ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾದಿ ತಪ್ಪುತ್ತಿರುವ ವಿದ್ಯಾರ್ಥಿ ಚಳವಳಿ

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಗುವಾಹಟಿ: ದೇಶದಲ್ಲಿ ಎಲ್ಲಿಯೂ ಕಾಣದ ವಿದ್ಯಾರ್ಥಿ ಚಳವಳಿ ಅಸ್ಸಾಂ ರಾಜ್ಯದಲ್ಲಿ ಮಾತ್ರ ಕಳೆದ ಮೂರು ದಶಕಗಳಿಂದ ಸಕ್ರಿಯವಾಗಿದೆ. ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘ (ಆಸು) 1979ರಲ್ಲಿ ಪ್ರಾರಂಭಿಸಿದ್ದ ಚಳವಳಿ ಇಡೀ ದೇಶದ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಸ್ಪೂರ್ತಿಯಾಗಿತ್ತು. 

ಆಗಿನ್ನೂ 27ರ ಹರಯದ ಪ್ರಪುಲ್‌ಕುಮಾರ್ ಮಹಂತ ದೇಶದ ವಿದ್ಯಾರ್ಥಿ ನಾಯಕರ ಪಾಲಿನ `ಹೀರೋ~ ಆಗಿದ್ದರು. ಸಾಕಷ್ಟು ಏಳು-ಬೀಳುಗಳನ್ನು ಕಂಡ `ಆಸು~ ಬದಲಾದ ರಾಜಕೀಯ ಪರಿಸ್ಥಿತಿ  ಮತ್ತು ಒಂದಷ್ಟು ಸ್ವಯಂಕೃತ ಅಪರಾಧಗಳಿಂದಾಗಿ ಸೊರಗಿ ಹೋಗಿದೆ. ವಿಶೇಷವೆಂದರೆ  `ಆಸು~ವಿನ ವೈಫಲ್ಯದಿಂದ ಈ ರಾಜ್ಯದ ವಿದ್ಯಾರ್ಥಿಗಳು ಭರವಸೆಯನ್ನು ಕಳೆದುಕೊಂಡಿಲ್ಲ. ಈಗ ಬೋಡೊ, ಮುಸ್ಲಿಂ ಮತ್ತು ಇತರ ಬುಡಕಟ್ಟು ಸಮುದಾಯಗಳ ಹೋರಾಟದ ಮುಂಚೂಣಿಯಲ್ಲಿಯೂ ಇರುವವರು ವಿದ್ಯಾರ್ಥಿಗಳು,  ಯಾವ ರಾಜಕೀಯ ಪಕ್ಷವೂ ಅಲ್ಲ.

ಇತ್ತೀಚೆಗೆ ನಡೆದ ಗಲಭೆಯಲ್ಲಿ ಪರಸ್ಪರ ಎದುರು ಬಣಗಳಲ್ಲಿ ಇದ್ದದ್ದು ಅಖಿಲ ಅಸ್ಸಾಂ ಬೋಡೊ ವಿದ್ಯಾರ್ಥಿ ಸಂಘ ಮತ್ತು ಅಖಿಲ ಅಸ್ಸಾಂ ಮುಸ್ಲಿಮ್ ವಿದ್ಯಾರ್ಥಿ ಸಂಘಗಳು. ಇತರ ಬುಡಕಟ್ಟು ಜನಾಂಗಗಳು ಸ್ವಾಯತ್ತಮಂಡಳಿ ಇಲ್ಲವೇ ಪ್ರತ್ಯೇಕ ರಾಜ್ಯಕ್ಕಾಗಿ ನಡೆಸುತ್ತಿರುವ ಹೋರಾಟದ ನಾಯಕತ್ವ ವಹಿಸಿರುವವರು ವಿದ್ಯಾರ್ಥಿಗಳು.

ಬಹುತೇಕ ರಾಜಕೀಯ ಪಕ್ಷಗಳು ವಿದ್ಯಾರ್ಥಿ ಘಟಕವನ್ನು ಹೊಂದಿದ್ದರೂ ಅವುಗಳ ಪಾತ್ರ ಸೀಮಿತವಾದುದು. ನೀತಿ ರೂಪಿಸುವ ಇಲ್ಲವೆ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಈ ವಿದ್ಯಾರ್ಥಿ ಘಟಕಗಳಿಗೆ ಪಾತ್ರವೇ ಇಲ್ಲ. ಅಸ್ಸಾಂನಲ್ಲಿ ಚಳವಳಿಗಳ ನಾಯಕತ್ವ ವಹಿಸಿ ನಡೆಸುತ್ತಿರುವವರೇ ವಿದ್ಯಾರ್ಥಿಗಳು ಎನ್ನುವುದು ವಿಶೇಷ.

ಯಶಸ್ಸಿನ  ಉದಾಹರಣೆ: `ಆಸು~ವನ್ನು ಹೊರತುಪಡಿಸಿದರೆ ಬೇರೆ ರಾಜ್ಯದ ಯಾವ ವಿದ್ಯಾರ್ಥಿ ಚಳವಳಿಗಳಿಗೂ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ರಾಜಕೀಯ ಅಧಿಕಾರ ಪಡೆಯುವ ತಾರ್ಕಿಕ ಅಂತ್ಯ ಕಾಣುವುದು ಸಾಧ್ಯವಾಗಿಲ್ಲ. ವಿದ್ಯಾರ್ಥಿ ಚಳವಳಿಗಳ ಯಶಸ್ಸಿನ ಇತ್ತೀಚಿನ ಉದಾಹರಣೆ ಮತ್ತೆ ಸಿಗುವುದು ಅಸ್ಸಾಂ ರಾಜ್ಯದಲ್ಲಿಯೇ.  ಬೋಡೊ ಚಳುವಳಿಯಲ್ಲಿ ಹಲವಾರು ಸಂಘಟನೆಗಳು ಪಾಲ್ಗೊಂಡಿದ್ದರೂ ನಿರ್ಣಾಯಕ ಪಾತ್ರ ವಹಿಸಿರುವುದು ವಿದ್ಯಾರ್ಥಿಗಳು.

ಪ್ರಾಂತೀಯ ಸ್ವಾಯತ್ತ ಮಂಡಳಿಯಲ್ಲಿ `ಬೋಡೊಲ್ಯಾಂಡ್ ಜನತಾ ಸುಧಾರಣಾ ರಂಗ~ ಅಧಿಕಾರದಲ್ಲಿದ್ದರೂ ಅದರ ಮೇಲೆ ವಿದ್ಯಾರ್ಥಿ ಘಟಕದ ನಿಯಂತ್ರಣ ಸಡಿಲುಗೊಂಡಿಲ್ಲ. ಬಹುಶ: ಇಂತಹ ಯಶಸ್ಸಿನ ಕತೆಗಳೇ ಉಳಿದ ಜನಾಂಗಗಳ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಿರಬಹುದೇನೋ?

ಸೈದ್ಧಾಂತಿಕ ಪ್ರೇರಣೆ ಇಲ್ಲ: ಆದರೆ ಯಶಸ್ಸಿನ ಸ್ಪೂರ್ತಿಯಷ್ಟೇ ಅಸ್ಸಾಂ ವಿದ್ಯಾರ್ಥಿಗಳು ಸಾರ್ವಜನಿಕ ಹೋರಾಟದಲ್ಲಿ ಇಷ್ಟೊಂದು ಸಕ್ರಿಯವಾಗಿರಲು ಕಾರಣ ಇರಲಾರದು. ವಿಚಿತ್ರವೆಂದರೆ ಇಲ್ಲಿನ ಯಾವ ವಿದ್ಯಾರ್ಥಿ ಚಳವಳಿ ಕೂಡಾ ಒಂದು ನಿರ್ದಿಷ್ಟ ರಾಜಕೀಯ ಸಿದ್ಧಾಂತದಿಂದ ಪ್ರೇರಣೆ ಪಡೆದು ನಡೆದುದಲ್ಲ. ಸೈದ್ಧಾಂತಿಕವಾದ ಕಾರಣದ ಹೊರತಾಗಿ ಬಹುಪಾಲು ವಿದ್ಯಾರ್ಥಿಗಳು ಮತ್ತು ಯುವಕರು ಬಂಡೇಳುವುದು ವೈಯಕ್ತಿಕ ಜೀವನದಲ್ಲಿನ ಹತಾಶೆ ಮತ್ತು ಭವಿಷ್ಯದ ಬಗೆಗಿನ ನಿರಾಶೆಯಿಂದಾಗಿ. ಅಸ್ಸಾಂನ ವಿದ್ಯಾರ್ಥಿಗಳ ವಿಷಯದಲ್ಲಿಯೂ ಈ ಸತ್ಯವನ್ನು ನಿರಾಕರಿಸುವುದು ಸಾಧ್ಯ ಇಲ್ಲ.

ಈ ಹತಾಶೆ ಮತ್ತು ನಿರಾಶೆಗೆ ಮುಖ್ಯ ಕಾರಣ ರಾಜ್ಯದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗದ ಭೂತ. ವಿದ್ಯಾರ್ಥಿಗಳನ್ನು ಹೋರಾಟದ ಹಾದಿಗೆ ನೂಕುತ್ತಿರುವುದು ಮಾತ್ರ ಅಲ್ಲ ದೆಹಲಿ, ಬೆಂಗಳೂರು, ಮುಂಬೈ, ಹೈದರಾಬಾದ್ ಕಡೆ ಓಡಿಸುತ್ತಿರುವುದು ಕೂಡ ಈ ನಿರುದ್ಯೋಗ. 2000-01ರ ಅವಧಿಯಲ್ಲಿ ದೇಶದಲ್ಲಿನ ನಿರುದ್ಯೋಗದ ಪ್ರಮಾಣ ಶೇಕಡಾ 2.3ರಷ್ಟು ಹೆಚ್ಚಾಗಿದ್ದರೆ ಅಸ್ಸಾಂನಲ್ಲಿ ಈ ಪ್ರಮಾಣ ಸರಿಯಾಗಿ ದುಪ್ಪಟ್ಟಾಗಿದೆ. (ಶೇ 4.6). ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ 2001ರ ಅಂತ್ಯಕ್ಕೆ ಈ ರಾಜ್ಯದಲ್ಲಿದ್ದ ನಿರುದ್ಯೋಗಿಗಳ ಒಟ್ಟು ಸಂಖ್ಯೆ 13,53,481. ಇವರಲ್ಲಿ ಮೂರುವರೆ ಲಕ್ಷ ವಿದ್ಯಾವಂತ ನಿರುದ್ಯೋಗಿಗಳು.

ಸಂಪನ್ಮೂಲಗಳ ಸಮೃದ್ಧ ರಾಜ್ಯ: ಅಸ್ಸಾಂ ಪ್ರಾಕೃತಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ರಾಜ್ಯ. ದೇಶದ ಜನ ಬಳಸುತ್ತಿರುವ ಚಹಾದ ಪುಡಿಯ ಅರ್ಧದಷ್ಟು ಪೂರೈಕೆಯಾಗುತ್ತಿರುವುದು ಇಲ್ಲಿನ ಚಹಾ ತೋಟಗಳಿಂದ. ಇದರ ಜತೆಗೆ ಕಲ್ಲಿದ್ದಲು ಮತ್ತು ತೈಲದ ನಿಕ್ಷೇಪಗಳು. 

ಒಂದು ಕಾಲದಲ್ಲಿ ಇಲ್ಲಿ ಹಲವಾರು ಕಾಗದ ಮತ್ತು ಸೆಣಬು ಕಾರ್ಖಾನೆಗಳು ಕೂಡಾ ಇಲ್ಲಿದ್ದವು. ಚಹಾತೋಟಗಳನ್ನು ಹೊರತುಪಡಿಸಿದರೆ ಬೇರೆ ಯಾವ ಕ್ಷೇತ್ರವೂ ಇಲ್ಲಿ ಕಳೆದ ಮೂರು ದಶಕಗಳಿಂದ ಅಭಿವೃದ್ಧಿ ಕಂಡಿಲ್ಲ. ಇದ್ದ ಉದ್ಯಮಗಳು ಮುಚ್ಚುತ್ತಿವೆ. ಇಲ್ಲಿನ ಪ್ರಾಕೃತಿಕ ಸಂಪನ್ಮೂಲವನ್ನು ಬಳಸಿಕೊಳ್ಳುವ ಯಾವ ಹೊಸ ಉದ್ಯಮವೂ ಇತ್ತೀಚೆಗೆ ಸ್ಥಾಪನೆಗೊಂಡಿಲ್ಲ.

ಶಾಂತಿ ಮತ್ತು ಸುವ್ಯವಸ್ಥೆ ಸಮಸ್ಯೆ:  ಈ ಆರ್ಥಿಕ ಹಿನ್ನಡೆಗೆ ಮುಖ್ಯ ಕಾರಣ ಕಳೆದ ಮೂರು ದಶಕಗಳಿಂದ ಎದುರಿಸುತ್ತಾ ಬಂದ ಶಾಂತಿ ಮತ್ತು ಸುವ್ಯವಸ್ಥೆಯ ಸಮಸ್ಯೆ. `ಆಸು~ ನೇರವಾಗಿ ಹಿಂಸೆಗೆ ಕರೆ ನೀಡದಿದ್ದರೂ ಆ ಚಳವಳಿಯ ಕಾಲದಲ್ಲಿ ನೂರಾರು ಹತ್ಯೆಗಳು ನಡೆದವು. ಉಲ್ಫಾ  ಉಗ್ರರ ಅಟ್ಟಹಾಸದ ಕಾಲದಲ್ಲಿ `ರಕ್ಷಣಾ ಶುಲ್ಕ~ ನೀಡದಿದ್ದರೆ  ಚಹತೋಟದ ಮಾಲೀಕರು ಮಾತ್ರವಲ್ಲ ಯಾವ ಉದ್ಯಮಿ-ವ್ಯಾಪಾರಿಯೂ ಬದುಕುಳಿಯುವುದು ಸಾಧ್ಯ ಇರಲಿಲ್ಲ. ಹಿಂದಿನ ಪ್ರಮಾಣದಲ್ಲಿ ಇಲ್ಲದೆ ಇರಬಹುದು, ಆದರೆ ಈಗ ಸಕ್ರಿಯವಾಗಿರುವ ವಿದ್ಯಾರ್ಥಿ ಸಂಘಟನೆಗಳ ಬಗ್ಗೆಯೂ ಕೊಲೆ-ಸುಲಿಗೆಗಳ ಆರೋಪಗಳಿವೆ. ಮುಷ್ಕರ, ಪ್ರತಿಭಟನೆ ಮತ್ತು ಆಗಾಗ ನಡೆಯುವ ಭಯೋತ್ಪಾದಕ ಚಟುವಟಿಕೆಗಳಿಂದಾಗಿ ಇಲ್ಲಿನ ಆರ್ಥಿಕ ಚಟುವಟಿಕೆ ಸಂಪೂರ್ಣವಾಗಿ ಸ್ಥಬ್ದಗೊಂಡಿದೆ. ರಾಜ್ಯದ ಶೇಕಡಾ 70ರಷ್ಟು ಜನ ಈಗಲೂ ಕೃಷಿಯನ್ನು ಅವಲಂಬಿಸಿದ್ದಾರೆ. ಆದರೆ ಕೃಷಿ ಕ್ಷೇತ್ರದ ಅಭಿವೃದ್ದಿ ದರ ಶೇಕಡಾ 1.3ರಿಂದ ಶೇಕಡಾ 0.39ಕ್ಕೆ ಕುಸಿದಿದೆ. ಅಲ್ಲಿಯೂ ಹೊಸ ಉದ್ಯೋಗಗಳು ಸೃಷ್ಟಿ ಆಗುತ್ತಿಲ್ಲ.  ರಾಜ್ಯದ ರಾಜಧಾನಿಯಾದ ಗುವಾಹತಿಯೇ ದೊಡ್ಡ ಕೊಳೆಗೇರಿಯಂತಿದೆ. ಮಳೆ ಬಂದರೆ ಊರು ತುಂಬಾ ಗಲೀಜು.

ವಿಮಾನನಿಲ್ದಾಣದಿಂದ 20 ಕಿ.ಮೀ. ದೂರದ ನಗರಕೇಂದ್ರಕ್ಕೆ ಟ್ಯಾಕ್ಸಿಯಲ್ಲಿ ಬರಲು ನನಗೆ ಎರಡುವರೆ ಗಂಟೆ ಬೇಕಾಯಿತು. ಸಾರಿಗೆ ಬಸ್‌ಗಳು ಕಸ ಸಾಗಿಸುವ ವಾಹನಗಳಂತಿವೆ. ರಾಜಧಾನಿಯ ಪರಿಸ್ಥಿತಿಯೇ ಹೀಗಿರುವಾಗ ಉಳಿದ ಜಿಲ್ಲೆಗಳ ಪರಿಸ್ಥಿತಿ ಹೇಗಿರಬಹುದೆಂಬುದನ್ನು ಊಹಿಸಿಕೊಳ್ಳಬಹುದು. ಕೊಕರ್‌ಝಾರ್‌ನಂತಹ ಪಟ್ಟಣ ಸಂಜೆ ಏಳು ಗಂಟೆ ಹೊತ್ತಿಗೆ ನಿರ್ಜನವಾಗುತ್ತದೆ. ಸ್ಥಳೀಯರೇ ನಿರ್ಭೀತಿಯಿಂದ ಅಡ್ಡಾಡುವ ಪರಿಸ್ಥಿತಿ ಇಲ್ಲ. ಈ ಸ್ಥಿತಿಯಲ್ಲಿ ಯಾವ ಉದ್ಯಮಿ ಬಂಡವಾಳ ಹೂಡಲು ಬರಲು ಸಾಧ್ಯ? ಉದ್ಯೋಗ ಸೃಷ್ಟಿಯಾಗಲು ಹೇಗೆ ಸಾಧ್ಯ? 

ಈಗಿನ ತರುಣ್ ಗೊಗೊಯ್ ಸರ್ಕಾರವೂ ಸೇರಿದಂತೆ ಕಳೆದ 30ವರ್ಷಗಳಲ್ಲಿ ಅಧಿಕಾರದಲ್ಲಿದ್ದ ಯಾವ ಸರ್ಕಾರ ಕೂಡಾ ಅಭಿವೃದ್ದಿ ಕಡೆ ಗಮನ ಹರಿಸಿಲ್ಲ. ಚಳವಳಿಗಾರರ ಜತೆ ಸಂಧಾನ ಮತ್ತು  ಉಗ್ರರ ದಮನವಷ್ಟೇ ಸರ್ಕಾರಗಳ ಆದ್ಯತೆಯಾಗಿದೆ. ಚಳವಳಿಗಾರರು ಮತ್ತು ಉಗ್ರರ ಒಂದು ಗುಂಪಿನ ಜತೆ ಸರ್ಕಾರ ಮಾತುಕತೆ ನಡೆಸಿ ಸಂಧಾನದ ಮಾರ್ಗಕ್ಕೆ ಎಳೆದುತಂದರೂ ಇನ್ನೊಂದು ಅತೃಪ್ತ ಗುಂಪು ತಿರುಗಿಬೀಳುತ್ತದೆ. `ಬೋಡೊ ಲಿಬರೇಷನ್ ಟೈಗರ್~ಗಳ ಜತೆ ಸರ್ಕಾರ ಒಪ್ಪಂದ ಮಾಡಿಕೊಂಡ ನಂತರ ಅದರ ನಾಯಕ ಹಗರಮಾ ಬಸುಮತಾರಿ ನೇತೃತ್ವದ ಉಗ್ರರು ಶಸ್ತ್ರತ್ಯಾಗ ಮಾಡಿ ಶರಣಾಗತರಾದರು. ಸಂಧಾನವನ್ನು ಒಪ್ಪದ ಬೋಡೊ ಉಗ್ರರ ಇನ್ನೊಂದು ಗುಂಪು `ರಾಷ್ಟ್ರೀಯ ಬೋಡೊಲ್ಯಾಂಡ್ ಪ್ರಜಾಸತ್ತಾತ್ಮಕ ರಂಗ~ದ ಮೂಲಕ ಈಗಲೂ ಸಕ್ರಿಯವಾಗಿದೆ.

ಇತ್ತೀಚಿನ ಗಲಭೆಯಲ್ಲಿ ಈ ಗುಂಪಿನ ಉಗ್ರರೇ ಮುಖ್ಯಪಾತ್ರ ವಹಿಸಿದ್ದರೆನ್ನುವುದನ್ನು ಕೇಂದ್ರ ಗೃಹಸಚಿವಾಲಯ ಕೂಡಾ ಹೇಳಿದೆ. ಉಲ್ಫಾ ಚಟುವಟಿಕೆ ಕೂಡಾ ಸಂಪೂರ್ಣವಾಗಿ ನಿಂತಿಲ್ಲ. ಈ ಸಂಘಟನೆಗಳು ಈಗಲೂ ನಿರುದ್ಯೋಗಿ ಯುವಕರ `ನೇಮಕಾತಿ~ ನಡೆಸುತ್ತಲೇ ಇದೆ. ನಿರಂತರವಾಗಿ ಇಲ್ಲಿ ಉಗ್ರಗಾಮಿ ಚಟುವಟಿಕೆ ನಡೆಯುತ್ತಾ ಬಂದಿರುವ ಕಾರಣ ಅಕ್ರಮ ಶಸ್ತ್ರಾಸ್ತ್ರಗಳು ಹೇರಳವಾಗಿವೆ. ಅವುಗಳನ್ನು ವಶಪಡಿಸಿಕೊಳ್ಳುವ ಸರ್ಕಾರ ಕಟ್ಟುನಿಟ್ಟಿನ ಪ್ರಯತ್ನ ನಡೆದಿಲ್ಲ ಎನ್ನುವುದೇ ಗಲಭೆಯಿಂದ ನೊಂದವರು ಮುಖ್ಯ ದೂರು. ಈ ರೀತಿ ಸುಲಭದಲ್ಲಿ ಶಸ್ತ್ರಾಸ್ತ್ರಗಳು ಕೈಗೆ ಸಿಕ್ಕ ನಂತರ ಸಹಜವಾಗಿಯೇ ಅದನ್ನು ಬಳಸುವ ಅಡ್ಡಮಾರ್ಗಗಳನ್ನು ಯುವಕರೇ ಕಂಡುಕೊಳ್ಳುತ್ತಾರೆ. ಈ ರೀತಿಯ ವಿಷವರ್ತುಲದಲ್ಲಿ ಅಸ್ಸಾಂ ರಾಜ್ಯವೊಂದೇ ಅಲ್ಲ ಈಶಾನ್ಯದ ಎಲ್ಲ ರಾಜ್ಯಗಳು ಸಿಕ್ಕಿಹಾಕಿಕೊಂಡಿವೆ, ಬಿಡುಗಡೆಯ ಮಾರ್ಗ ಬಹಳ ಇಲ್ಲ.

(ಮುಗಿಯಿತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT