ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ನವತಾರೆಗಳ ಉದಯದ ನಿರೀಕ್ಷೆ

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಇಲ್ಲಿಯ ನ್ಯಾಷನಲ್ ಸ್ಟೇಡಿಯಂ ಆವರಣದಲ್ಲಿ ಇರುವ  ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಭವ್ಯವಾದ ಪ್ರತಿಮೆಯ ಬಳಿ ನಿಂತಿದ್ದ ಹಿರಿಯರ ಮಾತುಗಳಲ್ಲಿ ಭಾರತದ ಹಾಕಿ ಕ್ರೀಡೆಯ `ಚಿನ್ನದ ದಿನ~ಗಳ ಮಿಂಚಿತ್ತು. ಅದರ ಹಿಂದೆಯೇ ಇಂದಿನ ದುಃಸ್ಥಿತಿಯ ಬಗ್ಗೆ ನಿಟ್ಟುಸಿರೂ ಹೊರಬೀಳುತ್ತಿತ್ತು. 

ಫೆಬ್ರುವರಿ 18 ರಿಂದ 26ರವರೆಗೆ ಒಲಿಂಪಿಕ್ ಅರ್ಹತಾ ಸುತ್ತಿನ ಟೂರ್ನಿಯ ಆಯೋಜನೆಗೆ ಸಿದ್ಧವಾಗಿರುವ ಮೇಜರ್ ಧ್ಯಾನಚಂದ್ ಹಾಕಿ ಕ್ರೀಡಾಂಗಣದಲ್ಲಿ ಅಭ್ಯಾಸ ಪಂದ್ಯಗಳನ್ನು ವೀಕ್ಷಿಸಲು ಬಂದಿದ್ದ ಮಾಜಿ ಆಟಗಾರರು ಮತ್ತು ಹಾಕಿಪ್ರಿಯರ ಚರ್ಚೆಗೆ ಗತವೈಭವ ಗ್ರಾಸವಾಗಿತ್ತು.

ಆದರೆ ಆ ದಿನಗಳಲ್ಲಿ ಇದ್ದ ಮೇಜರ್ ಧ್ಯಾನಚಂದ್, ರೂಪ್‌ಸಿಂಗ್, ಲೆಸ್ಲಿ ಕ್ಲಾಡಿಯಸ್, ನಂತರ ಅಶೋಕಕುಮಾರ್, `ವಾಲ್ ಆಫ್ ಗಿಬ್ರಾಲ್ಟರ್~ ಶಂಕರ್ ಲಕ್ಷ್ಮಣ, ಬಂಡು ಪಾಟೀಲ್, ಧನರಾಜ್ ಪಿಳ್ಳೆಯಂತಹ ತಾರೆಗಳು ಮತ್ತೆ ಬರಬಹುದೇ ಎಂಬ ಪ್ರಶ್ನೆಯೂ ಅಲ್ಲಿ ಸುಳಿದಾಡಿತು.   

`ಸೋಲು, ಗೆಲುವು ಎಲ್ಲ ಆಟಗಳಲ್ಲಿಯೂ ಇರುತ್ತದೆ. ಆದರೆ, ಉತ್ತುಂಗ ಶಿಖರದಿಂದ ಪ್ರಪಾತಕ್ಕೆ ಜಾರಿ ಬಿದ್ದಿದೆ ಹಾಕಿ. ಬೌದ್ಧಿಕ ಮತ್ತು ದೈಹಿಕವಾಗಿ ಹೆಚ್ಚು ಶಕ್ತಿ, ಸಾಮರ್ಥ್ಯ ಬಯಸುವ ಹಾಕಿ ಆಟದತ್ತ ಬರುವ ಹುಡುಗರ ಸಂಖ್ಯೆಯೂ ಇಳಿಮುಖವಾಗುತ್ತಿದೆ. ಅವರನ್ನು ಆಕರ್ಷಿಸುವಂತಹ ಸಾಧಕರ ಕೊರತೆಯೂ ಇದಕ್ಕೆ ಪ್ರಮುಖ ಕಾರಣ~ ಎಂದು ಪಂಜಾಬಿನ ಮಾಜಿ ಆಟಗಾರ ಅನುಪಮಸಿಂಗ್ ಹೇಳುತ್ತಾರೆ.

`ಯಾವುದೇ ಕ್ರೀಡೆಯಲ್ಲಿಯೂ ಆಟಗಾರರು ವಿಶೇಷವಾದ ಸಾಧನೆ ಮಾಡಿದಾಗಲೇ  ಯುವಪ್ರತಿಭೆಗಳನ್ನು ಆಕರ್ಷಿಸುತ್ತದೆ. ಯಶೋಗಾಥೆಗಳೇ ಯಾವುದೇ ಕ್ಷೇತ್ರದ ಬೆಳವಣಿಗೆಗೆ ಕಾರಣವಾಗುತ್ತವೆ. ಭೈಚುಂಗ್ ಭುಟಿಯಾರಿಂದ ಭಾರತದ ಫುಟ್ಬಾಲ್ ಜನಪ್ರಿಯವಾಯಿತು.
 
ಕಪಿಲ್, ಗಾವಸ್ಕರ್,  ಸಚಿನ್, ಸೌರವ್ ಗಂಗೂಲಿ, ದೋನಿಯಂತಹ ಅಟಗಾರರಿಂದ ಕ್ರಿಕೆಟ್ ಬೆಳೆಯಿತು. ಅದೇ ರೀತಿ ಹಾಕಿ ಆಟವೂ ಒಂದು ಕಾಲದಲ್ಲಿ ಅತ್ಯುತ್ತಮ ಆಟಗಾರರ ಶೈಲಿಯಿಂದಲೇ ಜನಪ್ರಿಯವಾಗಿತ್ತು~ ಎಂದು ಧ್ಯಾನಚಂದ್ ಅವರ ಪುತ್ರ ಅಶೋಕಕುಮಾರ್ ಸ್ಮರಿಸುತ್ತಾರೆ.

ಒಟ್ಟು ಎಂಟು ಚಿನ್ನ, ಒಂದು ಬೆಳ್ಳಿ, ಎರಡು ಕಂಚು ಗೆದ್ದ ಭಾರತ ಹಾಕಿ ತಂಡದ ಸಾಧನೆಯನ್ನು ಸರಿಗಟ್ಟಿದ ದೇಶ ಇನ್ನೊಂದಿಲ್ಲ. ಆದರೆ 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನಂತರ ಮತ್ತೊಂದು ಪದಕದ ಕನಸು ನನಸಾಗಿಯೇ ಇಲ್ಲ. ಅದರಲ್ಲೂ 2008ರ ಬೀಜಿಂಗ್ ಒಲಿಂಪಿಕ್ಸ್‌ಗೆ ಪ್ರವೇಶಿಸುವ ಅರ್ಹತೆಯನ್ನೇ ಕಳೆದುಕೊಂಡ ಭಾರತ ತಂಡಕ್ಕೆ ಈಗ ಸುಲಭದ ಅವಕಾಶ ಸಿಕ್ಕಿದೆ.  

ಪುರುಷರ ವಿಭಾಗದಲ್ಲಿ ಭಾರತ, ಕೆನಡಾ, ಫ್ರಾನ್ಸ್, ಪೋಲಂಡ್, ಇಟಲಿ ಮತ್ತು ಸಿಂಗಪುರ ತಂಡಗಳು ಭಾಗವಹಿಸಲಿವೆ. ಸದ್ಯದ ವಿಶ್ವ ರ‌್ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿರುವ ಭಾರತಕ್ಕಿಂತ ಉಳಿದ ತಂಡಗಳು ಬಹಳಷ್ಟು ಹಿಂದೆ ಇವೆ. ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶ ಪಡೆಯಲು ಇದೊಂದು ಸುವರ್ಣ ಅವಕಾಶ. ಭರತ್ ಛೇಟ್ರಿ ನೇತೃತ್ವದ ತಂಡದಲ್ಲಿರುವ ಸಮರ್ಥ ಯುವ ಪ್ರತಿಭೆಗಳಿಗೆ `ತಾರೆ~ಗಳಾಗಿ ಮಿನುಗುವ ಅವಕಾಶವೂ ಹೌದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT