ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಗಾದರೆ ಅಂಪೈರ್ ಏಕೆ ಬೇಕು?

Last Updated 13 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಇದು ಅಂಪೈರ್‌ಗಳಿಗೆ ಆಗುತ್ತಿರುವ ಅವಮಾನವಲ್ಲದೇ ಮತ್ತಿನ್ನೇನು?
‘ಯುಡಿಆರ್‌ಎಸ್ ನಿಯಮದಿಂದಾಗಿ ಫೀಲ್ಡ್ ಅಂಪೈರ್‌ಗಳಿಗೆ ಅವಮಾನವಾಗುತ್ತಿದೆ’
ಹೀಗೆಂದು ಹೇಳಿದ್ದು 1983ರಲ್ಲಿ ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡದ ನಾಯಕ ಕಪಿಲ್ ದೇವ್. ಅವರ ಈ ಮಾತು ಅಕ್ಷರಶಃ ನಿಜ.

ನೀವೇ ನೋಡಿದ್ದೀರಿ... ಒಬ್ಬ ಬ್ಯಾಟ್ಸ್‌ಮನ್ ಎಲ್‌ಬಿಡಬ್ಲ್ಯು ಔಟೆಂದು ಫೀಲ್ಡ್ ಅಂಪೈರ್ ತೀರ್ಪು ನೀಡುತ್ತಾರೆ. ಆಗ ಅದನ್ನು ಪ್ರಶ್ನಿಸಿ ಆ ಬ್ಯಾಟ್ಸ್‌ಮನ್ ಯುಡಿಆರ್‌ಎಸ್ ಮೊರೆ ಹೋಗುತ್ತಾನೆ. ಔಟ್ ಅಲ್ಲ ಎಂದು ಮೂರನೇ ಅಂಪೈರ್ ಹೇಳುತ್ತಿದ್ದಂತೆ ಫೀಲ್ಡ್ ಅಂಪೈರ್ ತನ್ನ ಎದೆ ಮುಟ್ಟಿಕೊಂಡು ನಿರ್ಧಾರ ಹಿಂಪಡೆಯುವುದನ್ನು ಕ್ರೀಡಾಂಗಣದಲ್ಲಿ ಅಥವಾ ಟಿವಿಯಲ್ಲಿ ವೀಕ್ಷಿಸಿರಬಹುದು.

ಅಂದರೆ ಎರಡೂ ಕೈಗಳಿಂದ ಅಂಪೈರ್ ತನ್ನ ಎದೆ ಮುಟ್ಟಿಕೊಳ್ಳುವ ಆ ಕ್ಷಣ ತಪ್ಪು ಒಪ್ಪಿಕೊಂಡು ಕ್ಷಮಿಸು ಎಂದು ಬ್ಯಾಟ್ಸ್‌ಮನ್‌ನನ್ನು ಕೇಳುವಂತಿರುತ್ತದೆ!

ಇದು ಅಂಪೈರ್‌ಗಳ ಅಧಿಕಾರವನ್ನು ಕುಗ್ಗಿಸುತ್ತಿಲ್ಲವೇ? ‘ಕ್ರಿಕೆಟ್ ಜಡ್ಜ್’ ಎನಿಸಿರುವ ಅಂಪೈರ್‌ಗಳಿಗೆ ಅಷ್ಟು ಮಂದಿ ಪ್ರೇಕ್ಷಕರ ಎದುರು ಅವಮಾನ ಆಗುವುದಿಲ್ಲವೇ? ಕ್ರಿಕೆಟ್ ಸ್ಫೂರ್ತಿಗೆ ಇದು ಧಕ್ಕೆ ತರುತ್ತಿಲ್ಲವೇ? ಏಕೆ ಹೀಗೆ?

ಅಂಪೈರ್‌ಗಳ ನಿರ್ಧಾರಕ್ಕೆ ತನ್ನದೇ ಆದ ಮಹತ್ವವಿದೆ. ಅದು ಯಾವುದೇ ರೀತಿಯ ತೀರ್ಪು ಇರಲಿ, ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಆದರೀಗ ತಂತ್ರಜ್ಞಾನದಿಂದ ಹೆಚ್ಚು ವಿವಾದಗಳು ಸೃಷ್ಟಿಯಾಗುತ್ತಿವೆ. ಐಸಿಸಿಗೆ ಏಕೆ ಇದು ಅರ್ಥವಾಗುತ್ತಿಲ್ಲ?

ಅಂಪೈರ್ ತೀರ್ಪು ಪರಿಶೀಲನಾ ಪದ್ಧತಿ (ಯುಡಿಆರ್‌ಎಸ್) ನಿಯಮವನ್ನು ಒಂದು ಜೋಕ್, ಗಿಮ್ಮಿಕ್ ಎಂದು ಪ್ರಮುಖ ಆಟಗಾರರು ಹೇಳುತ್ತಿರುವುದರಲ್ಲಿ ಅರ್ಥವಿದೆ.

ಆದರೆ ಯುಡಿಆರ್‌ಎಸ್ ತೀರ್ಪು ಕೂಡ ಶೇಕಡಾ 100ರಷ್ಟು ನಿಖರವಾಗಿಲ್ಲ ಎಂಬುದು ವಿಪರ್ಯಾಸ. ಅದಕ್ಕೂ ಒಂದು ಮಿತಿ ಇದೆ. ಏಕೆಂದರೆ ಎಲ್ಲಾ ಕಡೆ ಒಂದೇ ರೀತಿಯ ಸಾಫ್ಟ್‌ವೇರ್ ಯಂತ್ರಗಳನ್ನು ಬಳಸುತ್ತಿಲ್ಲ. ಬೆಂಗಳೂರಿನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯದ ಬಳಿಕ ಯುಡಿಆರ್‌ಎಸ್ ಸಂಬಂಧಿಸಿದ ವಿವಾದ ಮತ್ತಷ್ಟು ದೊಡ್ಡದಾಗಿದೆ.

ಇಂಗ್ಲೆಂಡ್‌ನ ಇಯಾನ್ ಬೆಲ್ ವಿರುದ್ಧ ಅಂಪೈರ್ ಬಿಲಿ ಬೌಡೆನ್ ನೀಡಿದ ತೀರ್ಪಿನ ಬಗ್ಗೆ ವಿವಾದ ಸೃಷ್ಟಿಯಾಗಿತ್ತು.
‘ಮನುಷ್ಯರ ಯೋಚನೆಗಳಿಂದ ತಂತ್ರಜ್ಞಾನವನ್ನು ಕಲಬೆರಕೆ ಮಾಡುವುದು ಕೆಟ್ಟದ್ದು. ಮುಂದಿನ ದಿನಗಳಲ್ಲಿ ಈ ಸಂಬಂಧದ ವಿವಾದ ಎದ್ದಾಗ ಅದು ತಂತ್ರಜ್ಞಾನ ಅಥವಾ ಮನುಷ್ಯರ ನಿಲುವು ಆಗಿರಲಿ’ ಎಂದು ಭಾರತ ತಂಡದ ನಾಯಕ ದೋನಿ ಯುಡಿಆರ್‌ಎಸ್ ಬಗ್ಗೆ ವಿವಾದ ಹುಟ್ಟುಹಾಕಿದ್ದರು.

ಖಂಡಿತ ನಿಜ, ಅಕಸ್ಮಾತ್ ಎಲ್ಲದಕ್ಕೂ ತಂತ್ರಜ್ಞಾನದ ಮೊರೆ ಹೋಗುವುದಾದರೆ ಅಂಪೈರ್‌ಗಳ ಅಗತ್ಯವಾದರೂ ಏಕೆ?

‘ಒಬ್ಬ ಬ್ಯಾಟ್ಸ್‌ಮನ್ ಔಟ್ ಎಂದು ನಾನು ತೀರ್ಪು ನೀಡುತ್ತೇನೆ. ಅದನ್ನು ನೀವು ಮೂರನೇ ಅಂಪೈರ್ ಪರಿಶೀಲನೆಗೆ ಒಪ್ಪಿಸುತ್ತೀರಿ. ಆದರೆ ಮೂರನೇ ಅಂಪೈರ್ ವಾಪಸ್ ನನ್ನ ಪರಿಶೀಲನೆಗೆ ಬಿಡುತ್ತಾರೆ. ಆಗ ನಾನು ಮೊದಲಿನ ನನ್ನ ನಿರ್ಧಾರ ಬದಲಿಸಲು ಸಾಧ್ಯವೇ? ಮತ್ತೆ ನನ್ನ ಪರಿಶೀಲನೆಗೆ ಅದು ಬರಲೇಬಾರದು. ಹಾಗೇ ಮಾಡಿದರೆ ಅದು ನನಗೆ ಅವಮಾನ ಮಾಡಿದಂತೆ’ ಎಂದು ಕಪಿಲ್ ಹೇಳುತ್ತಾರೆ.

ಹಾಗಾಗಿ ಅಂಪೈರ್ ತೀರ್ಪನ್ನು ಪ್ರಶ್ನಿಸಿ ತಂತ್ರಜ್ಞಾನದ ಮೊರೆ ಹೋಗಲು ಆಟಗಾರರಿಗೆ ಅವಕಾಶ ನೀಡಬಾರದು. ಅಕಸ್ಮಾತ್ ಅಂಪೈರ್‌ಗಳಿಗೆ ಅಷ್ಟೊಂದು ಅನುಮಾನ ಬಂದರೆ ಮೂರನೇ ಅಂಪೈರ್ ಜೊತೆ ಚರ್ಚಿಸಿ ತೀರ್ಮಾನಕ್ಕೆ ಬರಲಿ. ಈಗಾಗಲೇ ರನ್‌ಔಟ್, ಸ್ಟಂಪ್ ಔಟ್‌ನಂತಹ ವಿಷಯಕ್ಕೆ ತಂತ್ರಜ್ಞಾನ ಮೊರೆ ಹೋಗುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.

ನಿಜ, ರನ್‌ಔಟ್, ಸ್ಟಂಪ್ ಔಟ್ ಹಾಗೂ ಕ್ಯಾಚ್ ಪಡೆಯುವ ಮುನ್ನ ಚೆಂಡು ನೆಲಕ್ಕೆ ತಾಗಿದೆಯೇ ಇಲ್ಲವೇ ಎಂಬಿತ್ಯಾದಿ ಸಂಗತಿಗಳ ಬಗ್ಗೆ ಮೂರನೇ ಅಂಪೈರ್ ಮನವಿ ಹೋಗುವುದು ಸಹಜ. ಆಗ ರೀಪ್ಲೆನಲ್ಲಿ ಅದು ಗೊತ್ತಾಗುತ್ತದೆ. ಹಾಗಾಗಿ ತೀರ್ಪುಗಳ ಬಗ್ಗೆ ಅನುಮಾನ ಬಗೆ ಹರಿಸಿಕೊಳ್ಳಲು ತಂತ್ರಜ್ಞಾನದ ಮೊರೆ ಹೋಗಬೇಕೇ ಹೊರತು ಪೂರ್ಣ ತಂತ್ರಜ್ಞಾನಕ್ಕೆ ಎಲ್ಲವನ್ನೂ ಒಪ್ಪಿಸಬಾರದು. ಇಷ್ಟು ದಿನ ಯುಡಿಆರ್‌ಎಸ್ ನೆರವಿಲ್ಲದೇ ಕ್ರಿಕೆಟ್ ಪಂದ್ಯಗಳು ನಡೆದಿಲ್ಲವೇ?

ಬಿಸಿಸಿಐ ಇತ್ತೀಚಿನ ದಿನಗಳಲ್ಲಿ ಯುಡಿಆರ್‌ಎಸ್ ತಂತ್ರಜ್ಞಾನ ಅಳವಡಿಸಲು ಒಲವು ತೋರುತ್ತಿಲ್ಲ. ಸಚಿನ್ ಈ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ಎಲ್‌ಬಿಡಬ್ಲ್ಯುನಂತಹ ವಿಷಯದಲ್ಲಿ ತೀರ್ಪು ನೀಡಲು ಅಂಪೈರ್ ಮಾತ್ರ ಸೂಕ್ತ ಎಂಬುದು ಅವರ ನಿಲುವು. ನಿಜ, ಯುಡಿಆರ್‌ಎಸ್ ಪದ್ಧತಿ ಇದ್ದರೆ ಪಂದ್ಯದಲ್ಲಿ ತಪ್ಪುಗಳನ್ನು ಕಡಿಮೆ ಮಾಡಬಹುದು. ನಿಖರ ತೀರ್ಪುಗಳು ಬರುತ್ತವೆ ಎನ್ನುವುದಾದರೆ ಈ ನಿಯಮದ ಮೊರೆ ಹೋಗಬಹುದು. ಆದರೆ ಈಗ ಹಾಗೇ ಆಗುತ್ತಿಲ್ಲವಲ್ಲ!

‘ಅಂಪೈರ್‌ಗಳು ಕೂಡ ಮನುಷ್ಯರು. ಹಾಗಾಗಿ ಅವರು ತಪ್ಪು ಮಾಡುವುದು ಸಹಜ. ಹಾಗಂತ ತೀರ್ಪು ನೀಡಲು ಯಂತ್ರದ ಮೊರೆ ಹೋಗುವುದು ಬೇಡ’ ಎಂಬುದು ಬಿಸಿಸಿಐ ಕಾರ್ಯದರ್ಶಿ ಎನ್.ಶ್ರೀನಿವಾಸನ್ ಅವರ ವಾದ.
ಏನೇ ಇರಲಿ, ಈ ಯುಡಿಆರ್‌ಎಸ್ ನಿಯಮದಿಂದ ಅಂಪೈರ್‌ಗಳನ್ನು ದೇವರೇ ರಕ್ಷಿಸಬೇಕು!

ಏನಿದು ಯುಡಿಆರ್‌ಎಸ್?
ಅಂಪೈರ್ ತೀರ್ಪನ್ನು ಪ್ರಶ್ನಿಸಿ ತಂತ್ರಜ್ಞಾನದ ಮೊರೆ ಹೋಗುವ ಪದ್ಧತಿಯೇ ಅಂಪೈರ್ ತೀರ್ಪು ಪರಿಶೀಲನಾ ಪದ್ಧತಿ (ಯುಡಿಆರ್‌ಎಸ್). ಅದಕ್ಕಾಗಿ ಹಾಕ್‌ಐ ಅಥವಾ ಹಾಟ್‌ಸ್ಪಾಟ್ ಅಥವಾ ಸ್ನಿಕೊಮೀಟರ್ ನೆರವು ಪಡೆಯಲಾಗುತ್ತದೆ. ಪ್ರತಿ ತಂಡಕ್ಕೆ ಒಂದು ಇನಿಂಗ್ಸ್‌ನಲ್ಲಿ ಎರಡು ಬಾರಿ ಅಂಪೈರ್ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶ ಇರುತ್ತದೆ.

ಬ್ಯಾಟ್ಸ್‌ಮನ್ ಔಟಿಲ್ಲ ಎಂದು ಫೀಲ್ಡ್ ಅಂಪೈರ್ ತೀರ್ಪು ನೀಡಿದರೆ ಅದನ್ನು ಫೀಲ್ಡಿಂಗ್ ಮಾಡುತ್ತಿರುವ ತಂಡ ಪ್ರಶ್ನಿಸಬಹುದು. ಹಾಗೇ, ಔಟ್ ಎಂದು ತೀರ್ಪು ನೀಡಿದರೆ ಅದನ್ನು ಬ್ಯಾಟ್ ಮಾಡುತ್ತಿರುವ ತಂಡ ಪ್ರಶ್ನಿಸಬಹುದು. ಅಕಸ್ಮಾತ್ ಮಾಡಿದ ಮನವಿಗೆ ಪೂರಕ ಫಲಿತಾಂಶ ಬಂದರೆ ಆ ತಂಡ ಮತ್ತೆ ವಿಫಲವಾಗುವ ತನಕ ಮೇಲ್ಮನವಿ ಸಲ್ಲಿಸುತ್ತಾ ಹೋಗಬಹುದು. ಎಲ್‌ಬಿಡಬ್ಲ್ಯು, ಕ್ಯಾಚ್ ಔಟ್ ತೀರ್ಪು ನೀಡುವ ವೇಳೆ ಇದು ಹೆಚ್ಚು ನೆರವಿಗೆ ಬರುತ್ತದೆ.

ತಂತ್ರಜ್ಞಾನದ ನೆರವಿನಿಂದ ಮೂರನೇ ಅಥವಾ ಟಿವಿ ಅಂಪೈರ್ ಅದನ್ನು ವಿಶ್ಲೇಷಿಸುತ್ತಾರೆ. ಬಳಿಕ ಫೀಲ್ಡ್ ಅಂಪೈರ್ ಜೊತೆ ಚರ್ಚಿಸುತ್ತಾರೆ. ಅಂತಿಮವಾಗಿ ಫೀಲ್ಡ್ ಅಂಪೈರ್ ತನ್ನ ಮೊದಲ ತೀರ್ಪಿಗೆ ಬದ್ಧರಾಗಿರುತ್ತಾರೆ ಅಥವಾ ಎದೆ ಮುಟ್ಟಿಕೊಂಡು ಮೂರನೇ ಅಂಪೈರ್ ತೀರ್ಪನ್ನು ಒಪ್ಪಿಕೊಳ್ಳುತ್ತಾರೆ.

ಆದರೆ ಇಯಾನ್ ಬೆಲ್ ವಿರುದ್ಧದ ತೀರ್ಪಿನ ವಿವಾದದ ಬಳಿಕ ಮತ್ತೊಂದು ನಿಯಮವನ್ನು ಅದಕ್ಕೆ ಸೇರಿಸಲಾಗಿದೆ. ಅಕಸ್ಮಾತ್ ಚೆಂಡು ವಿಕೆಟ್‌ಗಿಂತ 2.5 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ದೂರದಲ್ಲಿದ್ದರೆ ಅಂತಿಮ ತೀರ್ಪು ನೀಡುವ ಅಧಿಕಾರ ಫೀಲ್ಡ್ ಅಂಪೈರ್‌ಗಳಿಗೆ ಬಿಟ್ಟಿದ್ದು. ಚೆಂಡು ವಿಕೆಟ್‌ಗೆ ಬಡಿಯುತ್ತದೆ ಎಂದು ರೀಪ್ಲೆನಲ್ಲಿ ಕಂಡರೂ ಫೀಲ್ಡ್ ಅಂಪೈರ್ ಔಟ್ ಇಲ್ಲ ಎಂದು ತೀರ್ಪು ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT