ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಅಮೃತ: ಆದರೂ ಇರಲಿ ಎಚ್ಚರ

Last Updated 15 ಜನವರಿ 2012, 19:30 IST
ಅಕ್ಷರ ಗಾತ್ರ

ಹಾಲನ್ನು ಅಮೃತ ಎಂದವರೂ ಉಂಟು, ಹಾಲಾಹಲ ಎಂದವರೂ ಉಂಟು. ಹಾಲಿನಷ್ಟು ಸುಲಭವಾಗಿ ಪಚನವಾಗುವ ಸಮಗ್ರ ಪೌಷ್ಟಿಕ ಆಹಾರ ಮತ್ತೊಂದಿಲ್ಲ ಎನ್ನುವವರು ಇರುವಂತೆಯೇ ಬಾಲ್ಯಾವಸ್ಥೆ ದಾಟಿದ ಮೇಲೆ ಮನುಷ್ಯನಿಗೆ ಹಾಲು ಬೇಕೇ ಇಲ್ಲ ಎನ್ನುವವರೂ ಇದ್ದಾರೆ.

ಅದೇನೇ ಇರಲಿ, ಸದ್ಯ ಹಾಲು ಇಂದು ಹೈನೋದ್ಯಮದ ರೂಪ ತಳೆದು ದಿನ ಬೆಳಗಾದರೆ ಪ್ರತಿಯೊಬ್ಬರಿಗೂ ಬೇಕೇಬೇಕಾದ ವಸ್ತುವಾಗಿದೆ.

ಕೊಬ್ಬು, ಕಾರ್ಬೊಹೈಡ್ರೇಟ್‌ಗಳು, ಖನಿಜಾಂಶ, ಕೊಬ್ಬಿನಲ್ಲಿ ಕರಗುವ ಎ, ಡಿ, ಇ, ಕೆ ವಿಟಮಿನ್‌ಗಳು, ನೀರಿನಲ್ಲಿ ಕರಗುವ ಬಿ 12, ಬಿ 1, ಬಿ 2, ಬಿ 6 ವಿಟಮಿನ್‌ಗಳು, ವಿಟಮಿನ್ ಸಿ, ನಿಯಾಸಿನ್, ಫೋಲಿಕ್ ಆಮ್ಲ, ಪ್ರೊಟೀನ್ ಮತ್ತು ಕ್ಯಾಲ್ಸಿಯಂ ಇವೆಲ್ಲವನ್ನೂ ಒಳಗೊಂಡಿ ರುವುದರಿಂದ ಹಾಲು ಪರಿಪೂರ್ಣ ಆಹಾರ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ.

ಹಾಲಿನ ಆರಂಭಿಕ ಸ್ವರೂಪ ಹಸಿ ಹಾಲು. ಜಾನುವಾರಿನಿಂದ ಹಿಂಡಿದ ತಕ್ಷಣ ಲಭ್ಯವಾಗುವ ಹಾಲು ಇದು. ಇದನ್ನು ಅತ್ಯುತ್ತಮ ಪೌಷ್ಟಿಕಾಂಶವೆಂದು, ಕರೆದ ಗಳಿಗೆಯಲ್ಲೇ ಕುಡಿಯುವವರೂ ಇದ್ದಾರೆ.  ಆದರೆ ಒಂದೊಮ್ಮೆ ಜಾನುವಾರು ಕೆಚ್ಚಲುಬಾವು (ಮಾಸ್ಟಿಟಿಸ್) ಅಥವಾ ಬೇರಾವುದೇ ಕಾಯಿಲೆಯಿಂದ ಬಳಲುತ್ತಿದ್ದಾಗ ಅಥವಾ ಈ ರೋಗಗಳ ನಿವಾರಣೆಗೆಂದು ರಾಸಿಗೆ ಚಿಕಿತ್ಸೆ ಕೊಡಿಸಿದ್ದಾಗ ಹಾಲನ್ನು ಹೀಗೆ ಕುದಿಸದೆ ಸೇವಿಸುವುದು ಅಪಾಯಕಾರಿ.
 
ಅಂತಹ ಸಂದರ್ಭದಲ್ಲಿ ರೋಗಕಾರಕ ಸೂಕ್ಷ್ಮಾಣುಜೀವಿಗಳು ಅಥವಾ ಚಿಕಿತ್ಸೆಗೆ ನೀಡಿದ ಔಷಧದ ಶೇಷಾಂಶ (ರೆಸಿಡ್ಯೂ) ಹಾಲಿಗೆ ಸೇರಿಕೊಂಡಿರುವ ಸಾಧ್ಯತೆಯನ್ನು ಕಡೆಗಣಿಸುವಂತಿಲ್ಲ. ಹೀಗಾಗಿ ಹಸಿ ಹಾಲನ್ನು ಕುಡಿಯುವ ಮುನ್ನ ಹಸುವಿನ ಆರೋಗ್ಯದ ಬಗ್ಗೆ ಸಂಪೂರ್ಣ ಖಾತ್ರಿ ಅತ್ಯಗತ್ಯ.

ಇನ್ನು ಮಾರುಕಟ್ಟೆಗೆ ಬಂದರೆ, ಇಂದು ಡೇರಿ ಹಾಲು ಹಲವು ರೂಪಗಳಲ್ಲಿ ಗ್ರಾಹಕರನ್ನು ತಲುಪುತ್ತಿದೆ. ಡೇರಿಗಳಲ್ಲಿ ಹಾಲಿನ ಸಂಸ್ಕರಣೆಗೆ ಅನುಸರಿಸುವ ಮಾರ್ಗ ಹಾಗೂ ಅದರಲ್ಲಿರುವ ಕೊಬ್ಬಿನ ಪ್ರಮಾಣ ಆಧರಿಸಿ- ಪ್ಯಾಸ್ಚರೈಸ್ಡ್ ಹಾಲು, ಹೋಮೋಜಿನೈಸ್ಡ್ ಹಾಲು, ಲ್ಯಾಕ್ಟೋಸ್ ಮುಕ್ತ ಹಾಲು, ಟೆಟ್ರಾ ಪ್ಯಾಕ್ ಹಾಲು-  ಹೀಗೆ ಬೇರೆ ಬೇರೆ ಹೆಸರಿನಿಂದ ಅದನ್ನು ಕರೆಯಲಾಗುತ್ತದೆ.

ಹಾಲು ಪರಿಪೂರ್ಣ ಆಹಾರ ಎಂದೇ ಹೆಸರಾಗಿದ್ದರೂ, ಸಂಸ್ಕರಣೆ ವೇಳೆ ಲೋಪವಾದರೆ ಅದರ ಸೇವನೆಯಿಂದ ಒಳಿತಿಗಿಂತ ಕೆಡುಕೇ ಅಧಿಕ. ಹಾಲಿನಲ್ಲಿ ಜೀವಪೋಷಕಗಳು ಇರುವಂತೆಯೇ ಹಾನಿಕಾರಕ ಬ್ಯಾಕ್ಟೀರಿಯಾಗಳು ಕೂಡ ಇರಬಹುದು. ಅವುಗಳ ಪ್ರಮಾಣ ನಿಗದಿತ ಮಿತಿಗಿಂತ ಹೆಚ್ಚಾದರೆ ಜೀವಕ್ಕೆ ಸತ್ವ ತುಂಬಬೇಕಾದ ಹಾಲು ಅದಕ್ಕೆ ತದ್ವಿರುದ್ಧವಾದ ಪರಿಣಾಮವನ್ನೇ ಉಂಟು ಮಾಡಬಹುದು.

ತಜ್ಞರ ಪ್ರಕಾರ, ನಾವು ಬಳಸುವ ಹಾಲು ಇ.ಕೋಲಿ, ಕೋಲಿಫಾರ್ಮ್ ಬ್ಯಾಕ್ಟೀರಿಯಾ, ಸಾಲ್ಮೊನೆಲ್ಲ, ಲಿಸ್ಟೀರಿಯಾ ಮತ್ತು ಸ್ಟ್ಯಾಫಿಲೊಕಾಕಸ್ ಎಂಬ ರೋಗಕಾರಕ ಬ್ಯಾಕ್ಟೀರಿಯಾಗಳಿಂದ ಮುಕ್ತವಾಗಿರಬೇಕು. ಒಂದೊಮ್ಮೆ ಇವು ಹಾಲಿನಲ್ಲಿ ಇದ್ದಿದ್ದೇ ಆದರೆ ಕರುಳುಬೇನೆ, ಮೂತ್ರ ಸೋಂಕು, ವಿಷಮಶೀತಜ್ವರ, ಅತಿಸಾರ, ಜಠರದ ಕರುಳಿನಲ್ಲಿ ಉರಿತ, ಉಸಿರಾಟದ ತೊಂದರೆ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಕೆಚ್ಚಲುಬಾವು ಬೇನೆಯಿಂದ ಬಳಲುತ್ತಿರುವ ರಾಸಿಗೆ ಚಿಕಿತ್ಸೆಗಾಗಿ ಆಂಟಿಬಯಾಟಿಕ್ ನೀಡಿದ್ದಾಗ ಜಾನುವಾರು ಗುಣಮುಖವಾದ ನಾಲ್ಕು ದಿನಗಳವರೆಗೆ ಹಾಲು ಕರೆಯಬಾರದು. ಅಂತಹ ಸಂದರ್ಭದಲ್ಲಿ ಹಾಲಿನಲ್ಲಿ ಆಂಟಿಬಯಾಟಿಕ್ ಕಣಗಳು ಇರುತ್ತವೆ. (ಆದರೆ ನಮ್ಮ ಬಹುಪಾಲು ರೈತರು ಇದನ್ನು ಗಂಭೀರವಾಗಿ ಪರಿಗಣಿಸದೆ ಅಂತಹ ಸಂದರ್ಭದಲ್ಲೂ ಹಾಲು ಹಿಂಡುವುದು ಕಳವಳಕಾರಿ ಸಂಗತಿ)

ಇನ್ನು ಹಾಲಿನಲ್ಲಿ ಯಾವುದೇ ಭಾರ ಲೋಹ, ಕೀಟನಾಶಕ, ಮೆಲಮೈನ್ ಅಥವಾ ಅಫ್ಲಾಟಾಕ್ಸಿನ್ ಕುರುಹು ಇರಬಾರದು. ಒಂದೊಮ್ಮೆ ಅವು ಇದ್ದರೂ ಆಹಾರ ಸುರಕ್ಷೆ ಮತ್ತು ಮಾನದಂಡ ಕಾಯಿದೆ (ಎಫ್‌ಎಸ್‌ಎಸ್‌ಎ) ನಿಗದಿಗೊಳಿಸಿರುವ ಮಟ್ಟಕ್ಕಿಂತ ಕಡಿಮೆ ಇರಬೇಕು. ಅಫ್ಲಾಟಾಕ್ಸಿನ್, ಸೀಸ ಅಥವಾ ಇನ್ನಾವುದೇ ಭಾರಲೋಹ ಅಥವಾ ಕೀಟನಾಶಕದ ಅಂಶ ಹಾಲಿನ ಮೂಲಕ ದೇಹವನ್ನು ಸೇರುತ್ತಾ ಹೋದರೆ ಅದು ದೀರ್ಘಾವಧಿಯಲ್ಲಿ ಯಕೃತ್ ಹಾನಿ, ಸಿರೋಸಿಸ್, ಜಠರದಲ್ಲಿ ಅಲ್ಸರ್, ಕ್ಯಾನ್ಸರ್ ಮತ್ತಿತರ ರೋಗಗಳಿಗೆ ಕಾರಣವಾಗುವ ಸಂಭವವಿದೆ.

ಗುಣಮಟ್ಟ ಸಂರಕ್ಷಣೆ
ಶೀಘ್ರ ಹಾಳಾಗುವ ಗುಣದ ಹಾಲನ್ನು ಹೆಚ್ಚು ಕಾಲ ಕಾಪಾಡಲು ತುಂಬಾ ಜಾಗ್ರತೆ ವಹಿಸಬೇಕಾಗುತ್ತದೆ. ಅದನ್ನು ಕರೆಯುವುದರಿಂದ ಹಿಡಿದು, ಸಂಸ್ಕರಣೆ ಹಾಗೂ ಅಂತಿಮವಾಗಿ ಗ್ರಾಹಕನಿಗೆ ತಲುಪಿಸುವವರೆಗೆ ಪ್ರತಿ ಹಂತದಲ್ಲೂ ಶುಚಿತ್ವ ಪಾಲಿಸಬೇಕು; ಸಾಗಣೆ, ವಿತರಣೆಯ ಎಲ್ಲ ವೇಳೆಯೂ 4 ಡಿ.ಸೆ.ಗಿಂತ ಕಡಿಮೆ ತಾಪಮಾನವಿರುವಂತೆ ನೋಡಿಕೊಳ್ಳಬೇಕು.  ಈ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ಉದಾಸೀನ ತೋರಿದರೆ ಹಾಲಿನ ಆಮ್ಲೀಯ ಗುಣ ಹೆಚ್ಚಾಗಿ ಆರೋಗ್ಯದ ಮೇಲೆ ದುಷ್ಪರಿಣಾಮವಾಗಬಹುದು.

ಹಾಲನ್ನು ಸಂರಕ್ಷಿಸುವ ಶ್ರಮದಿಂದ ಪಾರಾಗಲು ಅದಕ್ಕೆ ಹೈಡ್ರೋಜನ್ ಪೆರಾಕ್ಸೈಡ್, ಕಾರ್ಬೊನೇಟ್‌ಗಳಂತಹ ಸಂರಕ್ಷಕಗಳು ಹಾಗೂ ತಟಸ್ಥಕಾರಕಗಳನ್ನು (ನ್ಯೂಟ್ರಲೈಸರ್) ಸೇರಿಸುವುದೂ ಉಂಟು. ಆದರೆ ಇವು ಆರೋಗ್ಯ ಸ್ವಾಸ್ಥಕ್ಕೆ ಭಂಗ ತರುವಂಥವು.
 ಹಾಲಿನಲ್ಲಿರುವ ಪ್ರೊಟೀನ್ ಅಂಶ ಹೆಚ್ಚಿಸಿ, ಹೆಚ್ಚು ಬೆಲೆ ಪಡೆಯುವ ಆಸೆಯಿಂದ ಕೆನೆಯಿಂದ ಮಾಡಿದ ಹಾಲಿನ ಪುಡಿಗೆ ಮೆಲಮೈನ್ ಎಂಬ  ಕೃತಕ ರಾಸಾಯನಿಕ ಬೆರೆಸುವುದೂ ಉಂಟು.

ಬಿಐಎಸ್ ಮತ್ತು ಎಫ್‌ಎಸ್‌ಎಸ್‌ಎಎ ನಿಗದಿಗೊಳಿಸಿರುವ ಪ್ರೊಟೀನ್‌ಗಳೆಲ್ಲಾ ಹಾಲಿನಲ್ಲಿ ಇವೆ ಎಂಬುದನ್ನು ತೋರಿಸಲು ಕೆಲವರು ಕಂಡುಕೊಂಡಿರುವ ವಾಮಮಾರ್ಗ ಇದು. ಆದರೆ ಮೆಲಮೈನ್ ಆರೋಗ್ಯಕ್ಕೆ ತೀವ್ರ ಮಾರಕ. ಇದು ಮೂತ್ರಪಿಂಡ ಮತ್ತು ಮೂತ್ರಕೋಶಕ್ಕೆ (ಯೂರಿನರಿ ಬ್ಲ್ಯಾಡರ್) ಹಾನಿ ಎಸಗುತ್ತದೆ. ನಿಯಮಾವಳಿ ಪ್ರಕಾರ, ಹಾಲಿನಲ್ಲಿ ಮೆಲಮೈನ್ ಅಂಶದ ಕುರುಹು ಒಂದಿಷ್ಟೂ ಇರಬಾರದು.

ಹಾಲನ್ನು ಹೆಚ್ಚು ಗಟ್ಟಿಯಾಗಿಸಿ (ಎಸ್‌ಎನ್‌ಎಫ್ ಹೆಚ್ಚಿಸಿ), ಅಧಿಕ ಬೆಲೆ ಪಡೆಯುವ ಸಲುವಾಗಿ ಗ್ರಾಮೀಣ ಭಾಗದಲ್ಲಿ ಲವಣ, ಸಕ್ಕರೆ ಅಥವಾ ಯೂರಿಯಾವನ್ನು ಅದಕ್ಕೆ ಸೇರಿಸುವುದೂ ಉಂಟು. ಆದರೆ ಹೀಗೆ ಮಾಡುವುದು ಎಫ್‌ಎಸ್‌ಎಸ್ ಕಾಯಿದೆ ಉಲ್ಲಂಘಿಸಿದಂತೆ. ಸಂಸ್ಕರಿತ ಹಾಲು ಇವೆಲ್ಲವುಗಳಿಂದ ಮುಕ್ತವಾಗಿರಬೇಕು.  

(ಮುಂದುವರಿಯುವುದು)

ಸಮೀಕ್ಷೆ ಏಕೆ

ಇದು ಮಾರುಕಟ್ಟೆ ಯುಗ. ಹಣ ಕೊಟ್ಟರೆ ಬೇಕಾದ್ದನ್ನು ಕೊಳ್ಳಬಹುದು. ಆದರೆ ಹೆಚ್ಚು ಹಣ ಕೊಟ್ಟ ಮಾತ್ರಕ್ಕೆ ಗುಣಮಟ್ಟವೂ ಖಾತ್ರಿ ಎನ್ನಲಾಗದು.
ಯಾವುದೇ ಉತ್ಪನ್ನದ ಬಗ್ಗೆ ಹಲವಾರು ಮಾಹಿತಿಗಳು ಪ್ರಚಾರದಲ್ಲಿದ್ದರೂ ಗ್ರಾಹಕರಿಗೆ ಗೊಂದಲಗಳೂ ಸಾಕಷ್ಟಿವೆ. ಭಾರತೀಯ ಗ್ರಾಹಕರ ಸಂಘಟನಾ ಬಳಗದ ಸಾರ್ವಜನಿಕ ದತ್ತಿ ಟ್ರಸ್ಟ್ ಆದ `ಕಾನ್ಸರ್ಟ್~ (ಎ ಸೆಂಟರ್ ಫಾರ್ ಕನ್ಸೂಮರ್ ಎಜುಕೇಷನ್, ರೀಸರ್ಚ್, ಟೀಚಿಂಗ್, ಟ್ರೇನಿಂಗ್ ಅಂಡ್ ಟೆಸ್ಟಿಂಗ್) ಗ್ರಾಹಕರ ಗೊಂದಲ ನಿವಾರಿಸಿ, ಅವರ ಅರಿವು ಹೆಚ್ಚಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯಾಗಿದೆ.

ಸಂಸ್ಥೆಯು ದಕ್ಷಿಣ ಭಾರತದಲ್ಲಿ ಇದೇ ಮೊತ್ತಮೊದಲ ಬಾರಿಗೆ ಏಳು ಉತ್ಪನ್ನಗಳ ಹಾಗೂ ಮೂರು ಸೇವೆಗಳ ಸಮೀಕ್ಷೆ ನಡೆಸಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ ಅನುದಾನದ ನೆರವಿನಿಂದ ಕೈಗೊಂಡ ಸಮೀಕ್ಷೆಯು ಉತ್ಪನ್ನಗಳ ಪ್ರಯೋಗಾಲಯ ಪರೀಕ್ಷೆಯನ್ನೂ ಒಳಗೊಂಡಿದೆ.

ಅಡುಗೆ ಎಣ್ಣೆ, ಹಾಲು, ನೋವು ನಿವಾರಕ ಕ್ರೀಮ್, ಸೊಳ್ಳೆ ನಿವಾರಕ ಮ್ಯಾಟ್ ಮತ್ತು ಕಾಯಿಲ್, ವಾಟರ್ ಪ್ಯೂರಿಫೈಯರ್, ಹಲ್ಲುಜ್ಜುವ ಪೇಸ್ಟ್ ಹಾಗೂ ಗ್ರೈಂಡರ್ ಇವು ಪರೀಕ್ಷೆಗೊಂಡ ಏಳು ಉತ್ಪನ್ನಗಳು. ಜೀವ ವಿಮೆ, ಬ್ಯಾಂಕಿಂಗ್ ಮತ್ತು ಮೊಬೈಲ್ ಸಮೀಕ್ಷೆಗೊಂಡ ಸೇವಾ ಕ್ಷೇತ್ರಗಳು.

ಸಮೀಕ್ಷೆಯಿಂದ ವ್ಯಕ್ತವಾದ ಫಲಿತಾಂಶಗಳನ್ನು ಜನರ ಮುಂದಿಡುತ್ತಿದ್ದೇವೆ. ಈ ಮಾಹಿತಿಗಳು ಒಬ್ಬರಿಂದ ಇನ್ನೊಬ್ಬರಿಗೆ ತಿಳಿದು ತಾವು ಬಳಸುವ ವಸ್ತುಗಳ ಬಗ್ಗೆ ಗ್ರಾಹಕರಲ್ಲಿ ತಿಳಿವಳಿಕೆ ಹೆಚ್ಚಾಗಬೇಕೆಂಬುದೇ ಇದರ ಉದ್ದೇಶ.

ಈ ಸಮೀಕ್ಷಾ ಸರಣಿಯ ಆರಂಭಕ್ಕೆ ಅಡುಗೆ ಎಣ್ಣೆ ಕುರಿತ ಸಮೀಕ್ಷಾ ವರದಿ ಪ್ರಕಟಿಸಿದ್ದೆವು. ಇದೀಗ ಅತ್ಯಗತ್ಯ ವಸ್ತುಗಳಲ್ಲಿ ಒಂದಾದ ಹಾಲಿನ ಬಗೆಗಿನ ಸಮೀಕ್ಷೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT