ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಭಾವಿ ಗೌರವ ಪ್ರಶಸ್ತಿ ಪ್ರದಾನ ಇಂದು

Last Updated 5 ಜನವರಿ 2012, 8:00 IST
ಅಕ್ಷರ ಗಾತ್ರ

ಧಾರವಾಡ: `ಡಾ. ಸೋಮಶೇಖರ ಮತ್ತು ಮಾಲತಿ ಮುನವಳ್ಳಿ ಹೆಲ್ತ್ ಹಾಗೂ ವೆಲ್‌ನೆಸ್ ಫೌಂಡೇಶನ್ ಉದ್ಘಾಟನೆ ಮತ್ತು ಡಿ.ವಿ.ಹಾಲಭಾವಿ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಇದೇ 5 ರಂದು ನಡೆಯಲಿದೆ~ ಎಂದು ಮೈಸೂರಿನ ಜೆಎಸ್‌ಎಸ್ ವಿಶ್ವವಿದ್ಯಾಲಯದ ಕುಲಸಚಿವ ಡಾ. ಮೃತ್ಯುಂಜಯ ಕುಳೇನೂರ ಹೇಳಿದರು. 

 ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅಂದು ಸಂಜೆ 5.30ಕ್ಕೆ ಆಲೂರ ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದರು.

ನಾಲ್ಕು ದಶಕಗಳಿಂದ ಅಮೆರಿಕದಲ್ಲಿ ನೆಲೆಸಿರುವ ಡಾ. ಸೋಮಶೇಖರ ಮುನವಳ್ಳಿ ದಂಪತಿ ಫೌಂಡೇಶನ್ ಆರಂಭಿಸಲು ವಿದ್ಯಾಪೀಠದಲ್ಲಿ ಒಂದು ಲಕ್ಷ ಡಾಲರ್ ದತ್ತಿನಿಧಿ ಸ್ಥಾಪಿಸಿದ್ದಾರೆ. ಈ ಭಾಗದ ವಿಜಾಪುರ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಫೌಂಡೇಶನ್ ಕಾರ್ಯನಿರ್ವಹಿಸಲಿದೆ. ಗ್ರಾಮೀಣ ಜನರಲ್ಲಿ ಆರೋಗ್ಯದ ಬಗ್ಗೆ ಅರಿವನ್ನುಂಟು ಮಾಡುವ ಉದ್ದೇಶದಿಂದ ಫೌಂಡೇಶನ್ ಆರಂಭವಾಗಿದೆ ಎಂದು ಹೇಳಿದರು.

ಫೌಂಡೇಶನ್‌ನಿಂದ ಹೃದ್ರೋಗ, ಮಧುಮೇಹ, ಕ್ಯಾನ್ಸರ್, ರಕ್ತಹೀನತೆ ಮೊದಲಾದ ರೋಗಗಳಿಗೆ ಸಂಬಂಧಿಸಿದಂತೆ ತಜ್ಞ ವೈದ್ಯರಿಂದ ಉಪನ್ಯಾಸ, ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗುವುದು. ಮಹಾವಿದ್ಯಾಪೀಠದ ಜೆಎಸ್‌ಎಸ್ ಆಸ್ಪತ್ರೆ, ವೈದ್ಯಕೀಯ ಕಾಲೇಜು, ದಂತ ವೈದ್ಯ ಕಾಲೇಜು ಮೊದಲಾದ ಸಂಸ್ಥೆಗಳ ಮೂಲಕ ಕಾರ್ಯಕ್ರಮ ನಡೆಸಲಾಗುವುದು ಎಂದರು.

`ಇಲ್ಲಿನ ಜೆಎಸ್‌ಎಸ್ ಹಾಲಭಾವಿ ಸ್ಕೂಲ್ ಆಫ್ ಆರ್ಟ್ ನೀಡುವ ಕಲಾಗುರು ಡಿ.ವಿ.ಹಾಲಭಾವಿ ಗೌರವ ಪ್ರಶಸ್ತಿಯನ್ನು ಕೇಂದ್ರ ಲಲಿತಕಲಾ ಅಕಾಡೆಮಿ ಸದಸ್ಯ ಜೆ.ಎಂ.ಎಸ್.ಮಣಿ ಅವರಿಗೆ ನೀಡಲಾಗುವುದು. ಪ್ರಶಸ್ತಿಯು ಫಲಕ, 10,000 ರೂ. ನಗದು ಬಹುಮಾನ ಒಳಗೊಂಡಿದೆ. 5 ರಂದು ಬೆಳಿಗ್ಗೆ 11.30ಕ್ಕೆ ಆಲೂರ ವೆಂಕಟರಾವ್ ಸಭಾಭವನದಲ್ಲಿ ಮಣಿ ಅವರಿಂದ ಚಿತ್ರಕಲೆ ಕುರಿತು ಪ್ರಾತ್ಯಕ್ಷಿಕೆ ನಡೆಯಲಿದೆ~ ಎಂದು ಹಾಲಭಾವಿ ಸ್ಕೂಲ್‌ನ ಪ್ರಾಚಾರ್ಯೆ ಗಾಯತ್ರಿ ಗೌಡರ ಹೇಳಿದರು.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಜಗದೀಶ ಶೆಟ್ಟರಅವರು  ಉದ್ಘಾಟಿಸುವರು. ಶಾಸಕ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಡಾ. ಸೋಮಶೇಖರ ಮುನವಳ್ಳಿ ಹಾಗೂ ಮಾಲತಿ ಮುನವಳ್ಳಿ ಆಗಮಿಸುವರು ಎಂದು ಡಾ. ಕುಳೇನೂರ ತಿಳಿಸಿದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಧಾರವಾಡ ವಲಯದ ಆಡಳಿತಾಧಿಕಾರಿ ಎಂ.ಪಿ.ಬಗಲಿ, ಡಾ. ಪುರಷೋತ್ತಮ ಶಾಸ್ತ್ರೀ, ಪ್ರತಿಭಾ ಜನಮಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT