ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನ ದರದಲ್ಲಿ ಏರಿಕೆ ಸಧ್ಯಕ್ಕಿಲ್ಲ: ಬಸವರಾಜ

Last Updated 3 ಜನವರಿ 2012, 8:05 IST
ಅಕ್ಷರ ಗಾತ್ರ

ಶಿರಸಿ: ಧಾರವಾಡ ಹಾಲು ಒಕ್ಕೂಟ ವ್ಯಾಪ್ತಿಯಲ್ಲಿ ಉತ್ತರ ಕನ್ನಡ ಜಿಲ್ಲೆ ಉಳಿಸಿಕೊಳ್ಳುವ ಕುರಿತು ಸಧ್ಯದಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ. ಜ.12ರಂದು ನಡೆಯುವ ಧಾರವಾಡ ಹಾಲು ಒಕ್ಕೂಟ ಹಾಗೂ ದಕ್ಷಿಣ ಕನ್ನಡ ಹಾಲು ಒಕ್ಕೂಟಗಳ ಸರ್ವಸಾಧಾರಣ ಸಭೆಯಲ್ಲಿ ಈ ಕುರಿತು ಒಮ್ಮತದ ನಿರ್ಣಯ ಕೈಕೊಳ್ಳುವ ಮೂಲಕ ಅನೇಕ ವರ್ಷಗಳ ಗೊಂದಲ ಇತ್ಯರ್ಥವಾಗ ಲಿದೆ.

ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ಸೋಮವಾರ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಾಲು ಸಂಗ್ರಹಣೆಯಲ್ಲಿ ಧಾರವಾಡ ಹಾಲು ಒಕ್ಕೂಟ ನಿರ್ದಿಷ್ಟ ಗುರಿ ತಲುಪಿದ್ದು ಶೇಕಡಾ 17ರಷ್ಟು ಹಾಲು ಸಂಗ್ರಹಣೆ ಹೆಚ್ಚಳವಾಗಿದೆ. ದಿನಕ್ಕೆ ಒಂದು ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದ್ದ ಒಕ್ಕೂಟ ಪ್ರಸಕ್ತ 1.22 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದೆ. ಉಕ ಜಿಲ್ಲೆಯಲ್ಲಿ 8 ಸಾವಿರ ಲೀಟರ್ ಹಾಲು ಸಂಗ್ರಹ ಹೆಚ್ಚಳವಾಗಿದೆ. ಸಂಗ್ರಹಿತ ಹಾಲಿನಲ್ಲಿ ಪ್ರತಿದಿನ 93 ಸಾವಿರ ಲೀಟರ್ ಹಾಲು, 15 ಸಾವಿರ ಲೀ. ಹಾಲಿನ ಪುಡಿ, 7 ಸಾವಿರ ಲೀ. ಮೊಸರು, 10 ಸಾವಿರ ಲೀ. ಪೇಡಾ ಸೇರಿದಂತೆ ಇತರ ಉತ್ಪನ್ನಗಳಿಗೆ ಬಳಕೆ ಮಾಡಲಾಗುತ್ತದೆ. ಒಕ್ಕೂಟ ವ್ಯಾಪ್ತಿಯ ಹಾಲು ಡೈರಿಗಳಿಗೆ ಪಶು ಆಹಾರ ಪೂರೈಕೆ ಹೆಚ್ಚಿಸಲಾಗಿದ್ದು 850 ಟನ್ ಪಶು ಆಹಾರದಲ್ಲಿ 375 ಟನ್ ಉತ್ತರ ಕನ್ನಡ, 300 ಟನ್ ಹಾವೇರಿ, ತಲಾ 75 ಟನ್ ಗದಗ ಮತ್ತು ಧಾರ ವಾಡ ಜಿಲ್ಲೆಗಳಿಗೆ ಪೂರೈಸಲಾಗುತ್ತಿದೆ ಎಂದರು.

ದರ ಏರಿಕೆ ಇಲ್ಲ: ಸರ್ಕಾರದ ಒಪ್ಪಿಗೆ ದೊರಕುವ ತನಕ ಹಾಲು ದರ ಹೆಚ್ಚಳದ ಯಾವುದೇ ಪ್ರಸ್ತಾಪವಿಲ್ಲ. ಸಂಕ್ರಾಂತಿ ನಂತರ ಸರ್ಕಾರ ಈ ವಿಷಯ ದಲ್ಲಿ ನಿರ್ಣಯ ತೆಗೆದುಕೊಳ್ಳಲಿದೆ. ನೌಕರರ ವೇತನ, ದಿನ ಬಳಕೆಯ ವಿದ್ಯುತ್, ನೀರು, ಕಲ್ಲಿದ್ದಲು ಹೀಗೆ ಅಗತ್ಯ ವಸ್ತುಗಳ ದರ ಏರಿಕೆ ಹಿನ್ನೆಲೆ ಯಲ್ಲಿ ಹಾಲಿನ ದರ ಹೆಚ್ಚಳ ಅನಿವಾರ್ಯವಾಗಿದೆ. ಆಕಳ ಹಾಲಿಗೆ  3 ರೂಪಾಯಿ ಹಾಗೂ ಎಮ್ಮೆ ಹಾಲಿಗೆ 4 ರೂಪಾಯಿ ಏರಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಾಲಿನ ದರ ಏರಿಕೆಯಾದಲ್ಲಿ 50 ಪೈಸೆಯಿಂದ 70 ಪೈಸೆಯಷ್ಟು ಒಕ್ಕೂಟ ಉಳಿಸಿಕೊಂಡು ಉಳಿದ ಲಾಭವನ್ನು ರೈತರಿಗೆ ನೀಡು ತ್ತದೆ ಎಂದರು.

ರಾಜ್ಯ ಸರ್ಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಪ್ರೋತ್ಸಾಹ ಧನ ಬಿಡುಗಡೆ ಮಾಡುತ್ತಿದ್ದು, ಈ ವರೆಗೆ ರಾಜ್ಯದಲ್ಲಿ ರೂ.8 ನೂರು ಕೋಟಿ ಯಷ್ಟು ಪ್ರೋತ್ಸಾಹಧನ ಹಾಲು ಉತ್ಪಾದಕರಿಗೆ ದೊರೆತಿದೆ. ಹಸಿರು ಮೇವು ಯೋಜನೆ ಅಡಿಯಲ್ಲಿ 250 ಕ್ವಿಂಟಾಲ್ ಆಫ್ರಿಕನ್ ಗೋವಿನಜೋಳ, ಸ್ವರ್ಣ ಜವಾರಿ ಜೋಳ, ಅಲಸಂದಿ ಬೀಜಗಳನ್ನು ರೈತರಿಗೆ ನೀಡಲಾಗಿದೆ. ಬಹುವಾರ್ಷಿಕ ಬೆಳೆ ಪ್ರೋತ್ಸಾಹಿ ಸಲಾಗುತ್ತಿದೆ. ಧಾರವಾಡ ಹಾಲು ಒಕ್ಕೂಟದ ತ್ಯಾಜ್ಯ ನೀರು ಬಳಕೆ ಮಾಡಿ ಎರಡು ಎಕರೆ ಜಾಗದಲ್ಲಿ 15 ಲಕ್ಷ ಬೀಜದ ಕಣ ಸಿದ್ಧಪಡಿಸಿ ರೈತರಿಗೆ ಪೂರೈ ಸಲಾಗುತ್ತಿದೆ ಎಂದು ಅವರು ಹೇಳಿದರು.

ಧಾರವಾಡ ಹಾಲು ಒಕ್ಕೂಟ ಸಾಲ ಸೇರಿದಂತೆ ಎಲ್ಲ ಋಣಗಳಿಂದ ಮುಕ್ತ ವಾಗಿದ್ದು. ಹೊಸ ಯಂತ್ರ ಖರೀದಿ, ಶಿಥಲೀಕರಣ ಘಟಕ ಉನ್ನತೀಕರಣ ದಂತಹ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುತ್ತಿದೆ. ದನಜಾತ್ರೆ, ತುರ್ತು ಪಶುಚಿಕಿತ್ಸೆ, ಮೇವಿನ ಬೀಜದ ಮೇಲಿನ ಸಹಾಯಧನ ಸೇರಿದಂತೆ ವಿವಿಧ ವಿಸ್ತರಣಾ ಚಟುವಟಿಕೆ ನಡೆಸುವ ಮೂಲಕ ಹಾಲು ಉತ್ಪಾದಕರಲ್ಲಿ ವಿಶ್ವಾಸ ಮೂಡಿಸಿದೆ ಎಂದರು.

ಜಿಲ್ಲಾ ಮಟ್ಟದ ಸ್ಪರ್ಧೆ: ಧಾರವಾಡ ಹಾಲು ಒಕ್ಕೂಟ ನಗರದ ಟಿ.ಎಸ್.ಎಸ್. ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚಿತ್ರಕಲೆ ಮತ್ತು ಗಾಯನ ಸ್ಪರ್ಧಾ ಕಾರ್ಯ ಕ್ರಮವನ್ನು ಹಿಂದುಸ್ತಾನಿ ಗಾಯಕ ಪಂಡಿತ್ ಗಣಪತಿ ಭಟ್ಟ ಹಾಸಣಗಿ ಉದ್ಘಾಟಿಸಿದರು. ಬಸವರಾಜ ಅರಬ ಗೊಂಡ ಅಧ್ಯಕ್ಷತೆ ವಹಿಸಿದ್ದರು.

ಒಕ್ಕೂಟದ ನಿರ್ದೇಶಕರಾದ ಸತೀಶ ಭಟ್ಟ ಅಚನಳ್ಳಿ, ಮಧುಕೇಶ್ವರ ಹೆಗಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಾಜ ಕುಮಾರ ಉಪಸ್ಥಿತರಿದ್ದರು. ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳ 80ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT