ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಬಿದ್ದಿದೆ... ಎದ್ದೇಳುವುದೆಂತು?

Last Updated 4 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಭಾರತ ಕಂಡ ಅಪರೂಪದ ಹಾಕಿ ಆಟಗಾರ ಎಂ.ಪಿ.ಗಣೇಶ್ ಪ್ರಸಕ್ತ ದೇಶದ ಹಾಕಿ ಸ್ಥಿತಿಗತಿ ಬಗ್ಗೆ ತಮ್ಮ ಅನಿಸಿಕೆಗಳನ್ನು `ಪ್ರಜಾವಾಣಿ' ಜೊತೆ ಹಂಚಿಕೊಂಡಿದ್ದಾರೆ. ಇವರು 1970 ಮತ್ತು 74ರಲ್ಲಿ ನಡೆದ ಏಷ್ಯನ್ ಗೇಮ್ಸನಲ್ಲಿ ಬೆಳ್ಳಿಯ ಪದಕಗಳನ್ನು ಗೆದ್ದಿದ್ದ ಭಾರತ ತಂಡದಲ್ಲಿದ್ದರು.

1972ರಲ್ಲಿ ಮ್ಯೂನಿಕ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದಲ್ಲಿದ್ದ ಇವರು, 1973ರಲ್ಲಿ ಹಾಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ರಜತ ಪದಕ ಗಳಿಸಿದ ಭಾರತ ತಂಡದ ನಾಯಕರಾಗಿದ್ದರು. 1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತ ತಂಡಕ್ಕೆ ಇವರು ಕೋಚ್ ಆಗಿದ್ದರು. ಈ ದೇಶದ ಕ್ರೀಡಾಡಳಿತದಲ್ಲಿ 20ವರ್ಷಗಳ ಅನುಭವ ಇರುವ ಇವರು ಭಾರತ ಕ್ರೀಡಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ.

ನಮ್ಮ ರಾಷ್ಟ್ರೀಯ ಹಾಕಿ ತಂಡಕ್ಕೆ ತರಬೇತಿ ನೀಡಲು ವಿದೇಶಿ ಕೋಚ್‌ಗಳ ಅಗತ್ಯವಿದೆಯೇ ಎಂಬ ಪ್ರಶ್ನೆ ಇದೀಗ ದೇಶದ ಹಾಕಿ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ. ಲಂಡನ್ ಒಲಿಂಪಿಕ್ಸ್ ಮತ್ತು ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಭಾರತ ತಂಡದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ  ರಾಷ್ಟ್ರೀಯ ತಂಡದ ಕೋಚ್ ಮೈಕೆಲ್ ನಾಬ್ಸ್ ಅವರನ್ನು ಆ ಸ್ಥಾನದಿಂದ ಕಿತ್ತು ಹಾಕಲಾಯಿತು. ಆ ನಂತರ ವಿದೇಶಿ ಕೋಚ್‌ಗಳ ಅಗತ್ಯದ ಬಗ್ಗೆ ಚರ್ಚೆ ಹೊಸ ಆಯಾಮ ಕಂಡು ಕೊಂಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವರು ಪರ ವಾದ ಮಂಡಿಸಿದರೆ, ಇನ್ನು ಕೆಲವರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಯಾವುದೇ ತೀರ್ಮಾನಕ್ಕೆ ಬರುವ ಮೊದಲು ಆಳವಾದ ವಿಶ್ಲೇಷಣೆ ಬೇಕಿದೆ.

ನಮ್ಮ ಹಾಕಿಯ ಆ ಚಿನ್ನದ ದಿನಗಳಲ್ಲಿ ಹಲವು ಮಂದಿ ಜಗದ್ವಿಖ್ಯಾತ ಆಟಗಾರರು ನಮ್ಮಲ್ಲಿ ಅರಳಿದ್ದಾರೆ. ಒಲಿಂಪಿಕ್ಸ್ ಬಂಗಾರ, ವಿಶ್ವಕಪ್‌ಗಳನ್ನು ಗೆದ್ದಿದ್ದೇವೆ. ಅಂದು ಈ ನೆಲದ ಅಂತರರಾಷ್ಟ್ರೀಯ ಹಾಕಿ ಆಟಗಾರರೆಂದರೆ ದೇವಲೋಕದ ಮಂದಿ ಎಂಬ ಗೌರವವಿತ್ತು.

ಒಲಿಂಪಿಕ್ಸ್‌ನಲ್ಲಿ ಎಂಟು ಚಿನ್ನ, ಏಷ್ಯನ್ ಗೇಮ್ಸನಲ್ಲಿ ಎರಡು ಚಿನ್ನದ ಜತೆಗೆ ಒಂಬತ್ತು ಬೆಳ್ಳಿ ಪದಕಗಳನ್ನು ಭಾರತ ಗೆದ್ದಿದೆ. ಜತೆಗೆ ವಿಶ್ವಕಪ್‌ನಲ್ಲಿಯೂ ಚಿನ್ನ, ಬೆಳ್ಳಿ, ಕಂಚುಗಳು ಬಂದಿವೆ. ಯಾವುದೇ ವಿದೇಶಿ ಕೋಚ್‌ನ ನೆರವಿಲ್ಲದೆಯೇ ಈ ಎಲ್ಲಾ ಪದಕಗಳು ಭಾರತಕ್ಕೆ ಬಂದಿವೆ ಎಂಬುದನ್ನು ನಾವು ಮರೆಯುವಂತಿಲ್ಲ.

ಹಿಂದಿನಿಂದಲೂ ಭಾರತವೇ ಜಗತ್ತಿಗೆ ಹಾಕಿ ತಂತ್ರಗಳನ್ನು ಹೇಳಿ ಕೊಡುತ್ತಾ ಬಂದಿದೆ. ಭಾರತದ ಶ್ರೇಷ್ಠ ಕೋಚ್‌ಗಳಲ್ಲಿ ಒಬ್ಬರಾದ ಬಾಲಕಿಷನ್ ಸಿಂಗ್ ಅವರು ನಾಲ್ಕು ದಶಕಗಳ ಹಿಂದೆ ಆಸ್ಟ್ರೇಲಿಯಾದ ಆಟಗಾರರಿಗೆ ತರಬೇತಿ ನೀಡಿದ್ದರು. ಆ ನಂತರ ಆಸ್ಟ್ರೇಲಿಯಾದ ಆಟಗಾರರು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗೆಲ್ಲತೊಡಗಿದರು. ಆದರೆ ಇವತ್ತು ಆಸ್ಟ್ರೇಲಿಯಾದವರಿಂದಲೇ ಭಾರತ ಹಾಕಿ ತಂತ್ರಗಳನ್ನು ಕಲಿಯಬೇಕಾಗಿ ಬಂದಿರುವುದೊಂದು ವಿಪರ್ಯಾಸ !

ಹಿಂದೆ ಭಾರತದ ಕಲಾತ್ಮಕ ಶೈಲಿಯನ್ನು `ಏಷ್ಯನ್ ಸ್ಟೈಲ್' ಎಂದೇ ಕರೆಯಲಾಗುತ್ತಿದ್ದು, ಅದು ಹಾಕಿ ಜಗತ್ತಿನಲ್ಲಿ ಅತ್ಯುತ್ತಮ ಎಂಬ ನಂಬಿಕೆ ಇತ್ತು. ಅದು ಸಾಬೀತಾಗಿತ್ತು ಕೂಡ. ಹೀಗಾಗಿ ಕಳೆದ ಶತಮಾನದಲ್ಲಿ ಬಹು ಕಾಲ ಜಾಗತಿಕ ಹಾಕಿಯಲ್ಲಿ ಭಾರತ ಮತ್ತು ಪಾಕಿಸ್ತಾನವೇ ಮೇಲುಗೈ ಸಾಧಿಸಿದ್ದವು. `ಏಷ್ಯನ್ ಸ್ಟೈಲ್'ಗೆ ವಿರುದ್ಧವಾಗಿ ಯೂರೊಪ್ ಎಪ್ಪತ್ತರ ದಶಕದ ಸುಮಾರಿಗೆ ಹೊಸ ತಂತ್ರ ಅಳವಡಿಸಿಕೊಂಡಿತು. ಆಸ್ಟ್ರೋ ಟರ್ಫ್ ಬಂದ ಮೇಲಂತೂ ಯೂರೊಪ್ ಆಟಗಾರರಿಗೆ ಬಹಳ ಅನುಕೂಲವಾಯಿತು. ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ ಹಾಕಿ ನಿಯಮಗಳನ್ನು ರಚಿಸುವ ಮಂಡಳಿಯಲ್ಲಿ ಯೂರೊಪ್ ಮಂದಿಯೇ ತುಂಬಿಕೊಂಡರು. ಅವರು ಯೂರೊಪ್ ಮಂದಿಗೆ ಅನುಕೂಲವಾಗುವಂತೆ ಪ್ರತಿ ವರ್ಷವೂ ನಿಯಮಗಳನ್ನು ಬದಲಿಸತೊಡಗಿದರು. ಏಷ್ಯಾದವರು ಹೊಸ ನಿಯಮಗಳಿಗೆ ಹೊಂದಿಕೊಳ್ಳಲು ಪರದಾಡಿದರು.  ಇಂತಹ ಸಂದಿಗ್ಧದಲ್ಲಿ ಭಾರತ ತಂಡಕ್ಕೆ ವಿದೇಶಿ ಕೋಚ್‌ಗಳು ಬೇಕೆನ್ನುವವರು ಹೆಚ್ಚತೊಡಗಿದರು.

ಬದಲಾದ ಸನ್ನಿವೇಶಕ್ಕೆ ಭಾರತದ ಆಟಗಾರರು ಹೊಂದಿಕೊಳ್ಳಲಾಗುತ್ತಿಲ್ಲ ಎಂಬುದು ಇದರ ಅರ್ಥವಲ್ಲ. ನಮ್ಮ ಆಟಗಾರರು ಯೂರೊಪ್ ಮತ್ತು ಆಸ್ಟ್ರೇಲಿಯಾದ ಆಟಗಾರರಿಗಿಂತ ಯಾವುದೇ ತೆರನಾಗಿ ಕಡಿಮೆಯಲ್ಲ. ವಿದೇಶದ ಆಟಗಾರರಿಗಿಂತ ಭಾರತದ ಆಟಗಾರರು ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲ. ಈಚೆಗೆ ಅಂತರರಾಷ್ಟ್ರೀಯ ರಂಗದಲ್ಲಿ ಭಾರತದ ಆಟಗಾರರ ಕಳಪೆ ಸಾಮರ್ಥ್ಯಕ್ಕೆ ಆಟಗಾರರನ್ನಷ್ಟೇ ದೂರುವಂತಿಲ್ಲ.

ವಿದೇಶದ ಕೋಚ್‌ಗಳ ಪರಿಕಲ್ಪನೆ ಭಾರತಕ್ಕೆ ಹೊಸದೇನಲ್ಲ. ಪಟಿಯಾಲದ ನೇತಾಜಿ ಸುಭಾಶ್ ರಾಷ್ಟ್ರೀಯ ಕ್ರೀಡಾ ಸಂಸ್ಥೆ (ಎನ್‌ಐಎಸ್) 1960ರಲ್ಲಿಯೇ ಅಥ್ಲೆಟಿಕ್ಸ್, ಬ್ಯಾಸ್ಕೆಟ್‌ಬಾಲ್, ಹಾಕಿ ಸೇರಿದಂತೆ ಎಲ್ಲಾ ಕ್ರೀಡೆಗಳ ಕೋಚ್‌ಗಳಿಗೆ ಅಲ್ಪಾವಧಿಯ ತರಬೇತಿ ಶಿಬಿರ ನಡೆಸಿತ್ತು. ಎನ್‌ಐಎಸ್‌ನಲ್ಲಿ ರೂಪುಗೊಂಡ ಸುಮಾರು 20 ಸಾವಿರಕ್ಕೂ ಹೆಚ್ಚು ಕೋಚ್‌ಗಳು ಇವತ್ತು ದೇಶದ ಮೂಲೆ ಮೂಲೆಗಳಲ್ಲಿ ಶಾಲಾ, ಕಾಲೇಜು, ರಾಜ್ಯ ಸರ್ಕಾರದ ಕ್ರೀಡಾ ಇಲಾಖೆ, ವಿಶ್ವವಿದ್ಯಾಲಯ ಮುಂತಾದ ಕಡೆ ಸೇವೆ ಸಲ್ಲಿಸುತ್ತಿದ್ದಾರೆ.

ಹಾಕಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ಹೆಸರಾಂತ ಆಟಗಾರರಾದ ಧ್ಯಾನ್‌ಚಂದ್, ಬಾಲಕಿಷನ್ ಸಿಂಗ್, ಗುರುದಯಾಳ್ ಸಿಂಗ್ ಭಾಂಗು, ಹರ್ಮಿಕ್ ಸಿಂಗ್ ಮುಂತಾದವರೂ ಭಾರತ ತಂಡದ ಕೋಚ್‌ಗಳಾಗಿಯೂ ಸೇವೆ ಸಲ್ಲಿಸಿದ್ದಾರೆ. ಇಂತಹ ಕೋಚ್‌ಗಳಿಂದ ರೂಪುಗೊಂಡವರು ಒಲಿಂಪಿಕ್ಸ್, ವಿಶ್ವಕಪ್, ಏಷ್ಯನ್ ಗೇಮ್ಸ, ಕಾಮನ್‌ವೆಲ್ತ್ ಕೂಟಗಳಲ್ಲಿಯೂ ಪದಕ ಗೆದ್ದಿದ್ದಾರೆ.

ಆದರೆ ಭಾರತದ ಕಳಪೆ ಪ್ರದರ್ಶನಕ್ಕೆ ದುರ್ಬಲ ಕೋಚ್‌ಗಳೇ ಕಾರಣ ಎಂದು ಹಲವರು ಹೇಳುತ್ತಿದ್ದಾರೆ. ಒಂದು ವೇಳೆ ದುರ್ಬಲ ಕೋಚಿಂಗ್ ಎನ್ನುವುದಾದರೆ ಅದಕ್ಕೂ ಒಂದು ಕಾರಣವಿದೆ. ಎನ್‌ಐಎಸ್ ಸಂಸ್ಥೆ ಇದೆಯಲ್ಲಾ ಅದನ್ನು 1985ರಲ್ಲಿ ಭಾರತ ಕ್ರೀಡಾ ಪ್ರಾಧಿಕಾರದ ಜತೆಗೆ ವಿಲೀನಗೊಳಿಸಲಾಯಿತು.

ದೆಹಲಿಯಲ್ಲಿ 1982ರಲ್ಲಿ ಏಷ್ಯನ್ ಕ್ರೀಡಾಕೂಟ ನಡೆಯಿತು. ಅದಕ್ಕಾಗಿ ಕ್ರೀಡಾಂಗಣಗಳೂ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳನ್ನು ಹುಟ್ಟು ಹಾಕಲಾಯಿತು. ಅವುಗಳೂ ಸೇರಿದಂತೆ, ದೇಶದ ವಿವಿಧ ಕಡೆ ಇದ್ದ ಹಲವು  ಮೂಲಭೂತ ಕ್ರೀಡಾ ಸೌಲಭ್ಯಗಳನ್ನು ನಿರ್ವಹಣೆ ಮಾಡುವುದೂ ಭಾರತ ಕ್ರೀಡಾ ಪ್ರಾಧಿಕಾರದ ಸ್ಥಾಪನೆಯ ಮುಖ್ಯ ಉದ್ದೇಶಗಳಲ್ಲಿ ಒಂದಾಗಿತ್ತು. ಹಿಂದೆಲ್ಲಾ ಕ್ರೀಡಾ ತಂತ್ರಜ್ಞತೆಗೆ ಸಂಬಂಧಿಸಿದಂತೆ ಎನ್‌ಐಎಸ್ ನಿರ್ಧಾರವೇ ಅಂತಿಮವಾಗಿತ್ತು. ಕ್ರೀಡಾ ಸಚಿವಾಲಯದವರು ಎನ್‌ಐಎಸ್ ಹೇಳುವುದನ್ನು ಗಂಭೀರವಾಗಿ ಪರಿಗಣಿಸುತಿತ್ತು. ವಿವಿಧ ಕ್ರೀಡೆಗಳ ರಾಷ್ಟ್ರೀಯ ಫೆಡರೇಷನ್‌ಗಳೂ ವಿಲೀನದ ನಂತರ ಎನ್‌ಐಎಸ್ ಪ್ರಭಾವ ಕಡಿಮೆಯಾಯಿತು. ವರ್ಷಗಳುರುಳಿದಂತೆ ಕೋಚಿಂಗ್‌ಗೆ ಸಂಬಂಧಿಸಿದ ವಿಷಯಗಳು ಈ ದೇಶದಲ್ಲಿ ದುರ್ಬಲಗೊಳ್ಳುತ್ತಾ ಬಂದಿತು. ಕೆಲವು ಕ್ರೀಡೆಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಗಳಾಗುವುದು ಸಂಬಂಧಪಟ್ಟ ಕೋಚ್‌ಗಳಿಗೇ ಗೊತ್ತಿರುತ್ತಿರಲಿಲ್ಲ. ಏಕೆಂದರೆ ಭಾರತ ಕ್ರೀಡಾ ಪ್ರಾಧಿಕಾರದಲ್ಲಿರುವ ಅಧಿಕಾರಷಾಹಿ ವ್ಯವಸ್ಥೆಯು ಕ್ರೀಡಾ ತಂತ್ರಜ್ಞರನ್ನು ಕಡೆಗಣಿಸಿತು.

ಹಾಕಿ ಸೇರಿದಂತೆ ಇತರ ಹಲವು ಕ್ರೀಡೆಗಳಲ್ಲಿ ಭಾರತದ ತಂಡಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಳಾಹೀನಗೊಳ್ಳಲು ಇದೂ ಒಂದು ಕಾರಣ ಎಂದರೆ ಅತಿಶಯೋಕ್ತಿಯಂತೂ ಅಲ್ಲ.

ಕಳೆದ ಮೂರು ದಶಕಗಳಲ್ಲಿ ಹಾಕಿಗೆ ಸಂಬಂಧಿಸಿದಂತೆ ಕಳಪೆ ಆಡಳಿತ ನಿರ್ವಹಣೆಯೂ ಈ ಕ್ರೀಡೆಯ ಮಟ್ಟದ ಕುಸಿತಕ್ಕೆ ಕಾರಣವಾಗಿದೆ. ಫೆಡರೇಷನ್ ಒಳಗಿನ ರಾಜಕಾರಣ ಗೊತ್ತಿರುವಂತಹದ್ದೆ. ಯಾರದೇ ಬೆಂಬಲವಿಲ್ಲದ ಕೆಲವು ಅತ್ಯುತ್ತಮ ಆಟಗಾರರನ್ನು ರಾಷ್ಟ್ರೀಯ ತಂಡದೊಳಗೆ ಬರದಂತೆ ಫೆಡರೇಷನ್ ನೋಡಿಕೊಂಡಿದ್ದೂ ಇದೆ, ಕೆಲವೊಮ್ಮೆ ಯಾರದೋ ಶಿಫಾರಸಿನಿಂದ ಕಳಪೆ ಆಟಗಾರನೊಬ್ಬ ತಂಡದೊಳಗೆ ಸ್ಥಾನ ಪಡೆದದ್ದೂ ಇದೆ. ಇಂತಹ ಗುಂಪುಗಾರಿಕೆಯಿಂದ ಆಟಗಾರರಲ್ಲಿಯೇ ಎರಡು ಗುಂಪುಗಳಾಗಿವೆ.

ಕಳೆದ ವರ್ಷ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡಿದ್ದ ಭಾರತದ ಹಾಕಿ ತಂಡ ಈ ದೇಶದ ನಿಜವಾದ ತಂಡ ಅಲ್ಲವೇ ಅಲ್ಲ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ. ಆ ತಂಡ ಕೊನೆಯ ಸ್ಥಾನಕ್ಕೆ ಇಳಿದಿತ್ತು. ಆ ಸಂದರ್ಭದಲ್ಲಿ ದೇಶದ ಐವರು ಶ್ರೇಷ್ಠ ಆಟಗಾರರು ತಂಡಕ್ಕೆ ಆಯ್ಕೆಯಾಗಿರಲೇ ಇಲ್ಲ. ಲಂಡನ್‌ಗೆ ಹೋಗಿದ್ದು ಒಂದು ಗುಂಪಿನ ಆಟಗಾರರು ಮಾತ್ರ ! ವಿದೇಶದ ಕೋಚ್ ಮೈಕೆಲ್ ನಾಬ್ಸ್ ಅವರ ಮಾರ್ಗದರ್ಶನದಲ್ಲಿ ಆ ತಂಡ ರೂಪುಗೊಂಡಿತ್ತು.

ಒಂದೂವರೆ ತಿಂಗಳ ಹಿಂದೆ ರೋಟರ್‌ಡಮ್‌ನಲ್ಲಿ ನಡೆದ ವಿಶ್ವ ಹಾಕಿ ಲೀಗ್‌ನ ಮೂರನೇ ಸುತ್ತಿನಲ್ಲಿ ಎಂಟು ತಂಡಗಳು ಪಾಲ್ಗೊಂಡಿದ್ದು, ಭಾರತ ಆರನೇ ಸ್ಥಾನಕ್ಕಿಳಿಯಿತು. ಮೈಕೆಲ್ ನಾಬ್ಸ್ ಬಲಿಪಶುವಾದರು ಬಿಡಿ. ಆದರೆ ಇದು ಹೊಸ ಅನುಭವವೇನಲ್ಲ. ಕಳೆದ ಒಂದು ದಶಕದಿಂದ ಇದೇ ರೀತಿ ಆಗುತ್ತಿದೆ. ಜರ್ಮನಿಯ ಗೆರ್ಹಾಡ್ ರ‌್ಯಾಚ್, ಆಸ್ಟ್ರೇಲಿಯಾದ ರಿಕ್ ಚಾರ್ಲ್ಸ್‌ವರ್ತ್, ಸ್ಪೇನ್‌ನ ಜೋಸ್ ಬ್ರಾಸಾ ಮುಂತಾದವರೂ ಬಲಿಪಶುಗಳಾಗಿದ್ದಾರೆ. ನಮ್ಮ `ದ್ರೋಣಾಚಾರ್ಯ'ರು ಅಂತಹ ವಿದೇಶಿ ಕೋಚ್‌ಗಳ ಅಡಿಯಲ್ಲಿ ಸೇವೆ ಸಲ್ಲಿಸುತ್ತಲೇ ಬಂದಿದ್ದಾರೆ. ಕಳೆದ ವರ್ಷ ನಡೆದ ಹಾಕಿ ಇಂಡಿಯ ಲೀಗ್‌ನಲ್ಲಿ ರಿಕ್ ಚಾರ್ಲ್ಸ್‌ವರ್ತ್ ಅವರಿಂದ ತರಬೇತು ಪಡೆದ ಪ್ರಬಲ ಮುಂಬೈ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ತಳಮಟ್ಟದಲ್ಲಿತ್ತು.

ಭಾರತದಲ್ಲಿ ಹಾಕಿಗೆ ಸರ್ಕಾರ ಅಪಾರ ಹಣ ಸುರಿಯುತ್ತಿದೆ. ಫೆಡರೇಷನ್‌ನಲ್ಲಿ ಅಧಿಕಾರ ಸ್ಥಾನ ಮತ್ತು ಕೋಚ್ ಹುದ್ದೆ ಭಾರಿ ಲಾಭದಾಯಕವಾಗಿದೆ. ವಿದೇಶಿ ಕೋಚ್‌ಗೆ ತಿಂಗಳಿಗೆ 6ಲಕ್ಷ ರೂಪಾಯಿ ವೇತನವಿದೆ. ಆದರೆ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಭಾರತೀಯ ಕೋಚ್‌ಗಳು ಪಡೆಯುವುದು ಕೇವಲ 50ಸಾವಿರ ರೂಪಾಯಿ ಮಾತ್ರ. ಹೀಗಾಗಿ ಭಾರತದ ಒಂದಲ್ಲಾ ಒಂದು ತಂಡಕ್ಕೆ ಕೋಚ್‌ಗಳಾಗಿ ಬರಲು ವಿದೇಶದ ಕೋಚ್‌ಗಳ ಗುಂಪು ದೊಡ್ಡಮಟ್ಟದಲ್ಲಿ ಲಾಬಿ ನಡೆಸುತ್ತಲೇ ಇದೆ. ಸಂಬಂಧಪಟ್ಟ ಕೋಚ್‌ಗಳಿಗೆ ಸಂಬಂಧಿಸಿದಂತೆ ಪರ ಮತ್ತು ವಿರೋಧಿ ಪ್ರಚಾರ ಮತ್ತು ಗುಂಪುಗಾರಿಕೆ ಇದ್ದೇ ಇರುತ್ತದೆ.

ಮಾಜಿ ಅಂತರರಾಷ್ಟ್ರೀಯ ಆಟಗಾರ ಎಂ.ಕೆ.ಕೌಶಿಕ್ ಅವರು ರಾಷ್ಟ್ರೀಯ ಕೋಚ್ ಆಗಿದ್ದ ಮೊದಲ ಅವಧಿಯಲ್ಲಿ ಅತ್ಯುತ್ತಮ ಫಲಿತಾಂಶವನ್ನೇ ನೀಡಿದರು. ಆದರೆ ಫೆಡರೇಷನ್‌ನ ಒಂದು ಗುಂಪು ಅವರ ವಿರುದ್ಧ ಅಬ್ಬರದ ಅಪಪ್ರಚಾರ ನಡೆಸಿತು. ಕೊನೆಗೆ ಅವರನ್ನು ಆ ಸ್ಥಾನದಿಂದಲೇ ಕಿತ್ತೊಗೆಯಲಾಯಿತು. ಅವರು ಮತ್ತೆ ಕೋಚ್ ಆಗಿ ನೇಮಕಗೊಂಡಿರುವ ಒಳ್ಳೆಯ ಸುದ್ದಿ ಈಚೆಗೆ ಬಂದಿದೆ. ಫೆಡರೇಷನ್‌ನಲ್ಲಿ `ಜೀ... ಹುಜೂರ್' ಸಂಸ್ಕೃತಿ ತುಂಬಿಕೊಂಡಿದೆ. ತಾವು ಆಡುತ್ತಿದ್ದ ದಿನಗಳಲ್ಲಿ ಯಾವುದೇ ಮಹತ್ವದ್ದನ್ನು ಮಾಡದ ಕೆಲವು ಮಾಜಿ ಆಟಗಾರರು ಇದೀಗ ಗುಂಪುಗಾರಿಕೆಯಲ್ಲಿ ಮುಳುಗಿದ್ದು, ಸಹಾಯಕ ಕೋಚ್ ಹುದ್ದೆ ಗಿಟ್ಟಿಸಲಿಕ್ಕಾಗಿ ಇನ್ನಿಲ್ಲದ ಕೊಳಕು ರಾಜಕಾರಣ ನಡೆಸುತ್ತಾರೆ. ಇಂತಹ ಸಂಗತಿಗಳೆಲ್ಲವೂ ಈ ದೇಶದ ಹಾಕಿಯನ್ನು ಹಾಳುಗೆಡವಿವೆ ಎನ್ನಲೇ ಬೇಕಾಗುತ್ತದೆ.

ಪ್ರತಿಯೊಂದು ದೇಶವೂ ತನ್ನದೇ ಆದ `ಹಾಕಿ ಆಡುವ ಶೈಲಿ'ಯನ್ನು ಹೊಂದಿದೆ. ಆಸ್ಟ್ರೇಲಿಯಾ ಶೈಲಿ, ಯೂರೊಪ್ ಶೈಲಿ, ಏಷ್ಯಾ ಶೈಲಿ, ಲ್ಯಾಟಿನ್ ಅಮೆರಿಕಾ ಶೈಲಿಯ ಆಟಗಳಿವೆ. ಸಂಬಂಧಪಟ್ಟ ಶೈಲಿಯಲ್ಲಿ ಆಡುವುದನ್ನು ಕಲಿತ ಆಟಗಾರನೊಬ್ಬ ಅದೇ ಶೈಲಿಯಲ್ಲಿ ನುರಿತಿರುತ್ತಾನೆ. ಯೂರೊಪ್ ಶೈಲಿಯಲ್ಲಿ ಕಲಿತ ಆಟಗಾರನೊಬ್ಬನಿಂದ ಏಷ್ಯಾ ಆಟಗಾರರ ತಂತ್ರಗಾರಿಕೆಯನ್ನು ನಿರೀಕ್ಷಿಸಬೇಕೆಂದೇನಿಲ್ಲ. ವಿದೇಶದ ಮತ್ತು ಸ್ವದೇಶದ ಹಲವು ಕೋಚ್‌ಗಳು ಭಾರತೀಯ ಆಟಗಾರರ ತಂತ್ರವನ್ನು ತಮ್ಮ ಮೂಗಿನ ನೇರಕ್ಕೆ ಬದಲಾಯಿಸಲು ಯತ್ನಿಸಿದ್ದಾರೆ. ಆದರೆ ಯಾರಿಗೂ ಕರಾರುವಾಕ್ಕಾದ ಫಲಿತಾಂಶ ಸಿಕ್ಕಿಲ್ಲ. ನನಗನ್ನಿಸುವ ಮಟ್ಟಿಗೆ ಯೂರೊಪ್‌ನ ಕೋಚ್ ಒಬ್ಬರು ಅಲ್ಲಿನ ತಂಡವೊಂದನ್ನು ಸಮರ್ಥವಾಗಿ ಕಟ್ಟಬಲ್ಲರು, ಅದೇ ರೀತಿ ಭಾರತೀಯ ಕೋಚ್ ಈ ನೆಲದ ಸಮರ್ಥ ಆಟಗಾರರ ತಂಡವನ್ನು ಕಟ್ಟಬಲ್ಲರು.

ನಮ್ಮದು ವಿವಿಧತೆಯಲ್ಲಿ ಏಕತೆಯನ್ನು ಕಂಡಿರುವಂತಹ ದೇಶ. ವಿವಿಧ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಭಾಷಾ ಪ್ರದೇಶಗಳಿಂದ ಬಂದವರು ಒಂದು ಹಾಕಿ ತಂಡವಾಗಿ ರೂಪುಗೊಂಡಿರುತ್ತಾರೆ. ಇಂತಹದ್ದೊಂದು ತಂಡದ ಮನಸ್ಥಿತಿ, ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದೂ ತಂಡದ ಆಡಳಿತಕ್ಕೆ ಒಂದು ಸವಾಲೂ ಹೌದು. ಕೋಚ್ ಮತ್ತು ಆಟಗಾರರ ನಡುವೆ ಭಾಷೆಯ ಅಂತರ ಸಾಮಾನ್ಯ. ಭಾರತೀಯ ಕೋಚ್‌ಗಳು ಮತ್ತು ಆಟಗಾರರು ಹಿಂದಿಯ ಜತೆಗೆ ಹೇಗೋ `ಸಂಭಾಷಣೆ' ನಡೆಸುತ್ತಾರೆ, ಬಿಡಿ. ಆದರೆ ವಿದೇಶಿ ಕೋಚ್‌ಗೆ ಇಲ್ಲಿಗೆ ಹೊಂದಿಕೊಳ್ಳುವುದು ಬಹಳ ಕಷ್ಟವಾಗುತ್ತದೆ. ಈ ಒಂದು ಸಂಗತಿಯನ್ನು ಬಹಳಷ್ಟು ಕೋಚ್‌ಗಳು ನನ್ನೊಡನೆ ಅನೇಕ ಸಲ ಹೇಳಿದ್ದಾರೆ. ಇದೊಂದು ಗಂಭೀರವಾದ ಸಮಸ್ಯೆ ಎನ್ನುವುದಂತೂ ನಿಜ.

ಹಾಕಿ ಈಚೆಗೆ ಬಹಳಷ್ಟು ಬದಲಾಗಿದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಪ್ರಸಕ್ತ ನಿಯಮಗಳು ಯೂರೊಪ್ ಆಟಗಾರರಿಗೆ ಹೆಚ್ಚು ಅನುಕೂಲಕರವಾಗಿದೆ. ಅಂದರೆ ಹಾಕಿಯಲ್ಲಿ ಭಾರತಕ್ಕೆ ಭವಿಷ್ಯವೇ ಇಲ್ಲವೆಂದೇನಲ್ಲ. ನಿಮಗೆ ಇಚ್ಛಾಶಕ್ತಿ ಇದ್ದರೆ ಏನನ್ನೂ ಮಾಡಬಹುದು. ಇವತ್ತಿಗೂ ಹಾಕಿಯ ಅತ್ಯುತ್ತಮ ತಂತ್ರಗಳು ನಮ್ಮವೇ ಹೌದು. ಯೂರೊಪ್ ತಂತ್ರ ಅಥವಾ ಶೈಲಿಯನ್ನು ಮಣಿಸಲು ನಮಗೆ ಹಲವು ದಾರಿಗಳಿವೆ.

ಹಾಕಿಗೆ ಸಂಬಂಧಿಸಿದಂತೆ ಹಿರಿಯ ಆಟಗಾರರು, ಅನುಭವಿ ಕೋಚ್‌ಗಳು, ಪ್ರತಿಭಾವಂತ ಆಟಗಾರರು, ಹಾಕಿ ಸಂಶೋಧಕರು ಮುಂತಾದವರನ್ನು ಒಳಗೊಂಡ `ಚಿಂತಕರ ಚಾವಡಿ'ಯನ್ನು ರಚಿಸಬೇಕು. ಈ `ಚಾವಡಿ'ಯು ನಾಡಿನ ಹಾಕಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಲ್ಪಾವಧಿ ಮತ್ತು ದೀರ್ಘಾವಧಿಯ ಯೋಜನೆಗಳನ್ನು ರೂಪಿಸಬೇಕು.

ಒಬ್ಬ ಆಟಗಾರನಾಗಿ ಇಂತಹ ಸಂದಿಗ್ಧದಲ್ಲಿ ಕೆಲವು ಅಂಶಗಳನ್ನು ಹೇಳಲು ಇಷ್ಟ ಪಡುತ್ತೇನೆ.

ದೇಶದ ಹಾಕಿ ಅಕಾಡೆಮಿ, ಕ್ರೀಡಾ ಶಾಲೆ ಮತ್ತು ಕ್ರೀಡಾ ಹಾಸ್ಟೆಲ್‌ಗಳಲ್ಲಿರುವ ಪ್ರತಿಭಾವಂತ ಯುವ ಕೋಚ್‌ಗಳನ್ನು ಭಾರತ ಕ್ರೀಡಾ ಪ್ರಾಧಿಕಾರ ಗುರುತಿಸಿ ಅಂತಹವರಿಗೆ ವಿಶ್ವಮಟ್ಟದ ಅತ್ಯುತ್ತಮ ತರಬೇತಿ ನೀಡಲಿ. ಅಂತಹವರನ್ನು ಯೂರೊಪ್‌ನ ಕೆಲವು ದೇಶಗಳಿಗೆ ಕಳುಹಿಸಿ ಅಲ್ಪಾವಧಿಯ ತರಬೇತಿ ಕೊಡಿಸುವುದು ಸೂಕ್ತ.

ಹತ್ತರಿಂದ ಹನ್ನೆರಡು ವರ್ಷದೊಳಗಿನ ಪ್ರತಿಭಾವಂತ ಬಾಲಕರನ್ನು ಗುರುತಿಸಿ ಅವರಿಗೆ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಬೇಕು ಮತ್ತು ಕ್ರೀಡಾ ವಿಜ್ಞಾನದ ಹಿನ್ನೆಲೆ ಇರುವ ಕೋಚ್‌ಗಳಿಂದ ತರಬೇತಿ ನೀಡಬೇಕು.

ಹಾಕಿ ಫೆಡರೇಷನ್ ಮತ್ತು ಭಾರತ ಕ್ರೀಡಾ ಪ್ರಾಧಿಕಾರವು ಕೋಚ್‌ಗಳ ಗುಂಪೊಂದನ್ನು ಕಟ್ಟಬೇಕು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾಜಿ ಆಟಗಾರರು, ಹಾಕಿಯ ಬಗ್ಗೆ ಮತ್ತು ಹಾಕಿ ತರಬೇತಿಯ ಕುರಿತು ಉತ್ತಮ ಜ್ಞಾನ ಇರುವವರು ಈ ಗುಂಪಿನಲ್ಲಿರಬೇಕು. ಇಂತಹವರಿಗೆ ತರಬೇತಿಗೆ ಸಂಬಂಧಿಸಿದಂತೆ ಉತ್ತಮ ತರಬೇತಿ ನೀಡಬೇಕು. ವಿದೇಶಕ್ಕೂ ಕಳುಹಿಸಿ ಅನುಭವ ಪಡೆಯುವಂತೆ ಮಾಡಬಹುದು. ಈ ಆಯ್ಕೆಯಲ್ಲಿ ಯಾವುದೇ ಗುಂಪುಗಾರಿಕೆಗೆ ಅವಕಾಶ ಇರಲೇ ಬಾರದು. ಇಪ್ಪತ್ತೊಂದು ವರ್ಷದೊಳಗಿನ ವಿವಿಧ ವಯೋಮಿತಿಯ ಆಟಗಾರರ ತಂಡಗಳನ್ನು ಕೆಲವು ಯೂರೊಪ್ ದೇಶಗಳಿಗೆ ಕಳುಹಿಸಿ, ಅಲ್ಲಿ ಲೀಗ್‌ನಲ್ಲಿ ಆಡಿಸಬೇಕು. ದೇಶದೊಳಗೆ ನಡೆಯುವ ಹಾಕಿ ಲೀಗ್‌ಗಳಲ್ಲಿ ಆಡುವ ಪ್ರತಿ ತಂಡದಲ್ಲಿ 21 ವರ್ಷದೊಳಗಿನ ನಾಲ್ವರು ಆಟಗಾರರು ಆಡುವುದನ್ನು ಕಡ್ಡಾಯಗೊಳಿಸಬೇಕು.

ವಿದೇಶಿ ಕೋಚ್‌ಗಳು ಭಾರತ ತಂಡಕ್ಕೆ ತರಬೇತಿ ನೀಡುವುದನ್ನು ನಾನು ಯಾವುದೇ ಕಾರಣಕ್ಕೂ ವಿರೋಧಿಸುವುದಿಲ್ಲ. ಪ್ರಸಕ್ತ ಆಧುನಿಕ ಹಾಕಿಗೆ ವಿದೇಶಿ ಕೋಚ್‌ಗಳ ಮತ್ತು ತಜ್ಞರ ಅನಿವಾರ್ಯತೆ ಇದ್ದೇ ಇದೆ. ಆದರೆ ಅಂಥವರ ಮಾರ್ಗದರ್ಶನ ಪಡೆಯುವಾಗ ನಾವು ವೃತ್ತಿಪರತೆಯಿಂದ ಯೋಚಿಸಬೇಕಿದೆ, ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ವಿದೇಶಿ ಕೋಚ್‌ಗಳನ್ನು ಐದಾರು ವರ್ಷಗಳ ಕಾಲ ತರಬೇತಿಗಾಗಿ ಇರಿಸಿಕೊಳ್ಳುವುದು ಯಾವುದೇ ರೀತಿಯಿಂದ ಲಾಭದಾಯಕವಲ್ಲ.

ಹಿಂದಿನ ಅನುಭಗಳು ಅದನ್ನೇ ಹೇಳುತ್ತವೆ. ಹೀಗಾಗಿ ಕೋಚ್‌ಗಳ ನೇಮಕ ಅಲ್ಪಾವಧಿಗೇ ಇರಲಿ. ಗೋಲ್‌ಕೀಪಿಂಗ್, ರಕ್ಷಣಾ ಆಟ, ಮಿಡ್‌ಫೀಲ್ಡ್ ಆಟ, ಫಾರ್ವರ್ಡ್ ಆಟ ಮತ್ತು ಫಿಟ್‌ನೆಸ್‌ಗೆ ಸಂಬಂಧಿಸಿದಂತೆ ಪ್ರತ್ಯೇಕವಾದ ಅನುಭವಿ ತರಬೇತುದಾರರನ್ನು ವಿದೇಶದಿಂದ ಕರೆಸಿ 15ರಿಂದ 20 ದಿನಗಳ ಕಾಲವಷ್ಟೇ ಇರಿಸಿಕೊಂಡು ಮಾರ್ಗದರ್ಶನ ಪಡೆದು ವಾಪಸು ಕಳಿಸಬೇಕು. ಭಾರತ ತಂಡದ ಮುಖ್ಯ ಕೋಚ್ ಮಾತ್ರ ಭಾರತೀಯನೇ ಆಗಿರಬೇಕು.

ವಿದೇಶಿ ಕೋಚ್‌ಗೆ ಮಾಸಿಕ ವೇತನ 6 ಲಕ್ಷ ರೂಪಾಯಿ

ನಮ್ಮ `ದ್ರೋಣಾಚಾರ್ಯ'ರ ವೇತನ 50 ಸಾವಿರ ರೂಪಾಯಿ

ಆಸ್ಟ್ರೇಲಿಯಾಕ್ಕೆ ಹಾಕಿ ಕಲಿಸಿದ್ದು ನಮ್ಮ ಬಾಲಕಿಷನ್ ಸಿಂಗ್

ಇವತ್ತು ನಮಗೆ ಆಸ್ಟ್ರೇಲಿಯಾದವರೇ ಹಾಕಿ ಕಲಿಸುತ್ತಿದ್ದಾರೆ

ನಮ್ಮವರೇ ಕೋಚ್‌ಗಳಾಗಿದ್ದಾಗಲೇ ನಮಗೆ ಪದಕ ಬಂದಿದ್ದು

ವಿದೇಶದ ಕೋಚ್‌ಗಳಿದ್ದಾಗ ಬಂದ ಪದಕಗಳೆಷ್ಟು?

ವಿದೇಶದ ಕೋಚ್‌ಗಳು ಬೇಡ ಎಂಬ ವಾದ ಸರಿಯಲ್ಲ.

ವಿದೇಶದ ಕೋಚ್‌ಗಳು ಅಲ್ಪಾವಧಿಗಷ್ಟೇ ಇರಲಿ


 
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಇಲ್ಲಿಗೆ ಕಳುಹಿಸಿ  kreede@ prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT