ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಹಾಡು ಹಕ್ಕಿ'ಗೆ ಮಾತಿನ ಬೆಳಕು

ಮಾತ್‌ಮಾತಲ್ಲಿ
Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನಮ್ಮ ಕುಟುಂಬಕ್ಕೆ ಸಾಹಿತ್ಯ ಹಾಗೂ ಸಂಗೀತದ ಹಿನ್ನೆಲೆ ಇದೆ. ಆದ್ದರಿಂದ ಮನೆಯಲ್ಲಿ ಎಲ್ಲರಿಗೂ ಸಂಗೀತದಲ್ಲಿಯೂ ಅಭಿರುಚಿಯಿತ್ತು. ಅಪ್ಪ, ಅಮ್ಮ, ಅಜ್ಜಿ ಎಲ್ಲರೂ ಹಾಡುವವರೇ. ಆದ್ದರಿಂದ ಅಪ್ಪ- ಅಮ್ಮ ಸಂಗೀತ ಕಾರ್ಯಕ್ರಮಗಳಿಗೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ  ಗಾಯಕರು ಅಷ್ಟು ತನ್ಮಯತೆಯಿಂದ ಹಾಡುವುದನ್ನು, ಅವರ ಹಾಡಿಗೆ ಶ್ರೋತೃಗಳು ಚಪ್ಪಾಳೆ ತಟ್ಟುವುದನ್ನು ಕಂಡಾಗಲೆಲ್ಲ ಮನಸ್ಸಿಗೆ ಸಂತೋಷವಾಗುತ್ತಿತ್ತು.

ನಾನೂ ಅವರಂತೆ ಹಾಡಿ, ಶ್ರೋತೃಗಳ ಮೆಚ್ಚುಗೆಗೆ ಪಾತ್ರವಾಗಬೇಕೆಂಬ ಆಸೆಯಾಗುತ್ತಿತ್ತು. ಹಾಗಾಗಿ ನಾನೂ ಸಂಗೀತವನ್ನು ಕಲಿಯುತ್ತೇನೆಂದು ಅಪ್ಪನಿಗೆ ಹೇಳಿದೆ. ಖುಷಿಗೊಂಡ ಅವರು ನನ್ನ ಬೇಡಿಕೆಗೆ ಸಮ್ಮತಿಸಿ ಸಂಗೀತ ಕಲಿಯಲು ಕಳುಹಿಸಿದರು. ಹಾಗಾಗಿ ಐದನೇ ತರಗತಿಯಲ್ಲಿದ್ದಾಗಿನಿಂದ ಸಂಗೀತ ಕಲಿಯಲಾರಂಭಿಸಿದೆ. ಕಾರ್ಯಕ್ರಮಗಳಿಗೆ ಹೋದಾಗ ಅಲ್ಲಿನ ನಿರೂಪಕರು ಆಡುತ್ತಿದ್ದ ಮಾತುಗಳು ನನ್ನನ್ನು ಬಹಳವಾಗಿ ಸೆಳೆಯುತ್ತಿದ್ದವು. ಅವರ ಹಾವಭಾವಗಳನ್ನು, ತಿದ್ದಿ ತೀಡಿ ಮಾತನಾಡುವ ರೀತಿಯನ್ನು ಗಮನಿಸುತ್ತಿದ್ದ ನನಗೆ, ನಾನೂ ಅವರಂತೆ ಕಾರ್ಯಕ್ರಮ ನಿರೂಪಣೆ ಮಾಡಿದರೆ ಚೆನ್ನಾಗಿರುತ್ತದಲ್ಲ ಎಂದುಕೊಳ್ಳುತ್ತಿದ್ದೆ.

ಕನ್ನಡವನ್ನು ಸ್ಪಷ್ಟವಾಗಿ, ಸರಳವಾಗಿ ಹಾಗೂ ನಿರರ್ಗಳವಾಗಿ ಓದುತ್ತಿದ್ದ ಹಿನ್ನೆಲೆಯಲ್ಲಿ ಅವಕಾಶಗಳನ್ನು ಹುಡುಕಿದೆ. ನನ್ನ ಮಾತಿನಷ್ಟೇ ವೇಗದಲ್ಲಿ ಕಾರ್ಯಕ್ರಮಗಳೂ ಸಿಗಲಾರಂಭಿಸಿದವು. ಮನೆಯಲ್ಲಿದ್ದ ಅಚ್ಚಗನ್ನಡದ ವಾತಾವರಣ ನನ್ನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿತು. 

ನನ್ನ ಮೊದಲ ಸಂಗೀತದ ಗುರುಗಳಾದ ಗೋವಿಂದ ರೊಟ್ಟಿಯವರ ಬಳಿ ಸಂಗೀತ ಕಲಿಯುತ್ತಿದ್ದಾಗ ಆ ಶಾಲೆಯ ವಾರ್ಷಿಕೋತ್ಸವದಲ್ಲಿ ಹಾಡಲು ಮೊದಲನೆ ಬಾರಿ ವೇದಿಕೆ ಏರಿದೆ. ಅಂದು ನನಗೆ ಕೊಂಚವೂ ಭಯವಾಗಲಿಲ್ಲ. ನಂತರ ನನ್ನ ತಮ್ಮ ಗಿರಿ ತಬಲಾ ಕಲಿಯುತ್ತಿದ್ದ ಶಾಲೆಯ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಗುರುಗಳ ಬಗ್ಗೆ ಟಿಪ್ಪಣಿಯೊಂದನ್ನು ಓದುವ ಕೆಲಸವನ್ನು ಕೊಟ್ಟಿದ್ದರು. ಆಗಲೂ ನಿರ್ಭೀತಿಯಿಂದ ಗುರುಗಳ ಪರಿಚಯವನ್ನು ಒಪ್ಪವಾಗಿ ಮಾಡಿಕೊಟ್ಟಿದ್ದೆ. ಅದನ್ನು ಕೇಳಿದ ಹಲವರು ತಮ್ಮ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡಲು ಆಹ್ವಾನವಿತ್ತರು. ಹಾಗಾಗಿ ನಾನು ಒಂಬತ್ತನೇ ತರಗತಿಯಲ್ಲಿರುವಾಗಲೇ ಸಂಗೀತದೊಂದಿಗೆ ನಿರೂಪಣೆಯ ಕೆಲಸವೂ ಆರಂಭವಾಯಿತು.

ನಿರೂಪಕರಿಗೆ ಅವರ ಧ್ವನಿಯೇ ಬಂಡವಾಳ. ಅದು ಆಕರ್ಷಕವಾಗಿದ್ದಷ್ಟೂ ಉತ್ತಮ. ನಿರೂಪಣೆ ಮಾಡಲಿರುವ ಭಾಷೆಯ ಮೇಲೆ ಹಿಡಿತವಿರಬೇಕು. ಉತ್ತಮ ಶಬ್ದ ಭಂಡಾರವಿರಬೇಕು. ಎಲ್ಲರನ್ನೂ ಮೆಚ್ಚಿಸುವಂಥ ಮಾತುಗಾರಿಕೆ ಇರಬೇಕು. ಸಂದರ್ಭಕ್ಕನುಸಾರವಾಗಿ ವಾಕ್ಯಗಳನ್ನು ರಚಿಸುವ ಚಾಕಚಕ್ಯತೆ ಇರಬೇಕು. ಕೆಲವೊಮ್ಮೆ ವೇದಿಕೆಯ ಮೇಲೆಯೇ ಕಾರ್ಯಕ್ರಮಗಳಲ್ಲಿ ವ್ಯತ್ಯಾಸವಾಗುತ್ತವೆ. ಆಗ ತಾಳ್ಮೆಯಿಂದ ಕಾರ್ಯಕ್ರಮವನ್ನು ಮುನ್ನಡೆಸುವ ಜವಾಬ್ದಾರಿ ನಿರೂಪಕರದ್ದಾಗಿರುತ್ತದೆ. ಅಪರ್ಣಾ ಹಾಗೂ ಕಲಾದೇಗುಲ ಶ್ರಿನಿವಾಸ ಅವರ ನಿರೂಪಣೆಯೆಂದರೆ ನನಗೆ ಅಚ್ಚುಮೆಚ್ಚು. ಅದರಲ್ಲೂ ಅಪರ್ಣಾ ಅವರ ಮಾತಿನ ಶೈಲಿಯಿಂದ ಬಹಳ ವಿಷಯಗಳನ್ನು ಕಲಿತಿದ್ದೇನೆ.

`ಸಂಗೀತ ಶ್ರಾವಣ' ನನ್ನ ಸ್ಮೃತಿಪಟಲದಲ್ಲಿ ಅಚ್ಚಳಿಯದೇ ಉಳಿಯುವಂಥ ಕಾರ್ಯಕ್ರಮ. ಆ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಯಶವಂತ ಸರ್‌ದೇಶಪಾಂಡೆ, ಎಸ್.ಐ. ಭಾವೀಕಟ್ಟಿ ಹಾಗೂ ರಾಧಾಕೃಷ್ಣ ಆಗಮಿಸಿದ್ದರು. ನನ್ನ ನಿರೂಪಣೆಯನ್ನು ಮೆಚ್ಚಿದ ಯಶವಂತ ಸರ್‌ದೇಶಪಾಂಡೆಯವರು `ಆ ಹುಡುಗಿಯೇ ಅಷ್ಟು ಚಂದ ಮಾತಾಡ್ತಾಳೆ. ನಮ್ಮನ್ಯಾಕೆ ಕರಿಸಿದಿ'್ರ ಎಂದರೆ, ಭಾವೀಕಟ್ಟಿಯವರು `ಸಂಗೀತ ಶ್ರಾವಣ ಮಾತ್ರವಲ್ಲ, ಸಾಹಿತ್ಯ ಶ್ರಾವಣವೂ ಹೌದು' ಎಂದು ಮೆಚ್ಚಿ ಮಾತನಾಡಿದ್ದು ನನ್ನ ಪಾಲಿಗೆ ಅವಿಸ್ಮರಣೀಯ ಕ್ಷಣ.

ನಾನು ಹಾಡಿದ ಕಾರ್ಯಕ್ರಮಗಳಿಗೂ ಶ್ರೋತೃಗಳು ಅದೇ ರೀತಿಯ ಪ್ರೀತಿ ತೋರಿಸಿದ್ದಾರೆ. ನನ್ನ ಕಲೆಗೆ ಕುಟುಂಬದವರ ಬೆಂಬಲ ಇದೆ. ನಾನು ಹತ್ತಿಯಿಂದ ಸಿದ್ಧಪಡಿಸಿದ ಬತ್ತಿ ಅಷ್ಟೇ. ಅದಕ್ಕೆ ಎಣ್ಣೆ ಎರೆದು, ಅಗ್ನಿ ತಾಕಿಸಿ, ನನ್ನನ್ನು ದೀಪವಾಗಿಸಿ ನನ್ನ ಮೂಲಕ ಬೆಳಕನ್ನು ಹೊಮ್ಮಿಸಿದವರು ನನ್ನ ಮನೆಯವರು ಹಾಗೂ ನನಗೆ ಸಂಗೀತವನ್ನು ಕಲಿಸಿದ ಗುರುಗಳು.

ಪ್ರಸ್ತುತ ಬಿ.ಎಂ.ಎಸ್. ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿಯಾಗಿರುವ ನನಗೆ, `ಓದುವುದೇ ಬಹಳಷ್ಟಿರುತ್ತದೆ. ಅಂಥಾದರಲ್ಲಿ ಸಂಗೀತ ಹಾಗೂ ನಿರೂಪಣೆಯನ್ನು ಹೇಗೆ ನಿಭಾಯಿಸುತ್ತೀಯ' ಎಂದು ಕೆಲವರು ಕೇಳಿದ್ದಿದೆ. ಆದರೆ ನನಗೆಂದೂ ಕಲೆಯಾಗಲೀ ಶಿಕ್ಷಣವಾಗಲೀ ಭಾರವೆನಿಸಿಲ್ಲ. ಸಮಯವನ್ನು ಹಾಳು ಮಾಡುವ ಜಾಯಮಾನ ನನ್ನದಲ್ಲ. ಓದುವುದನ್ನು ಬಿಟ್ಟರೆ ಸಂಗೀತಾಭ್ಯಾಸದಲ್ಲಿ ತೊಡಗಿಕೊಂಡಿರುತ್ತೇನೆ.

ಕಾಲೇಜಿನಿಂದ ಬಂದಮೇಲೆ ಸಂಗೀತದ ತಾಲೀಮಿಗೆ ಒಡ್ಡಿಕೊಳ್ಳುತ್ತೇನೆ. ಕಾರ್ಯಕ್ರಮವಿದ್ದಾಗ ಮಾನಸಿಕವಾಗಿ ನನ್ನನ್ನು ನಾನು ಸಿದ್ಧಗೊಳಿಸಿಕೊಳ್ಳುವ ಅವಶ್ಯಕತೆ ತೋರುವುದೇ ಇಲ್ಲ. ನನ್ನ ಮನಸ್ಸು ಸದಾ ಸಿದ್ಧವಾಗಿಯೇ ಇರುತ್ತದೆ. ಈಗ ಎಂಜಿನಿಯರಿಂಗ್ ಮೊದಲನೇ ಸೆಮಿಸ್ಟರ್‌ನಲ್ಲಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದೇನೆ. ಸ್ನಾತಕೋತ್ತರ ಪದವಿಯ ನಂತರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುವ ಆಸೆ ಇದೆ. ಉಳಿದರ್ಧ ದಿನವನ್ನು ಸಂಗೀತಕ್ಕೆ ಹಾಗೂ ನಿರೂಪಣೆಯ ಕೆಲಸಗಳಿಗೆ ಮೀಸಲಿಡುತ್ತೇನೆ. ಈಗ `ಕಟ್ಟೆ ಬಳಗ'ದಲ್ಲಿ ಎಲ್ಲಾ ವಯೋಮಾನದವರಿಗೆ ಸುಗಮ ಸಂಗೀತವನ್ನು ಹೇಳಿಕೊಡುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT