ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡು ಮಾರುವ ಅಜ್ಜಿ!

Last Updated 12 ಜೂನ್ 2012, 19:30 IST
ಅಕ್ಷರ ಗಾತ್ರ

ಸುಕ್ಕುಗಟ್ಟಿದ ಚರ್ಮ. ಕೈಕಾಲುಗಳಲ್ಲಿ ಮೊದಲಿನಷ್ಟು ಕಸುವಿಲ್ಲ. ವಯಸ್ಸು 95ರ ಆಸುಪಾಸು. ಕೈಯಲ್ಲಿ ಊರುಗೋಲು ಹಿಡಿದುಕೊಂಡು ಮನೆಯಲ್ಲಿರಬೇಕಾದ ಆ ಹಿರಿ ಜೀವಕ್ಕೆ ನಾಲ್ಕೈದು ಗಂಟೆಯಾದರೂ ಪುಸ್ತಕಗಳನ್ನು ಮಾರಿದರಷ್ಟೆ ಅಂದು ಮಾಡಿದ ಊಟ ಜೀರ್ಣವಾಗುವುದು. ಮೈಗೆ ಆರಾಮಿಲ್ಲದಿದ್ದರೂ ಮನೆಯಲ್ಲಿರದೆ ಇವರು ಅಂಗಡಿಗೆ ಬಂದು ಪುಸ್ತಕ ಮಾರಾಟ ಮಾಡುತ್ತಾರೆ. ಐವತ್ತೈದು ವರ್ಷಗಳಿಂದ ಹಾಡಿನ ಪುಸ್ತಕಗಳನ್ನು ಮಾರುವ ಕಾಯಕದಲ್ಲಿ ನಿರತರಾಗಿರುವ ಮೊಯಿದ್ದೀನ್ ಬೀ ಅವರ ಜೀವನ ಯಶೋಗಾಥೆಯಿದು.

ಬದುಕಿನ ಬಂಡಿ ಸಾಗಿಸುವ ಉದ್ದೇಶದಿಂದ ಮೈಸೂರಿನ ಮಂಡಿ ಮೊಹಲ್ಲಾದಿಂದ ಬಂದ ಅಜೀಮುದ್ದೀನ್ ಮತ್ತು ಮೊಹಿದ್ದೀನ್ ಬೀ ದಂಪತಿ ಅಲಂಕಾರ್ ಚಿತ್ರಮಂದಿರದ ಎದುರು ಹಾಡಿನ ಪುಸ್ತಕಗಳ ಮಾರಾಟದ ಅಂಗಡಿ ಆರಂಭಿಸಿದರು. ಅಂದು ಪೈಸೆ ಲೆಕ್ಕದಲ್ಲಿ ಮಾರುತ್ತಿದ್ದ ಹಾಡಿನ ಪುಸ್ತಕಗಳಿಗೆ ಎಲ್ಲಿಲ್ಲದ ಬೇಡಿಕೆ. ಜನರು ಅಂಗಡಿ ಹುಡುಕಿಕೊಂಡು ಬಂದು ಪುಸ್ತಕ ಕೊಳ್ಳುವ ಕಾಲ ಅದಾಗಿತ್ತು.

ಹಿಂದಿ ಚಿತ್ರಗೀತೆಗಳಿಗೆ ಮುಗಿಬೀಳುತ್ತಿದ್ದ ಜನರು ರಾಜ್‌ಕಪೂರ್, ಅಮಿತಾಭ್ ಬಚ್ಚನ್ ಸೇರಿದಂತೆ ಪ್ರಸಿದ್ಧ ನಟರ ಚಿತ್ರಗೀತೆಗಳ ಪುಸ್ತಕಗಳನ್ನು ಕೊಳ್ಳುತ್ತಿದ್ದರು. ಹೀಗೆ ಬದುಕು ಸಾಗಿಸುತ್ತಿದ್ದ ಮೊಹಿದ್ದೀನ್ ಬೀ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿತ್ತು. ದಿಢೀರೆಂದು ಅಲಂಕಾರ್ ಚಿತ್ರ ಮಂದಿರವನ್ನು ಒಡೆದು ಹಾಕುವ ಸಂದರ್ಭ ಬಂದಾಗ ಅಜೀಮುದ್ದೀನ್ ಕಂಗಾಲಾದರು. ತಮ್ಮ ಕುಟುಂಬ ಬೀದಿಗೆ ಬರಬಹುದೆಂದು ಕೊರಗಿದರು.
 
ಆದರೆ, ಆತ್ಮಸ್ಥೈರ್ಯ ಕಳೆದುಕೊಳ್ಳದೆ ಅದೇ ಬೀದಿಯಲ್ಲಿ ಬದುಕು ಕಟ್ಟಿಕೊಂಡರು. ಸಂತೋಷ್ ಚಿತ್ರಮಂದಿರದ ಎದುರಿನ ಸ್ಕೈವಾಕ್ ಕೆಳಗಿನ ಸ್ವಲ್ಪ ಜಾಗದಲ್ಲೇ ಸಿನಿಮಾ ಹಾಡುಗಳ ಪುಸ್ತಕಗಳನ್ನು ಮಾರಾಟ ಮಾಡಲು ಮುಂದಾದರು.

ಇದಾದ ಎರಡು ವರ್ಷದ್ಲ್ಲಲೇ ಅಜೀಮುದ್ದೀನ್ ತೀರಿಕೊಂಡರು. ಒಂದೆಡೆ ಹೊಸ ಜಾಗ ಮತ್ತೊಂದೆಡೆ ಗಂಡನನ್ನು ಕಳೆದುಕೊಂಡ ದುಃಖದಲ್ಲಿ ಮೊಯಿದ್ದೀನ್ ಬೀ ಚಿಂತೆಗೀಡಾದರು. ಗಂಡ ಮಾರಾಟ ಮಾಡುತ್ತಿದ್ದ ಪುಸ್ತಕಗಳ ವ್ಯಾಪಾರವೇ ಅವರ ಕೈ ಹಿಡಿಯಿತು.

ಅವರು ಪ್ರತಿದಿನ ಬೆಳಿಗ್ಗೆ ಏಳು ಗಂಟೆಗೆ ಅಲ್ಯುಮಿನಿಯಂ ಡಬ್ಬದಲ್ಲಿ ಪುಸ್ತಕಗಳನ್ನು ತರುತ್ತಾರೆ. ಅವನ್ನೆಲ್ಲಾ ತೆಗೆದು ಫುಟ್‌ಪಾತ್ ಮೇಲೆ ಜೋಡಿಸಿಟ್ಟು ವ್ಯಾಪಾರ ಆರಂಭಿಸುತ್ತಾರೆ.

ಇದೇ ಪ್ರದೇಶದಲ್ಲಿರುವ ನರ್ತಕಿ, ಸಂತೋಷ್, ಸಪ್ನಾ ಚಿತ್ರಮಂದಿರಗಳಲ್ಲಿ ತಮ್ಮ ನೆಚ್ಚಿನ ನಟನ ಚಿತ್ರಗಳನ್ನು ನೋಡಿ ಬರುವ ಪ್ರೇಕ್ಷಕರು ಹಾಡಿನ ಪುಸ್ತಕ ಕೊಂಡುಕೊಳ್ಳುತ್ತಿದ್ದರು. ದಿನಕ್ಕೆ 300ರಿಂದ 400 ರೂಪಾಯಿ ವ್ಯಾಪಾರ ಮಾಡಿಕೊಂಡು ಅಂದಿನ ಜೀವನ ಸಾಗಿಸುವ ಮೂಲಕ ಮೊಯಿದ್ದೀನ್ ಬೀ ಕುಟುಂಬದ ಹೊಣೆ ಹೊತ್ತರು.

ಇಂಟರ್ನೆಟ್, ಮೊಬೈಲ್‌ಗಳಿಲ್ಲದ ಆ ದಿನಗಳಲ್ಲಿ ಸಿನಿಮಾ ಹಾಡುಗಳಿಗೆ ಎಲ್ಲಿಲ್ಲದ ಬೇಡಿಕೆ. `ಆಗ ಜನಸಂಖ್ಯೆ ಕಡಿಮೆ ಇತ್ತು. ಆದರೂ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಿತ್ತು.

ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಪ್ರಭಾಕರ್ ಅಭಿನಯದ ಚಿತ್ರಗಳು ತೆರೆಕಂಡ ದಿನವಂತೂ ಹಾಡಿನ ಪುಸ್ತಕಗಳಿಗೆ ಜನ ಮುಗಿಬೀಳುತ್ತಿದ್ದರು. ಕಡಿಮೆ ಎಂದರೆ ದಿನಕ್ಕೆ ನೂರು ಪುಸ್ತಕಗಳು ಮಾರಾಟವಾಗುತ್ತಿದ್ದವು. ಆದರೆ ಈಗ ಇಪ್ಪತ್ತು ಪುಸ್ತಕಗಳು ಖರ್ಚಾದರೆ ಅದೇ ಹೆಚ್ಚು~ ಎಂದು ಬೇಸರದಿಂದ ತಲೆಯಲ್ಲಾಡಿಸುತ್ತಾ ಮಾತು ಮುಂದುವರೆಸಿದರುಮೊಯಿದ್ದೀನ್ ಬೀ.

ವಯಸ್ಸಾದಂತೆ ಕಣ್ಣಿನ ದೃಷ್ಟಿ ಮಂದವಾಗುತ್ತಾ ಬಂತು, ಮೂರು ವರ್ಷಗಳಿಂದ ಕಿವಿಯೂ ಸ್ಪಷ್ಟವಾಗಿ ಕೇಳಿಸದ ಮೊಯಿದ್ದೀನ್ ಬೀ ಅವರಿಗೆ ಮಗ ದಾದೂ ಈಗ ಆಸರೆ. ಮುಂಜಾನೆ ಬಂದು ಪುಸ್ತಕಗಳನ್ನು ಜೋಡಿಸಿಟ್ಟು ವ್ಯಾಪಾರಕ್ಕೆ ಅಣಿಯಾಗುತ್ತಾರೆ.

ಇಂಟರ್ನೆಟ್ ಬಳಕೆ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಸಿನಿಮಾ ತೆರೆ ಕಾಣುವ ಮುಂಚೆಯೇ ನೆಚ್ಚಿನ ನಟನ ಸಿನಿಮಾ ಹಾಡುಗಳನ್ನು ಮೊಬೈಲ್ ಅಥವಾ ಕಂಪ್ಯೂಟರ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಂಡು ಹಾಡು ಕೇಳುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಈ ಹಾಡಿನ ಪುಸ್ತಕಗಳ ವ್ಯಾಪಾರಕ್ಕೂ ಮಂಕು ಕವಿದಂತಾಗಿದೆ. ಹಾಗಾಗಿ ಸಿನಿಮಾ ಹಾಡಿನ ಪುಸ್ತಕಗಳ ಜೊತೆಗೆ ಕಾರ್ಟೂನ್, ಅಡುಗೆ, ಸಾಮಾನ್ಯ ಜ್ಞಾನ, ಆರೋಗ್ಯ, ಆಧ್ಯಾತ್ಮಿಕ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಅವರು ಮಾರಾಟ ಮಾಡುತ್ತಾರೆ.

ಚಿತ್ರಗೀತೆಗಳ ಜೊತೆಗೆ ಜಾನಪದ, ಭಾವಗೀತೆ ಹಾಗೂ ಹಳೆ ಚಿತ್ರಗೀತೆಗಳ ಸರಣಿ ಮತ್ತು  ಪ್ರತ್ಯೇಕವಾಗಿ ನಟರ ಜನಪ್ರಿಯ ಚಿತ್ರಗಳ ಹಾಡುಗಳ ಪುಸ್ತಕಗಳನ್ನು ಮಾರಾಟ ಮಾಡುತ್ತಾರೆ. ಬಳೇಪೇಟೆ, ಕೆ.ಆರ್. ಮಾರುಕಟ್ಟೆಯಿಂದ ಇವರು ಪುಸ್ತಕಗಳನ್ನು ತರುತ್ತಾರೆ. `ಕಾರ್ಟೂನ್, ಅಡುಗೆ, ಆರೋಗ್ಯ ವಿಷಯದ ಪುಸ್ತಕಗಳ ಸಗಟು ಬೆಲೆ ಹೆಚ್ಚಾಗಿದೆ. ಆದ್ದರಿಂದ ಲಾಭವೂ ಕಡಿಮೆ ಸಿಗುತ್ತದೆ. ಜೀವನ ನಿರ್ವಹಣೆಯೂ ಕಷ್ಟ~ ಎಂದು ದಾದೂ ಹೇಳುತ್ತಾರೆ.

ಸುಜಾತಾ ಚಿತ್ರಮಂದಿರದ ಬಳಿ ಮನೆ ಇರುವುದರಿಂದ ವ್ಯಾಪಾರದ ಪುಸ್ತಕಗಳನ್ನು ಕೊಂಡೊಯ್ಯುವುದು ಇವರಿಗೆ ಕಷ್ಟ. “ವ್ಯಾಪಾರ ಮುಗಿದ ಮೇಲೆ ಹಿಮಾಲಯ ಕಾಂಪ್ಲೆಕ್ಸ್‌ನ ಕೊಠಡಿಯೊಂದರಲ್ಲಿ ಡಬ್ಬವನ್ನು ಇಟ್ಟು ಮನೆಗೆ ಹೋಗುತ್ತೇವೆ. ಪುನಃ ಬೆಳಿಗ್ಗೆ ಬಂದು `ಬದುಕಿನ ಡಬ್ಬ~ವನ್ನು ಬಿಚ್ಚಿ ವ್ಯಾಪಾರ ಪ್ರಾರಂಭಿಸುತ್ತೇವೆ” ಎಂದು ದಿನಚರಿ ಬಿಚ್ಚಿಡುತ್ತಾರೆ ದಾದೂ.
 
ಮಳೆ ಬಂದರೆ ಪುಸ್ತಕಗಳು ಹಾಳಾಗದಂತೆ ಪ್ಲಾಸ್ಟಿಕ್ ಹೊದಿಕೆಯನ್ನು ಮುಚ್ಚಲಾಗುತ್ತದೆ. ಹೆಚ್ಚಿನ ಗ್ರಾಹಕರು ಬೇರೆ ಊರಿನಿಂದ ಬಂದವರೇ. ಪುನೀತ್, ದರ್ಶನ್, ಸುದೀಪ್ ಚಿತ್ರಗಳು ಬಿಡುಗಡೆಯಾದ ದಿನ ಪುಸ್ತಕಗಳು ಖರ್ಚಾಗುತ್ತವೆ. ಉಳಿದಂತೆ ಬೆರಳೆಣಿಕೆಯಷ್ಟು ಪುಸ್ತಕಗಳು ಮಾರಾಟವಾಗುತ್ತವೆ. ಕೆಲವರು ಹಾಡಿನ ಪುಸ್ತಕದ ಬದಲಿಗೆ ಸೆಕ್ಸ್ ಪುಸ್ತಕಗಳನ್ನು ಕೇಳುತ್ತಾರೆ. ಅಂಥ ಪುಸ್ತಕಗಳಿಗೆ ನಮ್ಮಲ್ಲಿ ಜಾಗವಿಲ್ಲ ಎಂದು ಖಡಕ್ಕಾಗಿ ಪ್ರತ್ಯುತ್ತರ ನೀಡುತ್ತಾರೆ ಅವರು.

ಮೊಯಿದ್ದೀನ್ ಬೀ ಅವರಿಗೆ ಎಂಟು ಮಕ್ಕಳು. ಅವರಲ್ಲಿ ದಾದೂ ಮಾತ್ರ ಅಮ್ಮನ ಜೊತೆಗಿದ್ದಾರೆ. ಮನೆಯಲ್ಲಿ ವಿಶ್ರಾಂತಿ ಬಯಸುವ ಬಹುತೇಕ ವೃದ್ಧರ ನಡುವೆ, ಯುವಕರನ್ನೂ ನಾಚಿಸುವಂತೆ ವ್ಯಾಪಾರ ಮಾಡುವ ಈ ಅಜ್ಜಿಗೆ ಹ್ಯಾಟ್ಸಾಫ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT