ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಗಲ್ ಲೋಕೋಪಯೋಗಿ ಇಲಾಖೆಗೆ 2 ಪ್ರಶಸ್ತಿ

Last Updated 17 ಫೆಬ್ರುವರಿ 2012, 9:25 IST
ಅಕ್ಷರ ಗಾತ್ರ

ಹಾನಗಲ್: ಲೋಕೋಪಯೋಗಿ ಇಲಾಖೆ ವತಿಯಿಂದ ಉತ್ತರ ಕರ್ನಾಟಕದಲ್ಲಿ ಅನುಷ್ಠಾನಗೊಂಡ ಗುಣಮಟ್ಟದ ಅತ್ಯುತ್ತಮ ಕಾಮಗಾರಿಗಳಿಗೆ ನೀಡುವ ಎರಡು ಪ್ರಶಸ್ತಿಗಳನ್ನು ಈ ಬಾರಿ ಹಾನಗಲ್ ಲೋಕೋಪಯೋಗಿ ಇಲಾಖೆ ಉಪ ವಿಭಾಗ ತನ್ನದಾಗಿಸಿಕೊಂಡಿದ್ದು, ಇದು ಉತ್ತರ ಕರ್ನಾಟಕದ 13 ಜಿಲ್ಲೆಗಳ ವ್ಯಾಪ್ತಿಗೆ ಕೊಡಮಾಡುವ ಈ ವಲಯದ ಶ್ರೇಷ್ಠ ಪ್ರಶಸ್ತಿಯಾಗಿದೆ.

ಹಾನಗಲ್ಲಿನಲ್ಲಿ ಲೋಕೋಪಯೋಗಿ ಇಲಾಖೆ ನಿರ್ಮಿಸಿರುವ  ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡಕ್ಕೆ ಅತ್ಯುತ್ತಮ ಗುಣಮಟ್ಟದ ಸಾರ್ವಜನಿಕ ಕಟ್ಟಡ ಪ್ರಶಸ್ತಿ ಹಾಗೂ ಹಾನಗಲ್- ಸುರಳೇಶ್ವರ ಕಾಂಕ್ರೀಟ್ ರಸ್ತೆಗೆ ಅತ್ಯುತ್ತಮ ಮೂಲಭೂತ ಸೌಕರ್ಯ ಪ್ರಶಸ್ತಿ ಲಭಿಸುವ ಮೂಲಕ ಸಾರ್ವಜನಿಕ ವಲಯಲದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಕಳೆದ ವರ್ಷ ನಿರ್ಮಾಣಗೊಂಡ ರೂ. 8 ಕೋಟಿ ವೆಚ್ಚದ ಪಾಲಿಟೆಕ್ನಿಕ್ ಕಾಲೇಜ್ ಕಟ್ಟಡ ಅತ್ಯುತ್ತಮ ಗುಣಮಟ್ಟದಿಂದ ನಿರ್ಮಾಣವಾಗಿರುವುದು ಅಲ್ಲದೆ ಸುಂದರ, ಸುಸಜ್ಜಿತ ಕಾಲೇಜ್ ಕಟ್ಟಡವಾಗಿ ವಿದ್ಯಾರ್ಥಿಗಳ ಅನುಕೂಲವಾಗಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಾನಗಲ್- ಸುರಳೇಶ್ವರ ರಸ್ತೆಯನ್ನು ರೂ. 2 ಕೋಟಿ  ವೆಚ್ಚದಲ್ಲಿ ಸದೃಢವಾಗಿ ರೂಪಿಸಿರುವುದು ಗುಣಮಟ್ಟ ಪರೀಕ್ಷೆಯಿಂದ ದೃಢಪಟ್ಟಿದೆ.

ಈ ಕಟ್ಟಡ ಹಾಗೂ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಸ್ವಾಮ್ಯಕ್ಕೊಳಪಟ್ಟ ಇಂಡಿಯನ್ ಕಾಂಕ್ರೀಟ್ ಇನ್ಸ್‌ಟಿಟ್ಯೂಟ್ ಹಾಗೂ ಅಲ್ಟ್ರಾಟೆಕ್ ಸಿಮೆಂಟ್ ಸಹಯೋಗದ ಈ ಪ್ರಶಸ್ತಿ ನೀಡಲಾಗಿದೆ.

ಈ ಪ್ರಶಸ್ತಿ ಒಂದು ಫಲಕ ಹಾಗೂ ಪ್ರಶಸ್ತಿ ಪತ್ರವನ್ನು ಒಡಗೊಂಡಿದೆ. ಕಳೆದ ತಿಂಗಳು ಭೇಟಿ ನೀಡಿದ್ದ 8 ಜನ ತಜ್ಞರ ತಂಡ ಹಾನಗಲ್ ತಾಲ್ಲೂನ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ನಡೆಸಿತ್ತು. ಈ ವರದಿಯನ್ನಾಧರಿಸಿ ಈ ಪ್ರಶಸ್ತಿ ಲಭಿಸಿದೆ.

ಸ್ಥಳಿಯ ಶಾಸಕ, ರಾಜ್ಯ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಅವರ ದೂರದೃಷ್ಟಿಯ ಫಲವಾಗಿ ತಾಲ್ಲೂಕಿನಾದ್ಯಂತ ಅನುಷ್ಠಾನೊಳ್ಳುತ್ತಿರುವ ಶಾಶ್ವತ ಯೋಜನೆಗಳ ಸಮರ್ಪಕ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ಜನಮನ್ನಣೆಗೆ ಪಾತ್ರವಾಗಿರುವ ಇಲ್ಲಿನ ಪಿ.ಡಬ್ಲು.ಡಿ ಎಂಜಿನಿಯರ್ ಬಿ.ವೈ.ಬಂಡಿವಡ್ಡರ ಅವರಿಗೆ ಈ ಪ್ರಶಸ್ತಿ ಲಭಿಸಿದೆ.

ಗುಲಬರ್ಗಾದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ನಡೆದ ಸಮಾವೇಶದಲ್ಲಿ ಉತ್ತರ ಕರ್ನಾಟಕ ಇಂಡಿಯನ್ ಕಾಂಕ್ರೀಟ್ ಇನ್ಸ್‌ಟಿಟ್ಯೂಟ್ ಚೇರ್ಮನ್ ಪ್ರೊ. ಅರವಿಂದ ಗಲಗಲಿ ಅವರು ಬಿ.ವೈ.ಬಂಡಿವಡ್ಡರ ಅವರಿಗೆ ಪ್ರದಾನ ಮಾಡಿದರು.

 ಇದೇ ಸಂದರ್ಭದಲ್ಲಿಇಲಾಖೆಯ ಹಾವೇರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೆ. ಶಿವಣ್ಣ, ಶಾಖಾಧಿಕಾರಿಗಳಾದ ಕೆ.ಮಹಾಬಳೇಶಪ್ಪ,  ಎಸ್.ಎಂ.ರಾಮಲಿಂಗೇಶ, ಪಾಲಿಟೆಕ್ನಿಕ್ ಕಾಲೇಜ್ ಕಟ್ಟಡ ಗುತ್ತಿಗೆದಾರ ಬೆಂಗಳೂರಿನ ಮೆಸರ್ಸ್ ರಾವ್ ಕನ್ಸ್‌ಟ್ರಕ್ಷನ್  ಹಾಗೂ ಕಾಂಕ್ರೀಟ್ ರಸ್ತೆ ಗುತ್ತಿಗೆದಾರ ರಾಜಣ್ಣ ಶಿವಕುಮಾರ, ಪ್ರಧಾನ ವಾಸ್ತು ಶಿಲ್ಪಿ ಕೆ ಉದಯ, ಸ್ಟ್ರಕ್ಚರಲ್ ಕನ್ಸ್‌ಲ್ಟೆಂಟರಾದ ಮೆಸರ್ಸ್ ಜಲವಾಹಿನಿ ಮ್ಯಾನೇಜ್‌ಮೆಂಟ್ ಸಿಸ್ಟಮ್ಸ ಅವರನ್ನು ಸನ್ಮಾನಿಸಿ ಪ್ರಶಸ್ತಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅಲ್ಟ್ರಾಟೆಕ್ ಸಿಮೆಂಟ್ಸ್ ಹಿರಿಯ ಉಪಾಧ್ಯಕ್ಷ ಡಾ. ಮನಮೋಹನ್ ಆರ್ ಕಲಕಲ್, ಕಾರ್ಯದರ್ಶಿ ಎಸ್.ಬಿ.ಲಕಮನಹಳ್ಳಿ, ವಿಭಾಗೀಯ ಮುಖ್ಯಸ್ಥ ಡಾ. ವಿ.ರಾಮಚಂದ್ರ, ಪ್ರಕಾಶ ಪಟ್ಟಣಶೆಟ್ಟಿ ಮೊದಲಾದವರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT