ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಕುಡಿದ ಸಾಯಿಬಾಬ ವಿಗ್ರಹ!

Last Updated 11 ಜುಲೈ 2012, 19:05 IST
ಅಕ್ಷರ ಗಾತ್ರ

ದೇವನಹಳ್ಳಿ: ಪಟ್ಟಣದಲ್ಲಿನ ಭಕ್ತರೊಬ್ಬರ ಮನೆಯಲ್ಲಿನ ಶಿರಡಿ ಸಾಯಿಬಾಬ ವಿಗ್ರಹ ಹಾಲು ಕುಡಿಯುತ್ತಿದೆ ಎಂಬ ಸುದ್ದಿ ಬುಧವಾರ ನಾಗರಿಕರಲ್ಲಿ ತೀವ್ರ ಸಂಚಲನ ಮೂಡಿಸಿತು.

ಪಟ್ಟಣದ ಗಾಣಿಗರ ಬೀದಿಯಲ್ಲಿನ ಪುರಸಭೆ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರ ಮನೆಯಲ್ಲಿ ಇಟ್ಟಿರುವ ಅಮೃತಶಿಲೆಯ ಸುಮಾರು ಅರ್ಧ ಅಡಿ ಎತ್ತರದ  ಶಿರಡಿ ಸಾಯಿಬಾಬ ವಿಗ್ರಹ ಹಾಲು ಕುಡಿಯುತ್ತಿದೆ ಎಂಬ ಮಾಹಿತಿ ಕ್ಷಣಾರ್ಧದಲ್ಲಿ ಪಟ್ಟಣದ ತುಂಬಾ ಹರಡಿತು. ವಿಗ್ರಹದ ದರ್ಶನ ಪಡೆಯಲು ಮಹಿಳೆಯರು, ಮಕ್ಕಳು ಸೇರಿದಂತೆ ಧಾವಿಸಿದರು. ಬೆಳಿಗ್ಗೆ 11 ಗಂಟೆಗೆ ಹರಡಿದ ಸುದ್ದಿ ಸಂಜೆಯ ವೇಳೆಗೆ ಸಾಕಷ್ಟು ಸಂಖ್ಯೆಯ ಜನರ ಕುತೂಹಲಕ್ಕೆ ಕಾರಣವಾಗಿ ಮನೆಯ ಮುಂದೆ ನೂಕು ನುಗ್ಗಲು ಉಂಟಾಯಿತು.

`ಪವಾಡ ಎನ್ನುವುದು ಕೇವಲ ಸಮೂಹ ಸನ್ನಿ~
ಗಣಪತಿ, ಶಿರಡಿ ಸಾಯಿಬಾಬ ಅಥವಾ ಇನ್ಯಾವುದೇ ದೇವರ ವಿಗ್ರಹಗಳು ಅಣುಗಳ ಸಂಲಗ್ನತ್ವದಿಂದ (ಆಕರ್ಷಣೆ ಬಲ) ಹಾಲು ಅಥವಾ ನೀರು ಸೇರಿದಂತೆ ಯಾವುದೇ ರೀತಿಯ ದ್ರವರೂಪದ ವಸ್ತುಗಳನ್ನು ಹೀರುವ ಶಕ್ತಿ ಪಡೆದಿರುತ್ತವೆ ಎಂದು ಪವಾಡ ಬಯಲು ರೂವಾರಿ ಹುಲಿಕಲ್ ನಟರಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಘನವಸ್ತುವಿನ ಯಾವುದೇ ಕಲ್ಲು ಅಥವಾ ವಿಗ್ರಹಕ್ಕೆ ದ್ರವರೂಪದ ವಸ್ತುವನ್ನು ಸ್ಪರ್ಶನೆ ಮಾಡಿದಾಗ ಆಕರ್ಷಿಸುವ ಗುಣ ಘನವಸ್ತುವಿಗೆ ಇರುತ್ತದೆ. ಇಲ್ಲಿಯವರೆವಿಗೂ ಎಲ್ಲಿಯೂ ವಿಗ್ರಹ ಅಥವಾ ಕೆತ್ತನೆಯ ಮೂರ್ತಿಗಳು ಹಾಲು ಕುಡಿಯುತ್ತವೆ ಎಂಬುದು ವೈಜ್ಞಾನಿಕವಾಗಿ ಸಾಬೀತಾದ ಉದಾಹರಣೆಗಳಿಲ್ಲ ಎಂದು ನಟರಾಜ್ ಅವರು `ಪ್ರಜಾವಾಣಿ~ಗೆ ತಿಳಿಸಿದರು. ರಾಜ್ಯದಾದ್ಯಂತ ಬರ ಪೀಡಿತ ಪ್ರದೇಶದಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವವರಿಗೆ ಹಾಲು ಸೇರಿದಂತೆ ಸೂಕ್ತ ಆಹಾರವೇ ಸಿಗುತ್ತಿಲ್ಲ. ಅಂತಹುದರಲ್ಲಿ ಈ ಬಗ್ಗೆ ಕುತೂಹಲ ಮೂಡಿಸಿಕೊಂಡು ಆಶ್ಚರ್ಯ ವ್ಯಕ್ತಪಡಿಸುವುದು ಸರಿಯಲ್ಲ. ಇಂದು ಮೌಢ್ಯತೆ ಬಗ್ಗೆ ವಿವಿಧ ರೀತಿಯಲ್ಲಿ ಅರಿವು ಮೂಡಿಸುವ ಅನೇಕ ಮಾಧ್ಯಮಗಳು ಹಾಗೂ ಪ್ರಜ್ಞಾವಂತರು ಇರುವಾಗ ಜನರು ವಿವೇಚನೆಯಿಂದ ವರ್ತಿಸಬೇಕು ಎಂದು ಹುಲಿಕಲ್ ನಟರಾಜ್ ಹೇಳಿದರು. ಧಾರ್ಮಿಕ ನಂಬಿಕೆಗಳು ಜನರ ಸೀಮಿತ ಚೌಕಟ್ಟಿಗೆ ಒಳಪಟ್ಟಿರುತ್ತವೆ. ಇಂತಹ ಚೌಕಟ್ಟನ್ನು ಮೀರಿದಾಗ ಸಮಾಜದಲ್ಲಿ ಮೌಢ್ಯತೆ ಅಥವಾ ಸಮೂಹ ಸನ್ನಿ ಎದುರಿಸಬೇಕಾದ ಪರಿಸ್ಥಿತಿ ಬರುತ್ತದೆ. ಪವಾಡದ ಸಂಧರ್ಭಗಳನ್ನು ಸೃಷ್ಟಿಸುವುದಕ್ಕೆ ಮತ್ತು ಮೌಢ್ಯತೆ ಬಿಂಬಿಸುವುದಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಆಗ್ರಹಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT