ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡು ನೆಚ್ಚಿದ ಹುಡುಗ

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹೊರಗೆ ಹಿತವಾದ ಗಾಳಿ. ಜತೆಗೆ ಸಣ್ಣ ಸೋನೆ ಮಳೆ. ಒಳಗೆ ಒಳ್ಳೆಯ ವೇದಿಕೆ. ಕುತೂಹಲದಿಂದ ಕುಳಿತ ನನ್ನ ಸಂಗೀತದ ಬಯಕೆಗೆ ಮೋಸ ಆಗಲಿಲ್ಲ. ಅಲ್ಲಿ ನಡೆದ ಮಕ್ಕಳ ಕಾರ್ಯಕ್ರಮದಲ್ಲಿ ನನ್ನನ್ನು ಹೆಚ್ಚು ಆಕರ್ಷಿಸಿದ್ದು ಕೃಷ್ಣನಂತಿದ್ದ ಆ ಬಾಲಕ. ಆತ ಹಾಡುವಾಗ ಅವನಲ್ಲಿ ತನ್ಮಯತೆ, ಭಾವ ಮೈತುಂಬಿಕೊಂಡಿತ್ತು. ಆ ಪುಟಾಣಿ ಕಣ್ಮುಚ್ಚಿ ಹಾಡಿದ್ದು `ಕಲಾರಸಿಕ ಸಾಗರಕೆ ನನ್ನ ಕೋಟಿ ನಮನ, ಕನ್ನಡಿಗರ ಕಾವ್ಯ ನುಡಿಯೆ ನಮ್ಮ ನಿಮ್ಮ ಬಂಧನ...~.

ಮಲ್ಲೇಶ್ವರಂನ ವಿದ್ಯಾಮಂದಿರ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕನ ಹೆಸರು ಸಮ್ರತ್ ಎಂ. ಈತನ ಪ್ರತಿಭೆಗೆ ಇಡೀ ಶಾಲೆಯ ಪ್ರೋತ್ಸಾಹವಿದೆ. ಅಂದಹಾಗೆ, ಈತ ಸರಳಾ ಹಾಗೂ ಮಂಜುನಾಥ್ ಎಂ.ಜೆ. ಅವರ ಪುತ್ರ.

ಆರನೇ ವಯಸ್ಸಿಗೆ ಸಂಗೀತ ಕಲಿಕೆ ಪ್ರಾರಂಭಿಸಿದ ಸಮ್ರತ್, ಸಂಗೀತ ಕಲಾವಿದೆ ನಿವೇದಿತಾ ಅವರಿಂದ ಭಕ್ತಿಗೀತೆ ಕಲಿಯುವ ಮೂಲಕ ತನ್ನ ಸಂಗೀತಕ್ಕೆ ನಾಂದಿ ಹಾಡಿದ. ನಂತರ ಬಂಡ್ಲಹಳ್ಳಿ ವಿಜಯ್ ಕುಮಾರ್ ಅವರಿಂದ ಜಾನಪದಗೀತೆ, ಮಂಜುಳಾ ಗುರುರಾಜ್ ಅವರಿಂದ ಚಲನಚಿತ್ರಗೀತೆ ಕಲಿತಿದ್ದಾನೆ. ಸದ್ಯಕ್ಕೆ ನರಹರಿ ದೀಕ್ಷಿತ್ ಅವರಿಂದ ದೇವರನಾಮ, ಭಾವಗೀತೆ, ಸುಗಮ ಸಂಗೀತವನ್ನೂ ಮತ್ತು ಭೀಮರತಿ ಅವರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಸಿಸುತ್ತಿದ್ದಾನೆ. ದೇವರನಾಮ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ತಂದ ಕೀರ್ತಿವಂತ.

ತಾಯಿ ಪೇಪರ್ ಹಿಡಿದು ನಗರದಲ್ಲಿ ಇಂದು ಕಾರ್ಯಕ್ರಮ ನೋಡುವುದು, ಸಂಗೀತ ಸ್ಪರ್ಧೆಗಳಿದ್ದರೆ ಅಲ್ಲಿಗೆ ಕರೆದುಕೊಂಡು ಹೋಗಿ ಹಾಡಿಸುವುದನ್ನು ಮಾಡುತ್ತಿದ್ದರು. `ಹೀಗೆ ಸ್ಪರ್ಧೆಗಳಲ್ಲಿ ಮಕ್ಕಳು ಹಾಡುವುದರಿಂದ ಸ್ಪರ್ಧಾಭಾವ ಮೂಡುವ ಜತೆಗೆ ಹಾಡುವ ಆಸೆ ಇಮ್ಮಡಿಸುತ್ತದೆ. ಹಾಡುವಾಗ ಮಾಡುವ ತಪ್ಪಿನ ಅರಿವು ಮಕ್ಕಳಿಗೆ ಆಗುತ್ತದೆ~ ಎಂಬುದು ಸಮ್ರತ್ ತಾಯಿ ಸರಳಾ ಅವರ ಅನಿಸಿಕೆ. 

 ಕಸ್ತೂರಿ ಟೀವಿ ವಾಹಿನಿಯಲ್ಲಿ ಬರುತ್ತಿದ್ದ ಸಪ್ತಸ್ವರ `ಸೀಸನ್ 2~ನಲ್ಲಿ ಕ್ವಾರ್ಟರ್ ಫೈನಲ್ಸ್ ತಲುಪಿದ್ದ ಸಮ್ರತ್, `ಸರಿಗಮಪ ಲಿಟಲ್ ಚಾಂಪ್ಸ್~ (ಝೀ ವಾಹಿನಿ) ನಲ್ಲಿ ಹಾಡಿ ಎಲ್ಲರ ಮೆಚ್ಚುಗೆಗೂ ಪಾತ್ರನಾಗಿದ್ದ. ಇವನ ಹಾಡನ್ನು ಕೇಳಿದ ಹಿರಿಯರು `ಇವನು ಸಮ್ರತ್ ಅಲ್ಲ, ಮಹಾರಥ~ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅಜಯ್ ವಾರಿಯರ್, ಎಲ್.ಎನ್. ಶಾಸ್ತ್ರಿ ಮತ್ತಿತರರು ಇವನ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ.

`ಫೀವರ್ 104~, `ಇಸ್ಕಾನ್ ಹೆರಿಟೇಜ್ ಫೆಸ್ಟ್~, ಬಾಲಭವನ, ಗಾಯನ ಸಮಾಜ, ಗಣೇಶೋತ್ಸವಗಳಲ್ಲಿ ಹಾಡಿ ಜನರ ಮೆಚ್ಚುಗೆ ಪಡೆದಿದ್ದಾನೆ. ಒಮ್ಮೆ ಮಂತ್ರಮುಗ್ಧನಾಗಿ `ಕಾಣದಾ ಕಡಲಿಗೇ ಹಂಬಲಿಸಿದೇ ಮನ~ ಎಂದು ತನ್ನ ಪಾಡಿಗೆ ತಾನು ಹಾಡುವಾಗ ಅವನ ತಂಗಿ, `ಅಣ್ಣ ಸಿ.ಅಶ್ವಥ್ ಅವರ ಸಮಕ್ಕೆ ಹಾಡುತ್ತಾನಲ್ಲವೇ~ ಎಂದಿದ್ದಳಂತೆ.

ಚಾಮರಾಜ ಪೇಟೆಯ ಶಂಕರ ಮಠ, ಶಾರದಾ ಕಲಾನಿಕೇತನ, ಸುರ್ವೇ ಕಲ್ಚರಲ್ ಅಂಡ್ ಎಜುಕೇಷನ್ ಟ್ರಸ್ಟ್, ಪರಸ್ಪರ ನಾಗರಿಕ ಟ್ರಸ್ಟ್ ಹಾಗೂ ಇನ್ನೂ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಕ್ಕೆ ಈತ ಭಾಜನನಾಗಿದ್ದಾನೆ. ಡಾ.ಶಮಿತಾ ಮಲ್ನಾಡ್ ಅವರ ಸ್ವರ ಸನ್ನಿಧಿ ಟ್ರಸ್ಟ್ ಮುಖಾಂತರ ಬಿಡುಗಡೆಯಾದ `ಕಂದ ಹಾಡೊಂದ ನೀ ಹಾಡು~ ಧ್ವನಿ ಸುರಳಿಯಲ್ಲೂ ಈತ ಹಾಡಿದ್ದಾನೆ.

ಸಮ್ರತ್ ಸಂಗೀತದ ಜತೆಗೆ ಕರಾಟೆ, ಸ್ಕೌಟ್ಸ್‌ನಲ್ಲೂ ಮುಂದಿದ್ದಾನೆ. ಟೀಕ್-ವನ್-ಡೊ ಕರಾಟೆಯಲ್ಲಿ ಕೆಂಪು ಬೆಲ್ಟ್ ಗಳಿಸಿದ್ದು, ವಲಯ, ರಾಜ್ಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಿ ಪದಕಗಳನ್ನು ಗೆದ್ದಿದ್ದಾನೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT