ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿವುಡ್ ಎಂಬ ಮಾಯಾಂಗನೆ

Last Updated 9 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಅಮೆರಿಕ ದೇಶದ ಪಶ್ಚಿಮ ಕರಾವಳಿ­ಯಲ್ಲಿರುವ ರಾಜ್ಯ ಕ್ಯಾಲಿಫೋರ್ನಿಯಾ. ಅದೊಂದು ಮರುಭೂಮಿ ಪ್ರದೇಶ. ಒಂದು ಕಾಲಕ್ಕೆ ಚಿನ್ನವನ್ನು ಅರಸಿ ಹೋದ ಜನ ಅಲ್ಲೇ ನೆಲೆನಿಂತರು. ನಗರಗಳನ್ನು ಕಟ್ಟಿದರು. ಕ್ಯಾಲಿಫೋರ್ನಿಯಾದ ರಾಜಧಾನಿ ನಗರ ಹಾಗೂ ಜಿಲ್ಲೆ ಲಾಸ್ ಏಂಜಲಿಸ್‌. ಅಲ್ಲಿರು­ವುದು ಸಿನಿಮಾ ಲೋಕದ ಮೆಕ್ಕಾ ಎನಿಸಿ­ಕೊಳ್ಳುವ ಹಾಲಿವುಡ್. ಮರುಭೂಮಿ ಪ್ರದೇಶ­ದಲ್ಲಿ ಹಾಲಿವುಡ್ ಅಂತಹ ನಗರವೊಂದನ್ನು ನಿರ್ಮಿಸಿ ಜಗತ್ತನ್ನೇ ತನ್ನತ್ತ ಸೆಳೆಯುತ್ತಿರುವುದು ಚೋದ್ಯವೇ ಸರಿ.

ಸಿನಿಮಾ ಜಗತ್ತಿನ ಪ್ರತಿಷ್ಠೆಯ ಆಸ್ಕರ್ ಪ್ರಶಸ್ತಿಯನ್ನು ನೀಡುವುದು ಈ ನಗರದ ಗ್ಲ್ಯಾಮರ್ ಹೆಚ್ಚಲು ಕಾರಣವಾಗಿದೆ. ಒಂದು ಕಾಲಕ್ಕೆ ಚೀನೀಯರು ಕಟ್ಟಿದ ಚೈನೀಸ್ ಥಿಯೇಟರ್‌­ನಲ್ಲಿ ಆಸ್ಕರ್ ಪ್ರಶಸ್ತಿಗಳನ್ನು ಕೊಡಲಾಗುತ್ತಿತ್ತು. ಆ ನಂತರದಲ್ಲಿ ಪಕ್ಕದ ಕೊಡಾಕ್ ಥಿಯೇಟರ್‌ನಲ್ಲಿ ಕೊಡಲಾಗುತ್ತಿದೆ. ಹಾಗೇ ಸುತ್ತಾಡುತ್ತಾ ಹೋದರೆ ಚಾರ್ಲಿ ಚಾಪ್ಲಿನ್‌ನ ಸ್ಟುಡಿಯೊ. ಹೀಗೆ ಸಿನಿಮಾ ಉದ್ದಿಮೆಯ ಚರಿತ್ರೆಯೇ ಇಲ್ಲಿ ತೆರೆದುಕೊಳ್ಳುತ್ತದೆ.

ಯೂನಿವರ್ಸಲ್ ಸ್ಟುಡಿಯೊ ಒಂದು ನಗರವೇ ಆಗಿ ಬೆಳೆದು ನಿಂತಿದೆ. ಅದರ ಪಕ್ಕದಲ್ಲಿ ವಾರ್ನರ್ ಬ್ರದರ್ಸ್‌, ಅನತಿ ದೂರದಲ್ಲಿ ಗಗನ ಮುಟ್ಟುವ ವಾಲ್ಟ್‌ ಡಿಸ್ನಿ ಪ್ರಪಂಚ. ಹೀಗೆ ಉದ್ದಿಮೆಗೆ ಸಂಬಂಧಪಟ್ಟ ಎಲ್ಲಾ ರೀತಿಯ ಕಂಪೆನಿಗಳು ಇಲ್ಲಿವೆ.  ಸಿನಿಮಾ ತಯಾರಿಕೆಗಾಗಿ ಜಗತ್ತಿನ ಅತಿ ದೊಡ್ಡ ಮೊತ್ತದ ಬಂಡವಾಳ ಇಲ್ಲಿ ವಿನಿಯೋಗವಾಗುತ್ತದೆ. ಇಲ್ಲಿ ತಯಾರಾಗುವ ಸಿನಿಮಾಗಳಿಗೆ ಜಗತ್ತಿನ ಮಾರುಕಟ್ಟೆಯೇ ತೆರೆದಿರುತ್ತದೆ.

ಒಂದು ಸಿನಿಮಾ ಬಿಡುಗಡೆ­ಯಾದರೆ ಅದರ ಲಾಭ ಕಡೇಪಕ್ಷ ಮೂವತ್ತು ವರ್ಷಗಳ ಕಾಲವಾದರೂ ಬರುವಂತೆ ಯೋಜಿಸಲಾಗುತ್ತದೆ. ಹೀಗೆ ಯೋಜಿಸಿದ ಸಿನಿಮಾಗಳಿಗೆ ‘ಹಿ ಮ್ಯಾನ್’, ‘ಹ್ಯಾರಿ ಪಾಟರ್’ ಒಳ್ಳೆಯ ಉದಾಹರಣೆ.ಇಂತಹ ಬೃಹತ್ ಮಾರುಕಟ್ಟೆ ಇರುವ ಕಾರಣಕ್ಕೂ ಇಲ್ಲಿ ಸಿಗುವ ಯಾವುದೇ ರೀತಿಯ ಅವಕಾಶವನ್ನು ಪ್ರತಿಷ್ಠೆ ಎಂದು  ಪರಿಗಣಿಸಲಾಗುತ್ತದೆ.

ಇಲ್ಲಿನ ನಟಿಯರು, ಪಕ್ಕದ ಅಂಗಡಿಗೆ ಬ್ರೆಡ್ ತರಲು ಹೋಗುವಾಗಲೂ ಮೇಕಪ್, ತುಟಿ­ರಂಗು ಇರಲೇಬೇಕು.  ಇದು ಉತ್ಪ್ರೇಕ್ಷೆ ಅಲ್ಲ. ಯಾವುದೇ ಗಳಿಗೆಯಲ್ಲಿ ತಮ್ಮನ್ನು ಗಮನಿಸುವ ನಿರ್ದೇಶಕರಾಗಲೀ, ನಿರ್ಮಾಪಕರಾಗಲೀ, ಎದುರಾಗಬಹುದು ಎಂಬ ಕಾರಣಕ್ಕೆ ಅವರ ಗ್ಲ್ಯಾಮರ್‌ಗೆ ಕುಂದು ಬರದಂತೆ  ಸದಾ ಎಚ್ಚರ ವಹಿಸುತ್ತಾರೆ.

ಹಾಗೆಯೇ ಪತ್ರಿಕಾ ಛಾಯಾ­ಗ್ರಾಹಕರು ಕೂಡ. ಒದಗಿಬರಬಹುದಾದ ಸೆಲೆಬ್ರಿಟಿಗಳ ಆಕಸ್ಮಿಕ ಭೇಟಿಗಾಗಿ ಸದಾ ಕಾಯುತ್ತಿರುತ್ತಾರೆ. ವಿಶೇಷವಾದ, ವಿಚಿತ್ರವಾದ ಕಾರುಗಳು, ಅಲ್ಲಿ ಇಣುಕ ಬಹುದಾದ ತರಾವರಿ ನಾಯಿಮರಿಗಳು ಎಲ್ಲವೂ ಸುದ್ದಿಯಲ್ಲಿರುತ್ತವೆ. ಇದು ಅಮೆರಿಕದ ಅತ್ಯಂತ ದುಬಾರಿಯಾದ ನಗರ.

ಮರುಭೂಮಿಯೊಂದನ್ನು ಗಂಧರ್ವಲೋಕ­ವಾಗಿಸುವ ಪ್ರಕ್ರಿಯೆಯಲ್ಲಿ ಯೋಜನೆ ಹಾಗೂ ಪರಿಶ್ರಮ ಇದೆ. ದೇಶಕ್ಕೆ ದೊಡ್ಡ ಆದಾಯವನ್ನು ತರುತ್ತಿರುವ ಆ ನಗರಕ್ಕೆ ಸರ್ಕಾರ ವಿಶೇಷ ಬೆಂಬಲ ಹಾಗೂ ರಕ್ಷಣೆಯನ್ನು ನೀಡುತ್ತಿದೆ. ಇದು ಯೋಜಿತವಾದ ಉದ್ದಿಮೆ ಹಾಗೂ ಅದಕ್ಕಾಗಿ ರೂಪಿತವಾಗಿರುವ ನಗರ.

ಕಥೆಗಾರನೊಬ್ಬ ತನ್ನ ಕಥೆಯನ್ನು ನಿರ್ದೇಶಕ­ನಿಗೋ ನಿರ್ಮಾಪಕನಿಗೋ ತಲುಪಿಸಬೇಕಾದಲ್ಲಿ ಎಲ್ಲಿ ಹೋಗಬೇಕು ಎಂದು ದಿಕ್ಕೆಟ್ಟು ನೋಡ­ಬೇಕಾಗಿಲ್ಲ. ‘ಪ್ರೊಡ್ಯುಸರ್ಸ್‌ ಗಿಲ್ಡ್‌’ ನಗರದಲ್ಲಿ ವ್ಯವಸ್ಥಿತವಾದ ಕಚೇರಿಯನ್ನು ಹೊಂದಿದೆ. ರಿಜಿಸ್ಟರ್ ಆದ ಕಥೆಯನ್ನು ಅಲ್ಲಿಗೆ ತಲುಪಿಸ­ಲಾಗುತ್ತದೆ. ಅದನ್ನು ಅಲ್ಲಿನ ನಿರ್ಮಾಪಕರಿಗೆ ತಲುಪಿಸಲಾಗುತ್ತದೆ. ಫಿಲ್ಮ್‌ ಮೇಕರ್ಸ್‌ ಮೀಟ್‌ನಲ್ಲಿ ಕಥೆ, ಹಾಡು, ರಾಗ, ನಟನೆ, ಮತ್ತೆ ಯಾವುದೇ ರೀತಿಯ ಪ್ರತಿಭೆಯ ಅವಕಾಶವನ್ನು ಮುಂದಿಡಬಹುದು. ಅವರ ವ್ಯಾಪಾರೀ ಮನೋಭಾವ ಮಾರುಕಟ್ಟೆಯನ್ನು ಮುಕ್ತ­ವಾಗಿರಿಸಿ­ಕೊಳ್ಳುವಂತೆ ಮಾಡಿದೆ. ಅದರೊಳಗೆ ಭ್ರಷ್ಟತೆ ಇಲ್ಲವೆಂದಲ್ಲ. ಸಣ್ಣ ಪುಟ್ಟ ಬಂಡವಾಳ­ಗಾರರು ಪೈಪೋಟಿಗೆ ಇಳಿಯುವುದು ಅಷ್ಟೇನೂ ಸುಲಭವಲ್ಲ.

ಆದರೆ ಮಾರುಕಟ್ಟೆ ಬಹು ವಿಸ್ತಾರ­ವಾಗಿರುವುದರಿಂದ ಪೈಪೋಟಿಯನ್ನು ಮೀರು­ವಷ್ಟು ಅವಕಾಶಗಳೂ ಇವೆ. ಹೂಡುವ ಬಂಡವಾಳ ‘ಬಿಳಿ’ಯದೇ ಆಗಿರುತ್ತದೆ ಎಂದೇನೂ ಅಲ್ಲ. ಹಲವು ಮೂಲಗಳಿಂದ ನುಗ್ಗಿ ಬರುತ್ತದೆ. ಹಾಲಿವುಡ್‌ ಬೆರಗನ್ನು  ಹಾಡಿ ಹೊಗಳುವುದು ನನ್ನ ಉದ್ದೇಶವಲ್ಲ. ಅದನ್ನೆಲ್ಲಾ ನೋಡುವಾಗ ನಮ್ಮ ಸಿನಿಮಾ ಉದ್ಯಮದ ಬಗ್ಗೆ ಯೋಚಿಸದೇ ಇರಲಾಗುವುದಿಲ್ಲ.

ಭಾರತ ಹಲವು ಕಾರಣಗಳಿಗೆ ಹಾಲಿವುಡ್‌­ನತ್ತ ದಿಟ್ಟಿಸುತ್ತದೆ–-ಹೆಸರನ್ನೂ ಒಳಗೊಂಡಂತೆ. ಅದನ್ನು ಅನುಸರಿಸಿ ಬಾಲಿವುಡ್, ಟಾಲಿವುಡ್, ಕಾಲಿವುಡ್... ಕೊನೆಗೆ ಕರ್ನಾಟಕ ಚಿತ್ರರಂಗ­ವನ್ನು ಸ್ಯಾಂಡಲ್‌ವುಡ್ ಎಂದು ಕರೆಯುತ್ತಾ ಮಾತೃ ಮೂಲದ ಹೆಗ್ಗಳಿಕೆಯನ್ನು ಹಾಲಿ­ವುಡ್‌ಗೆ ನೀಡಲಾಗುತ್ತಿದೆ. ಈ ಮಾದರಿ ಅನು­ಕರಣೆ ಸರಿಯೇ ಎಂದೂ ಯೋಚಿಸಬೇಕಾಗಿದೆ.

ಹಾಲಿವುಡ್‌ನ ಮತ್ತೊಂದು ಮುಖವನ್ನೂ ಗಮನಿಸಬೇಕಾಗುತ್ತದೆ. ಸಿನಿಮಾಗಳಲ್ಲಿ ಎಷ್ಟು ಜನ ಕರಿಯರಿಗೆ ನಾಯಕ, ಅಥವಾ ನಾಯಕಿ­ಯಾಗುವ ಅವಕಾಶ ಸಿಕ್ಕಿದೆ ಎಂಬುದನ್ನು ಲೆಕ್ಕ ಹಾಕಬಹುದಾಗಿದೆ. ಸಾಮಾನ್ಯವಾಗಿ ಪೊಲೀಸ್ ಪೇದೆಯ ಪಾತ್ರ, ಶಾಲಾ ಶಿಕ್ಷಕಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅಮೆರಿಕದ ಕರಿಯರ ಜನಸಂಖ್ಯೆಯನ್ನು ಮನಸ್ಸಿನಲ್ಲಿರಿಸಿಕೊಂಡು ಈ ಲೆಕ್ಕಾಚಾರವನ್ನು ಮಾಡಲಾಗುತ್ತದೆ. ಕರಿಯರ ಕಥೆಯನ್ನೇ ನೇಯ್ದಿದ್ದರೆ ಅಂತ್ಯದಲ್ಲಿ ‘ಬಿಡುಗಡೆ’­ಯನ್ನು ತರುವವನು ಬಿಳಿಯನಾಗಿರುತ್ತಾನೆ. ಚೀನಾ ಮೂಲದ ನಟನೊಬ್ಬನಿಗೆ ನಾಯಕ ಪಟ್ಟ ಸಿಗಬೇಕಾದರೆ ಅದು ಸಾಹಸದ ವಿಚಾರವೇ ಆಗಿತ್ತು.

ಹಾಗೆ ಬಂದವರಲ್ಲಿ ಬ್ರೂಸ್ ಲೀ, ಜಾಕಿಚಾನ್   ಹೀರೊಗಳಾಗಿ  ಸ್ವೀಕೃತವಾದ ಹಿನ್ನೆಲೆ ಬಗ್ಗೆ ಅಧ್ಯಯನಗಳೇ ನಡೆದಿವೆ. ಜಾಕಿಚಾನ್‌ ಪ್ರತಿಭೆ ಬಳಸಿಕೊಂಡು ಚೀನಾ ಮತ್ತು ಅದರ ಸುತ್ತಲ ನಾಡುಗಳ ಮಾರುಕಟ್ಟೆ­ಯನ್ನು ಹಿಡಿಯುವುದು ಹಾಲಿವುಡ್‌ಗೆ ಮುಖ್ಯವಾಗಿತ್ತು. ನಟನೆಯ ಅವಕಾಶಗಳು ಭಾರತೀಯರಿಗೆ ಅಷ್ಟು ಸುಲಭವಾಗಿ ಸಿಗಲು ಸಾಧ್ಯವಿಲ್ಲ. ಭಾರತೀಯರು ಆರ್ಥಿಕವಾಗಿ, ರಾಜಕೀಯವಾಗಿ ಪ್ರಬಲವಾಗಿ ತಮ್ಮ ಶಕ್ತಿ ಪ್ರದರ್ಶನ ಮಾಡಬಲ್ಲವರಾದರೆ ಅವರು ಪ್ರವೇಶವನ್ನು ಪಡೆಯಬಲ್ಲರು. ಇನ್ನು ಭಾರತೀಯರಿಗೆ ನಟನೆಗೆ ಸಿಕ್ಕ ಅವಕಾಶ ಬೆರಳೆಣಿಕೆಯಷ್ಟು ಮಾತ್ರ.

ಟೆನಿಸ್ ಆಟಗಾರ ಆನಂದ್ ಅಮೃತ್‌ರಾಜ್‌ ನಿರ್ಮಾಪಕರಾಗಿ ಹಲವು ಸಿನಿಮಾಗಳನ್ನು ಹೊರತಂದಿದ್ದಾರೆ. ನೈಟ್ ಶಾಮಲನ್ ಭಾರತೀಯನಾಗಿ ಮಾಡಿದ ಸಾಧನೆ ನಿಜಕ್ಕೂ ದೊಡ್ಡದು. ಚಿತ್ರಕಥೆಗಾರ­ನಾಗಿ, ನಿರ್ದೇಶಕನಾಗಿ ತನಗೊಂದು ಜಾಗವನ್ನು ಪಡೆಯಲು ಸಾಧ್ಯವಾಗಿದೆ. ಭಾರತ ಮಾತ್ರವಲ್ಲ ಏಷ್ಯಾದ ಬಗೆಗೆ ತಾರತಮ್ಯ ಬಲವಾಗಿದೆ.
  ಕಥೆಗಳಲ್ಲಿ ವಿಚಾರಗಳನ್ನು ಹೇಳುವಾಗಲೂ ಬಿಳಿಯನ ಶ್ರೇಷ್ಠತೆ ವ್ಯಕ್ತವಾಗುತ್ತದೆ. ಇಂಡಿ­ಯಾನಾ ಜೋನ್ಸ್‌ನ ಸಿನಿಮಾಗಳಲ್ಲಿ ಭಾರ­ತೀಯ ರಾಜರೆಂದರೆ ಹೆಬ್ಬಾವಿನ ಮರಿಗಳನ್ನು ತಿನ್ನುವವರು ಎಂದು ಚಿತ್ರಿಸಿ, ಹಾಗೆ ತಿನ್ನುವುದನ್ನು ವೈಭವೋಪೇತವಾಗಿ ತೋರಿಸಲಾಯಿತು.

ಹಾಲಿವುಡ್, ಭಾರತವನ್ನು ಇತ್ತೀಚೆಗೆ ಗಂಭೀರವಾಗಿ ಪರಿಗಣಿಸುತ್ತಿದೆ. ಬಾಲಿವುಡ್‌ನ ಜನಪ್ರಿಯತೆ ಭಾರತಕ್ಕೆ ಮಾತ್ರ ಸೀಮಿತವಾಗಿರದೆ ಏಷ್ಯಾದಾದ್ಯಂತ ಕಾಣಬರುತ್ತದೆ. ಭಾಷಾ ಸಾಮೀಪ್ಯ ಕಾರಣಕ್ಕೆ ಅರಬ್ ದೇಶಗಳಲ್ಲಿ  ಭಾರತದ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ. ಭಾಷೆ ಬರದೆ ಇದ್ದರೂ ಮಲೇಷಿಯಾ, ಇಂಡೊನೇಷ್ಯಾಗಳಲ್ಲೂ ಜನ ಹಿಂದಿ ಸಿನಿಮಾ­ಗಳನ್ನು ನೋಡಲು ಬಯಸುತ್ತಾರೆ. ಭಾರತದ ಹಿಂದಿ ಸಿನಿಮಾಗಳ ಹಾಡು, ನೃತ್ಯ ಯೂರೋಪಿ­ಯನ್ನರ ಮನಸನ್ನೂ ಸೂರೆಗೊಂಡಿವೆ.

ಭಾರತದ ಜನಸಂಖ್ಯೆಯಿಂದಾಗಿ, ವೀಕ್ಷಕರ ಸಂಖ್ಯೆಯ ಕಾರಣಕ್ಕೂ ಹಿಂದಿ ಸಿನಿಮಾ ಹಾಲಿವುಡ್‌ಗೆ ಸ್ಪರ್ಧಿಯಾಗಿ ಕಾಣುತ್ತದೆ. ಹಾಗಾಗಿಯೇ ‘ಸ್ಲಂ ಡಾಗ್ ಮಿಲಿಯನೇರ್’ ಸಿನಿಮಾವನ್ನು ಮಾಡುವ ಆಸಕ್ತಿಯನ್ನು ತೋರಿತು. ಆಸ್ಕರ್ ಪ್ರಶಸ್ತಿಯ ಬೆನ್ನು ಹತ್ತಿತು. ಆಳದಲ್ಲಿ ಭಾರತದ ಬಡತನದ ಲೇವಡಿಯೇ ಆಗಿತ್ತು. ಭಾರತೀಯ ಹೆಸರು ಹೊತ್ತ ‘ಅವತಾರ್‌’­ನಲ್ಲೂ ಕಡೆಗೂ ಬಿಳಿಯನೇ ಹೆಚ್ಚಿನವನಾಗುತ್ತಾನೆ.

ಸಿನಿಮಾ ತಯಾರಿಕೆಗೆ ಹಾಲಿವುಡ್ ಅಪಾರ ಹಣ ಸುರಿಯುವುದರಿಂದ ಆ ವೈಭವದೊಂದಿಗೆ ಇತರರು ಸ್ಪರ್ಧೆಗಿಳಿಯುವುದು ಅಷ್ಟು ಸುಲಭದ ಸಂಗತಿಯಾಗಿರಲಿಲ್ಲ. ಗ್ರಾಫಿಕ್ಸ್‌, ಅನಿಮೇಷನ್, ಸ್ಪೆಷಲ್ ಎಫೆಕ್ಟ್ಸ್‌ ಹೀಗೆ ಕಥೆ ಬಯಸಿದ್ದನ್ನೆಲ್ಲಾ ಪೂರೈಸುವ ಸಾಹಸಕ್ಕೆ ಅವರು ಕೈಹಾಕಬಲ್ಲರು. ‘ಜುರಾಸಿಕ್ ಪಾರ್ಕ್’, ‘ಲಾರ್ಡ್‌ ಆಫ್ ದ ರಿಂಗ್ಸ್‌’ ಅಂತಹ ಸಿನಿಮಾಗಳನ್ನು ಏಷ್ಯನ್ನರು ಕಲ್ಪಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ.

ಇಂಗ್ಲಿಷೇತರ ಸಿನಿಮಾ ನಿರ್ದೇಶಕ, ನಿರ್ಮಾಪಕರಿಗೆ ಕಡಿಮೆ ದುಡ್ಡಿನಲ್ಲಿ ಒಳ್ಳೆ ಸಿನಿಮಾ ಮಾಡುವುದೊಂದು ಸವಾಲು. ಅದಕ್ಕೆ ಉತ್ತರ ಕೊಟ್ಟವರು ಕೊರಿಯಾ, ಇರಾನ್, ಫ್ರಾನ್ಸ್‌ನ ಚಿತ್ರ ನಿರ್ಮಾಪಕರು.  ಉತ್ತಮ ಕಥೆಗಳನ್ನು ಆಧರಿಸಿ ಕಡಿಮೆ ಬಜೆಟ್‌ನಲ್ಲಿ  ಮಾರ್ಮಿಕವಾದ ಚಿತ್ರಗಳನ್ನು ಮಾಡಬಹುದು ಎಂದು ಸಾಬೀತು ಪಡಿಸುತ್ತಾ ಬಂದಿದ್ದಾರೆ. ಸ್ಥಳೀಯ ಭಾಷೆಗಳಿಗೆ ಇವು ಮಾದರಿಯಾಗ­ಬೇಕಾಗುತ್ತದೆ. ಇಷ್ಟಾಗಿಯೂ ಹಾಲಿವುಡ್ ಚಿತ್ರ ನಿರ್ಮಾಣವನ್ನೇ ಮಾದರಿಯಾಗಿ ನೋಡಬೇಕಾದ ಒತ್ತಡಕ್ಕೆ ಕಾರಣ ತಂತ್ರಜ್ಞಾನ.

ಚಲನಚಿತ್ರ ನಿರ್ಮಾಣಕ್ಕೆ ಅದಕ್ಕೆ ಪೂರಕವಾದ ಇತರ ಎಲ್ಲಾ ಕ್ಷೇತ್ರಗಳು ಬೆಂಬಲಿಸುತ್ತಿರುವುದು ಹಾಲಿವುಡ್‌ಗೆ ವರದಾನವಾಗಿದೆ. ಜಾರ್ಜ್‌ ಲೂಕಾಸ್, ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ ಸಿನಿಮಾ ಮಾಡಲು ಹೊರಟಾಗ ಅವನ ಬೆಂಬಲಕ್ಕೆ ಪ್ಯಾನಸೋನಿಕ್ ಮತ್ತು ವಿಷನ್  ಕಂಪೆನಿಗಳು ಮುಂದಾದವು. ಹಾಗಾಗಿ ‘ಸ್ಟಾರ್ ವಾರ್ಸ್‌’ ಮೂಡಿಬಂತು. ‘ಜುರಾಸಿಕ್ ಪಾರ್ಕ್‌’ ಅಂತಹ ಸಿನಿಮಾ ಜುರಾಸಿಕ್ ಯುಗದ ಕಲ್ಪನೆ ಕಟ್ಟಿಕೊಡಲು ಸಾಧ್ಯವಾಯಿತು.

ಕ್ಯಾಮೆರಾ ತಂತ್ರಜ್ಞಾನ ದಿನೇ ದಿನೇ ಬೆಳೆಯು­ತ್ತಿದೆ. ಅದರ ಸಂಶೋಧನೆ ಬಿಳಿಯ­ರಿಂದ ನಡೆದು ಸಹಜವಾಗಿ ಅದು ಬಿಳಿ ಚರ್ಮ­ದವರನ್ನು ಸೆರೆ ಹಿಡಿಯಲು ಉತ್ತಮವಾಗಿದೆ. ಅದರಲ್ಲೂ ರೆಡ್ ಸಿಲೊವೆಟ್‌ನಲ್ಲಿ ಬಿಳಿಯರಿಗೆ ರಾಯಲ್ ಲುಕ್ ತಂದುಕೊಡುತ್ತದೆ. ಕರಿ ಚರ್ಮದವರು ಅದ­ರಲ್ಲಿ ಅಷ್ಟೇನೂ ಸುಂದರ­ವಾಗಿ ಕಾಣ­ಲಾರರು ಅಥವಾ ಅವರ ಸಹಜ ಸೌಂದರ್ಯವೂ ಕಾಣುವುದಿಲ್ಲ. ಕರಿಯ ಚರ್ಮವನ್ನು ಸೆರೆ ಹಿಡಿದಾಗ ಸುಂದರವಾಗಿ ಕಾಣುವಂತಹ ಸಂಶೋಧನೆಗಳು ಆಗಬೇಕಾಗಿದೆ. ಅದಕ್ಕೆ ಬದಲಾಗಿ ಮಾಸಲು ಚರ್ಮದವರು ಮೇಕಪ್ ಮೂಲಕ ಬೆಳ್ಳಗಾಗಲು ಹೆಣಗುತಿದ್ದೇವೆ.

ಮುಖಕ್ಕೆ ಹಾಕುವ ಬಣ್ಣಗಳಲ್ಲೂ ಕರಿ ಬಣ್ಣಕ್ಕೆ ಹೊಂದುವಂತಹ ಕ್ರೀಮ್‌ಗಳ ಸಂಶೋಧನೆ ಆರಂಭವಾಗಿ ದಶಕವೂ ಕಳೆದಿಲ್ಲ. ಬಿಳಿಯರಂತೆ ಗುಲಾಬಿ ಇಲ್ಲವೇ ಕಡುಕೆಂಪು ಬಣ್ಣದ ತುಟಿ ರಂಗು ಭಾರತೀಯರಿಗೆ ವಿಚಿತ್ರವಾಗಿ ಕಾಣುತ್ತದೆ. ಬಿಳಿ ಚರ್ಮಕ್ಕೆ ಒಪ್ಪುವ ಕ್ಯಾಮೆರಾ, ಮೇಕಪ್ ಇದನ್ನೆಲ್ಲಾ ಕಪ್ಪು, ತಿಳಿಗಪ್ಪು ಬಣ್ಣದವರು ಹೇಗೋ ಹೊಂದಿಸಿಕೊಂಡು ಅದರ ಕಡೆ ಅಷ್ಟೇನೂ ಗಮನಹರಿಸದೆ ಮುಂದೆ ಹೋಗುತ್ತಿದ್ದೇವೆ. ಅದನ್ನೆಲ್ಲಾ ಗಮನಿಸುವ ಸಾಮರ್ಥ್ಯ ಬಂದಲ್ಲಿ ಮತ್ತೂ ಪಶ್ಚಿಮದ ಮಟ್ಟಕ್ಕೆ ನಿಲ್ಲುವುದೇ ನಮ್ಮ ಗುರಿಯಾಗುತ್ತದೆ. ನಮ್ಮ ನಾಯಕಿಯರು ಪಾಶ್ಚಿಮಾತ್ಯ ಉಡುಗೆಯಲ್ಲಿ ಕಾಣಿಸಿಕೊಳ್ಳುವುದು (ಪಾತ್ರಕ್ಕೆ ಅಗತ್ಯವಿರಲೀ ಇಲ್ಲದಿರಲೀ) ಇದಕೊಂದು ಪುಟ್ಟ ಉದಾಹರಣೆ.

ಸಂಸ್ಕೃತಿ ಅಥವಾ ಕಲೆಯಲ್ಲಿ  ಭಾರತ ಹಿಂದೆ ಬಿದ್ದಿಲ್ಲ. ನಾಟಕ, ನೃತ್ಯ ಮತ್ತು ಇತರ ಯಾವುದೇ ಜನಪದ ಕಲೆಯ ಸಂದರ್ಭದಲ್ಲಿ ಬಣ್ಣ ಹಾಕುವುದರಲ್ಲಿ ನಮ್ಮ ಸಹಜ ಪ್ರತಿಭೆ ಹೊರ­ಬಂದಿರುತ್ತಿತ್ತು. ಹಲವು ವರ್ಷಗಳ ಅನುಭವ ಅದರ ಹಿಂದೆ ಇರುತ್ತಿತ್ತು. ಸಾಮಾನ್ಯವಾಗಿ ರಾತ್ರಿ ಹೊತ್ತಿನಲ್ಲೇ ನಡೆಯುತ್ತಿದ್ದ ಈ ಎಲ್ಲಾ ಪ್ರದರ್ಶನಗಳಿಗೆ ಪಂಜು ಮುಖ್ಯ ಬೆಳಕಾಗಿರು­ತ್ತಿತ್ತು. ಜನರು ಬಹು ದೂರದವರೆಗೆ ನೋಡುವುದು ಅಂದಿನ ಅಗತ್ಯವಾಗಿದ್ದರಿಂದ ಪ್ರಖರವಾದ ಬಣ್ಣಗಳನ್ನು ಬಳಸುತ್ತಿದ್ದರು. ನಾಟಕದ ಮುಂದುವರಿಕೆಯಾಗಿ ಸಿನಿಮಾವನ್ನು ಪರಿಗಣಿಸಿದ್ದರಿಂದ ಮುಖಕ್ಕೆ ಬಳಸುವ ಬಣ್ಣವೂ ಅದರ ಮುಂದುವರಿಕೆಯಾಯಿತು. ಸಿನಿಮಾ ಎರವಲು ಪಡೆದ ತಂತ್ರಜ್ಞಾನ. ಕಲೆಯ ವಿಕಾಸಕ್ಕೆ ಮಡಿವಂತಿಕೆ ಬೇಕಿಲ್ಲ ಎಂಬುದು ದಿಟವಾದರೂ ನಮ್ಮತನ ರೂಪುಗೊಳ್ಳದಿದ್ದರೆ ಕುಂಟುತ್ತಾ ಸಾಗುತ್ತೇವೆ, ಇಲ್ಲವೇ ಮುಗ್ಗರಿಸುತ್ತೇವೆ.

ಹಾಲಿವುಡ್‌ ಸಿನಿಮಾಗಳು ಕೆಲ ಮಟ್ಟಿಗೆ ಇಂದು ಭಾರತದಲ್ಲಿ ತಯಾರಾಗುತ್ತಿವೆ. ಐ.ಟಿ. ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಅನಿ­ಮೇಶನ್ ಕಲೆ ಭಾರತದಲ್ಲಿ ಬೆಳೆಯಲು ಸಾಧ್ಯವಾಗಿದೆ. ವಾಲ್ಟ್‌ ಡಿಸ್ನಿಯ ಕಾರ್ಟೂನ್ ಚಿತ್ರಗಳು ಭಾರತದಲ್ಲಿ ರೂಪುಗೊಳ್ಳುತ್ತವೆ. ಮುಂಬೈ, ಬೆಂಗಳೂರು ಹಾಗೂ ಹೈದರಾಬಾದ್‌­ನಲ್ಲಿ ಅನಿಮೇಶನ್ ಚಿತ್ರ ನಿರ್ಮಾಣದ ಕಂಪೆನಿಗಳು ಸ್ಥಾಪನೆಗೊಂಡಿವೆ. ‘ಔಟ್ ಸೋರ್ಸಿಂಗ್’ ಪರಿಭಾಷೆಯಲ್ಲಿ ಭಾರತದ ಕಲಾವಿದರು ಹಾಲಿವುಡ್‌ಗಾಗಿ ದುಡಿಯುತ್ತಿ­ದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಕುಸಿದೇ ಹೋಗಿದ್ದ ಈ ಉದ್ದಿಮೆ ಮತ್ತೆ ತಲೆ ಎತ್ತುತ್ತಿದೆ.

ಹಾಲಿವುಡ್‌ನ ದುಡ್ಡಿನ ಮದವನ್ನು ಹೊಡೆಯಲು ಹೊರಟಿರುವ ದೇಶ ಚೀನಾ. ಜಾಗತೀಕರಣವನ್ನು ಸರಿಯಾಗಿ ದಕ್ಕಿಸಿಕೊಳ್ಳಲು ಪ್ರಯತ್ನಿಸಿರುವ ದೇಶ. ಕಡಿಮೆ ಬೆಲೆಗೆ ಗೊಂಬೆಗಳನ್ನು ಮಾರಿದಂತೆ ಕ್ಯಾಮೆರಾವನ್ನು ಸಿದ್ಧಪಡಿಸುತ್ತಾ ಸಿನಿಮಾ ನಿರ್ಮಾಣದ ವೆಚ್ಚವನ್ನು ಇಳಿಸಿದೆ. ಪ್ಲಾಸ್ಟಿಕ್ ಸಾಮಾನು ಮಾರುವಂತೆ ಸಿನಿಮಾ ಪರಿಕರಗಳನ್ನು ಹೊರತರುತ್ತಿದೆ.  ಹಾಗೆ ಸಿನಿಮಾ ನಿರ್ಮಾಣಕ್ಕೆ ಬಂಡವಾಳವನ್ನು ತೊಡಗಿಸುವ ಸಿದ್ಧತೆಯಲ್ಲಿದೆ.

ಕೊಡಾಕ್ ಥಿಯೇಟರ್ ಮುಂದೆ ಚಾರ್ಲಿ ಚಾಪ್ಲಿನ್, ಸ್ನೋ ವೈಟ್ ಹೀಗೆ ಯಾವುದಾದರೂ ನಟ ಅಥವಾ ಸಿನಿಮಾ ಪಾತ್ರ ವೇಷ ಧರಿಸಿ ನಿಲ್ಲುವ ಸಣ್ಣಪುಟ್ಟ ಕಲಾವಿದರು ಪ್ರವಾಸಿಗರ ಪಕ್ಕದಲ್ಲಿ ನಿಂತು ಫೋಟೊ ತೆಗೆಸಿಕೊಂಡು ದುಡ್ಡು ಕೇಳುವುದನ್ನು ನೋಡಿದರೆ ಇದನ್ನೂ ಹಾಲಿವುಡ್ ಹುಟ್ಟು ಹಾಕಿದೆ ಎನ್ನುವುದನ್ನು ಮರೆಯಲಾಗದು. ಬಹುರಾಷ್ಟ್ರೀಯ ಕಂಪೆನಿಗಳು ಕದ ತಟ್ಟುತ್ತಿರುವ ಈ ಹೊತ್ತಿನಲ್ಲಿ ಸ್ಯಾಂಡಲ್‌ವುಡ್ ತನ್ನ ಪರಿಮಳವನ್ನು ಉಳಿಸಿಕೊಳ್ಳಬಲ್ಲುದೇ?

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT