ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಗಲಾಟೆ: ಕತ್ತಿ ಶಂಕೆ

Last Updated 8 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹಾವೇರಿಯಲ್ಲಿ ಹತ್ತಿ ಬಿತ್ತನೆ ಬೀಜ ಪಡೆಯುವ ವೇಳೆ ಉಂಟಾದ ನೂಕು ನುಗ್ಗಲು ಹಾಗೂ ರೈತರ ಮೇಲಿನ ಲಘು ಲಾಠಿ ಪ್ರಹಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ವರದಿ ತರಿಸಿಕೊಳ್ಳಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಕೃಷಿ ಸಚಿವ ಉಮೇಶ   ಕತ್ತಿ ತಿಳಿಸಿದರು.

ಹಾವೇರಿ ಹಾಗೂ ಸುತ್ತಮುತ್ತ ಕಳೆದ ಒಂದು ವಾರದಿಂದ ಮಳೆಯಾಗಿಲ್ಲ. ಆದರೂ ಬಿತ್ತನೆ ಬೀಜಕ್ಕೆ ದಿಢೀರ್ ಬೇಡಿಕೆ ಅನುಮಾನಕ್ಕೆ ಕಾರಣವಾಗಿದೆ. ಬಿತ್ತನೆ ಬೀಜಕ್ಕೆ ಸಂಬಂಧಿಸಿದಂತೆ ಪ್ರತಿ ಬಾರಿಯೂ ಹಾವೇರಿಯಲ್ಲೇ ಗಲಾಟೆ ನಡೆಯುವುದು ಏಕೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಇದರ ಹಿಂದೆ ರಾಜಕೀಯ ಕೈವಾಡ ಇರಬಹುದು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅನುಮಾನ ವ್ಯಕ್ತಪಡಿಸಿದರು.

`ಹಾವೇರಿ ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಆಗುವ ಅಂದಾಜು ಇದೆ. ಇದಕ್ಕೆ ಒಂದು ಕೆ.ಜಿ. ತೂಕದ ಸುಮಾರು ಐದರಿಂದ ಆರು ಲಕ್ಷ ಪ್ಯಾಕೆಟ್ ಬಿತ್ತನೆ ಬೀಜ ಬೇಕು. ಆದರೆ, ಸದ್ಯ ದಾಸ್ತಾನು ಇರುವುದು ಸುಮಾರು ಎರಡು ಲಕ್ಷ ಪ್ಯಾಕೆಟ್. ಇದರಲ್ಲಿ 30 ಸಾವಿರ ಪ್ಯಾಕೆಟ್‌ನಷ್ಟು `ಕನಕ~ ತಳಿಯ ಹತ್ತಿ ಬೀಜ ಇದೆ. ಉಳಿದಂತೆ ಬೇರೆ ತಳಿಗಳಾದ `ರಾಶಿ~, `ಬಾಹುಬಲಿ~, `ಮಹಾ ಮಲ್ಲಿಕಾ~ ಇವೆ.

ಆದರೆ, ಎಲ್ಲರೂ `ಕನಕ~ ತಳಿಯ ಬೀಜಗಳೇ ಬೇಕು ಎಂದು ಪಟ್ಟುಹಿಡಿದಿದ್ದಾರೆ. ಇತರ ತಳಿಗಳ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಏಕಾಏಕಿ ಈ ರೀತಿ ಆದರೆ, ಅದನ್ನು ಸರಬರಾಜು ಮಾಡುವುದಾದರೂ ಹೇಗೆ~ ಎಂದು ಪ್ರಶ್ನಿಸಿದರು.

`ಬಿ.ಟಿ. ಹತ್ತಿ ಬೀಜಗಳನ್ನು ಖಾಸಗಿ ಕಂಪೆನಿಗಳೇ ಸರಬರಾಜು ಮಾಡುತ್ತಿವೆ. ಇದಕ್ಕೂ ಸರ್ಕಾರಕ್ಕೂ ಸಂಬಂಧ ಇಲ್ಲ. `ಕನಕ~ ಹತ್ತಿ ತಳಿ ಕೂಡ ಹೊಸದು. ಹಾಗಾಗಿ ಬೇಡಿಕೆಗೆ ಅನುಗುಣವಾಗಿ ಸರಬರಾಜು ಮಾಡುವುದು ಕಷ್ಟ ಎಂದು ಬೀಜ ಉತ್ಪಾದಕ ಕಂಪೆನಿಗಳೇ ಸ್ಪಷ್ಟಪಡಿಸಿವೆ~ ಎಂದು ಹೇಳಿದರು.

ಕನಕವೇ ಏಕೆ ಬೇಕು?: `ಕನಕ~ ತಳಿ ಹತ್ತಿ ಬಿಡಿಸುವುದು ಕೂಲಿ ಕಾರ್ಮಿಕರಿಗೆ ಸುಲಭ. ಬೇರೆ ತಳಿಯ ಹತ್ತಿ ಬಿಡಿಸುವುದು ಸ್ವಲ್ಪ ಕಠಿಣ. ಇದರ ಜತೆಗೆ ಇಳುವರಿ ಕೂಡ ಹೆಚ್ಚು ಬರುತ್ತದೆ ಎಂಬ ನಂಬಿಕೆ ಇದೆ. ಇತರ ತಳಿಗಳು ಕೂಡ ಕನಕದಷ್ಟೇ ಉತ್ತಮವಾಗಿವೆ~ ಎಂದರು.

`ಮಳೆ ಎಲ್ಲಿ ಬೇಗ ಆರಂಭವಾಗುತ್ತದೋ ಅಲ್ಲಿ ಬಿತ್ತನೆ ಬೀಜಗಳನ್ನು ಪೂರ್ಣ ಪ್ರಮಾಣದಲ್ಲಿ ಸರಬರಾಜು ಮಾಡಲಾಗಿದೆ. ಮೊದಲು ಮಳೆ ಆರಂಭವಾಗುವ ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಬಿತ್ತನೆ ಬೀಜದ ಸಮಸ್ಯೆ ಇಲ್ಲ. ಜೂನ್ ಮೊದಲ ವಾರದಲ್ಲಿ ಉತ್ತರ ಕರ್ನಾಟಕದಲ್ಲಿ ಮಳೆ ಆರಂಭವಾಗಲಿದೆ, ಆ ವೇಳೆಗೆ ಬಿತ್ತನೆ ಬೀಜ ಪೂರೈಸಲಾಗುವುದು. ರೈತರು ಆತಂಕಪಡುವ ಅಗತ್ಯ ಇಲ್ಲ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT