ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನ ದರ ಏರಿಕೆಗೆ ಕೋರಿಕೆ

Last Updated 9 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಹಾಲಿನ ಮಾರಾಟ ಬೆಲೆಯನ್ನು ಲೀಟರ್‌ಗೆ ಕನಿಷ್ಠ ರೂ 3 ಏರಿಸಲು ಅನುಮತಿ ನೀಡುವಂತೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಬಿನ್ನವತ್ತಳೆಯಲ್ಲಿ ಮನವಿ ಮಾಡಿದೆ.

ಬೆಂಗಳೂರು ಡೇರಿ ಆವರಣದಲ್ಲಿ ಶುಕ್ರವಾರ ನಡೆದ ನಂದಿನಿ ಹಾಲು ಉತ್ಪನ್ನಗಳ ಉತ್ಪಾದನಾ ಘಟಕದ ಶಿಲಾನ್ಯಾಸ ಸಮಾರಂಭದಲ್ಲಿ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಸಿ. ಮಂಜುನಾಥ್ ಅವರು ಗೃಹ ಹಾಗೂ ಸಾರಿಗೆ ಸಚಿವ ಆರ್. ಅಶೋಕ ಅವರ ಮೂಲಕ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರಿಗೆ ಈ ಮನವಿ ಪತ್ರ ಸಲ್ಲಿಸಿದರು.

ರಾಜ್ಯದಲ್ಲಿ ಕನಿಷ್ಠ ಮಾರಾಟ ಬೆಲೆಯಲ್ಲಿ ಹಾಲು ಮಾರಾಟ ಮಾಡುತ್ತಿರುವುದರಿಂದ ಹಾಗೂ ಉತ್ಪಾದನಾ/ ಸಂಸ್ಕರಣಾ ವೆಚ್ಚಗಳನ್ನು ಸರಿದೂಗಿಸಲು ಹಾಲಿನ ಮಾರಾಟ ಬೆಲೆಯನ್ನು ಲೀಟರ್‌ಗೆ ಕನಿಷ್ಠ ರೂ. 3ರಂತೆ ಏರಿಸಲು ಅನುಮತಿ ನೀಡಬೇಕು ಎಂದು ಕೋರಲಾಗಿದೆ.

ಹೊರ ರಾಜ್ಯಗಳಲ್ಲಿ ಹಾಲಿನ ಮಾರಾಟ ದರ 28ರಿಂದ 30 ರೂಪಾಯಿಗಳಷ್ಟಿದೆ. ರಾಜ್ಯದಲ್ಲಿ ಖಾಸಗಿ ಬ್ರಾಂಡ್ ಹಾಲಿನ ದರ ಕೂಡ ಲೀಟರ್‌ಗೆ 27 ರೂಪಾಯಿವರೆಗೆ ಇದೆ. ಹಾಲು ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ಅದನ್ನು ಸರಿದೂಗಿಸಲು ಅನುಕೂಲವಾಗುವಂತೆ ಹಾಗೂ ಇತರೆ ರಾಜ್ಯಗಳಲ್ಲಿರುವಂತೆ ನಮ್ಮ ರಾಜ್ಯದ ನಂದಿನಿ ಬ್ರಾಂಡ್‌ನ ಹಾಲಿನ ಮಾರಾಟ ದರವನ್ನು ಕನಿಷ್ಠ 25 ರೂಪಾಯಿಗೆ ಹೆಚ್ಚಿಸಿ ಇದಕ್ಕೆ ಅನುಗುಣವಾಗಿ ಉತ್ಪಾದಕರಿಗೆ ಹಾಲು ಶೇಖರಣಾ ದರವನ್ನು ಹೆಚ್ಚಿಸಲು ಅನುವು ಮಾಡಿಕೊಡುವಂತೆಯೂ ಮನವಿ ಮಾಡಲಾಗಿದೆ.

ಹಾಲು ಉತ್ಪಾದನೆ ವೆಚ್ಚ ಅಧಿಕವಾಗಿರುವುದರ ಜತೆಗೆ, ತೈಲ ಬೆಲೆಯೂ ಏರಿಕೆಯಾಗಿದೆ. ಇದೀಗ ವಿದ್ಯುತ್ ಹಾಗೂ ನೀರಿನ ದರ ಹೆಚ್ಚಾಗುತ್ತಿದೆ. ಇತರೆ ವಸ್ತುಗಳ ಬೆಲೆ ಹೆಚ್ಚಾಗಲಿರುವುದರಿಂದ ಹೈನುಗಾರಿಕೆಯನ್ನು ಲಾಭದಾಯಕ ಕಸುಬನ್ನಾಗಿ ಪ್ರೋತ್ಸಾಹಿಸಬೇಕಾಗಿದೆ. ಹಾಲು ಉತ್ಪಾದಕರಿಗೆ ಉತ್ತಮ ಬೆಲೆ ನೀಡಬೇಕಾದ ಅವಶ್ಯಕತೆಯಿದೆ. ಹಾಗೆಯೇ, ಹಾಲು ಸಂಸ್ಕರಣಾ ವೆಚ್ಚ ಅಧಿಕವಾಗುತ್ತಿರುವುದರಿಂದ ಇದನ್ನು ಸರಿದೂಗಿಸಲು ಹಾಲಿನ ಮಾರಾಟ ಬೆಲೆ ಪರಿಷ್ಕರಿಸುವ ಅಗತ್ಯವಿದೆ ಎಂದು ಒಕ್ಕೂಟ ಸರ್ಕಾರವನ್ನು ಕೋರಿದೆ.

ಹಿಂದುಳಿದ ಪ್ರದೇಶವಾದ ಗುಲ್ಬರ್ಗಾ- ಬೀದರ್ ಹಾಲು ಒಕ್ಕೂಟವು ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ಆ ಪ್ರದೇಶದ ಹೈನುಗಾರರಿಗೆ ನೆರವು ನೀಡಲು ಹಾಗೂ ಐದು ಕೋಟಿ ರೂಪಾಯಿ ಸಾಲ ತೀರಿಸಲು ಮತ್ತು ಮೂಲಸೌಕರ‌್ಯಗಳ ಅಭಿವೃದ್ಧಿಗೆ ಅವಶ್ಯವಿರುವ ರೂ. 9 ಕೋಟಿ ಸೇರಿದಂತೆ ಒಟ್ಟು 14 ಕೋಟಿ ರೂಪಾಯಿ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ.

ಉತ್ತರ ಕರ್ನಾಟಕದ ಧಾರವಾಡ, ಬೆಳಗಾವಿ, ಬಿಜಾಪುರ ಹಾಗೂ ಬಳ್ಳಾರಿ ಹಾಲು ಒಕ್ಕೂಟಗಳಿಗೆ ಮೂಲಸೌಕರ‌್ಯಗಳನ್ನು ಕಲ್ಪಿಸಲು ಹಾಗೂ ಹೈನು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು 50 ಕೋಟಿ ರೂಪಾಯಿ ನೆರವು ಕೋರಲಾಗಿದೆ.

ಕೋಲಾರ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ನೂತನ ಮೆಗಾ ಡೈರಿ ಸ್ಥಾಪಿಸಲು ರೂ. 65 ಕೋಟಿ ಯೋಜನಾ ವೆಚ್ಚದ ಪೈಕಿ ರೂ. 10 ಕೋಟಿ ಹಣ ಬಿಡುಗಡೆ ಮಾಡಿರುವ ಸರ್ಕಾರ ಬಾಕಿ ನೆರವು ನೀಡಬೇಕು. ಮೈಸೂರು ಮೆಗಾ ಡೇರಿ ಸ್ಥಾಪನೆ ಸೇರಿದಂತೆ ರೂ. 80 ಕೋಟಿ ನೆರವು ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಶಿಕಾರಿಪುರದಲ್ಲಿ ಪಶು ಆಹಾರ ಘಟಕ ಸ್ಥಾಪನೆಗೆ 45 ಕೋಟಿ ರೂಪಾಯಿಗಳ ಆರ್ಥಿಕ ನೆರವು ಕೋರಲಾಗಿದೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT