ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಗೋಲಿಬಾರ್‌: ದೂಳು ತಿನ್ನುತ್ತಿರುವ ಆಯೋಗದ ವರದಿ

Last Updated 10 ಜೂನ್ 2011, 8:40 IST
ಅಕ್ಷರ ಗಾತ್ರ

ಹಾವೇರಿ: ಹಾವೇರಿ ಗೋಲಿಬಾರ್ ನಡೆದು ಇಂದಿಗೆ (ಜೂ.10) ಮೂರು ವರ್ಷಗಳಾಯಿತು. ಪ್ರಕರಣ ಕುರಿತು ತನಿಖೆ ನಡೆಸಿದ ಜಗನ್ನಾಥಶೆಟ್ಟಿ ಆಯೋಗ ಸರ್ಕಾರಕ್ಕೆ ವರದಿ ನೀಡಿ ವರ್ಷವಾಯಿತು. ವರದಿ ಮಾತ್ರ ಬಹಿರಂಗಗೊಳ್ಳದೇ ವಿಧಾನಸೌಧದ ಮೊಗಸಾಲೆಯಲ್ಲಿ ಧೂಳು ತಿನ್ನುತ್ತಿದೆ.

ಯಡಿಯೂರಪ್ಪ ಅವರು ಹಸಿರು ಶಾಲು ಹೊತ್ತು ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಎಂಟು ದಿನಗಳಲ್ಲಿ ಅಂದರೆ, ಜೂನ್ 10, 2008 ರಂದು ಈ ಘಟನೆ ನಡೆದಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟು 90ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಆಗ ಮುಖ್ಯಮಂತ್ರಿಗಳು ಘಟನೆಯ ಸಂಪೂರ್ಣ ಹೊಣೆ ಹೊತ್ತು ಗಳಗಳನೇ ಕಣ್ಣೀರಿಟ್ಟಿದ್ದರು!

ಇದಾದ ಎರಡು ದಿನಗಳಲ್ಲಿ ಪ್ರಕರಣ ಕುರಿತು ತನಿಖೆ ನಡೆಸಲು ನ್ಯಾಯಮೂರ್ತಿ ಕದಂಬಾಡಿ ಜಗನ್ನಾಥಶೆಟ್ಟಿ ನೇತೃತ್ವದ ಆಯೋಗವನ್ನು ರಚಿಸಿದ್ದರು. ಆಯೋಗವು ಎರಡು ವರ್ಷಗಳ ಕಾಲ ಹಾವೇರಿ ಹಾಗೂ ಬೆಂಗಳೂರಿನಲ್ಲಿ ನೂರೈವತ್ತಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ನಡೆಸಿತಲ್ಲದೆ, ಘಟನಾ ಸ್ಥಳಗಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಆದರೆ, ವರದಿಯಲ್ಲಿ ಪ್ರಕರಣ ಕುರಿತು ಏನು ಹೇಳಿದೆ? ಮೃತಪಟ್ಟ ಹಾಗೂ ಗಾಯಗೊಂಡ ರೈತರ ಬಗ್ಗೆ ಸರ್ಕಾರಕ್ಕೆ ಏನಾದರೂ ಸಲಹೆ ನೀಡಿದೆಯೇ? ಇವೆಲ್ಲಕ್ಕಿಂತ ಹೆಚ್ಚಾಗಿ ಘಟನೆಯಲ್ಲಿ ಮೃತಪಟ್ಟ ರೈತರ ಬಗ್ಗೆ ಆಯೋಗ ಯಾವ ನಿಲುವು ತಾಳಿದೆ? ಎಂಬ ಕುತೂಹಲ ಜಿಲ್ಲೆಯ ಜನರಲ್ಲಿದೆ.

`ಆಯೋಗ ನೀಡಿರುವ ವರದಿಯನ್ನು ಯಥಾವತ್ತಾಗಿ ಬಹಿರಂಗಗೊಳಿಸಲು ಬರುವುದಿಲ್ಲ. ವರದಿ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಒಪ್ಪಿಗೆ ಪಡೆದ ನಂತರ ವರದಿ ಬಹಿರಂಗಗೊಳಿಸಲು ಸಾಧ್ಯವಾಗುತ್ತದೆ. ಹೀಗಾಗಿ ವರದಿಯನ್ನು ಈವರೆಗೆ ಬಹಿರಂಗಗೊಳಿಸಲು ಸಾಧ್ಯವಾಗಿಲ್ಲ~ ಎಂಬ ಸಮಜಾಯಿಸಿ ಒಂದೆಡೆಯಾದರೆ, `ಆಯೋಗ ನೀಡಿದ ವರದಿ ಬಹಿರಂಗಗೊಳಿಸಬೇಕೆಂಬ ನಿಯಮವೇನಿಲ್ಲ~ ಎಂಬ ಮಾತು ಸರ್ಕಾರದ ಕೆಲ ಮಂತ್ರಿಗಳಿಂದಲೇ ಕೇಳಿ ಬಂದಿದೆ.

`ವರದಿ ಕೈಗೆ ಸಿಕ್ಕ ನಂತರ ಸರ್ಕಾರ ಎರಡು ಅಧಿವೇಶನ ನಡೆಸಿದೆ. ಆ ಸಂದರ್ಭದಲ್ಲಿ ವರದಿಯನ್ನು ಚರ್ಚೆಗೆ ಇಟ್ಟು ಏಕೆ ಒಪ್ಪಿಗೆ ಪಡೆಯಲಿಲ್ಲ? ಎಂಬ ಪ್ರಶ್ನೆಗೆ ಉತ್ತರ ನೀಡಬೇಕಲ್ಲದೆ, ವರದಿ ಬಹಿರಂಗಗೊಳಿಸುವ ಮನಸ್ಸು ಇಲ್ಲದಿದ್ದರೆ ರಾಜ್ಯದ ಜನತೆಗೆ ಅದನ್ನು ಸ್ಪಷ್ಟಪಡಿಸಬೇಕು~ ಎಂದು ಜಿಲ್ಲಾ ರೈತ ಸಂಘದ ಗೌರವಾಧ್ಯಕ್ಷ ಶಿವಾನಂದ ಗುರುಮಠ ಆಗ್ರಹಿಸುತ್ತಾರೆ.

ರೈತರಿಗೆ ವಿರೋಧವಾದ ವರದಿ ಬಹಿರಂಗಗೊಂಡರೆ, ರೈತ ಸಮುದಾಯ ಸರ್ಕಾರದ ವಿರುದ್ಧ ಎಲ್ಲಿ ತಿರುಗಿಬಿಳುವುದೋ ಎಂಬ ಹೆದರಿಕೆಯಿಂದ ಸರ್ಕಾರ ಆಯೋಗದ ವರದಿ ಬಹಿರಂಗಗೊಳಿಸಲು ಹಿಂದೇಟು ಹಾಕುತ್ತಿದೆ. ಸರ್ಕಾರ ಕೂಡಲೇ ವರದಿಯನ್ನು ಬಹಿರಂಗಗೊಳಿಸಬೇಕೆಂದು ಒತ್ತಾಯಿಸುತ್ತಾರೆ ಅವರು.

ರೈತ ವಿರೋಧಿ ವರದಿ?: ನ್ಯಾ.ಜಗನ್ನಾಥಶೆಟ್ಟಿ ಆಯೋಗದ ವರದಿ ಸರ್ಕಾರದಿಂದ ಅಧಿಕೃತವಾಗಿ ಬಹಿರಂಗಗೊಳ್ಳದಿದ್ದರೂ, ಮಾಧ್ಯಮದ ಮೂಲಕ ಅದರಲ್ಲಿನ ಕೆಲ ಅಂಶಗಳು ಬಹಿರಂಗಗೊಂಡಿವೆ. ಅದರಲ್ಲಿ ಗೋಲಿಬಾರ್‌ನಲ್ಲಿ ಸತ್ತವರು ರೈತರೇ ಅಲ್ಲ. ಗಲಾಟೆ ಮಾಡಲು ಬಂದ ಕಿಡಿಗೇಡಿಗಳು ಎಂದು ಹೇಳಿರುವ ಅಂಶವೂ ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT