ್‌ ಪಿಲ್ಲೆಟ್‌, ಗೋಲ್ಡನ್‌ ಫ್ರೈಡ್‌ ಲೇಡಿ ಸ್ಟೈಲ್, ಕ್ಯಾಟ್‌ ಫಿಷ್‌ ವಿದ್ ಬ್ಲಾಕ್‌ ಬೀನ್‌ ಅಂಡ್ ಡೇಟ್ಸ್, ಕ್ರ್ಯಾಬ್‌ ಮೀಟ್‌ ಸ್ವೀಟ್‌ ಕಾರ್ನ್‌ ಸೂಪ್, ಸಿಂಗಪುರ್‌ ಚಿಲ್ಲಿ ಕ್ರ್ಯಾಬ್ ಮುಂತಾದ ಹಲವು ಬಗೆಯ ಖಾದ್ಯಗಳು ಗ್ರಾಹಕರಿಗಾಗಿ ಕಾದಿವೆ.

ಹೆಚ್ಚಿನ ಮಾಹಿತಿಗಾಗಿ: 080–6660 4444.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT