ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿ ಸಂಸದರಿಗೆ ಟಿಕೆಟ್‌ ಅನುಮಾನ

Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿಯ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರ ವಿರೋಧ ಇರುವ ಹಲವು ಸಂಸದರಿಗೆ ಈ ಬಾರಿ ಲೋಕಸಭಾ ಟಿಕೆಟ್‌ ಸಿಗುವುದು ಅನುಮಾನ ಎಂದು ಮೂಲಗಳು ತಿಳಿಸಿವೆ.

ಜಿಲ್ಲಾ ಕೋರ್‌ ಕಮಿಟಿಗಳು ಅಭ್ಯರ್ಥಿಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದು, ಎಲ್ಲೆಲ್ಲಿ ಯಾರನ್ನು ಕಣಕ್ಕೆ ಇಳಿಸಬೇಕು ಎನ್ನುವ ವರದಿಯನ್ನು ಪಕ್ಷದ ರಾಜ್ಯ ಘಟಕಕ್ಕೆ ನೀಡಲು ತಯಾರಿ ನಡೆಸಿವೆ.ಈ ಕಾರ­ಣಕ್ಕೆ ಕಳೆದ ವಿಧಾನಸಭಾ ಚುನಾವಣೆ­ಯಲ್ಲಿ ಗೆದ್ದವರು ಮತ್ತು ಸೋತವರು ಪರಿಸ್ಥಿತಿಯ ಲಾಭ ಪಡೆದು, ಲೋಕ­ಸಭಾ ಚುನಾವಣೆಯ ಟಿಕೆಟ್‌ಗಾಗಿ ಲಾಬಿ ತೀವ್ರಗೊಳಿಸಿದ್ದಾರೆ.

ನರೇಂದ್ರ ಮೋದಿ ಅವರ ಅಲೆ­ಯಲ್ಲಿ ತೇಲಿ ತಾವು ಕೂಡ ದಡ ಸೇರ­ಬಹುದು ಎನ್ನುವ ನಿರೀಕ್ಷೆ ಹಲವ­ರಲ್ಲಿದೆ. ಈ ಕಾರಣಕ್ಕೆ ದೆಹಲಿ ಕಡೆಗೆ ಮುಖ ಮಾಡಿ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆ­ಯಲ್ಲಿ ಬಿಜೆಪಿಯ 19 ಮಂದಿ ಗೆದ್ದಿದ್ದರು. ಅವರಲ್ಲಿ ಕನಿಷ್ಠ ನಾಲ್ಕೈದು ಮಂದಿಗೆ ಟಿಕೆಟ್‌ ಸಿಗುವುದು ಅನು­ಮಾನ. ಟಿಕೆಟ್‌ ಕೊಡುವುದಕ್ಕೆ ಸ್ಥಳೀಯ ಮಟ್ಟದಲ್ಲಿ ತೀವ್ರ ವಿರೋಧ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಕಾರಣಕ್ಕೆ ಗೆಲ್ಲುವಂತಹ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆದಿದೆ. ವಿಧಾನಸಭಾ ಚುನಾವಣೆ­ಯಲ್ಲಿ ಪರಾಜಯಗೊಂಡಿದ್ದ ಆನೇ­ಕಲ್‌ನ ಎ.­ನಾರಾಯಣಸ್ವಾಮಿ ಅವರು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಯತ್ನ ನಡೆಸಿದ್ದಾರೆ.

ಹಾಲಿ ಸಂಸದ ಜನಾರ್ದನಸ್ವಾಮಿ ಅವರ ಬದಲಿಗೆ ನಾರಾಯಣಸ್ವಾಮಿ ಅವರಿಗೆ ಟಿಕೆಟ್‌ ನೀಡಲು ಪಕ್ಷದ ಮಟ್ಟದಲ್ಲಿ ಚರ್ಚೆಗಳು ನಡೆದಿವೆ. ‘ನಾನಾಗೇ ಟಿಕೆಟ್‌ ಕೇಳುವುದಿಲ್ಲ. ಪಕ್ಷ ಕೊಟ್ಟರೆ ಕಣಕ್ಕೆ ಇಳಿಯುತ್ತೇನೆ’ ಎಂದು ನಾರಾಯಣಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಂಗಳೂರು ಉತ್ತರದಿಂದ ಡಿ.ಬಿ.­ಚಂದ್ರೇಗೌಡ ಬದಲಿಗೆ, ಪದ್ಮನಾಭ­ನಗರ ಶಾಸಕ ಆರ್‌.ಅಶೋಕ ಅವ­ರನ್ನು ಕಣಕ್ಕೆ ಇಳಿಸಲು ಪಕ್ಷ ಚಿಂತನೆ ನಡೆಸಿದೆ.
ಇದಕ್ಕೆ ಅಶೋಕ ಕೂಡ ಆಸಕ್ತಿ ತೋರಿದ್ದಾರೆ. ಮಾಜಿ ಮುಖ್ಯ­ಮಂತ್ರಿ ಡಿ.ವಿ.ಸದಾನಂದ ಗೌಡ ಕೂಡ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಕೊಪ್ಪಳ ಕ್ಷೇತ್ರದಿಂದ ಹಾಲಿ ಸಂಸದ ಶಿವರಾಮೇಗೌಡ ಬದ­ಲಿಗೆ, ಮಾಜಿ ಶಾಸಕ ಕರಡಿ ಸಂಗಣ್ಣ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಹೊಸಕೋಟೆಯ ಮಾಜಿ ಸಚಿವ ಬಿ.ಎನ್‌.ಬಚ್ಚೇಗೌಡ ಅವರು ಚಿಕ್ಕ­ಬಳ್ಳಾಪುರ ಕ್ಷೇತ್ರದಿಂದ ಕಣಕ್ಕೆ ಇಳಿಯ­ಲಿದ್ದಾರೆ. ಅವರು ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದು, ಕಾರ್ಯಕರ್ತ­ರನ್ನು ಭೇಟಿ ಮಾಡಿ ಚುನಾವಣೆಗೆ ತಯಾರಿ ನಡೆಸಿದ್ದಾರೆ.

ವಿಧಾನ ಪರಿಷತ್‌ ಸದಸ್ಯ ವೈ.ಎ.­ನಾರಾಯಣಸ್ವಾಮಿ ಕೂಡ ಈ ಕ್ಷೇತ್ರದ ಟಿಕೆಟ್‌ಗಾಗಿ ಲಾಬಿ ನಡೆಸಿದ್ದಾರೆ.

ರಾಯಚೂರು ಕ್ಷೇತ್ರದಿಂದ ಶಿವನ­ಗೌಡ ನಾಯಕ್ ಅವರನ್ನು ಕಣಕ್ಕೆ ಇಳಿಸಲು ಚಿಂತನೆ ನಡೆದಿದೆ. ಒಂದು ವೇಳೆ ಅವರು ಒಪ್ಪದಿದ್ದರೆ ಜೆಡಿಎಸ್‌­ನಲ್ಲಿರುವ ರಾಜುಗೌಡ ಅವರನ್ನು ಬಿಜೆಪಿಗೆ ಕರೆತಂದು, ಕಣಕ್ಕಿಳಿಸುವ ಲೆಕ್ಕಚಾರವೂ ನಡೆದಿದೆ.

ಕೋಲಾರ ಕ್ಷೇತ್ರದಿಂದ ಅರವಿಂದ ಲಿಂಬಾವಳಿ ಅವರನ್ನು ಕಣಕ್ಕೆ ಇಳಿಸಲು ತಂತ್ರ ರೂಪಿಸಲಾಗುತ್ತಿದೆ. ಲಿಂಬಾವಳಿ ಕೂಡ ಇದಕ್ಕೆ ಒಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಿವಮೊಗ್ಗ ಇನ್ನೂ ಅತಂತ್ರ: ಯಡಿ­ಯೂರಪ್ಪ ಬಿಜೆಪಿ ಸೇರುವುದು ಇನ್ನೂ ಸಾಧ್ಯವಾಗದಿರುವ ಕಾರಣ ಶಿವ­ಮೊಗ್ಗದ ಟಿಕೆಟ್‌ ಯಾರಿಗೆ ಎನ್ನು­ವುದು ಇನ್ನೂ ಖಚಿತವಾಗಿಲ್ಲ.  ಪಕ್ಷಕ್ಕೆ ಸೇರಿದ ನಂತರ ಯಡಿಯೂರಪ್ಪ ಅವರೇ ಸ್ಪರ್ಧಿಸಬಹುದು ಅಥವಾ ಅವರು ತಮ್ಮ ಪುತ್ರನನ್ನು ಕಣಕ್ಕೆ ಇಳಿಸಬಹುದು ಎನ್ನಲಾಗಿದೆ. ಒಟ್ಟಿ­ನಲ್ಲಿ ಅವರು ಹೇಳಿದವರಿಗೆ ಟಿಕೆಟ್‌ ನೀಡಲು ಬಿಜೆಪಿ ಮಾನಸಿಕವಾಗಿ ಸಿದ್ಧವಾಗಿದೆ.

ಬಿಎಸ್‌ಆರ್‌ ಕಾಂಗ್ರೆಸ್‌ ಜತೆ ಚುನಾವಣಾ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಬಳ್ಳಾರಿ ಕ್ಷೇತ್ರವನ್ನು ಆ ಪಕ್ಷಕ್ಕೆ ಬಿಟ್ಟುಕೊಡಲು ಬಿಜೆಪಿ ಚಿಂತನೆ ನಡೆಸಿದೆ.

27ಕ್ಕೆ ಬಿಜೆಪಿ ಕಾರ್ಯಕಾರಿಣಿ
ಬೆಂಗಳೂರು
: ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಇದೇ 27ರಂದು ನಡೆಯಲಿದ್ದು, ಅದರಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್‌ ಸಿಂಗ್‌ ಭಾಗವಹಿಸಲಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಉದ್ದೇಶದಿಂದ ಈ ಸಭೆ ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT