ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ತಂಡಕ್ಕೆ ವಿದೇಶಿ ಕೋಚ್ ಬೇಕೇ?

Last Updated 14 ಜುಲೈ 2013, 19:59 IST
ಅಕ್ಷರ ಗಾತ್ರ

ಆಟಗಾರನ ಜೊತೆ ಸರಿಯಾದ ರೀತಿಯಲ್ಲಿ ಸಂವಹನ ನಡೆಸಿ ಆತನ ಶಕ್ತಿ ಹಾಗೂ ದೌರ್ಬಲ್ಯವನ್ನು ಅರಿತು ಅದಕ್ಕೆ ತಕ್ಕಂತ ಮಾರ್ಗದರ್ಶನ ನೀಡುವುದು ಕೋಚ್ ಒಬ್ಬನ ಕರ್ತವ್ಯ. ಆಟಗಾರರ ಮನಸ್ಸನ್ನು ಅರ್ಥೈಸಿಕೊಳ್ಳದೆ ಮಾರ್ಗದರ್ಶನ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ.

ಆದರೆ ಭಾರತದ ಹಾಕಿ ಕ್ರೀಡೆಯನ್ನು ನೋಡಿದಾಗ ಇತ್ತೀಚಿನ ಕೆಲ ವರ್ಷಗಳಲ್ಲಿ ಈ ಮೇಲಿನ ಅಂಶಕ್ಕೆ ಹೆಚ್ಚಿನ ಒತ್ತು ನೀಡಿದಂತೆ ಕಾಣುವುದಿಲ್ಲ. ಹಾಕಿ ಆಡಳಿತ ನೋಡಿಕೊಳ್ಳುವವರು ಮತ್ತೆ ಮತ್ತೆ ವಿದೇಶಿ ಕೋಚ್‌ಗಳತ್ತಲೇ ಗಮನ ಹರಿಸುತ್ತಿದ್ದಾರೆ. ವಿದೇಶಿ ಕೋಚ್‌ಗಳಿಂದ ದೇಶದ ಹಾಕಿ ಕ್ರೀಡೆಗೆ ಹೇಳಿಕೊಳ್ಳುವಂತಹ ಲಾಭವೇನೂ ಉಂಟಾಗಿಲ್ಲ.
ವಿದೇಶದ ಕೋಚ್‌ಗಳಿಗೆ ಭಾರತದ ಆಟಗಾರರ ಮನಸ್ಸನ್ನು ಸುಲಭದಲ್ಲಿ ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ. ಇಲ್ಲಿನ ಆಟಗಾರರಿಗೆ ವಿದೇಶಿ ಕೋಚ್‌ಗಳ ಕೋಚಿಂಗ್ ಶೈಲಿಗೆ ಒಗ್ಗಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಮೈಕಲ್ ನಾಬ್ಸ್ ವೈಫಲ್ಯ ಅನುಭವಿಸಿರುವುದಕ್ಕೆ ಪ್ರಮುಖ ಕಾರಣಗಳಲ್ಲಿ ಇದೂ ಒಂದು. ಎರಡು ವರ್ಷಗಳ ಹಿಂದೆ ಆಸ್ಟ್ರೇಲಿಯದ ನಾಬ್ಸ್ ಅವರನ್ನು ಕೋಚ್ ಆಗಿ ನೇಮಿಸಿದಾಗ ಭಾರಿ ನಿರೀಕ್ಷೆ ಇಡಲಾಗಿತ್ತು. ಭಾರತ ತಂಡ ಗತವೈಭವದತ್ತ ಮರಳುವುದು ಎಂದು ಹೆಚ್ಚಿನವರು ಭಾವಿಸಿದ್ದರು.

ಆದರೆ ಎಲ್ಲಾ ನಿರೀಕ್ಷೆ ಹುಸಿಯಾಗಿದೆ. ಈ ಕಾರಣ ಹಾಕಿ ಇಂಡಿಯಾ ನಾಬ್ಸ್ ಅವರನ್ನು ವಜಾಗೊಳಿಸಿದೆ. ಹೋದ ವರ್ಷ ಇದೇ ಅವಧಿಯಲ್ಲಿ ನಾಬ್ಸ್ ಸಾಕಷ್ಟು ಟೀಕೆ ಎದುರಿಸಿದ್ದರು. ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತ ಕೊನೆಯ ಸ್ಥಾನ ಪಡೆದಾಗ ಅವರು ಎಲ್ಲ ಕಡೆಗಳಿಂದಲೂ ಟೀಕೆಯ ಮಾತುಗಳನ್ನು ಕೇಳಿದ್ದರು.

ತನ್ನ ಆಯ್ಕೆಯ ಸಹಾಯಕ ಸಿಬ್ಬಂದಿಯನ್ನು ಭಾರತ ತಂಡಕ್ಕೆ ನೇಮಿಸುವ ಸ್ವಾತಂತ್ರ್ಯವನ್ನು ನಾಬ್ಸ್‌ಗೆ ನೀಡಲಾಗಿತ್ತು. ವಿದೇಶದ ಕೆಲವು ಸಹಾಯಕ ಸಿಬ್ಬಂದಿಯನ್ನೂ ನೇಮಿಸಿದ್ದರು. ಇಷ್ಟೆಲ್ಲಾ ಅಧಿಕಾರ ನೀಡಿದ್ದರೂ, ಅವರು ಉತ್ತಮ ಫಲಿತಾಂಶ ನೀಡಲು ವಿಫಲವಾದದ್ದು ಅಚ್ಚರಿ ಉಂಟುಮಾಡಿದೆ.

ಆದರೆ ಒಂದು ವಿಷಯದಲ್ಲಿ ನಾಬ್ಸ್ ಅವರನ್ನು ಮೆಚ್ಚಬೇಕು. ಆಟಗಾರರ ಫಿಟ್‌ನೆಸ್ ಬಗ್ಗೆ ಅವರು ಅತಿಯಾದ ಕಾಳಜಿ ವಹಿಸಿದ್ದರು. ವಿದೇಶಿ ಕೋಚ್‌ಗಳು ಆಟಗಾರರ ದೈಹಿಕ ಸಾಮರ್ಥ್ಯಕ್ಕೆ ಹೆಚ್ಚಿನ ಒತ್ತು ನೀಡುವುದು ಸಾಮಾನ್ಯ. ನಾಬ್ಸ್ ಕೂಡಾ ಇದರಿಂದ ಹೊರತಾಗಿರಲಿಲ್ಲ.

ಅವರು ತಂತ್ರಗಾರಿಕೆಗೆ ಹೆಚ್ಚು ಒತ್ತು ನೀಡಿಲ್ಲ ನಿಜ. ಆದರೆ ಫಿಟ್‌ನೆಸ್ ಬಗ್ಗೆ ಯಾವುದೇ ರಾಜಿ ಇರಲಿಲ್ಲ. ಲಂಡನ್ ಒಲಿಂಪಿಕ್ಸ್‌ಗೆ ಭಾರತ ಅರ್ಹತೆ ಪಡೆದದ್ದು ಅವರ ಅವಧಿಯಲ್ಲಿ ಮೂಡಿಬಂದ ಉತ್ತಮ ಸಾಧನೆ. ವೈಜ್ಞಾನಿಕ ರೀತಿಯಲ್ಲಿ ಆಟಗಾರರ ಫಿಟ್‌ನೆಸ್ ಕಾಪಾಡಿಕೊಳ್ಳಲಿಕ್ಕಾಗಿ ತಂಡಕ್ಕೆ ವಿದೇಶಿ ಸಲಹೆಗಾರರನ್ನು ನೇಮಿಸಿದ್ದರು. ಆಸ್ಟ್ರೇಲಿಯಾದ ಡೇವಿಡ್ ಜಾನ್ ಈ ಹುದ್ದೆಯಲ್ಲಿದ್ದರು. ಆದರೆ ಲಂಡನ್ ಒಲಿಂಪಿಕ್ಸ್ ಬಳಿಕ ಅವರು ತಂಡವನ್ನು ಸೇರಿಕೊಳ್ಳಲಿಲ್ಲ. ಆ ಬಳಿಕ ಆಸ್ಟ್ರೇಲಿಯಾದವರೇ ಆದ ಜೇಸನ್ ಕೊನ್ರಾತ್ ಅವರನ್ನು ನೇಮಿಸಲಾಗಿತ್ತು.

ನಾಬ್ಸ್ ಅವಧಿಯಲ್ಲಿ ಭಾರತ ತಂಡ ತಕ್ಕಮಟ್ಟಿಗೆ ಸುಧಾರಣೆ ಕಂಡಿದೆ ಎಂದು ಕೆಲವರು ವಾದಿಸುವರು. ಈ ಸಮಯದಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಉತ್ತಮ ಪ್ರದರ್ಶನ ನೀಡಿರುವುದು ನಿಜ. ಆದರೆ ಯೂರೋಪಿನ ಇತರ ಪ್ರಮುಖ ತಂಡಗಳಿಗೆ ಸರಿಸಾಟಿಯಾಗಿ ನಿಲ್ಲುವಲ್ಲಿ ವಿಫಲವಾಗಿದೆ.

ಇದೇ ಮೊದಲಲ್ಲ...

ಭಾರತ ಹಾಕಿ ತಂಡದ ವಿದೇಶಿ ಕೋಚ್ ಒಬ್ಬರನ್ನು ಒಪ್ಪಂದದ ಅವಧಿ ಕೊನೆಗೊಳ್ಳುವ ಮುನ್ನ ವಜಾಗೊಳಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡಾ ಇಂತಹ ಬೆಳವಣಿಗೆ ನಡೆದಿತ್ತು. ವಿದೇಶಿ ಕೋಚ್‌ಗಳು ಆಟಗಾರರ ಪ್ರದರ್ಶನವನ್ನು ಉತ್ತಮಪಡಿಸುವುದಕ್ಕಿಂತ ಸಂಭಾವನೆ ಒಳಗೊಂಡಂತೆ ಇತರ ವಿಷಯಗಳತ್ತ ಹೆಚ್ಚಿನ ಗಮನ ಹರಿಸುವರು ಎಂಬ ಆರೋಪ ಹಿಂದಿನಿಂದಲೂ ಕೇಳಿಬರುತ್ತಿದೆ.

2004 ರಲ್ಲಿ ಜರ್ಮನಿಯ ಗೆರಾರ್ಡ್ ಪೀಟರ್ ರಾಚ್ ಅವರನ್ನು ಕೋಚ್ ಆಗಿ ನೇಮಿಸಲಾಗಿತ್ತು. ಭಾರತ ಹಾಕಿ ತಂಡಕ್ಕೆ ಮಾರ್ಗದರ್ಶನ ನೀಡಿದ ಮೊದಲ ವಿದೇಶಿ ತರಬೇತುದಾರ ಅವರು. ಆದರೆ ಕೆಪಿಎಸ್ ಗಿಲ್ ನೇತೃತ್ವದ ಹಾಕಿ ಫೆಡರೇಷನ್ ಜೊತೆಗಿನ ಭಿನ್ನಾಭಿಪ್ರಾಯದ ಕಾರಣ ಐದು ತಿಂಗಳಲ್ಲೇ ಅವರು ಹುದ್ದೆ ತ್ಯಜಿಸಿ ತವರಿಗೆ ಮರಳಿದರು.

ಆ ಬಳಿಕ ಆಸ್ಟ್ರೇಲಿಯದ ರಿಕ್ ಚಾರ್ಲ್ಸ್‌ವರ್ಥ್ ಅವರನ್ನು ಕೋಚ್ ಆಗಿ ನೇಮಿಸಲಾಯಿತು. ಸಂಭಾವನೆ ಹಾಗೂ ಆಡಳಿತಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಉಂಟಾದ ಕಾರಣ ಅವರೂ ಹೊರನಡೆದರು. 2009 ರಲ್ಲಿ ಸ್ಪೇನ್‌ನ ಜೋಸ್ ಬ್ರಾಸಾ ಅವರಿಗೆ ಈ ಜವಾಬ್ದಾರಿ ನೀಡಲಾಯಿತು. ಹಾಕಿ ಇಂಡಿಯಾ ಮತ್ತು ಭಾರತ ಕ್ರೀಡಾ ಪ್ರಾಧಿಕಾರದ ಜೊತೆಗಿನ ಭಿನ್ನಾಭಿಪ್ರಾಯದೊಂದಿಗೆಯೇ ಅವರು ಹುದ್ದೆ ಅಲಂಕರಿಸಿದ್ದರು. ಬ್ರಾಸಾ ಕೂಡಾ ಪೂರ್ಣ ಅವಧಿಯವರೆಗೆ ಮುಂದುವರಿಯಲಿಲ್ಲ.

ಇಷ್ಟೆಲ್ಲಾ ಆಗಿಯೂ ಹಾಕಿ ಇಂಡಿಯಾ ಪಾಠ ಕಲಿಯಲಿಲ್ಲ. ನಾಬ್ಸ್ ರೂಪದಲ್ಲಿ ಮತ್ತೆ ವಿದೇಶಿ  ಕೋಚ್‌ಗೆ ಮಣೆ ಹಾಕಲಾಯಿತು. ಇದೀಗ ಅವರೂ ತೆರೆಮರೆಗೆ ಸರಿದಿದ್ದಾರೆ.

ಕೌಶಿಕ್‌ಗೆ ಜವಾಬ್ದಾರಿ ನೀಡಿದರೆ ಹೇಗೆ?
ನಾಬ್ಸ್ ಅವರಿಂದ ತೆರವಾದ ಸ್ಥಾನಕ್ಕೆ ಮುಖ್ಯ ಕೋಚ್ ಆಗಿ ಯಾರನ್ನೂ ನೇಮಿಸಿಲ್ಲ. ಮುಖ್ಯ ಕೋಚ್ ನೇಮಕವಾಗುವವರೆಗೆ ಈ ಜವಾಬ್ದಾರಿಯನ್ನು ಹಾಲೆಂಡ್‌ನ ರೋಲೆಂಟ್ ಒಲ್ಟಮನ್ಸ್‌ಗೆ ನೀಡಲಾಗಿದೆ. ಹಾಕಿ ಇಂಡಿಯಾ ಎಂ.ಕೆ. ಕೌಶಿಕ್ ಅವರನ್ನು ತಂಡದ ಕೋಚ್ ಆಗಿ ನೇಮಿಸಿದೆ. ಆದರೆ ಅವರು ಒಲ್ಟಮನ್ಸ್‌ಗೆ ಸಹಾಯಕರಾಗಿ ಇರಬೇಕು. ಅದರ ಬದಲು ಕೌಶಿಕ್ ಅವರನ್ನೇ ಮುಖ್ಯ ಕೋಚ್ ಆಗಿ ನೇಮಿಸಿದ್ದರೆ ಚೆನ್ನಾಗಿತ್ತು ಎಂಬ ಅಭಿಪ್ರಾಯ  ಕೇಳಿಬಂದಿದೆ.

1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದ ಭಾರತ ತಂಡದ ಸದಸ್ಯರಾಗಿದ್ದ ಕೌಶಿಕ್ ಈ ಹಿಂದೆ ರಾಷ್ಟ್ರೀಯ ಪುರುಷರ ಮತ್ತು ಮಹಿಳಾ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಇವರ ಮಾರ್ಗದರ್ಶನದಲ್ಲಿ ಪುರುಷರ ತಂಡ 1998ರ ಬ್ಯಾಂಕಾಕ್ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿತ್ತು. ಅದೇ ರೀತಿ ಮಹಿಳಾ ತಂಡದವರು 2006ರ ದೋಹಾ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚು ಜಯಿಸಿದ್ದರು.

ಮಹಿಳಾ ತಂಡದ ಆಟಗಾರ್ತಿಯೊಬ್ಬರು ಇವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದ ಕಾರಣ 2010 ರಲ್ಲಿ ಕೋಚ್ ಹುದ್ದೆಯಿಂದ ಕೆಳಗಿಳಿಯಬೇಕಾಗಿ ಬಂದಿತ್ತು. ಕ್ರೀಡಾ ಸಚಿವಾಲಯ ಈ ಬಗ್ಗೆ ತನಿಖೆ ನಡೆಸಿತ್ತಲ್ಲದೆ, ಕೌಶಿಕ್ ಮೇಲಿದ್ದ ಆರೋಪ ಸಾಬೀತಾಗಿರಲಿಲ್ಲ.

ಇದರಿಂದ ಮತ್ತೆ ಅವರಿಗೆ ಜವಾಬ್ದಾರಿ ನೀಡಲಾಗಿದೆ. `ರಾಷ್ಟ್ರೀಯ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುವುದು ಹೆಮ್ಮೆಯ ಸಂಗತಿ' ಎಂದು ಕೌಶಿಕ್ ಪ್ರತಿಕ್ರಿಯಿಸಿದ್ದರು. ಆದರೆ ಅವರನ್ನೇ ಮುಖ್ಯ ಕೋಚ್ ಆಗಿ ನೇಮಿಸಬೇಕೆಂಬ ಮಾತುಗಳು ಹಾಕಿ ವಲಯದಲ್ಲಿ ಕೇಳಿಬರುತ್ತಿದೆ. 

`ಕೌಶಿಕ್ ಅವರನ್ನೇ ಮುಖ್ಯ ಕೋಚ್ ಆಗಿ ನೇಮಿಸಬೇಕು' ಎಂದು ಭಾರತ ತಂಡದ ಮಾಜಿ ನಾಯಕ ಜಾಫರ್ ಇಕ್ಬಾಲ್ ಹೇಳಿದ್ದಾರೆ. `ಯೂರೋಪಿಯನ್ ಶೈಲಿಯ ಆಟದಿಂದ ನಮಗೆ ಯಶಸ್ಸು ಗಳಿಸಲು ಸಾಧ್ಯವಿಲ್ಲ. ಆದ್ದರಿಂದ ವಿದೇಶಿ ಕೋಚ್‌ಗಳು ಬೇಡ. ಕೌಶಿಕ್ ಈ ಹಿಂದೆ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದರು' ಎಂಬುದು ಒಲಿಂಪಿಯನ್ ಎಂ.ಪಿ. ಗಣೇಶ್ ಹೇಳಿಕೆ.

ಹಾಕಿ ಇಂಡಿಯಾ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಹೇಳುವುದು ಕಷ್ಟ. ಈ ಹಿಂದಿನ ತಪ್ಪುಗಳಿಂದ ಪಾಠ ಕಲಿಯುತ್ತದೆಯೇ ಅಥವಾ ಮತ್ತೆ ವಿದೇಶಿ ಕೋಚ್ ಒಬ್ಬರ ಮೊರೆ ಹೋಗಲಿದೆಯೇ ಎಂಬುದನ್ನು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT