ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿಗೆ ವೈಜ್ಞಾನಿಕ ದರ: ಅಧಿವೇಶನದಲ್ಲಿ ಚರ್ಚೆ

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರವಾಸಿಗಳ ಒತ್ತಡಕ್ಕೆ ಮಣಿದು ಸರ್ಕಾರ ಹಾಲಿನ ದರವನ್ನು ಕಡಿಮೆ ಮಾಡಬಾರದು. ಹಾಲಿನ ಉತ್ಪಾದನಾ ವೆಚ್ಚದ ಆಧಾರದ ಮೇಲೆ ವೈಜ್ಞಾನಿಕವಾಗಿ ದರ ನಿಗದಿಪಡಿಸಬೇಕು. ಈ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ಶಾಸಕ ಜೆ.ನರಸಿಂಹಸ್ವಾಮಿ ಹೇಳಿದರು.

 ತಾಲ್ಲೂಕಿನ ಏಕಾಶಿಪುರದಲ್ಲಿ ಮಂಗಳವಾರ ಜಾನುವಾರುಗಳ ಕಾಲು ಬಾಯಿ ಜ್ವರಕ್ಕೆ ಲಸಿಕೆ ಹಾಕುವ ಕಾರ್ಯಕ್ರಮ ಮತ್ತು ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನದಲ್ಲಿ  ಭಾಗವಹಿಸಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಪ್ರತಿ ದಿನ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ರೈತರಿಗೆ ನಿಗದಿತ ಬೆಲೆ ದೊರೆಯುತ್ತಿರುವುದು ಹೈನುಗಾರಿಕೆಯಿಂದ ಮಾತ್ರ. ಆದರೆ ಹಾಲಿನ ಉತ್ಪಾದನಾ ವೆಚ್ಚ ದುಬಾರಿಯಾಗುತ್ತಿದ್ದು,  ರೈತರು ಹೈನುಗಾರಿಕೆಯಿಂದ ಹಿಂದೆ ಸರಿಯುವ ಅಪಾಯವಿದೆ. ಇದನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಇತ್ತೀಚಿನ ಮಿಶ್ರತಳಿ ಹಸುಗಳಿಂದ ಹಾಲಿನ ಉತ್ಪಾದನೆ ಹೆಚ್ಚುತ್ತಿದೆ.  ಅಕಾಲಿಕವಾಗಿ ಹಸುಗಳು ಮೃತಪಟ್ಟರೆ ರೈತರು ನಷ್ಟ ಅನುಭವಿಸಬಾರದು ಎನ್ನುವ ಉದ್ದೇಶದಿಂದ ಹಾಲು ಒಕ್ಕೂಟಗಳು ಜಾರಿಗೆ ತಂದಿರುವ ಗುಂಪು ವಿಮಾ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ರೈತರಿಗೆ  ಸಲಹೆ ನೀಡಿದರು.

ಆಕರ್ಷಕ ಮತ್ತು ಆರೋಗ್ಯವಂತ ಮಿಶ್ರತಳಿ ಕರುಗಳಿಗೆ ಬಹುಮಾನ ನೀಡಲಾಯಿತು.  ಏಕಾಶಿಪುರ ಎಂಪಿಸಿಎಸ್ ಅಧ್ಯಕ್ಷ ಕೃಷ್ಣೇಗೌಡ ಅಧ್ಯಕ್ಷತೆವಹಿಸಿದ್ದರು. ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ, ಬಮುಲ್ ನಿರ್ದೇಶಕ ಎನ್.ಹನುಮಂತೇಗೌಡ, ಪುಷ್ಪಾ ಶಿವಶಂಕರ್, ಜಿ.ಪಂ. ಅಧ್ಯಕ್ಷೆ ಭಾಗ್ಯಮ್ಮ ಮುನಿಕೃಷ್ಣಪ್ಪ, ತಾ.ಪಂ.ಅಧ್ಯಕ್ಷ ಎಚ್.ಎಸ್.ಅಶ್ವತ್ಥ್‌ನಾರಾಯಣ ಕುಮಾರ್, ಎಪಿಎಂಸಿ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ್, ಉಪಾಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ತಾ.ಪಂ.ಸದಸ್ಯ ಕೆ.ಯಲ್ಲಪ್ಪ, ಬಿಡಿಸಿಸಿ ನಿರ್ದೇಶಕ ಚುಂಚೇಗೌಡ, ವಿಎಸ್‌ಎಸ್‌ಎನ್ ಅಧ್ಯಕ್ಷ ಜಿ.ಎಚ್.ಮಲ್ಲೇಶ್, ಅಳುಮಲ್ಲಿಗೆ ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀಗೋಪಾಲ್, ಉಪಾಧ್ಯಕ್ಷ ಎನ್.ರಘು, ಟಿಎಪಿಎಂಸಿಎಸ್ ಅಧ್ಯಕ್ಷ ಬಿ.ಎಲ್.ಹನುಮಂತಯ್ಯ, ಒಕ್ಕೂಟದ ಉಪವ್ಯವಸ್ಥಾಪಕ ಆರ್.ಸುಬ್ಬರಾಯಪ್ಪ, ಡಾ.ಎಸ್.ನರಸಿಂಹನ್, ಡಾ.ಎಂ.ಗಂಗಯ್ಯ ಮತ್ತಿತರರು ಹಾಜರಿದ್ದರು.  

ಬಮುಲ್ ವ್ಯಾಪ್ತಿಯಲ್ಲಿ ಚಾಲನೆ
ದೇವನಹಳ್ಳಿ: ಇಲ್ಲಿನ ಪರ್ವತಪುರ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಬುಧವಾರ ರಾಸುಗಳ ಕಾಲು ಬಾಯಿ ಜ್ವರಕ್ಕೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಬಮುಲ್ ನಿರ್ದೇಶಕ ಎ.ಸೋಮಣ್ಣ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಕೇಂದ್ರದ ಆಸ್ಕಾಡ್ ಯೋಜನೆಯಡಿ ಬಮುಲ್ ಒಕ್ಕೂಟದ ವ್ಯಾಪ್ತಿಯ ರಾಮನಗರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ರಾಸುಗಳಿಗೆ ಕಾಲು ಬಾಯಿ ಜ್ವರಕ್ಕೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ.

ಮಾರಕ ರೋಗದ ಸೊಂಕು ತಡೆಯಲು ಹಾಗೂ ಗುಣಮಟ್ಟದ ಹಾಲು ಉತ್ಪಾದನೆ ಕಾಯ್ದುಕೊಳ್ಳುವ ಈ ಲಸಿಕಾ ಶಿಬಿರ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ದೇವನಹಳ್ಳಿ ತಾಲ್ಲೂಕು ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದು, ದೊಡ್ಡಬಳ್ಳಾಪುರ, ಹೊಸಕೋಟೆ ನಂತರದ ಸ್ಥಾನದಲ್ಲಿವೆ ಎಂದು ಹೇಳಿದರು.

ತಾಲ್ಲೂಕು ಹಿರಿಯ ಪಶುವೈದ್ಯಾಧಿಕಾರಿ ಡಾ.ಮುನಿವೆಂಕಟಪ್ಪ, ಪಶುವೈದ್ಯ ಇಲಾಖೆ ಹಾಗೂ ಬಮುಲ್ ಸಂಯುಕ್ತವಾಗಿ ಒಂದು ತಿಂಗಳ ಕಾಲ ನಿರಂತರವಾಗಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ.

ತಾಲ್ಲೂಕಿನ 79 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಒಟ್ಟು 50 ಸಾವಿರ ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇಲ್ಲದಿದ್ದರೆ, ಹಾಲು ಉತ್ಪಾದನೆ ಪ್ರತಿ ಹಸುವಿನ ಶೆ.90 ರಷ್ಟು ಇಳಿಕೆಯಾಗುತ್ತದೆ.
 
ಎತ್ತು ಮತ್ತು ಹಸುಗಳಲ್ಲಿ ಬಲಹೀನತೆ, ಪಡ್ಡೆಗಳಿಗೆ ಫಲಧಾರಣೆ ವಿಳಂಬಕ್ಕೆ ಕಾರಣವಾಗಲಿದೆ. ಎಲ್ಲಾ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ನಿರ್ದೇಶಕರು ಮುಂಜಾಗ್ರತೆವಹಿಸಿ,  ಲಸಿಕೆ ಹಾಕಿಸಲು ಮುಂದಾಗಬೇಕು. ಜಾನುವಾರುಗಳ ಆರೋಗ್ಯದ ಬಗ್ಗೆ ನಿಗಾವಹಿಸುವುದರಿಂದ ನಮ್ಮ ಆದಾಯವೂ ಹೆಚ್ಚುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.

ದೇವನಹಳ್ಳಿ ಬಮುಲ್ ಒಕ್ಕೂಟ ಉಪವ್ಯವಸ್ಥಾಪಕ ಡಾ.ರೇಖ್ಯಾನಾಯ್ಕ, ವಿ.ಜೆ ನಾಯ್ಕ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿ.ಮುನಿರಾಜು, ಕಾರ್ಯದರ್ಶಿ ಜಿ.ವೆಂಕಟೇಶ್, ವಿಸ್ತರಣಾಧಿಕಾರಿ ವೆಂಕಟೇಶ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT