ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಗೆ ಹೋಗಿ ಹೀಗೆ ಬಂದ ಕಾಡಾನೆಗಳು

ಆಂಧ್ರಪ್ರದೇಶದ ವಿ.ಕೋಟೆಯಿಂದ ವಾಪಸ್ಸಾದ ಆನೆಗಳು
Last Updated 28 ಜನವರಿ 2013, 6:26 IST
ಅಕ್ಷರ ಗಾತ್ರ

ಕೆಜಿಎಫ್: ಕಳೆದ ಒಂದು ತಿಂಗಳಿಂದ ತಾಲ್ಲೂಕಿನಲ್ಲಿ ಬೀಡು ಬಿಟ್ಟಿರುವ 32 ಕಾಡಾನೆಗಳ ಹಿಂಡು ಭಾನುವಾರ ಮುಂಜಾನೆ ನೀಲಗಿರಿಹಳ್ಳಿ ಮುಖಾಂತರ ಆಂಧ್ರಪ್ರದೇಶದ ವಿ.ಕೋಟೆ ಕಾಡಿಗೆ ತೆರಳಿದ್ದವು. ಆದರೆ ಸಂಜೆ 6 ಗಂಟೆ ವೇಳೆಗೆ ಮತ್ತೆ ಕರ್ನಾಟಕದ ಗಡಿಯಲ್ಲಿ ಸಂಚರಿಸುವ ಮೂಲಕ ಆತಂಕ ಮರುಕಳಿಸಿದೆ.

ಆನೆಗಳ ಕಾಟ ತೀರಿತೆಂದು ನಿಟ್ಟುಸಿರು ಬಿಟ್ಟಿದ್ದ ಸಾರ್ವಜನಿಕರು, ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.ಕಾಮಸಮುದ್ರ, ಕೀರುಮಂದೆ, ಯರಗೋಳು ಸಮೀಪದ ಕಾಡಿನಲ್ಲಿ ಕಳೆದ ಒಂದು ತಿಂಗಳಿಂದ ಇದ್ದ ಆನೆಗಳ ಹಿಂಡು ಶುಕ್ರವಾರ ರಾತ್ರಿ ಕೆಜಿಎಫ್ ನಗರದ ಹೊರವಲಯಕ್ಕೆ ಬಂದಿದ್ದವು. ಆಂಡರಸನ್‌ಪೇಟೆ ಹೊರವಲಯದ ಲಕ್ಷ್ಮೀಸಾಗರ, ಮಾರಿಕುಪ್ಪ, ಭೀಮಗಾನಹಳ್ಳಿ, ಗೊಲ್ಲಹಳ್ಳಿ, ಪಾರಾಂಡಹಳ್ಳಿ ಮೊದಲಾದ ಪ್ರದೇಶಗಳಲ್ಲಿ ನಡುರಾತ್ರಿಯವರೆಗೂ ಬೀಡುಬಿಟ್ಟಿದ್ದವು.

ಈ ಸಂದರ್ಭದಲ್ಲಿ ದಾರಿಯಲ್ಲಿ ಸಿಗುವ ರೈತರ ಬಾಳೆ ತೋಟ, ಮೆಕ್ಕೆಜೋಳ ಮತ್ತು ರಾಗಿ ತೆನೆಗಳನ್ನು ನಾಶಪಡಿಸಿವೆ. ಮುಂಜಾನೆ 5 ಗಂಟೆ ಸಮಯದಲ್ಲಿ ಅಲ್ಲಿಂದ ಹೊರಟ ಆನೆಗಳ ಹಿಂಡು ಕ್ಯಾಸಂಬಳ್ಳಿ ಮಾರ್ಗದಲ್ಲಿ ತೆರಳಿದವು. ನಂತರ ಬೇತಮಂಗಲ ಸಮೀಪದ ಐಪಲ್ಲಿ ಕೆರೆಬಳಿ ಬಂದು, ಅಲ್ಲಿಂದ ಟಿ.ಗೊಲ್ಲಹಳ್ಳಿ ಸಮೀಪದ ನೀಲಗಿರಿ ಮರಗಳ ತೋಪಿಗೆ ತೆರಳಿದವು.

ಆನೆಗಳು ಬರುವ ಸುಳಿವೇ ಇರದಿದ್ದ ಬಾರ‌್ಲಿ, ನತ್ತ, ನಲ್ಲೂರು, ಕಳ್ಳಿಕುಪ್ಪ ಸುತ್ತಮುತ್ತಲಿನ ಗ್ರಾಮಗಳ ಜನರು ಎಂದಿನಂತೆ ನೀಲಗಿರಿ ತೋಪಿಗೆ ಹೋಗಿದ್ದಾಗ ಆನೆಗಳ ದರ್ಶನವಾಗಿ ಹೌಹಾರಿ ಓಡಿಬಂದಿದ್ದರು. ನಲ್ಲೂರು ಸಮೀಪದ ತೋಪಿನಲ್ಲಿ ಮರ ಕೊಯ್ಯಲು ಹೋಗಿದ್ದ ಮೂವರು ವ್ಯಕ್ತಿಗಳು ತಮ್ಮ ಕೆಲಸದಲ್ಲಿ ನಿರತರಾಗಿದ್ದಾಗ ಅಲ್ಲಿಗೆ ಬಂದ ಆನೆಗಳ ಹಿಂಡು ತಿಮ್ಮೋಪುರ ಗ್ರಾಮದ ಕೃಷ್ಣಪ್ಪ (47) ಎಂಬಾತನನ್ನು ಗಾಯಗೊಳಿಸಿತು. ಮತ್ತಿಬ್ಬರು ಓಡಿ ಪರಾರಿಯಾದರು.

ಆನೆಗಳು ಬಂದಿರುವ ಸುದ್ದಿ ಹರಡಿ ಸಾವಿರಾರು ಮಂದಿ ಆನೆಗಳ ದರ್ಶನಕ್ಕೆ ಮುಗಿಬಿದ್ದರು. ಆನೆಗಳನ್ನು ಸರಿಯಾದ ಮಾರ್ಗದಲ್ಲಿ ಓಡಿಸುತ್ತಿದ್ದ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗೆ ಜನರನ್ನು ಓಡಿಸುವುದೇ ದೊಡ್ಡ ಕಾಯಕವಾಯಿತು. ಎರಡು ಮೂರು ಬಾರಿ ಲಘು ಲಾಠಿ ಪ್ರಹಾರ ಮಾಡಿದರೂ ಜನ ಚದುರಲಿಲ್ಲ.

ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಮುನೇಗೌಡ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪುಟ್ಟಣ್ಣ, ವಲಯ ಅರಣ್ಯಾಧಿಕಾರಿ ಚಂದ್ರಶೇಖರರೆಡ್ಡಿ, ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್, ಸಬ್ ಇನ್ಸ್‌ಪೆಕ್ಟರ್ ಜಗದೀಶ್ ಲಾಠಿ ತೆಗೆದುಕೊಂಡು ಓಡಿಸಿಕೊಂಡು ಹೋಗುತ್ತಿದ್ದರು, ಸುತ್ತಮುತ್ತಲಿನ ನೀಲಿಗರಿ ತೋಪಿಗೆ ಓಡುತ್ತಿದ್ದ ಜನ ಆನೆಗಳನ್ನು ಅತಿ ಹತ್ತಿರದಿಂದ ನೋಡಲು ಹೋಗುತ್ತಿದ್ದರು.

ಮಧ್ಯಾಹ್ನ 12.30ರ ಸಮಯದಲ್ಲಿ ನಲ್ಲೂರು- ಕಳ್ಳಿಕುಪ್ಪ ಮುಖ್ಯರಸ್ತೆಯಲ್ಲಿ ಸುಮಾರು 14 ಆನೆಗಳಿದ್ದ ಹಿಂಡು ರಸ್ತೆ ದಾಟಿತು. ಮತ್ತೊಂದು ಹಿಂಡು ಗ್ರಾಮಸ್ಥರ ಕೂಗಾಟಕ್ಕೆ ಬೆದರಿ ನೀಲಗಿರಿ ತೋಪಿನಲ್ಲಿಯೇ ಉಳಿದುಕೊಂಡಿತು. ಈ ಸಮಯದಲ್ಲಿ ಆನೆಗಳನ್ನು ಅತಿಹತ್ತಿರದಿಂದ ನೋಡಲು ಹೋದ ಬೇತಮಂಗಲ ನಿವಾಸಿ ಜಯವೇಲು (39) ಆನೆಯ ದಾಳಿಗೆ ಸಿಲುಕಿದ.

ತೀವ್ರವಾಗಿ ಗಾಯಗೊಂಡ ಆತನನ್ನು ಪೊಲೀಸರು ಬೇತಮಂಗಲ ಆಸ್ಪತ್ರೆಗೆ ಸಾಗಿಸಿದರು. ಸಾರ್ವಜನಿಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ರಾಜ್ಯ ಸಶಸ್ತ್ರ ಮೀಸಲು ಪೊಲೀಸ್ ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ತಲಾ ಒಂದು ತುಕಡಿಯನ್ನು ಜನರ ನಿಯಂತ್ರಣಕ್ಕೆ ನಿಯೋಜಿಸಲಾಯಿತು. ಡಿವೈಎಸ್ಪಿ ರಾಜಣ್ಣ ಸ್ಥಳದಲ್ಲೇ ಮೊಕ್ಕಾಂ ಮಾಡಿ ಜನರ ನಿಯಂತ್ರಣಕ್ಕೆ ಶ್ರಮಿಸಿದರು.

ಆನೆಗಳು ತಮ್ಮ ಪಾಡಿಗೆ ತಾವು ಹೋಗುತ್ತವೆ. ಅವುಗಳ ಪಥಕ್ಕೆ ಗ್ರಾಮಸ್ಥರು ಅಡ್ಡಿ ಪಡಿಸುತ್ತಿರುವುದರಿಂದ ಅವು ಗಾಬರಿಗೊಳಗಾಗಿದೆ ಎಂದು ಉಪಸಂರಕ್ಷಣಾಧಿಕಾರಿ ಮುನೇಗೌಡ  `ಪ್ರಜಾವಾಣಿ'ಗೆ ತಿಳಿಸಿದರು.

ಆನೆಗಳ ನಿಯಂತ್ರಣಕ್ಕೆ ಬನ್ನೇರುಘಟ್ಟ ಉದ್ಯಾನವನದಿಂದ ಇಪ್ಪತ್ತು ಮಂದಿ ಆಗಮಿಸಿದ್ದಾರೆ. ಸಂಜೆ ನಂತರ ಅವು ನೀಲಗಿರಿ ತೋಪಿನಿಂದ ಮತ್ತೊಂದು ಸ್ಥಳಕ್ಕೆ ಧಾವಿಸುವ ಸೂಚನೆಗಳಿವೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪುಟ್ಟಣ್ಣ ಹೇಳಿದರು.

ಆನೆಗಳ ಅನಿರೀಕ್ಷಿತ ದಾಳಿಯಿಂದ ತಪ್ಪಿಸಿಕೊಳ್ಳಲು ಗ್ರಾಮಗಳನ್ನು ಬಿಟ್ಟು ಸಮೀಪದ ತೋಪು ಮತ್ತು ಕಾಡಿಗೆ ಗ್ರಾಮಸ್ಥರು ಹೋಗಬಾರದು ಎಂದು ಪೊಲೀಸರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

ನಲ್ಲೂರು ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ವೈ.ಸಂಪಂಗಿಯವರನ್ನು ಭೇಟಿ ಮಾಡಿದ ಅರಣ್ಯಾಧಿಕಾರಿಗಳು ಜನರು ಕೊಡುತ್ತಿರುವ ಕಾಟವನ್ನು ನಿವೇದಿಸಿಕೊಂಡರು. ಜನರ ಕಿರುಕುಳದಿಂದ ಆನೆಗಳು ಉದ್ರಿಕ್ತಗೊಂಡು ಅನಾಹುತ ಮಾಡಬಹುದೆಂಬ ಆತಂಕವನ್ನು ವ್ಯಕ್ತಪಡಿಸಿದರು.

ಶನಿವಾರ ರಾತ್ರಿ ಹತ್ತು ಗಂಟೆ ಸಮಯದಲ್ಲಿ ಗುಟ್ಟಹಳ್ಳಿ ದೇವಾಲಯದ ಬಳಿಗೆ ಬಂದ ಆನೆಗಳು ನಂತರ ಆಂಧ್ರಪ್ರದೇಶದ ಕಡೆಗೆ ತೆರಳಿದವು. ರಾತ್ರಿಯಾದರೂ ಆನೆಗಳು ತೆರಳುವ ಹಾದಿಯುದ್ದಕ್ಕೂ ಗ್ರಾಮಗಳ ಜನ ನಿದ್ದೆ ಮಾಡದೆ ಆನೆಗಳನ್ನು ವೀಕ್ಷಿಸುತ್ತಿದ್ದರು.

ಆನೆದಾಳಿಗೆ ಕುರಿಗಾಹಿ ಬಲಿ
ಬಂಗಾರಪೇಟೆ:
ತಿಂಗಳಿನಿಂದ ತಾಲ್ಲೂಕಿನ ಗಡಿ ಭಾಗದಲ್ಲಿ ಓಡಾಡುತ್ತಿರುವ ಆನೆಗಳ ದಾಳಿಗೆ ಭಾನುವಾರ ಅತ್ತಿನೆತ್ತ ಗ್ರಾಮದ ಕುರಿಗಾಹಿ ವೆಂಕಟೇಶಪ್ಪ ಬಲಿಯಾಗಿದ್ದಾರೆ. ಕುರಿ ಮೇಯಿಸುತ್ತಿದ್ದ ವೇಳೆ ಆನೆ ದಾಳಿಗೆ ಸಿಲುಕಿದ್ದರು ಎಂದು ಹೇಳಲಾಗಿದೆ.

ಆನೆಗಳ ಹಿಂಡು ಭಾನುವಾರ ಎರಡು ಗುಂಪುಗಳಾಗಿವೆ. ಒಂದು ಗುಂಪು ಮುಸ್ಟ್ರಹಳ್ಳಿ ಸಮೀಪದ ಮುರುಗ ದೇವಸ್ಥಾನ ಬಳಿ ಕಂಡುಬಂದಿವೆ. ಮತ್ತೊಂದು ಗುಂಪು ಬತ್ತಲಹಳ್ಳಿ ಕಾಡು ವ್ಯಾಪ್ತಿಯ ಕರಿಬಂಡೆಹಳ್ಳದಲ್ಲಿ ಸಂಚರಿಸಿವೆ.

ಶನಿವಾರ ತಾಲ್ಲೂಕಿನ ಬೇತಮಂಗಲ, ನೆಲ್ಲೂರು, ರಾಮಸಾಗರ ಕೆರೆ ವ್ಯಾಪ್ತಿಯಲ್ಲಿದ್ದ ಆನೆಗಳು ಭಾನುವಾರ ಆಂಧ್ರಪ್ರದೇಶದ ಬಿಸಾನತ್ತಂ ವ್ಯಾಪ್ತಿಯಲ್ಲಿ ಸಂಚರಿಸಿವೆ. ಸುಮಾರು 12ರ ವೇಳೆಗೆ ಆಂಧ್ರಪ್ರದೇಶದ ಗುಡಿಪಲ್ಲಿ ತಲುಪಿವೆ.

ಭಾನುವಾರ ರಾತ್ರಿ ಆಂಧ್ರಪ್ರದೇಶದ ಗುಡಿಪಲ್ಲಿ ಕಡೆಯಿಂದ ಕರ್ನಾಟಕ ಗಡಿ ಭಾಗದೊಳಕ್ಕೆ ನುಗ್ಗಲು ಯತ್ನಿಸುತ್ತಿದ್ದ ಆನೆಗಳನ್ನು ಹಿಮ್ಮೆಟ್ಟಿಸಲು ಪೊಲೀಸ್ ಮತ್ತು ಅರಣ್ಯ ಸಿಬ್ಬಂದಿ ಕಾರ್ಯಚರಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT