ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಗೇರಾ: ಕುಡಿಯುವ ನೀರು ಪೂರೈಕೆಗೆ ಆಗ್ರಹ;ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ

Last Updated 16 ಜೂನ್ 2012, 10:35 IST
ಅಕ್ಷರ ಗಾತ್ರ

ಯಾದಗಿರಿ: ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ಸಮೀಪದ ಹಾಲಗೇರಾ ಗ್ರಾಮಸ್ಥರು ಶುಕ್ರವಾರ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುವಂತಾಗಿದೆ. ಕೆಲವೇ ಕಿ.ಮೀ. ದೂರದಲ್ಲಿ ನದಿ ಹರಿಯುತ್ತಿದ್ದರೂ, ಗ್ರಾಮದ ಜನರ ನೀರಿನ ಬವಣೆ ತಪ್ಪುತ್ತಿಲ್ಲ. ಹಲವಾರು ದಿನಗಳಿಂದ ಗ್ರಾಮಕ್ಕೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಹೀಗಾದರೆ, ಬದುಕು ನಡೆಸುವುದಾದರೂ ಹೇಗೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಕ್ಕೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಜನರು ದೂರದಿಂದ ನೀರು ತರುವಂತಾಗಿದೆ. ಮಹಿಳೆಯರು, ವೃದ್ಧರು ಹೇಗೆ ನೀರು ತರಬೇಕು. ಈ ಬಗ್ಗೆ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಅಲ್ಲದೇ ಸಮಸ್ಯೆ ಕುರಿತು ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ಮನವಿ ನೀಡಲಾಗಿದೆ. ಆದರೆ ಯಾರೊಬ್ಬರೂ ಇತ್ತ ಗಮನ ಹರಿಸುತ್ತಿಲ್ಲ ಎಂದು ದೂರಿದರು.

ಗ್ರಾಮದ ಜನರ ಸಹನೆಗೂ ಒಂದು ಮಿತಿ ಇದೆ. ಅವಶ್ಯಕವಾಗಿರುವ ಕುಡಿಯುವ ನೀರಿಗೆ ಜನರು ಪರದಾಡಬೇಕಾಗಿದೆ. ಯಾವುದೇ ವ್ಯಕ್ತಿಗಳು ಸಮಸ್ಯೆ ಪರಿಹರಿಸಲು ಮುಂದಾಗದೇ ಇರುವುದರಿಂದ ಬೇಸತ್ತು ಪಂಚಾಯಿತಿಯ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಬೇಕಾಗಿದೆ ಎಂದು ತಿಳಿಸಿದರು. 

ಗ್ರಾಮದಲ್ಲಿ ಸೂಕ್ತ ರಸ್ತೆ ಇಲ್ಲ. ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯಗಳಿಲ್ಲ ಎಂದು ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದ ಮಹಿಳೆಯರು, ಯುವಕರು, ಕಚೇರಿ ಎದುರು ಮುಳ್ಳು ಹಾಕಿ, ಖಾಲಿ ಕೊಡಗಳನ್ನು  ಪ್ರದರ್ಶಿಸಿದರು.

ಇಷ್ಟಾದರೂ ಸಂಜೆಯವರೆಗೂ ಯಾವುದೇ ಜನಪ್ರತಿನಿಧಿಗಳಾಗಲಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾಗಲಿ ಗ್ರಾಮಕ್ಕೆ ಭೇಟಿ ನೀಡಲಿಲ್ಲ. ಇದರಿಂದಾಗಿ ಗ್ರಾಮ ಪಂಚಾಯಿತಿಗೆ ಜಡಿದ ಬೀಗವನ್ನು ತೆರವುಗೊಳಿಸದೇ ಗ್ರಾಮಸ್ಥರು ಪ್ರತಿಭಟನೆ ಮುಂದುವರಿಸಿದರು.

ಶಿವಪ್ಪ, ಹೊನ್ನಪ್ಪ ಯಡ್ಡಳ್ಳಿ, ಮರಿಲಿಂಗಪ್ಪ ನೇತೃತ್ವದಲ್ಲಿ ಗ್ರಾಮದ ಮಹಿಳೆಯರು, ಯುವಕರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT