ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಬರಿಗೈಯಲ್ಲಿ ಭಾರತ

Last Updated 23 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಪರ್ತ್ (ಪಿಟಿಐ): ಮತ್ತೊಂದು ನಿರಾಸೆ. ಆದ್ದರಿಂದ ಬರಿಗೈಯಲ್ಲಿ ನಿಂತಿತು ಭಾರತ. ಲಾನ್ಸೊ ಅಂತರರಾಷ್ಟ್ರೀಯ ಸೂಪರ್ ಸರಣಿ ಹಾಕಿಯಲ್ಲಿ ಕಂಚಿನ ಪದಕವೂ ದಕ್ಕಲಿಲ್ಲ.

ಮೂರನೇ ಸ್ಥಾನಕ್ಕಾಗಿ ಭಾನುವಾರ ನಡೆದ ಪಂದ್ಯದಲ್ಲಿ ನೀರಸ ಆಟವಾಡಿದ ಭಾರತಕ್ಕೆ ಮತ್ತೆ ಸೋಲಿನ ಕಹಿ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಗೆದ್ದು ಕಂಚಿನ ಪದಕವನ್ನು ಕೊರಳಿಗೆ ಹಾಕಿಕೊಳ್ಳುವ ಕನಸು ಕೂಡ ನುಚ್ಚುನೂರು.

ಲೀಗ್ ಹಂತದಲ್ಲಿ 1-1 ಗೋಲಿನಿಂದ ಭಾರತ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದ ಪಾಕಿಸ್ತಾನವು ಮೂರನೇ ಸ್ಥಾನಕ್ಕಾಗಿ ನಡೆದ ಹೋರಾಟದಲ್ಲಿ ದಾಳಿಯನ್ನು ಬಲಗೊಳಿಸಿತು. ಆದ್ದರಿಂದ ಭಾರತವು 1-4ರಲ್ಲಿ ಪಾಕ್‌ಗೆ ಶರಣಾಯಿತು.

ಮೊದಲ ಹನ್ನೆರಡು ನಿಮಿಷಗಳ ಆಟದಲ್ಲಿಯೇ 2-0 ಗೋಲುಗಳಿಂದ ಮುನ್ನಡೆ ಸಾಧಿಸಿದ ಪಾಕ್‌ಗೆ ಗೆಲುವಿನ ಹಾದಿ ಕಷ್ಟವೆನಿಸಲೇ ಇಲ್ಲ. ನಾಯಕ ಶಕೀಲ್ ಅಬ್ಬಾಸಿ ಹಾಗೂ ಮೊಹಮ್ಮದ್ ವಕಾಸ್ ಅವರು ಕ್ರಮವಾಗಿ 7 ಹಾಗೂ 12ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು.

ದಾಳಿಗೆ ಒತ್ತು ನೀಡಿದ ಪಾಕ್ ತಂಡದವರು ಮಧ್ಯಕ್ಷೇತ್ರದಲ್ಲಿ ಚೆಂಡನ್ನು ಪ್ರಭಾವಿಯಾಗಿ ನಿಯಂತ್ರಿಸಿದರು. ಆದ್ದರಿಂದ ಮತ್ತೆರಡು ಸುಲಭ ಗೋಲು ಸಾಧ್ಯವಾಯಿತು. 17ನೇ ನಿಮಿಷದಲ್ಲಿ ಫರೀದ್ ಅಹ್ಮದ್ ಅವರು ಗೋಲು ಆವರಣದಲ್ಲಿ ಚುರುಕಾಗಿ ಪ್ರತಿಕ್ರಿಯಿಸಿ ಚೆಂಡಿಗೆ ಗುರಿ ದಾರಿ ತೋರಿಸಿದ ರೀತಿಯಂತೂ ಸ್ಮರಣೀಯ.

ಆನಂತರ 21ನೇ ನಿಮಿಷದಲ್ಲಿ ಮೊಹಮ್ಮದ್ ವಕಾಸ್ ಮತ್ತೊಮ್ಮೆ ಭಾರತ ತಂಡದ ರಕ್ಷಣಾ ಕೋಟೆಯನ್ನು ಕೆಡವಿದರು.

ಭಾರತದ ಪರ ಏಕಮಾತ್ರ ಗೋಲು ಬಂದಿದ್ದು ವಿರಾಮಕ್ಕೆ ಕೆಲವು ಕ್ಷಣ ಬಾಕಿ ಇದ್ದಾರೆ. ರಾಜ್ಪಾಲ್ ಸಿಂಗ್ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿದರು. ಉತ್ತರಾರ್ಧದ ಆಟದಲ್ಲಿ ಭಾರತ ತಂಡವು ಎಚ್ಚರಿಕೆಯಿಂದ ಆಡಿದರೂ, ಅಷ್ಟು ಹೊತ್ತಿಗಾಗಲೇ ಕಾಲ ಮಿಂಚಿ ಹೋಗಿತ್ತು. ಪಂದ್ಯದ ಮೇಲೆ ಪಾಕ್ ಬಿಗಿ ಹಿಡಿತ ಸಾಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT