ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವುಗಳ ಕಂಡರೆ ಕೊಲ್ಲದಿರಿ...

Last Updated 9 ಅಕ್ಟೋಬರ್ 2011, 6:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಹಾವು~ ಎಂಬ ಪದ `ಸಾವು~ ಎಂಬುದಕ್ಕೆ ಅನ್ವರ್ಥ ಪದ ಅಲ್ಲ. ಹಾವು ಕೂಡ ಮನುಷ್ಯನಿಗೆ ಉಪಕಾರಿ. ಹಾವು ಕಂಡರೆ ಅವನ್ನು ಕೊಲ್ಲದೆ ಬದುಕಲು ಬಿಡಿ. ಹಾವು ಎಂಬ ಜೀವಿ ನಮ್ಮ ಪ್ರಕೃತಿಯ ಅವಿಭಾಜ್ಯ ಅಂಗ. ಅವುಗಳಿಗೂ  ಭೂಮಿಯೊಳಗೆ ಬದುಕುವ ಹಕ್ಕು ಇದೆ ಎಂಬ ಸಂದೇಶ ಅಲ್ಲಿ ಪಸರಿಸಿತು. ಮಕ್ಕಳು, ಹದಿಹರೆಯದವರಿಂದ ಹಿಡಿದು ಮುದಿ ಹರೆಯದದವರೂ ಹಾವುಗಳ ಮೈದಡವಿ ಖುಷಿ ಪಟ್ಟರು!

 ಹೌದು. ಇದು ನಡೆದದ್ದು ನಗರದ ಉದ್ಯಮಿ, ಪರಿಸರ ಪ್ರೇಮಿ ಮನ್ಮಥ ಶೆಟ್ಟಿ ಅವರ ಮನೆಯಲ್ಲಿ. ರಾಷ್ಟ್ರೀಯ ವನ್ಯಜೀವಿ ಸಂರಕ್ಷಣಾ ಸಪ್ತಾಹದ ಅಂಗವಾಗಿ ಶನಿವಾರ ಸಂಗಮೇಶ ಉಳವಿ ಅವರು ಹಾವುಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರೆ, ಖ್ಯಾತ ಛಾಯಾಗ್ರಾಹಕ ಎಚ್. ಸತೀಶ್ ಅವರು ವನ್ಯಜೀವಿ ಛಾಯಾಗ್ರಹಣದ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

ಸಂಗಮೇಶ ಅವರು ವಿಷರಹಿತ ನಿರುಪದ್ರವಿ ಹಾವುಗಳಾದ ಟ್ರಿಂಕೆಟ್, ನೀರು ಹಾವು   (ಚಕರ್ಡ್ ಕೀಲ್‌ಬ್ಯಾಕ್), ಹಸಿರು ಹಾವುಗಳನ್ನು ಪ್ರದರ್ಶಿಸಿದರು. ಅಲ್ಲಿದ್ದ ಮಕ್ಕಳು, ಹಿರಿಯರು ಆ ಹಾವುಗಳ ಮೈ ಸವರಿ ರೋಮಾಂಚನಗೊಂಡರು. ಇನ್ನು ಕೆಲವರು ಹಾವನ್ನೇ ಕೊರಳಿಗೆ ಹಾಕಿಕೊಂಡು ಸಂಭ್ರಮಪಟ್ಟರು!

ಇದರ ಜೊತೆಗೆ ವಿಷಯುಕ್ತ ಹಾವುಗಳಾದ ಮಿಡಿನಾಗರ, ಕೊಳಕುಮಂಡಲ (ರಸ್ಸೆಲ್ಸ್ ವೈಪರ್), ನಾಗರಹಾವುಗಳನ್ನು ಹಾಗೂ ಅದರ ವಿಷದ ಹಲ್ಲನ್ನು ತೋರಿಸಿದರು. ಅಲ್ಲಿ ನೆರೆದಿದ್ದ ಸಭಿಕರಿಂದ ಹಾವುಗಳ ಬಗ್ಗೆ ಕೂತುಹಲ ಪ್ರಶ್ನೆಗಳು ಮೂಡಿಬಂದವು.

ಹಾವುಗಳಿಗೆ ಕಿವಿ ಇಲ್ಲ, ಕಂಪನದಿಂದ ಮತ್ತು ಕಣ್ಣಿನಿಂದ ಇತರರ ಇರುವನ್ನು ಗ್ರಹಿಸುವುದು. ಹಾಗಾಗಿ ನಾಗರಹಾವು ಪುಂಗಿಗೆ ತಲೆತೂಗಲಾರದು. ಹಾವುಗಳು ಇಲಿಗಳನ್ನು ಬಿಲಗಳಲ್ಲಿ ಹುಡುಕಿ ತಿನ್ನುವುದರಿಂದ ಅದು ರೈತನ ಮಿತ್ರನೂ ಹೌದು ಎಂದು ಸಂಗಮೆಶ ತಿಳಿಸಿದರು.

ಎಚ್. ಸತೀಶ್ ಛಾಯಾಚಿತ್ರ ಪ್ರದರ್ಶನ ಮಾಡಿ ಮಾತನಾಡಿ, ಛಾಯಾಗ್ರಹಣಕ್ಕಿಂತಲೂ ಪರಿಸರ ಸಂರಕ್ಷಣೆ ಬಹಳ ಮುಖ್ಯ. ಪರಿಸರ ಇದ್ದರಷ್ಟೆ ಛಾಯಾಗ್ರಹಣ ಮಾಡಬಹುದು ಎಂದರು.

ವನ್ಯಜೀವಿ ಛಾಯಾಗ್ರಾಹಕನಿಗೆ ಆಸಕ್ತಿ, ತಾಳ್ಮೆಯ ಜೊತೆಗೆ ಬದ್ಧತೆ ಬಹಳ ಮುಖ್ಯ. ಶೇ 80ರಷ್ಟು ಪ್ರಾಣಿಗಳ ವರ್ತನೆ ಕುರಿತು ಜ್ಞಾನ, ಶೇ 10ರಷ್ಟು ಛಾಯಾಗ್ರಹಣ ಉಪಕರಣಗಳ ತಂತ್ರಜ್ಞಾನ, ಶೇ 10ರಷ್ಟು ಅದೃಷ್ಟ ಇದ್ದರಷ್ಟೆ ಒಬ್ಬ ಉತ್ತಮ ಛಾಯಾಗ್ರಾಹಕನಾಗಲು ಸಾಧ್ಯ. ವನ್ಯಜೀವಿಗಳ ಜೊತೆ ಸಂಯಮದಿಂದ ವರ್ತಿಸಿ ಅವುಗಳ ಒಲವು ಗಳಿಸಿದರಷ್ಟೆ ಉತ್ತಮ ಛಾಯಾಗ್ರಹಣ ಮಾಡಲು ಸಾಧ್ಯ. ಛಾಯಾಗ್ರಾಹಕನ ಇರುವಿಕೆ ವನ್ಯಜೀವಿಗಳಿಗೆ ಕಿರಿಕಿರಿ ಅನ್ನಿಸಬಾರದು ಎಂದರು.

ವನ್ಯಜೀವಿಗಳು ಸೃಷ್ಟಿ ಕ್ರಿಯೆಯಲ್ಲಿ ತೊಡಗಿದ್ದಾಗ ಅವುಗಳ ವರ್ತನೆ ಹೇಗಿರುತ್ತವೆ? ಮರಿಗಳೊಂದಿಗೆ ಇದ್ದಾಗ ಅವುಗಳ ವರ್ತನೆ ಹೇಗಿರುತ್ತವೆ? ಭಯ, ಗಾಬರಿಗೊಂಡಾಗ ಹೇಗೆ ವರ್ತಿಸುತ್ತವೆ? ಎಂಬ ಮನೋವಿಜ್ಞಾನ ಛಾಯಾಗ್ರಾಹಕನಿಗೆ ತಿಳಿದಿರಬೇಕು. ವನ್ಯಜೀವಿಗಳ ನಿರಂತರ ಸಹವಾಸದ ಅನುಭವ, ಪುಸ್ತಕಗಳ ಅಧ್ಯಯನದಿಂದ ವನ್ಯಜೀವಿಗಳ ವರ್ತನೆಗಳ ಬಗ್ಗೆ ತಿಳಿಯಬಹುದು ಎಂದರು.

ಆರ್‌ಎಫ್‌ಓ ರಾಜೇಂದ್ರ ಎಂ. ಪತ್ತಾರ, ಡಾ. ಸಂಜೀವ ಕುಲಕರ್ಣಿ, ಪ್ರಕಾಶ್ ಭಟ್, ಕೃಷ್ಣ ಉಚ್ಚಿಲ, ವಿವೇಕ್ ಪವಾರ್, ಮಹೇಶ್ ಹಾನಗಲ್, ರಾಜ್ ಪರಬ್, ಮನ್ಮಥ ಶೆಟ್ಟಿ, ಅರ್ಚನಾ ಮನ್ಮಥ ಶೆಟ್ಟಿ, ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ ಜಯರಾಂ, ಮುರಳಿ ಬಿಲ್ಲೆ, ನರೇಂದ್ರಮಠ ಮೊದಲಾದವರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT