ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಶಿಬಿರ ತೊರೆದು ಬಂದ ಹಾಲಪ್ಪ

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಲಂಡನ್ ಒಲಿಂಪಿಕ್ಸ್‌ನ ಅರ್ಹತಾ ಸುತ್ತಿನ ಹಾಕಿ ಟೂರ್ನಿಗೆ ಪ್ರಕಟಿಸಲಾದ ಭಾರತ ತಂಡದಿಂದ ತಮ್ಮನ್ನು ಕೈಬಿಟ್ಟ ಕಾರಣ ಕರ್ನಾಟಕದ ಅರ್ಜುನ್ ಹಾಲಪ್ಪ ನವದೆಹಲಿಯಲ್ಲಿ ನಡೆಯುತ್ತಿರುವ ಶಿಬಿರ ತೊರೆದು ತವರಿಗೆ ವಾಪಾಸಾಗಿದ್ದಾರೆ.

`ಹಾಕಿ ಇಂಡಿಯಾ~ದ ಈ ಕ್ರಮದಿಂದ ಅಸಮಾಧಾನಗೊಂಡಿರುವ ಅನುಭವಿ ಆಟಗಾರ ಹಾಲಪ್ಪ ಅಂತರರಾಷ್ಟ್ರೀಯ ಹಾಕಿಗೆ ವಿದಾಯ ಹೇಳುವ ಸಂಬಂಧ ಕೆಲವೇ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ  `ಪ್ರಜಾವಾಣಿ~ಗೆ ತಿಳಿಸಿದರು.

`ತಂಡದಿಂದ ಕೈಬಿಟ್ಟಿದ್ದು ತುಂಬಾ ನೋವುಂಟು ಮಾಡಿದೆ. ಈ ರೀತಿ ಆಗಬಹುದೆಂದು ನಿರೀಕ್ಷಿಸಿರಲಿಲ್ಲ. ನಾನು ಶಿಬಿರಕ್ಕೆ ಮತ್ತೆ ಹೋಗುವುದಿಲ್ಲ. ರಿಸರ್ವ್ ಆಟಗಾರನಾಗಿ ನಾನೇಕೇ ತಂಡದಲ್ಲಿರಬೇಕು~ ಎಂದು ಅವರು ನುಡಿದರು.

ಮಿಡ್ ಫೀಲ್ಡರ್ ಹಾಲಪ್ಪ ಅವರನ್ನು ರಿಸರ್ವ್ (ಕಾಯ್ದಿರಿಸಿದ) ಆಟಗಾರನಾಗಿ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಹಾಗಾಗಿ ಅವರು ಶಿಬಿರದಲ್ಲಿಯೇ ಇರಬೇಕು. ಆದರೆ ತವರಿಗೆ ಹಿಂದಿರುಗಿದ್ದಾರೆ. ಫೆಬ್ರುವರಿ 18ರಿಂದ 26ರವರೆಗೆ ನವದೆಹಲಿಯ ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಹಾಕಿ ಕ್ರೀಡಾಂಗಣದಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ. ಈ ಟೂರ್ನಿಗೆ ಆಯ್ಕೆ ಮಾಡಲಾಗಿರುವ 18 ಮಂದಿ ಆಟಗಾರರ ತಂಡಕ್ಕೆ ಕರ್ನಾಟಕದವರೇ ಆದ ಭರತ್ ಚೆಟ್ರಿ ನಾಯಕ.

`ರಿಸರ್ವ್ ಆಗಿ ಆಯ್ಕೆ ಮಾಡುತ್ತೇವೆ ಎಂದು ಆಯ್ಕೆ ಸಮಿತಿಯವರು ಮೊದಲೇ ಹೇಳಬೇಕಿತ್ತು. ಇಷ್ಟು ದಿನ ತರಬೇತಿ ಶಿಬಿರ ನಡೆಸಿದ ಮೇಲೆ ಹೇಳುವ ಅಗತ್ಯ ಏನಿತ್ತು. ಆರಂಭದಲ್ಲೇ ಹೇಳಿದ್ದರೆ ನಾನು ಶಿಬಿರಕ್ಕೆ ಹೋಗುತ್ತಿರಲಿಲ್ಲ. ಅವರ ಉದ್ದೇಶವೇನು ಎಂಬುದು ನನಗೆ ಅರ್ಥವಾಗುತ್ತಿಲ್ಲ~ ಎಂದು ಮಾಜಿ ನಾಯಕರೂ ಆಗಿರುವ ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದರು.

`ಮಂಗಳವಾರವಷ್ಟೇ ನಾನು ಬೆಂಗಳೂರಿಗೆ ಬಂದೆ. ಕೆಲ ದಿನಗಳಲ್ಲಿ ಕೊಡಗಿಗೆ ತೆರಳಿ ಕುಟುಂಬದವರೊಂದಿಗೆ ಚರ್ಚಿಸುತ್ತೇನೆ. ಬಳಿಕ ನನ್ನ ನಿರ್ಧಾರವನ್ನು ತಿಳಿಸುತ್ತೇನೆ~ ಎಂದರು.

`ಜುಲೈ-ಆಗಸ್ಟ್‌ನಲ್ಲಿ ನಡೆಯಲಿರುವ ಲಂಡನ್   ಒಲಿಂಪಿಕ್ಸ್‌ಗೆ ಭಾರತ ತಂಡ ಅರ್ಹತೆ ಪಡೆಯಬೇಕು ಎಂಬುದು ನನ್ನ ಉದ್ದೇಶ ಹಾಗೂ ಗುರಿ. ಈಗ ತಂಡಕ್ಕೆ ಆಯ್ಕೆ ಆಗಿರುವವರು ಉತ್ತಮ ಪ್ರದರ್ಶನ ತೋರಿ ಆ ಗುರಿ ಈಡೇರಿಸಲಿ~ ಎಂದೂ ಕೊಡಗಿನ ಈ ಆಟಗಾರ ಹೇಳಿದರು.

31 ವರ್ಷ ವಯಸ್ಸಿನ ಹಾಲಪ್ಪ 2001ರಲ್ಲಿ ಈಜಿಪ್ಟ್ ಎದುರು ಅಂತರರಾಷ್ಟ್ರೀಯ ಹಾಕಿಗೆ ಪದಾರ್ಪಣೆ ಮಾಡಿದ್ದರು. 2004ರ ಒಲಿಂಪಿಕ್ಸ್ (ಏಳನೇ ಸ್ಥಾನ) ಹಾಗೂ 2010ರ ಕಾಮನ್‌ವೆಲ್ತ್ ಕೂಟದಲ್ಲಿ (ಬೆಳ್ಳಿ ಪದಕ) ಪಾಲ್ಗೊಂಡಿದ್ದ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

ರಿಸರ್ವ್ ಆಟಗಾರನಾಗಿರುವ ಕರ್ನಾಟಕದ ವಿ.ಎಸ್. ವಿನಯ್ ಕೂಡ ಅಂತರರಾಷ್ಟ್ರೀಯ ಹಾಕಿಗೆ ವಿದಾಯ ಹೇಳುವ ಸಂಬಂಧ ಕೆಲ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. `ನಾನು ಶಿಬಿರದಲ್ಲಿಯೇ ಉಳಿದುಕೊಂಡಿದ್ದೇನೆ. ಆದರೆ ವಿದಾಯ ಹೇಳುವ ಸಂಬಂಧ ಇದುವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈ ಬಗ್ಗೆ ಕುಟುಂಬದವರೊಂದಿಗೆ ಸಮಾಲೋಚಿಸಿ ಬಳಿಕ ತೀರ್ಮಾನ ಪ್ರಕಟಿಸುತ್ತೇನೆ~ ಎಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT