ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಉತ್ಪಾದಕ ಸಂಘಗಳಿಗೆ ಸಹಾಯ ಧನ

Last Updated 18 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಆನೇಕಲ್: ಮಿಶ್ರತಳಿ ಕರುಗಳ ಪ್ರದರ್ಶನ ಏರ್ಪಡಿಸಿ ಪ್ರೋತ್ಸಾಹಿಸುವ ಸಲುವಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ತಲಾ 25 ಸಾವಿರ ರೂ. ಸಹಾಯಧನ ನೀಡುವುದಾಗಿ ಬಮುಲ್ ಅಧ್ಯಕ್ಷ ದಿಬ್ಬೂರು ಜಯಣ್ಣ ನುಡಿದರು.

ಅವರು ತಾಲ್ಲೂಕಿನ ಹಾರಗದ್ದೆ ನಿಗಮ ಬಡಾವಣೆಯಲ್ಲಿ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ಹಾಗೂ ಬಮೂಲ್‌ನಿಂದ ಬರುವ ಅನುದಾನಗಳು ನೇರವಾಗಿ ರೈತರಿಗೆ ದೊರೆಯುವ ವ್ಯವಸ್ಥೆ ಮಾಡಲಾಗಿದೆ. ಹೈನೋದ್ಯಮದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಬಮೂಲ್ ಹಮ್ಮಿಕೊಂಡಿದ್ದು ರೈತರನ್ನು ಉತ್ತೇಜಿಸಲು ಕರು, ಪಡ್ಡೆ ಹಾಗೂ ಕರಾವು ಹಸುಗಳ ಪ್ರದರ್ಶನ ಆಯೋಜಿಸಲಾಗುತ್ತಿದೆ. ಇದರಿಂದ ಇತರ ರೈತರಿಗೆ ನಿರ್ವಹಣೆ ಬಗ್ಗೆ ಮಾರ್ಗದರ್ಶನ ದೊರೆಯುತ್ತದೆ. ಆರೋಗ್ಯಕರವಾಗಿ ಸಾಕಿರುವ ರೈತರಿಗೆ ಬಹುಮಾನ ನೀಡಲಾಗುತ್ತಿದೆ. ಈ ಯೋಜನೆ ಬಮೂಲ್ ವ್ಯಾಪ್ತಿಯ ಒಂದು ತಾಲ್ಲೂಕಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಇದೀಗ ಹನ್ನೊಂದು ತಾಲ್ಲೂಕುಗಳಲ್ಲಿಯೂ ವಿಸ್ತರಿಸಲಾಗಿದೆ ಎಂದರು.

ಬಮೂಲ್ ನಿರ್ದೇಶಕ ಆರ್.ಕೆ.ರಮೇಶ್ ಮಾತನಾಡಿ ರಾಸುಗಳ ಸಾವಿನಿಂದ ರೈತರಿಗಾಗುವ ನಷ್ಟ ತಪ್ಪಿಸುವ ಸಲುವಾಗಿ ಬಮೂಲ್ ಜಾರಿಗೆ ತಂದಿರುವ ಗುಂಪು ವಿಮಾ ಯೋಜನೆಯ ಪ್ರಯೋಜನವನ್ನು ಎಲ್ಲ ರೈತರೂ ಪಡೆದುಕೊಳ್ಳಬೇಕು ಎಂದರು.

ಬಮೂಲ್ ವ್ಯವಸ್ಥಾಪಕ ನಿರ್ದೇಶಕ ಸ್ವಾಮಿ ಮಾತನಾಡಿ ತುಮಕೂರು ಒಕ್ಕೂಟದಲ್ಲಿ ರೈತರು ಸರಬರಾಜು ಮಾಡುವ ಹಾಲಿಗೆ ಲೀಟರ್‌ಗೆ 17 ರೂ. ನೀಡಲಾಗುತ್ತಿದೆ. ಆದರೆ ಬೆಂಗಳೂರು ಒಕ್ಕೂಟವು 18 ರೂ. ನೀಡುತ್ತಿದೆ. ಲಾಭವನ್ನು ರೈತರಿಗೆ ಹಂಚುವ ಮೂಲಕ ಬೆಂಗಳೂರು ಒಕ್ಕೂಟ ಮಾದರಿಯಾಗಿದೆ ಎಂದರು.

ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಹಸು, ಪಡ್ಡೆ, ಕರುಗಳ ಆರೋಗ್ಯವನ್ನು ಪಶುತಜ್ಞ ಡಾ.ವಿಶ್ವನಾಥರೆಡ್ಡಿ ತಪಾಸಣೆ ನಡೆಸಿ ಗುಣಮಟ್ಟ ಪರಿಶೀಲಿಸಿದರು. ಉತ್ತಮವಾಗಿ ಕರು ಸಾಕಿದ್ದ ಸೀತನಾಯಕನ ಹಳ್ಳಿಯ ಮುನಿಬೈರಪ್ಪ ಕರುಗಳ ವಿಭಾಗದಲ್ಲಿ, ಹಾರಗದ್ದೆಯ ಹೆಚ್.ಎನ್.ರಾಜಣ್ಣ ಮತ್ತು ಕುಂಬಾರನಹಳ್ಳಿ ಕೃಷ್ಣಾರೆಡ್ಡಿ ಪಡ್ಡೆಗಳ ವಿಭಾಗದಲ್ಲಿ ಹಾಗೂ ಹಾರಗದ್ದೆ ಸುಬ್ಬಣ್ಣ ಹಸುಗಳ ವಿಭಾಗದಲ್ಲಿ ಮೊದಲ ಬಹುಮಾನಗಳನ್ನು ಗಳಿಸಿದರು.

ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಾಲ್ಲೂಕಿನ ಹಾಲ್ದೇನಹಳ್ಳಿ ಸಂಘದ ಸದಸ್ಯೆ ಉಮಾದೇವಿಯ ಪುತ್ರಿ ಅಂಜನಾಳಿಗೆ ಚಿಕಿತ್ಸೆಗಾಗಿ 25 ಸಾವಿರ ರೂ. ನೆರವಿನ ಚೆಕ್‌ಅನ್ನು ಒಕ್ಕೂಟದ ವತಿಯಿಂದ ವಿತರಿಸಲಾಯಿತು.
ಹಾರಗದ್ದೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೆ.ರಾಜೇಶ್, ಬಮೂಲ್ ಉಪವ್ಯವಸ್ಥಾಪಕ ಡಾ.ಪಿ.ಶ್ರೀನಿವಾಸಮೂರ್ತಿ, ಡಾ.ಎಸ್.ಕೆ.ರಾಘವನ್, ತಾಲ್ಲೂಕು ಪಂಚಾಯಿತಿ ಸದಸ್ಯ ಹೆಚ್.ಎನ್.ಕೇಶವಮೂರ್ತಿ, ಗ್ರಾ.ಪಂ. ಸದಸ್ಯ ರಾಜಶೇಖರರೆಡ್ಡಿ, ರವಿಚಂದ್ರ, ಸಂಘದ ಕಾರ್ಯದರ್ಶಿ ಎಂ.ಆನಂದಕುಮಾರ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT