ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ್ಮೋನಿಯಂ ಹಬ್ಬದಲ್ಲಿ ವಿಜೃಂಭಿಸಿದ ಶೃಂಗಾರ ರಸಭಾವ

Last Updated 5 ಜುಲೈ 2013, 19:59 IST
ಅಕ್ಷರ ಗಾತ್ರ

ದು `ಬಿಜಾಪುರೆ ಹಾರ್ಮೋನಿಯಂ ಫೌಂಡೇಷನ್' ಏರ್ಪಡಿಸಿದ್ದ `ಹಾರ್ಮೋನಿಯಂ ಹಬ್ಬ'. ಅಲ್ಲಿ ಎಲ್ಲರೂ ಕೇಳಲು ಕಾತರರಾಗಿ ಕುಳಿತಿದ್ದಾಗ, ಡಾ. ರವೀಂದ್ರ ಕಾಟೋಟಿಯವರ ಹಾರ್ಮೋನಿಯಂ ಹಾಗೂ ಉಸ್ತಾದ್ ಫಯಾಜ್ ಖಾನರ ಸಾರಂಗಿ ವಾದನದ ಜುಗಲ್ಬಂದಿ ವಾದನ ಆರಂಭವಾಯಿತು. `ಇದು ಸ್ಪರ್ಧೆಯ ದ್ಯೋತಕವಲ್ಲ.

ಒಬ್ಬರ ಆಲೋಚನೆಗಳನ್ನು ಮತ್ತೊಬ್ಬರು ಪ್ರಶಂಸಿಸಿರುವ ಪರಿಭಾಷೆಯಷ್ಟೇ' ಎನ್ನುವ ಮೂಲಕ ಕಾಟೋಟಿಯವರು ವಾದನ ಆರಂಭಿಸಿದರು. ಪಂ. ರಾಮಭಾವು ಬಿಜಾಪುರೆಯವರ ಶಿಷ್ಯರಾದ ಕಾಟೋಟಿಯವರು ಖ್ಯಾತನಾಮ ಕಲಾವಿದರಿಗೆಲ್ಲ ಸಾಥ್ ನೀಡಿರುವುದಲ್ಲದೇ ಹಾರ್ಮೋನಿಯಂ ವಾದನದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡುತ್ತಾ ಬಂದವರು.

ಜತೆಗೆ ಬಿಜಾಪುರೆ ಹಾರ್ಮೋನಿಯಂ ಫೌಂಡೇಷನ್‌ನ ವ್ಯವಸ್ಥಾಪಕರಲ್ಲಿ ಒಬ್ಬರು. ಫಯಾಜ್ ಖಾನರು ಗಾಯನದಲ್ಲಿ ಮಾತ್ರವಲ್ಲ ತಬಲಾ ಹಾಗೂ ಸಾರಂಗಿ ವಾದನದಲ್ಲಿ ಪರಿಣತಿ ಪಡೆದ ಮೇರು ಕಲಾವಿದ. ಅವರ ಗಾಯನದ ಕಾರ್ಯಕ್ರಮಗಳೊಂದಿಗೆ ಸಾರಂಗಿ ವಾದನವನ್ನೂ ಮಾಡುವ ಇವರು ದಕ್ಷಿಣ ಭಾರತದ ಏಕಮೇವ ಸಾರಂಗಿ ವಾದಕರು.

ಇವರಿಬ್ಬರ ಜುಗಲ್ಬಂದಿಗೆ ವಾಚಸ್ಪತಿ (ಕರ್ನಾಟಕ ಸಂಗೀತ ಮೂಲ, 64ನೇ ಮೇಳಕರ್ತ) ರಾಗವನ್ನು ಆರಿಸಿಕೊಂಡಿದ್ದರು. 15 ನಿಮಿಷಗಳ ಕಾಲ ನಡೆದ ಆಲಾಪ್ ತಿಳಿನೀರ ಕೊಳದ ಸುತ್ತ ಇರುವ ಶಾಂತತೆಯನ್ನು ಸಭಾಂಗಣದೊಳಗೆ ಕರೆತಂದಂತಿತ್ತು. ಆಲಾಪ್ ವಾದನದಲ್ಲೇ ಎರಡೂ ವಾದ್ಯಗಳಿಂದ ರಾಗದ ತಿರುಳಿನ ರುಚಿ ಅನಾವರಣಗೊಂಡಿತು. ನಂತರ ವಿಲಂಬಿತ್ ಏಕತಾಳದಲ್ಲಿ ಅದೇ ಹಾದಿಯಲ್ಲಿ ಮುಂದುವರೆಯಿತು. ಅಂತರಾಳದ ದನಿಯೆನ್ನಿಸುವ ಸಾರಂಗಿಯ ನಾದ ಶ್ರೋತೃಗಳನ್ನು ಮರುಳು ಮಾಡಿತ್ತು.

ಹಾರ್ಮೋನಿಯಂ ಹಾಗೂ ಸಾರಂಗಿ ಎಂಬ ಎರಡು ವೈರುಧ್ಯ ವಾದ್ಯಗಳ ನಾದ ಒಂದು ಹಂತದಲ್ಲಿ ಪರಿಣಿತರಿಬ್ಬರ ವಾದನದಲ್ಲಿ ಒಂದೇ ದನಿಯಾಗಿ ಕೇಳಿಸುತ್ತಿತ್ತು. ನಂತರ ಧೃತ್ ತೀನ್ ತಾಳದಲ್ಲಿ `ಸುಮನ ಹರಿನಾಮ...' ಎಂದ ಬಂದೀಶ್‌ನ ವಾದನ ಆರಂಭಿಸಿದರು. ಇಲ್ಲಿ ಬಂದೀಶ್‌ನ ಸ್ಥಾಯಿ ಹಾಗೂ ಅಂತರಗಳನ್ನು ಹಾಡುವ ಮೂಲಕ ಫಯಾಜ್ ಖಾನರು ಸಾರಂಗಿ ವಾದನದ ಸಮಯದಲ್ಲಿ ತಮ್ಮ ಕಂಠಸಿರಿಯ ಝಲಕ್ ತೋರಿಸಿ ಶ್ರೋತೃಗಳನ್ನು ಪುಳಕಗೊಳಿಸಿದರು.

ವಾದ್ಯಗಳೆರಡರ ನಡುವೆ ಮೀಯತೊಡಗಿದ್ದ ರಾಗ, ಹಂತ ಹಂತವಾಗಿ ಬೆಳೆದು ಮತ್ತಷ್ಟು ಕ್ರಿಯಾಶೀಲವಾಗಿ, ರಾಗದ ಸೌಂದರ್ಯವನ್ನು ಹೊಳಪುಗೊಳಿಸಿತು. 52 ನಿಮಿಷಗಳ ಪ್ರಸ್ತುತಿಗೆ ಕೇಳುಗರು ಮನಸೋತಿದ್ದರು. ಶ್ರೋತೃಗಳಿಂದ ತೂರಿ ಬರುತ್ತಿದ್ದ `ವಾಹ್ ಕ್ಯಾ ಬಾತ್ ಹೈ, ಹಾಗೂ `ವಾಹ್ ಉಸ್ತಾದ್' ಎಂಬ ದಾದ್‌ಗಳು ಅವರ ತೃಪ್ತಿಯ ಸೂಚಕಗಳಾಗಿದ್ದವು.

ಜುಗಲ್ಬಂದಿಯ ಆರಂಭದಲ್ಲಿ `ಜುಗಲ್ಬಂದಿಯೆಂದರೆ ಕಲಾವಿದರಿಬ್ಬರ ಹಗ್ಗ ಜಗ್ಗಾಟವಾಗಬಾರದು' ಎಂದಿದ್ದ ಫಯಾಜ್ ಖಾನರ ಮಾತಿನಂತೆ, ಅನವಶ್ಯಕ ಸವಾಲು ಜವಾಬುಗಳಿಂದ ದೂರವೇ ಉಳಿದು, ವಿದ್ವಾನರಿಬ್ಬರಿಗಿರುವ ಆ ರಾಗದ ಬಗೆಗಿನ ಆಲೋಚನೆಗಳನ್ನು ಶ್ರೋತೃಗಳೊಂದಿಗೆ ಹಂಚಿಕೊಂಡ ರೀತಿ ಅನನ್ಯವಾಗಿತ್ತು. ನಂತರ ಶಿವರಂಜನಿ ರಾಗ (ಕಾಫಿ ಥಾಟ್) ಆಧಾರಿತ ಜನಪದ ಶೈಲಿಯ `ನೈನಾ ಮೋರೆ ತರಸ ಗಯೇ...' ಎಂಬ ಧುನ್ ನುಡಿಸಿದರು.

ಇಲ್ಲಿ ವಾದ್ಯಗಳೆರಡರ ಅಂತರ್ನಾದದಲ್ಲಿ ಸುಂದರವಾಗಿ ಶೃಂಗಾರಗೊಳ್ಳುತ್ತಿದ್ದ ಧುನ್ ಅನ್ನು ಹಾಡಿದ ಫಯಾಜ್ ಖಾನರ ದನಿ ಈ ಪ್ರಸ್ತುತಿಗೆ ವಿಶೇಷ ಮೆರುಗನ್ನು ನೀಡಿತು. ಪಂ. ವಿಶ್ವನಾಥ್ ನಾಕೋಡರ ತಬಲಾ ಸಾಥಿಯೂ ಅಷ್ಟೇ ಸಮಂಜಸವಾಗಿ ಮೂಡಿಬಂದಿತು.ಸುಮಾರು 300 ವರ್ಷಗಳ ಇತಿಹಾಸವಿರುವ ಹಾರ್ಮೋನಿಯಂ ವಾದ್ಯದ ಮೂಲ ಯೂರೋಪ್. ಭಾರತೀಯ ಸಂಗೀತ ಕ್ಷೇತ್ರಕ್ಕೆ ಕಾಲಿರಿಸಿ 150 ವರ್ಷಗಳು ಸಂದಿವೆ. ಸಾಥಿ ವಾದ್ಯವಾಗಷ್ಟೇ ಚಾಲ್ತಿಯಲ್ಲಿದ್ದ ಅದು ಹಲವಾರು ವಿದ್ವಾಂಸರ ಪ್ರಯೋಗಗಳಿಗೆ ಒಳಗಾಗಿ ಸೋಲೋ ಪ್ರದರ್ಶನಕ್ಕೂ ತನ್ನ ಸಾಮರ್ಥ್ಯವನ್ನು ವಿಸ್ತಾರಗೊಂಳಿಸಿಕೊಂಡಿದೆ.

ಪಂ. ರಾಮಭಾವು ಬಿಜಾಪುರೆಯವರು ಕರ್ನಾಟಕದ ಉತೃಷ್ಟ ಹಾರ್ಮೋನಿಯಂ ವಾದಕರು. ಹಾರ್ಮೋನಿಯಂನ ಸಾಧ್ಯಾಸಾಧ್ಯತೆಗಳನ್ನು ತಮ್ಮ ಪ್ರಯೋಗಗಳ ಮೂಲಕ ವಿಸ್ತಾರಗೊಳಿಸಿದವರು. 10 ವರ್ಷಗಳ ಹಿಂದೆ ಅವರ ಶಿಷ್ಯ ಬಳಗ `ಬಿಜಾಪುರೆ ಹಾರ್ಮೋನಿಯಂ ಫೌಂಡೇಷನ್' ಆರಂಭಿಸಿತು. ಜೊತೆಗೆ ಹಾರ್ಮೋನಿಯಂ ವಾದ್ಯದ ಪ್ರಚಾರಕ್ಕಾಗಿ ಕಳೆದ 6 ವರ್ಷಗಳಿಂದ `ಹಾರ್ಮೋನಿಯಂ ಹಬ್ಬ'ವನ್ನು ಆಚರಿಸುತ್ತಾ ಬಂದಿದೆ. ಏಳನೇ ವರ್ಷದ ಕಾರ್ಯಕ್ರಮ ಕಳೆದ ಭಾನುವಾರದಂದು ಭಾರತೀಯ ವಿದ್ಯಾ ಭವನದ ಖಿಂಚಾ ಸಭಾಂಗಣದಲ್ಲಿ ನೆರವೇರಿತು.

ಕಾರ್ಯಕ್ರಮದ ಆರಂಭದಲ್ಲಿ ತನ್ಮಯ್ ದಿಯೋಶಕೆ (ಪುಣೆ) ಹಿಂದೂಸ್ತಾನಿ ಹಾರ್ಮೋನಿಯಂ ವಾದನವನ್ನು ಪ್ರಸ್ತುತಪಡಿಸಿದರು. 28ರ ಹರೆಯದ ತನ್ಮಯ್ ಈಗಾಗಲೇ ಝಾಕಿರ್ ಹುಸೇನ್, ಕಿಶೋರಿ ಅಮೋಣ್‌ಕರ್, ಪಂ. ಉಲ್ಹಾಸ್ ಕಾಶಲ್ಕರ್ ಸೇರಿದಂತೆ ಹಲವಾರು ಸಂಗೀತ ದಿಗ್ಗಜರುಗಳಿಗೆ ಸಾಥ್ ನೀಡಿ ಸೈ ಎನಿಸಿಕೊಂಡವರು. ಮೊದಲಿಗೆ ಮಧುವಂತಿ ರಾಗ (ಕಲ್ಯಾಣ್ ಥಾಟ್)ದೊಂದಿಗೆ ಹಾರ್ಮೋನಿಯಂ ವಾದನವನ್ನು ಆರಂಭಿಸಿದರು.

ಆಲಾಪ್ ವಾದನದ ನಂತರ ಉದಯ್ ರಾಜ್ ಕರ್ಪೂರ್ ಅವರು ಹಾರ್ಮೋನಿಯಂ ವಾದನಕ್ಕೆ ತಬಲಾ ಸಾಥ್ ನೀಡಲಾರಂಭಿಸಿದರು. ಮಧುವಂತಿಯ ಭಾವಬಣ್ಣಗಳನ್ನು ಅವರ ವಾದನದಲ್ಲಿ ಸಮಂಜಸವಾಗಿ ಮೂಡಿ ಬಂದವು. ಕೊನೆಗೆ ನುಡಿಸಿದ `ಯಾದ ಪಿಯಾಕೀ ಆಯೇ...' ಎಂಬ ಠುಮ್ರಿಯೂ ಶ್ರೋತೃಗಳ ಮೆಚ್ಚುಗೆ ಗಳಿಸಿತು.

ನಂತರ ಮುಂಬೈ ಮೂಲದ ಹಿರಿಯ ಹಾರ್ಮೋನಿಯಂ ವಾದಕ ಪಂ. ತುಳಸೀದಾಸ್ ಬೋರ್ಕರ್ ಅವರ ವಾದನ ಆರಂಭಗೊಂಡಿತು. ಮೊದಲಿಗೆ ಬಿಹಾಗ್ ರಾಗ (ಬಿಲಾವಲ್ ಥಾಟ್)ದಿಂದ ಕಾರ್ಯಕ್ರಮವನ್ನು ಆರಂಭಿಸಿದರು. ಇಳಿವಯಸ್ಸಿನಲ್ಲೂ ಅಷ್ಟು ಕ್ರಿಯಾಶೀಲರಾಗಿ ಬಿಹಾಗಿನ ಎಲ್ಲಾ ವರ್ಣಗಳನ್ನು ವಾದ್ಯದ ದನಿಯಲ್ಲಿ ಹೊಮ್ಮಿಸಿ ನೆರೆದವರನ್ನು ಬೆರಗುಗೊಳಿಸಿದರು. ಇಲ್ಲಿ ಹಾರ್ಮೋನಿಯಂನಿಂದ ಯಾವೆಲ್ಲಾ ಕೆಲಸಗಳನ್ನು ತೆಗೆಯಬಹುದೆಂಬುದನ್ನೂ ತೋರಿಸಿಕೊಟ್ಟರು.

ನಂತರ ನಾಟ್ಯಗೀತೆ ಹಾಗೂ ಭಜನ್ ಒಂದನ್ನು ಪ್ರಸ್ತುತಪಡಿಸಿದರು. ಕೊನೆಯಲ್ಲಿ ಶ್ರೋತೃವರ್ಗದಿಂದ ಭೈರವಿಯನ್ನು ನುಡಿಸಿ ಸಂಪನ್ನ ಮಾಡಿ ಎಂಬ ಕರೆ ಬಂದಾಗ ಭೈರವಿ (ಭೈರವಿ ಥಾಟ್)ಯ ವಾದನವನ್ನು ಆರಂಭಿಸಿದರು. ಭೈರವಿ ರಾಗದ ಎಲ್ಲಾ ಮಜಲುಗಳನ್ನೂ ನುಡಿಸಿ ಶ್ರೋತೃಗಳಿಗೆ ಮನದಣಿಯೆ ಸಂಗೀತದ ರಸವನ್ನು ಉಣ ಬಡಿಸಿದರು. ಅವರ ವಾದನದಲ್ಲಿ ಭೈರವಿ ಶೃಂಗಾರಗೊಂಡ ರೀತಿಯೇ ಅದ್ಭುತವಾಗಿತ್ತು.

ರಾಗವೊಂದರ ಸಾಧ್ಯತೆಗಳನ್ನು 16 ನಿಮಿಷಗಳ ಪ್ರಸ್ತುತ ಪಡಿಸಿ, ಶ್ರೋತೃಗಳನ್ನು ಸಮ್ಮೊಹನಗೊಳಿಸಿದ್ದರು. ಹಾರ್ಮೋನಿಯಂ ವ್ಯಾಪಕತೆಯ ಬಗ್ಗೆ ಟೀಕೆ ಮಾಡುವವರಿಗಿಲ್ಲಿ ಸಮಂಜಸವಾದ ಉತ್ತರವಿತ್ತು. ಇವರಿಗೆ ತಬಲಾದಲ್ಲಿ ಕೇದಾರ್ ವೈಶಂಪಾಯನ ಅವರು ಉತ್ತಮ ಸಾಥ್ ನೀಡಿ ಸಹಕರಿಸಿದರು. 
-ರೂಪಶ್ರೀ ಕಲ್ಲಿಗನೂರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT