ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡು ನಿಲ್ಲಿಸಿದ ಶಂಷಾದ್ ಬೇಗಂ

Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): `ಕಹಿ ಪೆ ನಿಗಾಹೆ ಕಹಿ ಪೆ ನಿಶಾನಾ..' `ಮೇರೆ ಪಿಯಾ ಗಯೇ ರಂಗೂನ್..' `ಕಬಿ ಆರ್ ಕಬಿ ಪಾರ್..' ಇಂತಹ ಹಲವು ಜನಪ್ರಿಯ ಹಿಂದಿ ಗೀತೆಗಳ ಮೂಲಕ ದಂತಕತೆಯಾಗಿದ್ದ ಹಿರಿಯ ಬಹುಭಾಷಾ ಹಿನ್ನೆಲೆ ಗಾಯಕಿ ಶಂಷಾದ್ ಬೇಗಂ (94) ಮಂಗಳವಾರ ರಾತ್ರಿ ಹಾಡು ನಿಲ್ಲಿಸಿದರು.

ವಯೋಮಾನದ ಸಹಜ ತೊಂದರೆಗಳಿಂದ ಕಳೆದ ಕೆಲ ತಿಂಗಳುಗಳಿಂದ ಅಸ್ವಸ್ಥಗೊಂಡಿದ್ದ ಬೇಗಂ ಈಶಾನ್ಯ ಮುಂಬಯಿಯ ಪೊವಾಯಿನಲ್ಲಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.  ಪತಿ ಗಣಪತ್ ಲಾಲ ಬಟ್ಟೊ 1955ರಲ್ಲಿ ನಿಧನರಾದ ನಂತರ ಬೇಗಂ ಪುತ್ರಿ ಉಷಾ ರಾತ್ರಾ ಅವರ ಮನೆಯಲ್ಲೇ ವಾಸವಾಗಿದ್ದರು.

1919ರ ಏಪ್ರಿಲ್ 14ರಂದು ಪಂಜಾಬ್‌ನ ಅಮೃತಸರದ ಸಾಂಪ್ರದಾಯಿಕ ಕುಟುಂಬದಲ್ಲಿ ಜನ್ಮತಳೆದ ಬೇಗಂ 1947ರಲ್ಲಿ ಪೆಶಾವರ ರೇಡಿಯೋದಲ್ಲಿ ಕಲಾವಿದೆಯಾಗಿ ಸೇರಿಕೊಳ್ಳುವ ಮೂಲಕ ಸಂಗೀತಪ್ರೇಮಿಗಳನ್ನು ಮರುಳು ಮಾಡಿದ್ದರು.ಹಿಂದಿ ಸೇರಿದಂತೆ ಬಂಗಾಳಿ, ಮರಾಠಿ, ಗುಜರಾತಿ, ತಮಿಳು ಹಾಗೂ ಪಂಜಾಬಿ ಭಾಷೆಗಳಲ್ಲಿರುವ ಬೇಗಂ ಅವರ ಹಲವು ಹಾಡುಗಳು ಲಕ್ಷಾಂತರ ಜನರನ್ನು ಭಾವಪರವಶಗೊಳಿಸಿವೆ.

ಗುಲಾಂ ಹೈದರ್, ನೌಷಾದ್, ಒ.ಪಿ.ನಯ್ಯರ್ ಸೇರಿದಂತೆ ಹಲವು ಖ್ಯಾತ ಸಂಗೀತ ಸಂಯೋಜಕರ ಜತೆ ಹಾಡಿದ ಬೇಗಂ ಅವರಿಗೆ ಹಾಡುಗಾರಿಕೆಯ ತುಡಿತ ಬಾಲ್ಯದಿಂದಲೆ ಇತ್ತು. ಆದರೆ ಬೇಗಂ ಅವರದು ಸಾಂಪ್ರದಾಯಿಕ ಕುಟುಂಬವಾಗಿದ್ದರಿಂದ ಇದಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಲಿಲ್ಲ. ಚಿಕ್ಕಪ್ಪ ಅವರ ಶ್ರಮದಿಂದಾಗಿ ಬೇಗಂ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಲು ಸಾಧ್ಯವಾಯಿತು.

ಬಾಲಿವುಡ್ ಅಶ್ರುತರ್ಪಣ: ಶಂಷಾದ್ ಬೇಗಂ ನಿಧನದೊಂದಿಗೆ ಹಿಂದಿ ಚಿತ್ರರಂಗದ ಸಂಗೀತದ ಶಕೆಯೊಂದು ಕೊನೆಗೊಂಡಂತಾಗಿದೆ ಎಂದಿರುವ ಬಾಲಿವುಡ್‌ನ ಹಲವು ಕಲಾವಿದರು ಅತೀವ ಸಂತಾಪ ಸೂಚಿಸಿದ್ದಾರೆ.

40 ಹಾಗೂ 50 ರ ದಶಕದಲ್ಲಿ ಹಿನ್ನೆಲೆ ಗಾಯನದ ದಂತಕತೆಯೇ ಎನಿಸಿದ್ದ ಬೇಗಂ ಅವರೊಂದಿಗೆ ಹಾಡಿರುವ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ತೀವ್ರ ಸಂತಾಪ ಸೂಚಿಸಿದ್ದಾರೆ. `ಅವರ ನಿಧನದ ಸುದ್ದಿ ಕೇಳಿ ನನಗೆ ಅತೀವ ದುಃಖವಾಗಿದೆ' ಎಂದಿದ್ದಾರೆ.

`ಹಲವು ಚಿತ್ರಗಳಲ್ಲಿ ಅವರ ಚಿನ್ನದ ಕಂಠದಿಂದ ಹೊರಹೊಮ್ಮಿದ ಹಾಡುಗಳು ಐತಿಹಾಸಿಕ ' ಎಂದು ಹಿರಿಯ ನಟ ಅಮಿತಾಬ್ ಬಚ್ಚನ್ ಶೋಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT