ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ರೈತರ ವಿಭಿನ್ನ ‘ನೋಟಾ’!

Last Updated 2 ಏಪ್ರಿಲ್ 2014, 20:04 IST
ಅಕ್ಷರ ಗಾತ್ರ

ರಾಣೆಬೆನ್ನೂರು (ಹಾವೇರಿ): ‘ಈ ಬಾರಿ ನಮ್ಮ ಕ್ಷೇತ್ರದ ಯಾವುದೇ ಅಭ್ಯರ್ಥಿ ನಮ್ಮ ನಿರೀಕ್ಷೆಗೆ ತಕ್ಕ ಹಾಗೆ ಇಲ್ಲ. ಅದಕ್ಕೆ ನಾವು ‘ನೋಟಾ’ ಅಸ್ತ್ರ ಬಳಸುತ್ತೇವೆ. ಈ ಬಗ್ಗೆ ನಮ್ಮ ರೈತರಲ್ಲಿ ಅರಿವು ಮೂಡಿಸುತ್ತೇವೆ’ ಎಂದು ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರ ಗೌಡ ಪಾಟೀಲ್‌ ಹೇಳಿದರು.

ರಾಣೆಬೆನ್ನೂರು ನ್ಯಾಯಾಲಯದ ಆವರಣದಲ್ಲಿ ನಿಂತೇ ಮಾತನಾಡಿದ ಅವರು ತಮ್ಮ ಈ ನಿರ್ಧಾರಕ್ಕೆ ಹಲವಾರು ಕಾರಣಗಳನ್ನೂ ನೀಡಿದರು. ಜೊತೆಗೆ ಅವರ ಸಂಗಡಿಗರೂ ದನಿಗೂಡಿಸಿದರು.

ನೋಟ–1: ಮುಖ್ಯಮಂತ್ರಿ ಸಿದ್ದರಾ­ಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆ­ಯಾದ ಅನ್ನಭಾಗ್ಯದ ದುರುಪ­ಯೋಗ ಇಲ್ಲಿ ವ್ಯಾಪಕ. ರಾಣೆಬೆನ್ನೂರು ಸುತ್ತಮುತ್ತಲಿನ ಜನರು ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ಪಡೆಯುತ್ತಾರೆ. ಹೀಗೆ ನೀಡುವ 30 ಕೆ.ಜಿ. ಅಕ್ಕಿ ಅವರಿಗೆ ಹೆಚ್ಚಾಗಿದೆ. ಅದಕ್ಕೇ ಅವರು ಅದನ್ನು ಕೆ.ಜಿ.ಗೆ 10–15 ರೂಪಾಯಿಗೆ ಮಾರಾಟ ಮಾಡುತ್ತಾರೆ. ಪ್ರತಿ ಭಾನುವಾರ ಇಲ್ಲಿ ಅನ್ನಭಾಗ್ಯದ ಅಕ್ಕಿ ಮಾರಾಟದ ಸಂತೆಯೇ ನಡೆಯುತ್ತದೆ. ಮಧ್ಯವರ್ತಿಗಳು ಇದನ್ನು ಖರೀದಿ ಮಾಡಿ ಅಕ್ಕಿ ಗಿರಣಿಗಳಿಗೆ ಮಾರಾಟ ಮಾಡು­ತ್ತಾರೆ. ರಾಣೆಬೆನ್ನೂರು, ಹರಿಹರ, ದಾವಣಗೆರೆ, ಶಿವಮೊಗ್ಗ ಮುಂತಾದ ಕಡೆ ನೂರಾರು ಅಕ್ಕಿ ಗಿರಣಿಗಳಿವೆ. ಅಕ್ಕಿ ಗಿರಣಿ­ಯವರು ಅದನ್ನು ಪಾಲಿಶ್‌ ಮಾಡಿ, ನುಚ್ಚು ಬೇರೆ ಮಾಡಿ ಬ್ರಾಂಡೆಂಡ್‌ ಚೀಲದಲ್ಲಿ ತುಂಬಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಸರ್ಕಾರದ ಬೇರೆ ಬೇರೆ ಇಲಾಖೆಗಳು ನಡೆಸುವ ಹಾಸ್ಟೆಲ್‌ಗಳಿಗೂ ಇದೇ ಅಕ್ಕಿ ಮಾರಾಟವಾಗುತ್ತದೆ. ಇದನ್ನು ತಡೆಯಲು ಇನ್ನೂ ಯಾರಿಗೂ ಸಾಧ್ಯವಾಗಿಲ್ಲ.

ನೋಟ–2: ಹಾವೇರಿ ಜಿಲ್ಲೆಯಲ್ಲಿ ವಿಶ್ವದ ಬಹುತೇಕ ಎಲ್ಲ ಬಿತ್ತನೆ ಬೀಜ ಕಂಪೆನಿಗಳೂ ಇವೆ. ಇಲ್ಲಿಯೇ ಬೀಜ­ಗಳನ್ನು ಉತ್ಪಾದಿಸಲಾಗುತ್ತದೆ. ಸುಮಾರು 450 ಕಂಪೆನಿಗಳು ರಾಣೆ­ಬೆನ್ನೂರಿನಲ್ಲಿಯೇ ಇವೆ. ಉತ್ತಮ ಬೀಜ­ಗಳನ್ನು ನೀಡಬೇಕಾದ ಕಂಪೆನಿಗಳು ಈಗ ಕಳಪೆ ಬೀಜ ಮಾರಾಟ ಮಾಡು­ತ್ತಿವೆ.

ಈ ಬಾರಿ ಕನಕ ಬಿಟಿ ಹತ್ತಿ ಬೀಜ ವಿಫಲವಾಯಿತು. ಸರ್ಕಾರ ಅಥವಾ ಕಂಪೆನಿಯವರು ಇನ್ನೂ ಸೂಕ್ತ ಪರಿಹಾರ ನೀಡಿಲ್ಲ. ಕಳೆದ ಬಾರಿ ಮಹಿಕೊ ಕಂಪೆ­ನಿಯ ಚಮತ್ಕಾರ ಬೀಜ ವಿಫಲವಾಗಿತ್ತು. ಆಗ ಒಂದು ಹೆಕ್ಟೇರ್‌ಗೆ ₨ 25 ಸಾವಿರ ಪರಿಹಾರ ನೀಡಲಾಗಿತ್ತು. ಈ ಬಾರಿ ಕೇವಲ ₨ 4,500 ನಿಗದಿ ಮಾಡಲಾಗಿದೆ.

ನೋಟ–3: ರೈತರು ಬೆಳೆ ವಿಮೆ ಮಾಡಿಸಿದ್ದರೂ ಸೂಕ್ತವಾಗಿ ಪರಿಹಾರ ನೀಡಿಲ್ಲ. ಹಾನಗಲ್‌ ತಾಲ್ಲೂಕಿಗೇ ಇನ್ನೂ ₨ 61 ಕೋಟಿ ಬರಬೇಕಾಗಿದೆ.

ನೋಟ–4: ಅನೇಕ ಹಳ್ಳಿಗಳಲ್ಲಿ ಸ್ಮಶಾನಗಳೇ ಇಲ್ಲ. ಇರುವ ಸ್ಮಶಾನಗಳೂ ಒತ್ತುವರಿಯಾಗಿವೆ. ಒತ್ತುವರಿಯನ್ನು ತೆರವುಗೊಳಿಸಿ ಆಯಾ ಜಾತಿಗಳಿಗೆ ರುದ್ರಭೂಮಿ ಒದಗಿಸುವ ಕೆಲಸವಾಗಿಲ್ಲ.

ನೋಟ–5: ರಾಣೆಬೆನ್ನೂರು ತಾಲ್ಲೂಕಿನ 26 ಗ್ರಾಮಗಳನ್ನು ಬ್ಯಾಡಗಿ ಕ್ಷೇತ್ರಕ್ಕೆ ಸೇರಿಸಲಾಗಿದೆ. ಇದರಿಂದ ಆ ಗ್ರಾಮಗಳ ಅಭಿವೃದ್ಧಿಯಾಗುತ್ತಿಲ್ಲ. ರಾಣೆಬೆನ್ನೂರು ಶಾಸಕರು ಗಮನ ನೀಡುತ್ತಿಲ್ಲ.

ಈ ಎಲ್ಲಾ ಕಾರಣಗಳಿಗಾಗಿ ಈ ಬಾರಿ ‘ನೋಟಾ’ ಅಸ್ತ್ರ ಬಳಸುವುದಾಗಿ ರವೀಂದ್ರ ಹೇಳಿ­ದರು. ಆದರೆ ಅದಕ್ಕೆ ಪುಟ್ಟಣ್ಣಯ್ಯ ಬಣದ ರೈತ ಸಂಘ ವಿರೋಧ ವ್ಯಕ್ತಪಡಿಸುತ್ತದೆ. ‘ನೋಟಾವೂ ಇಲ್ಲ. ನಾಟವೂ ಇಲ್ಲ. ರೈತರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಲು ಕರೆ ನೀಡಿದ್ದೇವೆ’ ಎಂದು ಹಾನಗಲ್‌ ತಾಲ್ಲೂಕು ರೈತ ಸಂಘದ ಮುಖಂಡರಾದ ಅಡಿವೆಪ್ಪ ಆಲದಕಟ್ಟಿ ಮತ್ತು ಮಲ್ಲೇಶಪ್ಪ ಪರಪ್ಪನವರ ಹೇಳುತ್ತಾರೆ.

‘ನೋಟಾ ಬಳಸುವುದರಿಂದ ನಮ್ಮ ವೋಟು ವ್ಯರ್ಥವಾಗುವುದು ಬಿಟ್ಟರೆ ಬೇರೆ ಏನೂ ಪ್ರಯೋಜನವಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರ­ಗಳು ರೈತರಿಗೆ ಅನ್ಯಾಯ ಮಾಡುತ್ತಿವೆ. ಆದರೆ ಅದಕ್ಕೆ ನೋಟಾ ಅಥವಾ ಮತದಾನ ಬಹಿಷ್ಕಾರ ಪರಿಹಾರ ಅಲ್ಲ’ ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ.

‘ಇತ್ತೀಚೆಗೆ ಬೆಳಗಾವಿಗೆ ಬಂದಿದ್ದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿದೇಶಿ ಬ್ಯಾಂಕ್‌ನಲ್ಲಿ ಇರುವ ಭಾರತದ ಕಪ್ಪು ಹಣವನ್ನು ವಾಪಸು ತರುವುದಾಗಿ ಹೇಳಿದ್ದಾರೆ. ಅದರಲ್ಲಿ ಶೇ 50ರಷ್ಟು ಹಣವನ್ನು ರೈತರಿಗಾಗಿಯೇ ವೆಚ್ಚ ಮಾಡುವುದಾಗಿಯೂ ಹೇಳಿದ್ದಾರೆ. ಅದಕ್ಕೆ ನಾವು ಮೋದಿ ಬೆಂಬಲಿಸುತ್ತೇವೆ’ ಎಂದು ತಮ್ಮ ಒಲವು ಬಹಿರಂಗಪಡಿಸಿದರು.

ಇನ್ನೊಬ್ಬ ರೈತ ನಾಯಕ ಪ್ರಭುಸ್ವಾಮಿ ಕರ್ಜಗಿಮಠ ಅವರೂ ನೋಟಾ ವಿರೋಧಿಸಿದರು. ಗ್ರಾಮಗಳಲ್ಲಿ ಸ್ಮಶಾನ ಅಭಿವೃದ್ಧಿಗೆ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ. ಆದರೆ ಗ್ರಾಮಗಳಲ್ಲಿ ಜಾಗವೇ ಇಲ್ಲ ಎಂಬ ಅಸಹಾಯಕತೆ ವ್ಯಕ್ತಪಡಿಸಿ­ದರು. ‘ಯಾವುದೇ ಜಾಗ ಖಾಲಿ ಇದ್ದರೆ ಅಲ್ಲಿ ನುಗ್ಗೋರು ಇದ್ದೇ ಇರ್ತಾರೆ. ಒತ್ತುವರಿ ತೆರವುಗೊಳಿಸಿ ಸ್ಮಶಾನಕ್ಕೆ ಅವಕಾಶ ಕಲ್ಪಿಸಬೇಕು’ ಎಂದೂ ಅವರು ಒತ್ತಾಯಿಸುತ್ತಾರೆ.

ಹೀಗೆ ರೈತ ನಾಯಕರಲ್ಲಿ ನೋಟಾ ಬಗ್ಗೆ ಒಮ್ಮತವಿಲ್ಲ. 

ರಾಜಕಾರಣಿಗಳ ನೋಟ: ಇತ್ತ ರೈತರು ನೋಟಾ ಸಾಧ್ಯತೆಗಳ ಬಗ್ಗೆ ಆಲೋಚಿಸುತ್ತಿದ್ದರೆ ರಾಜ­ಕಾರಣಿ­ಗಳಿಗೆ ಮಾತ್ರ ತಮ್ಮ ಪಕ್ಷದ ಅಭ್ಯರ್ಥಿ ಪರ ಅತಿ ಹೆಚ್ಚು ಮತ ಚಲಾವಣೆಯಾಗುವಂತೆ ನೋಡಿಕೊಳ್ಳುವ ತವಕ.

ಸಚಿವ ಎಚ್‌.ಕೆ.ಪಾಟೀಲ ಮತ್ತು ರಾಣೆ­ಬೆನ್ನೂರು ಶಾಸಕ ಕೆ.ಬಿ.ಕೋಳಿವಾಡ ಇಬ್ಬರೂ, ‘ಎಲ್ಲ ಗೊಂದಲಗಳಿಗೆ ಮಾಧ್ಯಮಗಳು ಕಾರಣ’ ಎಂಬ ತೀರ್ಪು ನೀಡಿದರು. ದೃಶ್ಯ ಮಾಧ್ಯಮ­ಗಳಲ್ಲಿ ಮೆಗಾಫೈಟ್‌, ಮಹಾಯುದ್ಧ, ಸಮರ ಮುಂತಾದ ಶಬ್ದಗಳನ್ನೇ ಬಳಸುವುದರ ಬಗ್ಗೆ ಕೂಡ ಆಕ್ಷೇಪ ವ್ಯಕ್ತಪಡಿಸಿದರು.

ಮಾಹಿತಿ ಹಕ್ಕು, ಆರೋಗ್ಯದ ಹಕ್ಕು, ವಸತಿ ಹಕ್ಕು, ಉದ್ಯೋಗ ಖಾತ್ರಿ, ಬೀದಿಬದಿ ವ್ಯಾಪಾರಿ­ಗಳಿಗೆ ನೆರವು ಮುಂತಾದ ಯೋಜನೆಗಳ ಬಗ್ಗೆ ಮಾಧ್ಯಮಗಳು ಚರ್ಚೆ ಮಾಡದಿರುವ ಬಗ್ಗೆ ಕೂಡ ಬೇಸರ ವ್ಯಕ್ತಪಡಿಸಿದರು.

ಹಿರೇಕೆರೂರು ಬಿಜೆಪಿ ಶಾಸಕ ಯು.ಬಿ.­ಬಣಕಾರ ಅವರಿಗೆ ಮತಗಳು ಒಡೆಯುವ ಮತ್ತು ಕೆಲವು ಕಡೆ ಮತಗಳು ಒಗ್ಗೂಡುವ ಚಿಂತೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಸಲೀಂ ಅಹ್ಮದ್‌ ಸ್ಪರ್ಧೆ ಮಾಡಿದ್ದರು. ಈ ಬಾರಿ ಅವರೇ ‘ಅಹಿಂದ ಸಲೀಂ ಅಹ್ಮದ್‌’  ಆಗಿದ್ದಾರೆ. ಅದು ತಮ್ಮ ಅಭ್ಯರ್ಥಿಗೆ ಮುಳುವಾಗದಂತೆ ನೋಡಿಕೊಳ್ಳಬೇಕಾಗಿದೆ ಎಂಬ ಕಾಳಜಿ ಅವರದ್ದು.

ಮಾಜಿ ಸಚಿವ ಸಿ.ಎಂ.ಉದಾಸಿ ಮಾತ್ರ ನಿರಾಳವಾಗಿದ್ದಾರೆ. ವಿಧಾನಸಭೆ ಚುನಾವಣೆ­ಯಲ್ಲಿ ಜನರು ತಮ್ಮ ಕೈಬಿಟ್ಟರೂ ಈ ಬಾರಿ ತಮ್ಮ ಪುತ್ರನನ್ನು ಕೈಬಿಡುವುದಿಲ್ಲ ಎಂಬ ಅಚಲ ನಂಬಿಕೆ ಅವರದ್ದು.

ಕಾಂಗ್ರೆಸ್‌ ಅಭ್ಯರ್ಥಿ ಸಲೀಂ ಅಹ್ಮದ್ ಅವರಂತೂ ‘ಎಲ್ಲ ಚೆನ್ನಾಗಿದೆ, ಎಲ್ಲ ಚೆನ್ನಾಗಿದೆ’ ಎಂದರು. ಹೀಗಾಗಿ ಹಾವೇರಿ ಕ್ಷೇತ್ರದಲ್ಲಿ ಎಲ್ಲರದ್ದೂ ಭಿನ್ನ ಭಿನ್ನ ನೋಟ.

ಶಿವಕುಮಾರ್‌ ಲೆಕ್ಕಾಚಾರ!
ಹಾವೇರಿ ಕ್ಷೇತ್ರದ ಸದಸ್ಯ ಶಿವಕುಮಾರ ಉದಾಸಿ ‘ಕ್ಷೇತ್ರದಲ್ಲಿ ಹೆಚ್ಚಾಗಿ ಇರುವುದಿಲ್ಲ. ಜನರೊಂದಿಗೆ ಸಂಪರ್ಕ ಇಟ್ಟುಕೊಂಡಿಲ್ಲ’ ಎಂಬ ಆರೋಪ ಇದೆ. ಅದಕ್ಕೆ ಶಿವಕುಮಾರ ಉದಾಸಿ ನೀಡುವ ಉತ್ತರವೇ ಬೇರೆ.

‘ನಾನು ಕ್ಷೇತ್ರದಲ್ಲಿ ಇದ್ದರೆ, ನಿಮ್ಮನ್ನು ಆಯ್ಕೆ ಮಾಡಿದ್ದು ದೆಹಲಿಯ ಲೋಕಸಭೆಯಲ್ಲಿ ಕೆಲಸ ಮಾಡಿ ಎಂದು. ಆದರೆ ನೀವೂ ಯಾವಾಗಲೂ ಇಲ್ಲಿಯೇ ಇರ್ತೀರಿ ಎಂದು ಟೀಕೆ ಮಾಡುತ್ತಾರೆ. ಲೋಕಸಭೆಯಲ್ಲಿ ಮತ್ತು ವಿವಿಧ ಸಮಿತಿಗಳಲ್ಲಿ ಉತ್ತಮ ಕೆಲಸ ಮಾಡಿದರೆ, ಲೋಕಸಭೆಯಲ್ಲಿ ಮಾತನಾಡಿದರಷ್ಟೇ ಸಾಧನೆಯಲ್ಲ ಎಂದೂ ಟೀಕಿಸುತ್ತಾರೆ. ಒಬ್ಬ ಲೋಕಸಭಾ ಸದಸ್ಯ ಏನು ಮಾಡಬೇಕು ಎನ್ನುವುದನ್ನು ಸ್ಪಷ್ಟವಾಗಿ ನೀವೇ ಹೇಳಿ’ ಎಂದು ಜವಾಬ್ದಾರಿಯನ್ನು ಪ್ರಶ್ನೆ ಕೇಳಿದವರಿಗೇ ವಹಿಸುತ್ತಾರೆ.

'ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಒಬ್ಬ ವ್ಯಕ್ತಿ ಜೊತೆ ತಲಾ 5 ನಿಮಿಷದಂತೆ ಮಾತನಾಡಿದರೂ ಒಂದು ದಿನಕ್ಕೆ ಮಾತನಾಡಲು ಸಾಧ್ಯವಾಗೋದು 144 ಮಂದಿ ಜೊತೆ ಮಾತ್ರ. ಹೀಗೇ ನೂರು ದಿನ ಮಾತನಾಡಿದರೂ ನಾನು ಮಾತನಾಡಲು ಸಾಧ್ಯವಾಗೋದು 14,400 ಮಂದಿ ಜೊತೆ ಮಾತ್ರ. 3 ವರ್ಷದಲ್ಲಿ 1,44,000 ಜನರ ಜೊತೆ ಮಾತನಾಡಬಹುದು. ಉಳಿದವರ ಜೊತೆಗೆ ಮಾತನಾಡಲು ನನಗೆ ಇನ್ನೂ ಎಷ್ಟು ವರ್ಷ ಬೇಕು ನೀವೇ ಹೇಳಿ. ಜೊತೆಗೆ ಲೋಕಸಭಾ ಅಧಿವೇಶನದಲ್ಲಿಯೂ ಭಾಗವಹಿಸಬೇಕು. ವಿವಿಧ ಸಮಿತಿಗಳ ಸಭೆಯಲ್ಲಿಯೂ ಪಾಲ್ಗೊಳ್ಳಬೇಕು. ಯಾವುದನ್ನು ಮಾಡಿದರೆ ಜನ ಮೆಚ್ಚುತ್ತಾರೆ ಎನ್ನುವುದೇ ಗೊತ್ತಾಗುತ್ತಿಲ್ಲ’ ಎಂದು ಪೇಚಾಡಿದರು.

‘ನನ್ನ ತಂದೆಗೆ ರಾಜಕೀಯ ಅರ್ಥವಾಗಲು 40 ವರ್ಷ ಬೇಕಾಯಿತು. ನನಗೆ ಅದು 5 ವರ್ಷದಲ್ಲಿಯೇ ಅರ್ಥವಾಯಿತು’ ಎಂದು ನಿಟ್ಟುಸಿರು ಬಿಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT