ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವುಗಳ ಗೆಳೆಯರು

Last Updated 31 ಜುಲೈ 2013, 19:59 IST
ಅಕ್ಷರ ಗಾತ್ರ

ಧಾರವಾಡದ ಹಲವು ಬಡಾವಣೆಗಳ ಮನೆಗಳ ಸಂದಿಯಲ್ಲಿ ಹೊಕ್ಕು ಭಯ ಹುಟ್ಟಿಸುವ ಹಾವುಗಳನ್ನು ಹಿಡಿದು ಕೊಲ್ಲುವ ಘಟನೆಗಳು ಇತ್ತೀಚೆಗೆ ವಿರಳವಾಗುತ್ತಿವೆ. ಹಾವು ಕೊಲ್ಲುವ ಬದಲು ತಕ್ಷಣ ನಗರದ ಪ್ರೊ.ಗಂಗಾಧರ ಕಲ್ಲೂರ, ಸುರೇಶ ಹೆಗ್ಗೇರಿ ಅವರ ಗರಡಿಯಲ್ಲಿ ಪಳಗಿದ ಯಲ್ಲಪ್ಪ ಜೋಡಳ್ಳಿ ಅವರಿಗೆ ಜನರು ಫೋನಾಯಿಸುತ್ತಾರೆ. ಎಲ್ಲಿಯೋ ಇರುವ ಯಲ್ಲಪ್ಪ ಕೆಲವೇ ನಿಮಿಷಗಳಲ್ಲಿ ಅಲ್ಲಿ ಪ್ರತ್ಯಕ್ಷವಾಗುತ್ತಾರೆ.

ವಿಷಕಾರಿಯಲ್ಲದ ಹಾವಾದರೆ ಕೆಲವು ನಿಮಿಷ, ಬಹು ವಿಷಕಾರಿ ಹಾಗೂ ಜಾಸ್ತಿ ಕಾಟ ಕೊಡುವ ಸ್ವಭಾವವುಳ್ಳ ಹಾವಾದರೆ ಹಲವು ನಿಮಿಷಗಳ ಬಳಿಕ ಸೆರೆ ಹಿಡಿದು ಪಕ್ಕದ ಮುಗದ ಅಥವಾ ಕಲಕೇರಿ ಗ್ರಾಮಗಳ ಬಳಿಯ ಕಾಡಿನಲ್ಲಿ ತಾವೇ ಬೈಕ್‌ನಲ್ಲಿ ತೆರಳಿ ಬಿಟ್ಟು ಬರುತ್ತಾರೆ. ಅಲ್ಲಿಗೆ, ಮನೆಯವರಿಗೂ ನೆಮ್ಮದಿ, ಹಾವಿಗೂ ಕಾಡು ಸೇರಿ ಜೀವ ಉಳಿಸಿಕೊಂಡ ತೃಪ್ತಿ.

ಕಳೆದ ಮೂರು ವರ್ಷಗಳಿಂದ ಅನಾಯಾಸವಾಗಿ ಹಾವು ಹಿಡಿಯುವ ಕಲೆಯನ್ನು ಕರಗತ ಮಾಡಿಕೊಂಡಿರುವ ಯಲ್ಲಪ್ಪ ಧಾರವಾಡದ ಹೊಸಯಲ್ಲಾಪುರದ ನಿವಾಸಿ. ಯಾರೇ ಎಷ್ಟೊತ್ತಿನಲ್ಲಿ ಕರೆದರೂ ತಕ್ಷಣ ಧಾವಿಸಿ ಹಾವನ್ನು ಕಾಡಿಗೆ ಬಿಟ್ಟ ಬಳಿಕವೇ ಅವರಿಗೆ ವಿಶ್ರಾಂತಿ. ವನ್ಯಜೀವಿಗಳ ಬಗ್ಗೆ ಒಲವನ್ನು ಬೆಳೆಸಿಕೊಂಡ ಗಂಗಾಧರ ಕಲ್ಲೂರ ಧಾರವಾಡದಲ್ಲಿ ಯಲ್ಲಪ್ಪ ಅವರಂತಹ ಹಲವು ಜನರನ್ನು ತಯಾರು ಮಾಡಿದ್ದಾರೆ. ಕಲ್ಲೂರರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಯಲ್ಲಪ್ಪ ಆಸಕ್ತ ಹುಡುಗರಿಗೆ ಹಾವು ಹಿಡಿಯುವ ಕಲೆಯನ್ನು ಹೇಳಿಕೊಡುತ್ತಿದ್ದಾರೆ.

ಹಾಗೆಂದು ಬರೀ ಹಾವುಗಳನ್ನು ಹಿಡಿಯುವ ಕೆಲಸವನ್ನಷ್ಟೇ ಗಂಗಾಧರ ಕಲ್ಲೂರ, ಸುರೇಶ, ಯಲ್ಲಪ್ಪ ಮಾಡುವುದಿಲ್ಲ. ಯಾವುದೇ ಪ್ರಾಣಿ ಸಂಕಷ್ಟದಲ್ಲಿರುವ ಮಾಹಿತಿ ಗೊತ್ತಾದರೂ ಸಾಕು ಅಲ್ಲಿಗೆ ಧಾವಿಸಿ ಆರೈಕೆ ಮಾಡಿ ಬಿಡುತ್ತಾರೆ. ಉಡ, ಹದ್ದು, ಪಾರಿವಾಳ, ಗುಬ್ಬಿ ಸೇರಿದಂತೆ ಹಲವು ಬಗೆಯ ಪ್ರಾಣಿಗಳು ಈ ವನ್ಯಜೀವಿ ಪ್ರೇಮಿಗಳಿಂದ ಆರೈಕೆ ಮಾಡಿಸಿಕೊಂಡಿವೆ.

ಆಗಾಗ ಧಾರವಾಡದ ವಿವಿಧ ಶಾಲೆಗಳ ಮಕ್ಕಳನ್ನು ದಾಂಡೇಲಿಯ ರಕ್ಷಿತಾರಣ್ಯ, ಕಲಕೇರಿಯ ಬೆಟ್ಟ ಕಾಡು, ಪಶ್ಚಿಮಘಟ್ಟದ ಪ್ರದೇಶಗಳಿಗೆ ಚಾರಣ ಕರೆದುಕೊಂಡು ಹೋಗುವುದೂ ಇದೆ. ಇತ್ತೀಚೆಗಷ್ಟೇ ಈ ತಂಡ ಹಿಮಾಲಯ ಪರ್ವತಕ್ಕೂ ತೆರಳಿತ್ತು.

ಯಲ್ಲಪ್ಪ ದುಡ್ಡಿಗಾಗಿ ಹಾವು ಹಿಡಿಯುವ ಕೆಲಸ ಮಾಡುವುದಿಲ್ಲ. ಎಷ್ಟೋ ಸಾರಿ ಹಾವು ಹೊಕ್ಕ ಮನೆಗಳವರು ಹಾವು ಹಿಡಿಯಲು ಬನ್ನಿ ಎಂದು ಕರೆದಾಗ ತಕ್ಷಣವೇ ಅಲ್ಲಿಗೆ ಹೋಗಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟು ಬರುತ್ತಾರೆ. ಅದಕ್ಕಾಗಿ ಎಷ್ಟೋ ಜನ ತಾವಾಗಿಯೇ ನೂರಿನ್ನೂರು ರೂಪಾಯಿಗಳನ್ನು ಕೊಟ್ಟದ್ದಿದೆ.

`ಇಂತಿಷ್ಟೇ ಹಣ ಕೊಡಬೇಕು ಎಂದು ನಾನೆಂದು ಬೇಡಿಕೆ ಇಡುವುದಿಲ್ಲ. ಹಾವು ಹಿಡಿದು ದೂರದ ಕಾಡಿಗೆ ಬಿಡಬೇಕಾದಾಗ ಬೈಕ್‌ನ ಪೆಟ್ರೋಲ್ ವೆಚ್ಚಕ್ಕಾದರೂ ಆಗಲಿ ಎಂದು ಕೊಟ್ಟಷ್ಟು ಪಡೆದುಕೊಳ್ಳುತ್ತೇನೆ. ಪೆಟ್ರೋಲ್ ಖರ್ಚಿಗಾದರೂ ಹಣ ಕೊಡಿ ಎಂದು ಒಮ್ಮಮ್ಮೆ ಕೇಳುತ್ತೇನೆ. ಆದರೆ, ಹಾವು ಹಿಡಿದವರಿಗೆ ಹಣ ಕೊಡಬೇಕಾಗುತ್ತದಲ್ಲ ಎಂದು ತಿಳಿದು ಜನರು ಹಾವನ್ನೇ ಕೊಲ್ಲಲು ಮುಂದಾಗುವ ಸಂಭವವೂ ಇದೆ. ಇದನ್ನು ತಪ್ಪಿಸಲು ನಾನು ಕನಿಷ್ಟ ಖರ್ಚಿನ ಬೇಡಿಕೆಯನ್ನೂ ಇಡುವುದಿಲ್ಲ' ಎನ್ನುತ್ತಾರೆ ಯಲ್ಲಪ್ಪ.

ಮಂಡಲದ ಹಾವು, ಕ್ರೇಟ್, ಕಾಳಿಂಗ ಹಾಗೂ ನಾಗರ ಹಾವು ಅತ್ಯಂತ ವಿಷಕಾರಿ ಹಾವುಗಳು. ಅವು ಕಚ್ಚಿದರೂ ನಾವು ಧೈರ್ಯದಿಂದ ಇದ್ದು, ಮುಂದಿನ ಒಂದು ಗಂಟೆ ಅವಧಿಯ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ವಿಷ ಹೋಗುತ್ತದೆ. ಗಾಬರಿಯಾದಂತೆಲ್ಲ ನಮ್ಮ ರಕ್ತದ ಒತ್ತಡವೂ ಹೆಚ್ಚುತ್ತದೆ. ಇದರಿಂದ ವಿಷವೆಲ್ಲ ರಕ್ತದ ಮೂಲಕ ಮೈಯೆಲ್ಲ ಆವರಿಸಿಕೊಂಡು ಸಾವು ಸಂಭವಿಸುತ್ತದೆ. ಹೀಗಾಗದಂತೆ ತಡೆಯಲು ಹಾವು ಕಡಿದ ಜಾಗದ ಪಕ್ಕದಲ್ಲೇ ಜೋರಾಗಿ ಒತ್ತಿದರೆ ವಿಷ ಹೊರಗೆ ಚೆಲ್ಲುತ್ತದೆ. ಅಷ್ಟಾಗಿಯೂ ಸ್ವಲ್ಪ ಪ್ರಮಾಣ ದೇಹದಲ್ಲಿ ಸೇರಿರುತ್ತದೆ. ಅದನ್ನು ನಿಯಂತ್ರಿಸಲು ವಿಷ ಕಡಿದ ಜಾಗದ ಮೇಲೆ ಪೆನ್ನು ಇಟ್ಟು ದಾರ ಕಟ್ಟಬೇಕು ಎನ್ನುತ್ತಾರೆ.

ಇಲ್ಲಿಯವರೆಗೆ ಸುಮಾರು ಒಂದು ಸಾವಿರಕ್ಕೂ ಅಧಿಕ ಹಾವುಗಳನ್ನು ಹಿಡಿದ ಅನುಭವ ಹೊಂದಿರುವ ಯಲ್ಲಪ್ಪ ಅವರಿಗೆ, ಹಾವು ತೊಂದರೆ ಕೊಡದ ಹೊರತು ಮನುಷ್ಯರನ್ನು ಕಚ್ಚುವುದೇ ಇಲ್ಲ ಎಂಬ ನಂಬಿಕೆ. ಇದೇ ವಿಧಾನವನ್ನು ಉರಗ ಹಿಡಿಯುವ ಸಂದರ್ಭದಲ್ಲೂ ಅನುಸರಿಸುತ್ತಾರೆ.

ಮಕ್ಕಳಿಗೆ ಹಾವುಗಳ ಜೀವನ ಕ್ರಮದ ಬಗ್ಗೆ ಹೇಳುವ ಸಂದರ್ಭದಲ್ಲಿ ಯಲ್ಲಪ್ಪ ಒಂದು ವಿಷಯವನ್ನು ತಪ್ಪದೇ ಹೇಳುತ್ತಾರೆ. ಅದೇನೆಂದರೆ, ಸಿನಿಮಾಗಳಲ್ಲಿ ತೋರಿಸಿದಂತೆ ಹಾವು ಹಾಲು ಕುಡಿಯುವುದಿಲ್ಲ. ಅದು ಮಾಂಸಾಹಾರಿ! ಇಲಿ, ಕಪ್ಪೆಗಳು ಹಾವುಗಳ ನೆಚ್ಚಿನ ಆಹಾರ. ಕಿಂಗ್ ಕೋಬ್ರಾಗಳು ಹೆಬ್ಬಾವನ್ನೇ ಹಿಡಿದು ತಿಂದ ಘಟನೆಗಳನ್ನೂ ಅವರು ಉದಾಹರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT