ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವು ಸಂರಕ್ಷಣೆ: ಅಡ್ಡಿಯಾಗದ ಆರ್ಥಿಕ ಸಂಕಷ್ಟ

Last Updated 12 ಸೆಪ್ಟೆಂಬರ್ 2011, 9:25 IST
ಅಕ್ಷರ ಗಾತ್ರ

ಯಾದಗಿರಿ: ಪೊಲೀಸರೆಂದರೆ ಬಹಳಷ್ಟು ಜನರಿಗೆ ಭಯ. ಆದರೆ ಭಾನುವಾರ ಬೆಳಿಗಿನ ಜಾವ, ಪೊಲೀಸರೇ ಭಯಭೀತರಾಗಿದ್ದರು!

ನಗರದಲ್ಲಿರುವ ಡಿಎಸ್ಪಿ ಕಚೇರಿಯಲ್ಲಿ ಬೆಳಂಬೆಳಿಗ್ಗೆ ದೊಡ್ಡ ಉರಗವೊಂದು ಪ್ರತ್ಯಕ್ಷವಾಗಿ ಬಿಟ್ಟಿತ್ತು. ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದವರೂ ಭೀತಿಗೆ ಒಳಗಾಗಿದ್ದರೆ, ಸಮವಸ್ತ್ರದಲ್ಲಿದ್ದ ಪೊಲೀಸರಿಗೂ ಒಂದು ರೀತಿಯ ಹೆದರಿಕೆ ಉಂಟಾಗಿತ್ತು. ಡಿಎಸ್ಪಿ ಕಚೇರಿಯ ಆವರಣವನ್ನೊಮ್ಮೆ ಸುತ್ತಾಡಿ ಬಂದರಾಯಿತು ಎಂದು ಕೊಂಡಿದ್ದ ಸುಮಾರು ಆರೂವರೆ ಅಡಿ ಉದ್ದದ ಈ ಹಾವು, ಅರ್ಧ ಗಂಟೆಗೂ ಹೆಚ್ಚು ಕಚೇರಿಯ ಆವರಣದಲ್ಲಿ ಎಲ್ಲರ ಮುಖದಲ್ಲಿ ಆತಂಕವನ್ನು ಸೃಷ್ಟಿಸಿತ್ತು.

ಅಷ್ಟರಲ್ಲಿಯೇ ನೆನಪಾಗಿದ್ದು ಶೇಖ್ ಜಲಾಲ್. ಶಾಸ್ತ್ರಿನಗರದಲ್ಲಿರುವ ಜಲಾಲ್‌ರಿಗೆ ಫೋನ್ ಮಾಡಿ, ಕರೆದಿದ್ದಾಯಿತು. ಪೊಲೀಸರೊಬ್ಬರು ಹೋಗಿ ಕರೆದುಕೊಂಡು ಬಂದೇ ಬಿಟ್ಟರು. ಹಾವಿನ ಚಲನವಲನವನ್ನು ಗಮನಿಸಿದ ಶೇಖ್ ಜಲಾಲ್, ಕೆಲವೇ ನಿಮಿಷಗಳಲ್ಲಿ ಹಾವಿನ ಮುಖವನ್ನು ಹಿಡಿದುಕೊಳ್ಳುವಲ್ಲಿ ಯಶಸ್ವಿಯಾದರು.

ಶೇಖ್ ಜಲಾಲ್ ಹಾವಿನ ಮುಖವನ್ನು ಅದುಮಿ ಹಿಡಿದಿದ್ದರೂ, ಪಕ್ಕದಲ್ಲಿದ್ದ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಇನ್ನೂ ಹೆದರಿಕೆ ಹೋಗಿರಲಿಲ್ಲ. ಹಾವನ್ನು ಕೊಲ್ಲುವಂತೆ ಕೆಲವರು ಹೇಳಿದರಾದರೂ, ಶೇಖ್ ಜಲಾಲ್ ಅದಕ್ಕೆ ಸುತಾರಾಂ ಒಪ್ಪಲಿಲ್ಲ. ವೃತ್ತಿಯಲ್ಲಿ ಇಲ್ಲಿಯವರೆಗೆ ಹಿಡಿದ ಯಾವೊಂದು ಹಾವುಗಳನ್ನು ಕೊಂದಿಲ್ಲ. ಇದನ್ನೂ ಕೊಲ್ಲಲು ಬಿಡುವುದಿಲ್ಲ. ಬನ್ನಿ ನದಿಗೆ ಹೋಗಿ ಬಿಟ್ಟು ಬರೋಣ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು.

ಅನ್ಯ ಮಾರ್ಗವಿಲ್ಲದೇ ಪೊಲೀಸರು, ಜಲಾಲ್ ಅವರನ್ನು ಕರೆದುಕೊಂಡು ಭೀಮಾ ನದಿ ತೀರಕ್ಕೆ ಹೋಗಬೇಕಾಯಿತು. ಆದರೆ ಬೈಕ್ ಮೇಲೆ ಹಾವು ಹಿಡಿದುಕೊಂಡಿರುವ ಜಲಾಲ್‌ರನ್ನು ಕೂಡ್ರಿಸಿಕೊಂಡು ಹೋಗುವವರು ಯಾರು ಎಂಬ ಚಿಂತೆ ಆರಂಭವಾಯಿತು. ಅಷ್ಟರಲ್ಲಿಯೇ ಹಿಡಿದ ಹಾವನ್ನು ಚೀಲಕ್ಕೆ ಹಾಕಿದ ಜಲಾಲ್, ಭೀತಿಯನ್ನು ದೂರ ಮಾಡಿದರು. ನದಿಗೆ ಹೋಗಿ ಹಾವನ್ನು ಬಿಟ್ಟು ಬಂದರು.

ಸುಮಾರು 65 ವರ್ಷದ ಶೇಖ ಜಲಾಲ್ ಇಲ್ಲಿಯ ಶಾಸ್ತ್ರಿನಗರದಲ್ಲಿ ವಾಸಿಸುತ್ತಾರೆ. ತಮ್ಮ ಗುರುಗಳಾದ ಇಮಾಮ್‌ಸಾಬರಿಂದ ಹಾವು ಹಿಡಿಯುವುದನ್ನು ಕಲಿತರು. ಹಾವು ಹಿಡಿಯುವ ಧೈರ್ಯ, ಅದನ್ನು ಸೂಕ್ಷ್ಮವಾಗಿ ಪಳಗಿಸುವ ಚಾಣಾಕ್ಷತನ ಹಾಗೂ ಹಾವು ಕಚ್ಚಿದರೆ ಔಷಧೋಪಚಾರ ಎಲ್ಲವನ್ನೂ ಶೇಖ ಜಲಾಲ್ ತಿಳಿದಿದ್ದಾರೆ.

ಇಲ್ಲಿಯವರೆಗೆ ಸಾವಿರಾರು ಹಾವುಗಳನ್ನು ಹಿಡಿದಿದ್ದಾರೆ. ಅದರಲ್ಲಿ 9 ಅಡಿ ಉದ್ದದ ಹಾವೇ ತಾವು ಹಿಡಿದ ಅತಿ ದೊಡ್ಡ ಹಾವು ಎಂಬುದನ್ನು ಸ್ಮರಿಸುತ್ತಾರೆ. ಎಂಥ ಹಾವು ಇದ್ದರೂ, ಅದನ್ನು ಹಿಡಿದೇ ತೀರುವ ಛಲ ಇವರದ್ದು. ಭಾನುವಾರ ಡಿಎಸ್ಪಿ ಕಚೇರಿ ಆವರಣದಲ್ಲಿ ಸಿಕ್ಕಿದ್ದು ಕ್ಯಾರಿ ಹಾವು. ಸುಮಾರು ಆರೂವರೆ ಅಡಿ ಉದ್ದವಾಗಿತ್ತು ಎಂದು ಶೇಖ್ ಜಲಾಲ್ ತಿಳಿಸಿದರು.

ಕೂಲಿ ಕೆಲಸ ಮಾಡುವ ಶೇಖ ಜಲಾಲ್, ಯಾರಾದರೂ ಫೋನ್ ಮಾಡಿದರೆ ಕೂಡಲೇ ಸ್ಥಳಕ್ಕೆ ಹಾಜರಾಗಿ ಹಾವು ಹಿಡಿಯುತ್ತಾರೆ. ಅವುಗಳನ್ನು ಚಿಕ್ಕ ಬುಟ್ಟಿಯಲ್ಲಿ ಹಾಕಿಕೊಂಡು ಕಾಡಿಗೋ, ಇಲ್ಲವೇ ನದಿಗೋ ಬಿಟ್ಟು ಬರುತ್ತಾರೆ. ಕಳೆದ 25 ವರ್ಷಗಳಿಂದ ಈ ವೃತ್ತಿ ಮಾಡುತ್ತಿರುವ ಶೇಖ ಜಲಾಲ್, ಯಾದಗಿರಿ, ಶಹಾಪುರ ತಾಲ್ಲೂಕಿನ ಹಳ್ಳಿಗಳಲ್ಲಿ ಹಾವು ಹಿಡಿದಿದ್ದನ್ನು ನೆನಪಿಸಿಕೊಳ್ಳುತ್ತಾರೆ.

ಉರಗ ಸಂರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶೇಖ ಜಲಾಲ್‌ರಿಗೆ ಇದುವರೆಗೆ ಒಂದು ಸೂರಿಲ್ಲ. ಸರ್ಕಾರದ ವೃದ್ಧಾಪ್ಯ ವೇತನದಂತಹ ಆರ್ಥಿಕ ನೆರವು ಸಿಗುತ್ತಿಲ್ಲ. ಕೂಲಿ ಮಾಡಿಯೇ ಜೀವನ ನಡೆಸುವ ಅವರಿಗೆ ಪತ್ನಿ, ಒಬ್ಬ ಪುತ್ರ ಇದ್ದಾರೆ. ಹಣದ ಕೊರತೆ ಇದ್ದರೂ, ಹಾವುಗಳ ಸಂರಕ್ಷಣೆಗಾಗಿಯೇ ಮೊಬೈಲ್ ಅನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಯಾವ ಕ್ಷಣದಲ್ಲಿ ಯಾರೇ ಕರೆ ಮಾಡಿದರೂ, ಹೋಗಿ ಹಾವುಗಳನ್ನು ಹಿಡಿದು, ಸುರಕ್ಷಿತವಾಗಿ ಬಿಡಬೇಕು ಎನ್ನುವ ಹಂಬಲ ಇವರದ್ದು.

ಎಲ್ಲ ಸೌಲಭ್ಯಗಳನ್ನು ಕೊಡಲಾಗದಿದ್ದರೂ, ಕನಿಷ್ಠ ವೃದ್ಧಾಪ್ಯ ವೇತನದಂತಹ ಸೌಕರ್ಯವನ್ನಾದರೂ ಶೇಖ್ ಜಲಾಲ್‌ರಿಗೆ ನೀಡಬೇಕು. ಪರಿಸರ, ಜೀವಿಗಳ ಉಳಿವಿಗೆ ಶ್ರಮಿಸುವ ಇಂತಹ ವ್ಯಕ್ತಿಗೆ ಸರ್ಕಾರ ನೆರವು ಸಿಗಬೇಕು ಎನ್ನುವುದು ನಾಗರಿಕರು ಆಶಯ.

ಅಂದ ಹಾಗೆ ನಿಮ್ಮ ಮನೆ ಅಥವಾ ಅಕ್ಕಪಕ್ಕದಲ್ಲಿ ಹಾವು ಪ್ರತ್ಯಕ್ಷವಾದಲ್ಲಿ ಮೊ.ಸಂ. 9945359103 ಇಲ್ಲಿ ಕರೆ ಮಾಡಿದರೆ, ಕ್ಷಣಾರ್ಧದಲ್ಲಿಯೇ ಶೇಖ ಜಲಾಲ್ ಹಾಜರಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT