ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವು ಕಡಿತದಿಂದ 50 ಸಾವಿರ ಮಂದಿ ಸಾವು!

ಮೂತ್ರಪಿಂಡ ಶಾಸ್ತ್ರಜ್ಞ ಡಾ.ಕೆ.ಜೋಸೆಫ್
Last Updated 12 ಡಿಸೆಂಬರ್ 2012, 10:00 IST
ಅಕ್ಷರ ಗಾತ್ರ

ಮೈಸೂರು: `ಹಾವು ಕಡಿತದಿಂದ ದೇಶದಲ್ಲಿ ವರ್ಷಕ್ಕೆ 50 ಸಾವಿರ ಮಂದಿ ಮೃತಪಡುತ್ತಿದ್ದು, ಇದು ಸುನಾಮಿಗಿಂತ ಅಪಾಯಕಾರಿ' ಎಂದು ಮೂತ್ರಪಿಂಡ ಶಾಸ್ತ್ರಜ್ಞ ಡಾ. ಜೋಸೆಫ್ ಕೆ.ಜೋಸೆಫ್ ಅಭಿಪ್ರಾಯಪಟ್ಟರು.

ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ ಮತ್ತು ಭಾರತೀಯ ವಿಷ ವಿಜ್ಞಾನಶಾಸ್ತ್ರ ಸೊಸೈಟಿ ಆಶ್ರಯ ದಲ್ಲಿ ಸೋಮವಾರ ಆರಂಭವಾದ ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

`ಆಸ್ಟ್ರೇಲಿಯಾ, ಅಮೆರಿಕ ದೇಶಗಳಲ್ಲಿ ಹಾವು ಕಡಿತದಿಂದ ಪ್ರತಿ ವರ್ಷ ಅಂದಾಜು 10 ಮಂದಿ ಮೃತಪಟ್ಟರೆ, ಭಾರತದಲ್ಲಿ 50 ಸಾವಿರ ಮಂದಿ ಸಾವನ್ನಪ್ಪುತ್ತಾರೆ. ಇದು ಒಂದರ್ಥದಲ್ಲಿ ಸುನಾಮಿಯಿಂದ ಮೃತಪಟ್ಟವರ ಸಂಖ್ಯೆಗಿಂತಲೂ ಹೆಚ್ಚಾಗಿದೆ. 22 ರಿಂದ 50 ವರ್ಷದ ಒಳಗಿನವರೇ ಹೆಚ್ಚಾಗಿ ಹಾವು ಕಡಿತಕ್ಕೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಸಾಮಾಜಿಕ-ಆರ್ಥಿಕ ಸ್ಥಿತಿಯೂ ಕಾರಣವಾಗಿದೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು. ಹಾವು ಕಡಿತದಿಂದ ಜನ ಸಾಯದಂತೆ ಪರಿಹಾರ ರೂಪಿಸಬೇಕು' ಎಂದರು.

`ಇದುವರೆಗೆ ಹಾವು ಕಡಿತಕ್ಕೆ ಭಾರತದಲ್ಲಿ ಆ್ಯಂಟಿ ವೆನಂ ಲಸಿಕೆ ಬಳಸಲಾಗುತ್ತಿದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಇದನ್ನೇ ಕಳುಹಿಸಲಾಗು ತ್ತಿದೆ. ಅದರ ಬದಲು ದೇಶದಾದ್ಯಂತ ಹಾವು ಕಡಿತಕ್ಕೆ ಚಿಕಿತ್ಸೆ ನೀಡುವ ಕೇಂದ್ರಗಳನ್ನು ಆರಂಭಿಸಬೇಕು. ಅಲ್ಲದೆ, ಆ್ಯಂಟಿ ವೆನಂ ಔಷಧಿಗೆ ಸೂಕ್ತ ಬೆಲೆ ನಿಗದಿಪಡಿಸಬೇಕು. ಏಕೆಂದರೆ ಕೆಲವು ವರ್ಷಗಳ ಹಿಂದೆ 16 ರೂಪಾಯಿಗೆ ಸಿಗುತ್ತಿದ್ದ ಲಸಿಕೆ ದರವನ್ನು ಇದೀಗ ರೂ. 650ಗೆ ಹೆಚ್ಚಿಸಲಾಗಿದೆ. ಈ ವೆಚ್ಚವನ್ನು ಭರಿಸಲು ಬಡವರಿಗೆ ಕಷ್ಟವಾಗುತ್ತದೆ. ಆದ್ದರಿಂದ ಸರ್ಕಾರ ಈ ಬಗ್ಗೆ ಕಾಳಜಿ ವಹಿಸಬೇಕು' ಎಂದು ಸಲಹೆ ನೀಡಿದರು.

ಶ್ರೀ ಚಾಮರಾಜೇಂದ್ರ ಮೃಗಾಲ ಯದ ಕಾರ್ಯ ನಿರ್ವಾಹಕ ನಿರ್ದೇಶಕ ಬಿ.ಪಿ.ರವಿ ಮಾತನಾಡಿ, `ಹಾವುಗಳಿಂದ ಔಷಧಿ ಪಡೆದು (ವೆನಂ) ಅವುಗಳನ್ನು ನೇರವಾಗಿ ಅರಣ್ಯದೊಳಗೆ ಬಿಡುವುದ ರಿಂದ ವರ್ಷಕ್ಕೆ 15 ರಿಂದ 16 ಸಾವಿರ ಹಾವುಗಳು ಮೃತಪಡುತ್ತಿವೆ.

ಹಾವುಗಳಿಂದ ವೆನಂ ಪಡೆದ ಮೇಲೆ ಅವು ಬಳಲಿಕೆಗೆ ಒಳಗಾಗುತ್ತವೆ. ಹೀಗಾಗಿ ನೇರವಾಗಿ ಅರಣ್ಯದೊಳಗೆ ಬಿಡುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿವೆ' ಎಂದರು.

`ಹಾವುಗಳು ತಾವು ತೊಂದರೆಗೆ ಸಿಲುಕಿಕೊಂಡಿದ್ದೇವೆ ಎಂದು ಗೊತ್ತಾ ದಾಗ ಮಾತ್ರ ಕಚ್ಚುತ್ತವೆ. ಇದೊಂದು ರೀತಿ ಆಕ್ರಮಣಕಾರಿ ನಿಲುವೂ ಹೌದು. ಎಲ್ಲ ಜೀವಿಗಳಿಗೂ ಬದುಕುವ ಹಕ್ಕಿದೆ. ಆದ್ದರಿಂದ ಕೃಷಿ ಜಮೀನು ಅಥವಾ ಅರಣ್ಯದೊಳಗೆ ಪ್ರವೇಶ ಮಾಡುವ ಜನರಿಗೆ ಹಾವುಗಳ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ. ಹುಲಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ಜನರ ಸಂಚಾರ, ಸುತ್ತಾಟ ಕಡಿಮೆಯಾದ್ದರಿಂದ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ವನ್ಯಜೀವಿಗಳಿಗೆ ಮನುಷ್ಯರೇ ದೊಡ್ಡ ಕಂಟಕವಾಗಿದ್ದಾರೆ' ಎಂದು ಬೇಸರ ವ್ಯಕ್ತಪಡಿಸಿದರು.

ಹಾವು ಕಡಿತಕ್ಕೆ ಚಿಕಿತ್ಸೆ ನೀಡುತ್ತಿರುವ ವೈದ್ಯರಾದ ವಿ.ವಿ.ಪಿಳ್ಳೈ, ಆನಂದ ಝಕಾರಿಯಾ, ಡಾ.ಜೋಸೆಫ್ ಕೆ. ಜೋಸೆಫ್‌ರನ್ನು ಸನ್ಮಾನಿಸಲಾಯಿತು. ಹಾವುಗಳ ಸಂರಕ್ಷಣೆಯಲ್ಲಿ ತೊಡಗಿಸಿ ಕೊಂಡಿರುವ ಸ್ನೇಕ್ ಶ್ಯಾಂ, ರಾಜ ಕುಮಾರ್‌ರನ್ನೂ ಗೌರವಿಸಲಾಯಿತು.

ತಮಿಳುನಾಡು, ಪಶ್ಚಿಮ ಬಂಗಾಳ, ಪಂಜಾಬ್, ರಾಜಸ್ತಾನ, ನವದೆಹಲಿ, ಓಡಿಶಾ ಮತ್ತು ಮಹಾರಾಷ್ಟ್ರ, ಅಮೆರಿಕ, ಸ್ವಿಟ್ಝರ್‌ಲಾಂಡ್, ನೆದರ್‌ಲಾಂಡ್, ಆಸ್ಟ್ರೇಲಿಯಾ, ಸಿಂಗಪುರ, ಶ್ರಿಲಂಕಾ ಸೇರಿದಂತೆ ವಿವಿಧ ರಾಜ್ಯ ಹಾಗೂ ದೇಶಗಳ 70ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

ಪ್ರೊ.ಟಿ.ವೀರಬಸಪ್ಪಗೌಡ, ಪ್ರೊ.ಎ. ಕೆ.ಮುಖರ್ಜಿ, ಪ್ರೊ.ಬಿ.ಎಸ್. ವಿಶ್ವ ನಾಥ್, ಪ್ರೊ.ಕೆ.ಕೆಂಪರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT