ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನ ದರ ಲೀಟರ್‌ಗೆ ರೂ 3 ಏರಿಕೆ

Last Updated 6 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ (ಕೆಎಂಎಫ್) ಜ. 8ರಿಂದ ಜಾರಿಗೆ ಬರುವಂತೆ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ಮೂರು ರೂಪಾಯಿ ಹೆಚ್ಚಿಸಿದೆ. ಮೊಸರು ದರ ಕೂಡ 4 ರೂಪಾಯಿ ಹೆಚ್ಚಳವಾಗಲಿದೆ.

ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಸಹಕಾರ ಸಚಿವ ಲಕ್ಷ್ಮಣ ಸವದಿ ಹಾಗೂ ಪಶು ಸಂಗೋಪನಾ ಸಚಿವ ರೇವುನಾಯಕ್ ಬೆಳಮಗಿ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಕೆಎಂಎಫ್ ಅಧ್ಯಕ್ಷ ಸೋಮಶೇಖರರೆಡ್ಡಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪರಿಷ್ಕೃತ ಹಾಲಿನ ದರ ಏರಿಕೆ ವಿವರ ನೀಡಿದರು.

ಪ್ರತಿ ಲೀಟರ್ ಟೋನ್ಡ್ ಹಾಲಿನ ದರ 21ರಿಂದ 24 ರೂಪಾಯಿಗೆ ಏರಿಕೆಯಾದರೆ, ಹೋಮೋಜಿನೈಸ್ಡ್ ಟೋನ್ಡ್ ಹಾಲಿನ ದರ ರೂ. 22ರಿಂದ 25, ಡಬಲ್ ಟೋನ್ಡ್ ಹಾಲಿನ ದರ ರೂ. 20ರಿಂದ 23 ರೂಪಾಯಿಗಳಷ್ಟು ಹೆಚ್ಚಳವಾಗಲಿದೆ. ಮೊಸರು ದರ ಲೀಟರ್‌ಗೆ 26ರಿಂದ 30 ರೂಪಾಯಿಗೆ ಏರಿಕೆಯಾಗಲಿದೆ.

ಮುದ್ರಿತ ಹಾಲಿನ ಪ್ಯಾಕೆಟ್‌ಗಳ ದಾಸ್ತಾನು ಮುಗಿಯುವವರೆಗೂ ಅದರ ಮೇಲೆ ಹಳೆಯ ದರವೇ ನಮೂದಾಗಿರುತ್ತದೆ. ಇದಕ್ಕಾಗಿ ಗ್ರಾಹಕರು ಸಹಕರಿಸಬೇಕು ಎಂದು ಅವರು ಕೋರಿದರು.

ಸಾಗಣೆ ವೆಚ್ಚ ಹೆಚ್ಚು ತಗುಲುತ್ತಿರುವ ದಕ್ಷಿಣ ಕನ್ನಡ, ರಾಯಚೂರು, ಧಾರವಾಡ, ಬಿಜಾಪುರ, ಬೆಳಗಾವಿ ಹಾಗೂ ಗುಲ್ಬರ್ಗ ಒಕ್ಕೂಟ ವ್ಯಾಪ್ತಿಗಳಲ್ಲಿ ಕೂಡ ಹಾಲಿನ ದರ 3 ರೂಪಾಯಿಗಳಷ್ಟೇ ಏರಿಕೆಯಾದರೂ, ಈಗಾಗಲೇ ಈ ಭಾಗಗಳಲ್ಲಿ ದರ ಹೆಚ್ಚಿರುವುದರಿಂದ ಪರಿಷ್ಕೃತ ದರದಲ್ಲಿಯೂ ಮೂರು ರೂಪಾಯಿ ಹೆಚ್ಚಳವಾಗಲಿದೆ.

ಬೆಂಗಳೂರಿನಲ್ಲಿ ಪ್ರತಿ ಲೀಟರ್ ಹಾಲು ಸಾಗಾಣಿಕೆಗೆ 40 ಪೈಸೆ ಖರ್ಚಾದರೆ, ದಕ್ಷಿಣ ಕನ್ನಡ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ 1.5 ರೂಪಾಯಿವರೆಗೆ ಖರ್ಚು ಬರುತ್ತಿದೆ. ಇದರಿಂದ ಈ ಭಾಗಗಳಲ್ಲಿ ಮೊದಲೇ ಹಾಲಿನ ದರದಲ್ಲಿ ಒಂದೆರಡು ರೂಪಾಯಿ ಹೆಚ್ಚಳವಾಗಿರುವುದನ್ನು ಇಲ್ಲಿ ಗಮನಿಸಬಹುದು.

3 ಪದರದ `ಫ್ಲೆಕ್ಸಿ~ ಪ್ಯಾಕ್ ಬಿಡುಗಡೆ
ಕೆಎಂಎಫ್ ಮೂರು ಪದರದ ಫ್ಲೆಕ್ಸಿ `ಗುಡ್ ಲೈಫ್~ ಹಾಲಿನ ಪ್ಯಾಕೆಟ್ ಅನ್ನು ಆರು ತಿಂಗಳಲ್ಲಿ ಬಿಡುಗಡೆ ಮಾಡಲಿದೆ. ಇದು ಬೆಂಗಳೂರಿನಿಂದ 200 ಕಿ.ಮೀ. ವ್ಯಾಪ್ತಿಯ ಗ್ರಾಹಕರಿಗಷ್ಟೇ ಲಭ್ಯ.

ಪ್ರಸ್ತುತ 36 ರೂಪಾಯಿ ದರದ ಆರು ಪದರದ `ಗುಡ್ ಲೈಫ್~ ಹಾಲಿನ ಪ್ಯಾಕೆಟ್‌ಗಳ ಮೂಲಕ 2.5 ಲಕ್ಷ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದೆ. ಈ ಪ್ಯಾಕೆಟ್ ಹಾಲನ್ನು ರೆಫ್ರಿಜರೇಟರ್‌ನಲ್ಲಿ 90 ದಿನಗಳ ಕಾಲ ಸುರಕ್ಷಿತವಾಗಿ ಇಡಬಹುದು. ಆದರೆ, ಈ ಹಾಲಿಗೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚಿನ ಬೇಡಿಕೆಯಿದೆ.

ಇದೀಗ ಬಿಡುಗಡೆ ಮಾಡಲು ಉದ್ದೇಶಿಸಿರುವ ಮೂರು ಪದರದ ಪ್ಯಾಕೆಟ್ ಹಾಲನ್ನು ರೆಫ್ರಿಜರೇಟರ್ ಇಲ್ಲದೆ ಒಂದು ತಿಂಗಳು ಸುರಕ್ಷಿತವಾಗಿಡಬಹುದು. ಅಲ್ಲದೆ, ಈ ಪ್ಯಾಕೆಟ್ ಹಾಲಿನ ದರ ಇನ್ನೂ ಎರಡು ರೂಪಾಯಿ ಕಡಿಮೆ.

ಕರ್ನಾಟಕದಲ್ಲಿ ಹಾಲನ್ನು ಮೂರು ತಿಂಗಳಿಟ್ಟು ಬಳಸುವವರ ಸಂಖ್ಯೆ ಬಹಳ ಕಡಿಮೆ. ಹೀಗಾಗಿ, ಗ್ರಾಹಕರ ಅನುಕೂಲಕ್ಕಾಗಿ ಮೂರು ಪದರದ ಹಾಲಿನ ಪ್ಯಾಕೆಟ್ ಅನ್ನು ಬಿಡುಗಡೆ ಮಾಡಲು ಕೆಎಂಎಫ್ ನಿರ್ಧರಿಸಿದೆ.

`ಹಾಲು ಉತ್ಪಾದನಾ ವೆಚ್ಚ ಏರಿಕೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ಹಾಲು ಮಹಾಮಂಡಳದ ಸದಸ್ಯ ಹಾಲು ಒಕ್ಕೂಟಗಳು ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ 5ರಿಂದ 7 ರೂಪಾಯಿವರೆಗೆ ಹೆಚ್ಚಿಸಲು ಪ್ರಸ್ತಾವ ಸಲ್ಲಿಸಿದ್ದವು.

ಗ್ರಾಮೀಣ ಪ್ರದೇಶದಲ್ಲಿ ಹಾಲು ಉತ್ಪಾದಕರಿಗೆ ಆಗುತ್ತಿರುವ ವೆಚ್ಚ ಹಾಗೂ ಇತ್ತೀಚಿನ ದಿನಗಳಲ್ಲಿ ಹಲವು ಬಾರಿ ಡೀಸೆಲ್ ಮತ್ತಿತರ ಅವಶ್ಯ ವಸ್ತುಗಳ ಬೆಲೆ ಮತ್ತು ವಿದ್ಯುತ್ ದರ ಏರಿಕೆಯಾಗಿರುವುದರಿಂದ ಹಾಲಿನ ಸಾಗಾಣಿಕೆ ಹಾಗೂ ಸಂಸ್ಕರಣಾ ವೆಚ್ಚದಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದನ್ನು ಪರಿಶೀಲಿಸಿ ದರ ಪರಿಷ್ಕರಿಸಲು ತೀರ್ಮಾನಿಸಲಾಯಿತು~ ಎಂದು ರೆಡ್ಡಿ ಮಾಹಿತಿ  ನೀಡಿದರು.

`ರೈತರಿಂದ 5ರಿಂದ 7 ರೂಪಾಯಿ ದರ ಏರಿಕೆಗೆ ಬೇಡಿಕೆ ಬಂದಿದ್ದರೂ ಗ್ರಾಹಕರು ಹಾಗೂ ರೈತರ ಹಿತದೃಷ್ಟಿಯಿಂದ ದರವನ್ನು ಪ್ರತಿ ಲೀಟರ್‌ಗೆ ಮೂರು ರೂಪಾಯಿಗಳಷ್ಟೇ ಹೆಚ್ಚಿಸಲು ನಿರ್ಧರಿಸಲಾಗಿದೆ.

ಪರಿಷ್ಕೃತ ಹಾಲಿನ ದರದಲ್ಲಿ ಶೇ 75ರಿಂದ 80ರಷ್ಟು ಮೊತ್ತ ಅಂದರೆ, ಲೀಟರ್‌ಗೆ 2ರಿಂದ 2.5 ರೂಪಾಯಿಗಳನ್ನು ರೈತರಿಗೇ ನೀಡಲಾಗುತ್ತದೆ~ ಎಂದು ಅವರು ಸ್ಪಷ್ಟಪಡಿಸಿದರು.

ಕರ್ನಾಟಕ ರಾಜ್ಯ ಹೊರತುಪಡಿಸಿ ಇತರೆ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಕ್ಕೆ ಸಮನಾಗಿ ಹಾಲು ಮಾರಾಟ ದರವನ್ನು ಪ್ರತಿ ಲೀಟರ್‌ಗೆ 26ರಿಂದ 28 ರೂಪಾಯಿವರೆಗೆ ಹೆಚ್ಚಿಸಲಾಗಿದೆ. ಆದರೂ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪರಿಷ್ಕೃತ ಹಾಲಿನ ದರ ಕಡಿಮೆಯಾಗಿದೆ ಎಂದರು.

50 ಲಕ್ಷ ಕೆ.ಜಿ ಗುರಿ
ರಾಜ್ಯದಲ್ಲಿ 50 ಲಕ್ಷ ಕೆ.ಜಿ.ಗಳಷ್ಟು ಹಾಲಿನ ಉತ್ಪಾದನೆ ಗುರಿಯಿತ್ತು ಆದರೆ, ಪ್ರಸ್ತುತ 45 ಲಕ್ಷ ಕೆ.ಜಿ.ಗಳಷ್ಟು ಹಾಲು ಉತ್ಪಾದನೆಯಾಗುತ್ತಿದೆ. ಸುಮಾರು 99 ತಾಲ್ಲೂಕುಗಳಲ್ಲಿ ಬರಗಾಲ ಉಂಟಾಗಿರುವುದರಿಂದ ಸುಮಾರು 1ರಿಂದ 1.5 ಲಕ್ಷ ಕೆ.ಜಿ.ಗಳಷ್ಟು ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ರೈತರಿಗೆ ಹೆಚ್ಚಿನ ದರ ನೀಡಲಿರುವುದರಿಂದ ಮುಂದಿನ ಮೂರ‌್ನಾಲ್ಕು ತಿಂಗಳಲ್ಲಿ 50 ಲಕ್ಷ ಕೆ.ಜಿ. ಹಾಲು ಉತ್ಪಾದನೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೈತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಗೋವುಗಳ ಆಹಾರ ಬೆಲೆಯನ್ನು ಟನ್‌ಗೆ 10,300 ರೂಪಾಯಿಗಳಿಂದ 10 ಸಾವಿರ ರೂಪಾಯಿಗೆ ಇಳಿಸಲಾಗಿದೆ ಎಂದು ಅವರು ತಿಳಿಸಿದರು.

ಹಾಲಿನ ದರ ಏರಿಕೆ ಜತೆಗೆ, ಶೀಘ್ರ ಪೆಟ್ರೋಲ್-ಡೀಸೆಲ್ ಹಾಗೂ ವಿದ್ಯುತ್ ದರ ಹೆಚ್ಚಳವಾಗುವ ನಿರೀಕ್ಷೆಯಿರುವುದರಿಂದ ನಂದಿನಿ ಸಿಹಿ ಉತ್ಪನ್ನಗಳ ಬೆಲೆ ಕೂಡ ಶೇ 15ರಿಂದ 20ರಷ್ಟು ಹೆಚ್ಚಳವಾಗಲಿದೆ. ಈ ಬಗ್ಗೆ ಒಕ್ಕೂಟಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎ.ಎಸ್. ಪ್ರೇಮನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT