ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವು, ಚೇಳು, ಕಪ್ಪೆಗಳ ಜೊತೆ `ಉಂಡಿ' ಪಾಠ!

Last Updated 5 ಸೆಪ್ಟೆಂಬರ್ 2013, 6:40 IST
ಅಕ್ಷರ ಗಾತ್ರ

ಗಜೇಂದ್ರಗಡ: ಈ ಶಿಕ್ಷಕರು ಎಲ್ಲರಂಥಲ್ಲ. ಅವರ ವಿಜ್ಞಾನ ಪಾಠವೆಂದರೆ ಮಕ್ಕಳಿಗೆ ಬಹಳ ಅಚ್ಚುಮೆಚ್ಚು. ವಿಷಜಂತುಗಳಾದ ಹಾವು, ಚೇಳು, ಉಡಾ, ಕಪ್ಪೆ, ತೋಳ ಮುಂತಾದ ಪ್ರಾಣಿಗಳನ್ನು ಜೀವಂತವಾಗಿ ಹಿಡಿದು, ಅವುಗಳ ಮೇಲೆ ಪ್ರಯೋಗ ಮಾಡಿ ಪಾಠ ಮಾಡುವ ಅವರು ಮಕ್ಕಳ ಮನ ಗೆದ್ದಿದ್ದಾರೆ.

ಅವರೇ ರೋಣ ತಾಲ್ಲೂಕು, ಸೂಡಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಗಂಡು ಮಕ್ಕಳ ಶಾಲೆ ಶಿಕ್ಷಕ ಅಶೋಕ ರಂಗಪ್ಪ ಉಂಡಿ. 2002 ರಲ್ಲಿ ಸೇವೆ ಆರಂಭಿಸಿದ ಇವರ ಕಾರ್ಯವೈಖರಿಗೆ ಮನಸೋಲದ ಮಕ್ಕಳಿಲ್ಲ.

ಮಕ್ಕಳಿಗೆ ವಿಷಯಗಳ ಮೇಲೆ ಹೆಚ್ಚಿನ ಆಸಕ್ತಿ ಹುಟ್ಟಿಸುವಲ್ಲಿ ಉಂಡಿ ಯಶಸ್ವಿಯಾಗಿದ್ದಾರೆ.

ಶಿಕ್ಷಕ ಉಂಡಿ  ಮಕ್ಕಳನ್ನು ಪ್ರಯೋಗಾತ್ಮಕ ಅಧ್ಯಯನದಲ್ಲಿ ತೊಡಗಿಸುತ್ತಾರೆ. ಇದಕ್ಕಾಗಿ ಹತ್ತಾರು ವಿಜ್ಞಾನ ಸಂಸ್ಥೆ ಹಾಗೂ ನುರಿತ ಪರಿಣಿತರನ್ನು ಶಾಲೆಗೆ ಆಹ್ವಾನಿಸಿ ಮಕ್ಕಳಿಗೆ ವಿಶೇಷ ತರಬೇತಿಗಳನ್ನು ಕೊಡಿಸುತ್ತಾರೆ. ಹೀಗಾಗಿ  ಮಕ್ಕಳಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳು ಕಬ್ಬಿಣದ ಕಡಲೆಯಾಗಿಲ್ಲ. ಹೀಗಾಗಿ ಈ ಶಾಲೆಯಲ್ಲಿ ವ್ಯಾಸಂಗ ಮಾಡಿ ಹೋದ ಸಾವಿರಾರು ವಿದ್ಯಾರ್ಥಿಗಳು ಮಹತ್ವದ ಸಾಧನೆ ಮಾಡಿದ್ದಾರೆ.

ವಿಜ್ಞಾನ ಜಾತ್ರೆ: ವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿ ವರ್ಷವೂ ವಿಶೇಷ ಕಾರ್ಯಕ್ರಮ ಆಯೋಜಿಸುವ ಶಿಕ್ಷಕ ಉಂಡಿ ಅವರು, ವಿವಿಧ ವಿಜ್ಞಾನ ಸಂಸ್ಥೆಗಳು ಹಾಗೂ ಪ್ರತಿಷ್ಠಾನಗಳ ಮೂಲಕ ವಿಜ್ಞಾನ ಜಾತ್ರೆ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ.

ಇದರಲ್ಲಿ ಶಾಲೆಯ 200 ವಿಜ್ಞಾನ ಮಾದರಿಗಳು ಹಾಗೂ ವಿವಿಧ ವಿಜ್ಞಾನ ಸಂಸ್ಥೆ, ಪ್ರತಿಷ್ಠಾನಗಳ 500 ವಿಜ್ಞಾನ ಮಾದರಿಗಳ ಪ್ರದರ್ಶನದ ಜತೆಗೆ ಶಾಲಾ ಮಕ್ಕಳೇ ವಿಜ್ಞಾನ ಮಾದರಿಗಳ ಕುರಿತು ವಿಶ್ಲೇಷಣೆ ಮಾಡುವುದು ವಿಶೇಷ.

ಜಿಲ್ಲೆ ಹಾಗೂ ನೆರೆಯ ಜಿಲ್ಲೆಯ ವಿವಿಧ ಶಾಲೆಗಳ ಶಿಕ್ಷಕರು ನೀಡುವ ಆಹ್ವಾನದ ಮೇರೆಗೆ ಆಯಾ ಶಾಲೆಗಳಿಗೆ ತೆರಳಿ ಶಿಕ್ಷಕ ಹಾಗೂ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ಸಂಬಂಧಿಸಿದ ಪಾಠೋಪಕರಣಗಳನ್ನು ಪ್ರದರ್ಶಿಸಿ ತರಬೇತಿಗೊಳಿಸಿದ್ದಾರೆ.

ಶಿಕ್ಷಕ ಅಶೋಕ ಉಂಡಿ ಅವರ ಪ್ರತಿಭೆಯನ್ನು ಗುರುತಿಸಿ ಶಿಕ್ಷಣ ಇಲಾಖೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಜಿಲ್ಲಾ ಸಂಶೋಧನಾ ಸಲಹಾ ಸಮಿತಿಯ ಸದಸ್ಯರನ್ನಾಗಿ ಹಾಗೂ `ವಿಜ್ಞಾನ ಪಾರ್ಕ್' ಸಮಿತಿಯ ಸದಸ್ಯರನ್ನಾಗಿ ಆಯ್ಕೆಮಾಡಿರುವುದು ಇವರ ಕಾರ್ಯಕ್ಷಮತೆಯನ್ನು ಸಾಕ್ಷೀಕರಿಸುತ್ತಿವೆ.

ವ್ಯವಸ್ಥಿತ ಪ್ರಯೋಗಾಲಯ: ಮಕ್ಕಳ ಕಲಿಕೆಯ ಹಿತ ದೃಷ್ಟಿಯಿಂದ ಶಾಲೆಗೆ ದೇಣಿಗೆ ರೂಪದಲ್ಲಿ ನೀಡುವ ಹತ್ತಿಪ್ಪತ್ತು ರೂಪಾಯಿಗಳೊಂದಿಗೆ ತಮ್ಮ ಜೇಬಿನ ಹಣವನ್ನು ಹಾಕಿ ಶಾಲೆಯಲ್ಲಿ ವ್ಯವಸ್ಥಿತ ಪ್ರಯೋಗಾಲಯವನ್ನು ಉಂಡಿ ನಿರ್ಮಿಸಿದ್ದಾರೆ. ಹಸಿರು, ಬಳವಡಕ, ಮಣ್ಣಮುಕ್ಕ, ನಾಗರಹಾವು, ಕಪ್ಪು ಮತ್ತು ಕೆಂಪು ಬಣ್ಣದ ಚೇಳುಗಗಳನ್ನು ಇಲ್ಲಿ ಜೀವಂತವಾಗಿರಿಸಲಾಗಿದೆ.

ಎತ್ತು, ಎಮ್ಮೆ, ಮೇಕೆ, ಗೂಗಿ, ಬಾತುಕೋಳಿಗಳ ಹೃದಯಗಳು, ಎತ್ತು ಮೇಕೆಯ ಯಕೃತ್ತುಗಳು, ಎತ್ತು, ಎಮ್ಮೆ ಮರಿಯ ಕಣ್ಣುಗಳು, ಎತ್ತು, ಆಡುಗಳ ಮೂತ್ರ ಜನಕಾಂಗಗಳನ್ನು, ಯಕೃತಿಗಳನ್ನು ರಾಸಾಯನಿಕಗಳೊಂದಿಗೆ ಗ್ಲಾಸ್‌ನಲ್ಲಿ ಸಂಗ್ರಹಿಡಿಸಲಾಗಿದೆ. ಶಿಕ್ಷಕ ಉಂಡಿ ಅವರ ಸಾಧನೆಗೆ ಅಗಣಿತ  ಪ್ರಶಸ್ತಿ, ಪುರಸ್ಕಾರಗಳು ಅರಸಿ ಬಂದಿವೆ.

`ಶಿಕ್ಷಕ ಅಶೋಕ ಉಂಡಿ ಅವರ ಕಾರ್ಯವೈಖರಿ, ಶೈಕ್ಷಣಿಕ ಕಾಳಜಿ ಶಿಕ್ಷಣ ಇಲಾಖೆಗೆ ಮಾದರಿ. ಕಲಿಕೆಯಲ್ಲಿ ಹೊಸತನವನ್ನು ಅಳವಡಿಸಿಕೊಂಡು ಪ್ರಯೋಗಾತ್ಮಕ ಶಿಕ್ಷಣವನ್ನು ಪ್ರಾಯೋಗಿಕವಾಗಿಯೇ ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ವೃದ್ಧಿಯಾಗಿದೆ' ಎನ್ನುತ್ತಾರೆ ಡಿಡಿಪಿಐ, ರಾಜೀವ್‌ನಾಯಕ್.

`ನಿಸ್ವಾರ್ಥ ಸೇವೆ ಗೈಯುತ್ತಿರುವ ಶಿಕ್ಷಕ ಅಶೋಕ ಉಂಡಿ ಅವರ ಸೇವೆಯನ್ನು ಶಿಕ್ಷಣ ಇಲಾಖೆ ಅಭಿನಂದಿಸುತ್ತದೆ. ಇಂಥ ಉತ್ಸಾಹಿ, ಆದರ್ಶಯುವ ಸೇವೆ ಗೈಯುವ ಶಿಕ್ಷಕರ ಅವಶ್ಯಕತೆ ಇಲಾಖೆಗೆ ಇದೆ' ಎನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಪಾಟೀಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT