ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರುಬೂದಿ ವ್ಯವಸ್ಥೆ ಲೋಪ, ಬೇಕಾಬಿಟ್ಟಿ ಮಣ್ಣು ಅಗೆತ

Last Updated 14 ಸೆಪ್ಟೆಂಬರ್ 2011, 10:15 IST
ಅಕ್ಷರ ಗಾತ್ರ

ಉಡುಪಿ: ಹಾರುಬೂದಿಗೆ ನೀರು ಮಿಶ್ರಣ ಮಾಡಿ ಹೊಂಡಕ್ಕೆ ಬಿಡುವ ವ್ಯವಸ್ಥೆಯಲ್ಲಿ ಲೋಪ, ಹೊಂಡದ ಸುತ್ತ ಇಲ್ಲದ ತಡೆಗೋಡೆ, ಜನ-ಜಾನುವಾರುಗಳ ಜೀವಕ್ಕೆ ಅಪಾಯ, ಕಂಪೆನಿಯು ಬೇಕಾಬಿಟ್ಟಿಯಾಗಿ ಎತ್ತರದ ಜಾಗದಲ್ಲಿ ಕೂಡ ಅಶಿಸ್ತಿನಿಂದ ಮಣ್ಣು ಅಗೆದು ಹಾಕುತ್ತಿದೆ ಮತ್ತು ಅದನ್ನು ಎಲ್ಲೆಂದರಲ್ಲಿ ತಂದು ಸುರಿದ ಪರಿಣಾಮ ತಗ್ಗು ಪ್ರದೇಶದ ಭತ್ತದ ಗದ್ದೆಗೆ, ಮನೆಗಳಿಗೆ ಹಾನಿಯುಂಟು ಮಾಡಿದೆ...

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯ ಪರಿಸರ ಅಧಿಕಾರಿ ಎಂ.ಡಿ.ಎನ್.ಸಿಂಹ ಹಾಗೂ ಮಂಗಳೂರಿನ ಎಸ್‌ಇಒ ಸಿ.ಡಿ.ಕುಮಾರ್ ಮತ್ತು ಉಡುಪಿಯ ಉಪ ಪರಿಸರ ಅಧಿಕಾರಿ ಕೆ.ರವಿಚಂದ್ರ ಅವರೊಂದಿಗೆ ಸೇರಿ ಯುಪಿಸಿಎಲ್‌ಗೆ ಜುಲೈ 18ಮತ್ತು 19ರಂದು ಭೇಟಿ ನೀಡಿ ಪರಿಶೀಲಿಸಿ ಮಂಡಳಿಗೆ ಸಲ್ಲಿಸಿದ ವರದಿಯಲ್ಲಿ ಈ ಅಂಶಗಳನ್ನು ದಾಖಲಿಸಲಾಗಿದೆ.
 
ಹಾರುಬೂದಿ ಹೊಂಡದ ಪ್ರದೇಶಕ್ಕೆ ಭೇಟಿ ನೀಡಿದ ತಂಡವು ಅಲ್ಲಿ ಕಂಡಿರುವುದನ್ನು ದಾಖಲಿಸಿದ್ದು ಹೀಗೆ...

ಹಾರುಬೂದಿ ಹೊಂಡದ ಪ್ರದೇಶಕ್ಕೆ ಭೇಟಿ: ಜು.19ರಂದು ತಂಡವು ಯುಪಿಸಿಎಲ್ ಹಾರುಬೂದಿ ಹೊಂಡದ ಪ್ರದೇಶಕ್ಕೆ ಭೇಟಿ ನೀಡಿತು. ಇದು ಯುಪಿಸಿಎಲ್ ಕಂಪೆನಿಯ ಪೂರ್ವಭಾಗದಲ್ಲಿದೆ. ಜಿ.ಪಂ.ಸದಸ್ಯೆ ಗೀತಾಂಜಲಿ ಸುವರ್ಣ ಕೆಲವು ಸಾರ್ವಜನಿಕರೊಂದಿಗೆ ತಂಡ ಸೇರಿಕೊಂಡರು.
 
ಹಾರುಬೂದಿ ಹೊಂಡಕ್ಕೆ ಸಾಗಿಸುವ ಮುನ್ನ ನೀರಿನೊಂದಿಗೆ ಮಿಶ್ರಮಾಡಿ ಬಿಡುವ ಘಟಕವೊಂದನ್ನು ಕಂಪೆನಿ ಅಲ್ಲಿ ಸ್ಥಾಪಿಸಿತ್ತು. ಆದರೆ ತಂಡ ಭೇಟಿ ನೀಡಿದ ವೇಳೆ ಯಂತ್ರ ಕೆಲಸ ಮಾಡಲಿಲ್ಲ. ಅಲ್ಲಿದ್ದವರು ನೀಡಿದ ಮಾಹಿತಿಯಂತೆ ಕೆಲವು ತಾಂತ್ರಿಕ ದೋಷಗಳಿಂದಾಗಿ ಕೆಲಸ ಮಾಡುತ್ತಿಲ್ಲ. ತಂಡ ಪರಿಶೀಲನೆಗೆ ತೆರಳಿದ ಸಂದರ್ಭದಲ್ಲಿ ಹಾರುಬೂದಿ ಹೊಂಡಕ್ಕೆ ಯಾವುದೇ ಹಾರುಬೂದಿ ತಂದು ಹಾಕಲಿಲ್ಲ.

ಇಲ್ಲಿನ ಹಾರುಬೂದಿ ಹೊಂಡವನ್ನು ಎರಡು ಭಾಗಗಳಾಗಿ ಮಾಡಲಾಗಿದೆ (1ಎ ಮತ್ತು 1ಬಿ) ಇವೆರಡನ್ನು ಮಣ್ಣಿನ ದಿಬ್ಬವೊಂದು ಪ್ರತ್ಯೇಕಿಸುತ್ತದೆ. 1ಎ-ಹೊಂಡದಲ್ಲಿ ಹಾರುಬೂದಿ ಮಿಶ್ರಣ ತುಂಬಿಕೊಂಡಿದೆ. ಸುಮಾರು 3ಮೀ ಎತ್ತರದಲ್ಲಿ ಬೂದಿಯ ಪದರ ಉಂಟಾಗಿದೆ. 1ಬಿ-ಹೊಂಡದಲ್ಲಿ 1ಎ-ಹೊಂಡದ ಮಿಶ್ರಣದೊಂದಿಗೆ ಮಳೆನೀರು ಸಂಗ್ರಹಿಸಲಾಗಿದೆ. ತಂಡವು ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ಹೊಂಡವೂ ಹಾರುಬೂದಿ ಮಿಶ್ರಣದಿಂದ ತುಂಬಿತುಳುಕಿದ್ದು ಕಂಡುಬಂದಿಲ್ಲ.

ಆದರೆ ಉಡುಪಿ ಪ್ರಾಂತದ ಅಧಿಕಾರಿ ಮತ್ತು ಜಿ.ಪಂ. ಸದಸ್ಯೆ ಹೇಳಿಕೊಂಡಂತೆ ಕೆಲವು ದಿನಗಳ ಹಿಂದೆ ಭೇಟಿ ನೀಡಿದಾಗ ಯುಪಿಸಿಎಲ್‌ನವರು ಹಾರುಬೂದಿಯನ್ನು ತೆರೆದ ವಾಹನದಲ್ಲಿ ತಂದು ಇಲ್ಲಿ ಸುರಿಯುತ್ತಿದ್ದರು. ಬಳಿಕ ಅದಕ್ಕೆ ನೀರನ್ನು ಹರಿಯಬಿಡುತ್ತಿದ್ದರು. ಜಿ.ಪಂ.ಸದಸ್ಯೆ ಗಮನಸೆಳೆದಂತೆ ಆ ಹಾರುಬೂದಿ ಹೊಂಡದ ಸುತ್ತ ಸರಿಯಾದ ತಡೆಗೋಡೆ ಇಲ್ಲದ ಕಾರಣ ಜನ ಹಾಗೂ ಜಾನುವಾರು ಜೀವಕ್ಕೆ ಅಪಾಯವಿದೆ.

ಈ ಹಾರುಹೊಂಡದ ಉತ್ತರಭಾಗದಲ್ಲಿ ಯುಪಿಸಿಎಲ್ ಇನ್ನೊಂದು ಹಾರುಬೂದಿ ಹೊಂಡ ಮಾಡಲು ಬಹುದೊಡ್ಡ ಭೂಭಾಗದಲ್ಲಿ ಕಾಮಗಾರಿ ನಡೆಸಿದೆ. ಆದರೆ ಮಳೆಗಾಲದಲ್ಲಿ ಮಣ್ಣುಗುಡ್ಡೆ ಜಾರಿಹೋದಂತೆ ಮತ್ತು ಹೂಳು ಮಣ್ಣು ಕೊಚ್ಚಿಹೋಗದಂತೆ ತಡೆಯುವ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಇಲ್ಲಿ ಕೈಗೊಂಡಿಲ್ಲ. ಪರಿಣಾಮ ತಗ್ಗು ಪ್ರದೇಶದಲ್ಲಿನ ಬತ್ತದ ಗದ್ದೆಗೆ ಇಲ್ಲಿನ ಮಣ್ಣುಕೊಚ್ಚಿಕೊಂಡು ಹೋಗಿದೆ.

ಸ್ಥಳೀಯ ನಿವಾಸಿಗಳಾದ ವಾಸುದೇವ ಪ್ರಭು ಮತ್ತು ದೇವಕಿ ನಾಯ್ಕ ತಮ್ಮ ಗದ್ದೆಗೆ ಈ ಹೊಂಡದ ಮಣ್ಣು ಹೋಗಿ ಸೇರಿಕೊಂಡಿದ್ದರ ಬಗ್ಗೆ ದೂರಿದರು. ಮಣ್ಣುಗುಡ್ಡೆ ಜಾರಿ ಅವರ ಮನೆಯ ಸಮೀಪ ಬಿದ್ದಿರುವುದರಿಂದ ಅವರಿಗೆ ಅಲ್ಲಿ ಸರಾಗವಾಗಿ ಓಡಾಡಲಿಕ್ಕೆ ಆಗದ ಸ್ಥಿತಿ ನಿರ್ಮಾಣವಾಗಿದೆ.

ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಹಾಗೂ ಇತರ ಸ್ಥಳಿಯರು ದೂರಿಕೊಂಡಂತೆ ಯುಪಿಸಿಎಲ್ ಕಂಪೆನಿಯು ಇಲ್ಲಿನ ಕಾಮಗಾರಿಗಳನ್ನು ನಡೆಸುವಾಗ ಕಲ್ಲುಬಂಡೆಗಳನ್ನು ಸಿಡಿಸುವುದೂ ಸೇರಿದಂತೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಬೇಕಾಬಿಟ್ಟಿಯಾಗಿ ಅಶಿಸ್ತಿನಿಂದ ಮಣ್ಣು ಅಗೆದು ಹಾಕುವುದು ಮತ್ತು ಅದನ್ನು ಎಲ್ಲೆಂದರಲ್ಲಿ ತಂದು ಸುರಿಯುತ್ತಿದೆ. 

ಇಲ್ಲಿ ಭಾರಿ ಮಳೆ ಸಾಮಾನ್ಯ. ಹೀಗಾಗಿ ಇಲ್ಲಿ ತಂದು ಸುರಿಯುವ ಹೂಳು, ಮಣ್ಣಿನ ರಾಶಿ ತಗ್ಗು ಮಳೆನೀರಿನೊಂದಿಗೆ ಸೇರಿಕೊಂಡು ತಗ್ಗು ಪ್ರದೇಶದಲ್ಲಿನ ಬತ್ತದ ಗದ್ದೆ ಮತ್ತು ರಸ್ತೆಗಳಿಗೂ ಬಂದು ಬೀಳುತ್ತಿದೆ. ಒಟ್ಟಾರೆ ಸ್ಥಳಿಯರು ಹೇಳುವ ಪ್ರಕಾರ ಕಂಪೆನಿ ಇಲ್ಲಿನ ಕೆಲಸಗಳನ್ನು ಸುತ್ತಮುತ್ತಲಿನವರಿಗೆ ಯಾವ ಸಮಸ್ಯೆಯಾಗುತ್ತದೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳದೇ ಮಾಡುತ್ತಿದೆ.

(ನಾಳೆ: ಯುಪಿಸಿಎಲ್ ಘಟಕದೊಳಕ್ಕೆ ಪ್ರವೇಶ, ತಂಡವು ಅಲ್ಲಿ ಕಂಡಿದ್ದೇನು? )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT