ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿಗೆ ಸಾಹಿತ್ಯ ಸಮ್ಮೇಳನ ನೀಡಿ

Last Updated 2 ಫೆಬ್ರುವರಿ 2011, 8:45 IST
ಅಕ್ಷರ ಗಾತ್ರ

ಜಿಲ್ಲಾ  ಒತ್ತಾಯ
ಹಾವೇರಿ: ಎಪ್ಪತ್ತೆಂಟನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿ ಜಿಲ್ಲೆಗೆ ನೀಡಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿಗಳಾದ ನಾಗರಾಜ ದ್ಯಾಮನಕೊಪ್ಪ, ವಿರೂಪಾಕ್ಷಪ್ಪ ಹಾವನೂರು ಮಂಗಳವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪರಿಷತ್‌ನ ಕೇಂದ್ರ ಕಾರ್ಯಕಾರಿ ಸಮಿತಿಯನ್ನು ಒತ್ತಾಯಿಸಿದರು.

ಹಾವೇರಿ ನೂತನ ಜಿಲ್ಲೆಯಾಗಿ 13 ವರ್ಷ ಕಳೆದಿದೆ. ಸಾಹಿತ್ಯ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದೆ. ಆದರೆ, ಒಮ್ಮೆಯೂ ಅಖಿಲ ಸಾಹಿತ್ಯ ಸಮ್ಮೇಳನ ನಡೆದಿಲ್ಲ. ಅಖಂಡ ಧಾರವಾಡ ಜಿಲ್ಲೆಯಲ್ಲಿದ್ದಾಗಲೂ ಹಾವೇರಿಯಲ್ಲಿ ಸಮ್ಮೇಳನ ನಡೆಸಲು ಅವಕಾಶ ದೊರೆತಿಲ್ಲ. ಅದಕ್ಕಾಗಿ 78 ನೇ ಸಾಹಿತ್ಯ ಸಮ್ಮೇಳನವನ್ನು ಜಿಲ್ಲೆಗೆ ನೀಡಬೇಕೆಂದು ಅವರು ಒತ್ತಾಯಿಸಿದರು.

ಜಿಲ್ಲೆ ಸಾಂಸ್ಕೃತಿಕವಾಗಿ ಅತ್ಯಂತ ಮಹತ್ವವನ್ನು ಪಡೆದಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಕನಕದಾಸರು, ಸಂತ ಶಿಶುವಿನಾಳ ಷರೀಫರು, ಸರ್ವಜ್ಞ, ಗಳಗನಾಥರು, ಶಾಂತ ಕವಿಗಳು, ಶಿ.ಶಿ.ಬಸವನಾಳ, ಡಾ.ವಿ.ಕೃ.ಗೋಕಾಕ, ಮಹಾದೇವ ಬಣಕಾರ, ಹಿರೇಮಲ್ಲೂರ ಈಶ್ವರನ್, ಪಾಟೀಲ ಪುಟ್ಟಪ್ಪ, ಜಿ.ಎಸ್.ಅಮೂರ, ಪ್ರೋ. ಚಂದ್ರಶೇಖರ ಪಾಟೀಲ, ಸು.ರಂ.ಯಕ್ಕುಂಡಿ ಅವರು ಈ ನೆಲದ ಮಹತ್ವವನ್ನು ದಿಗಂತಕ್ಕೆ ಏರಿಸಿದ್ದರೆ, ಸಂಗೀತ ಕ್ಷೇತ್ರದಲ್ಲಿ ಪಂಚಾಕ್ಷರಿ ಗವಾಯಿಗಳು, ಪಂಡಿತ ಪುಟ್ಟರಾಜ ಕವಿ ಗವಾಯಿಗಳು, ಗಂಗೂಬಾಯಿ ಹಾನಗಲ್ಲ,  ಚಂದ್ರಶೇಖರ ಪುರಾಣಿಕಮಠ ಮುಂತಾದವರು ಕೊಡುಗೆ ನೀಡಿದ್ದಾರೆ. ಇವರ ಮಹತ್ವ ರಾಜ್ಯದ ಜನತೆಗೆ ತಿಳಿಸಲು ಸಾಹಿತ್ಯ ಸಮ್ಮೇಳನ ನಡೆಸುವುದು ಅವಶ್ಯವಾಗಿದೆ ಎಂದು ಹೇಳಿದರು.

ಸಾಹಿತ್ಯ ಸಮ್ಮೇಳನ ನಡೆಸಲು ಎಲ್ಲ ರೀತಿಯ ಮೂಲ ಸೌಲಭ್ಯಗಳನ್ನು ಹೊಂದಿರುವ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಿದೆ. ವಸತಿ ವ್ಯವಸ್ಥಿತವಾಗಿ ಸುಸಜ್ಜಿತ ಹೆಾೇಟೆಲ್‌ಗಳು, ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳಿವೆ. ಅಷ್ಟೇ ಅಲ್ಲದೇ ಜಿಲ್ಲಾ ಕೇಂದ್ರದಿಂದ ಎಲ್ಲ ತಾಲ್ಲೂಕುಗಳು ಕೇವಲ 30 ಕಿ.ಮೀ. ಅಂತರದಲ್ಲಿವೆ. ಇಲ್ಲಿನ ಜನರು ಸಹೃದಯ ಜನರು ಸಹ ಅತಿಥಿ ಅಭ್ಯಾಗತರನ್ನು ಸ್ವಾಗತಿಸಲು ಉತ್ಸುಕರಾಗಿದ್ದಾರೆ ಎಂದು ಹೇಳಿದರು.

ದಾಸೋಹದಲ್ಲಿ ಮುಂಚೂಣಿಯಲ್ಲಿರುವ ವೀರಶೈವ ಪರಂಪರೆ ಮಠಗಳು ಸಾಹಿತ್ಯ ಸಮ್ಮೇಳನಕ್ಕೆ ಕೈಜೋಡಿಸಲು ಆಸಕ್ತಿ ಹೊಂದಿದ್ದು, ಹಿಂದೆ ಸ್ಥಳ ಪರಿಶೀಲನೆಗೆ ಆಗಮಿಸಿದ ತಂಡ ಸಹ ಹಾವೇರಿ ಜಿಲ್ಲೆಯಲ್ಲಿ ಸಮ್ಮೇಳನ ನಡೆಸಲು ಶಿಫಾರಸು ಮಾಡಿದೆ. ಜಿಲ್ಲಾ ಕಸಾಪ ಸಹಸ್ರಾರು ಪತ್ರ ಬರೆಯುವ ಮೂಲಕ ಪತ್ರ ಚಳವಳಿ ಮಾಡಿದೆ. ಅದಕ್ಕಾಗಿ ಈ ಎಲ್ಲ ಅಂಶ ಪರಿಗಣಿಸಿ ಜಿಲ್ಲೆಗೆ 78 ನೇ ಸಾಹಿತ್ಯ ಸಮ್ಮೇಳನವನ್ನು ನೀಡಬೇಕೆಂದು ಆಗ್ರಹಿಸಿದರು.

ಪ್ರೊ.ಲಿಂಗರಾಜ ಕಮ್ಮಾರ ಮಾತನಾಡಿ, ಸಾಹಿತ್ಯ ಕ್ಷೇತ್ರಕ್ಕೆ ಹಲವು ತಿರುವು ನೀಡಿದ ಹಾವೇರಿ ಜಿಲ್ಲೆಯಲ್ಲಿ ಈವರೆಗೆ ಸಾಹಿತ್ಯ ಸಮ್ಮೇಳನ ನಡೆಯದಿರುವುದು ದುರದೃಷ್ಟಕರ ಎಂದರು.
ಕಾದಂಬರಿ, ಕಾವ್ಯ ಹಾಗೂ ಕನ್ನಡ ಪರ ಹೋರಾಟ ಚಳವಳಿಗಳಿಗೆ ತನ್ನದೇ ಆದ ಕೊಡುಗೆ ನೀಡಿದ ಜಿಲ್ಲೆ ಸಾಂಸ್ಕೃತಿಕ ಗಂಡುಮೆಟ್ಟಿನ ಸ್ಥಳವಾಗಿದೆ. ಇಂತಹ ಜಿಲ್ಲೆಯಲ್ಲಿ ಕೇಂದ್ರ ಸಾಹಿತ್ಯ ಪರಿಷತ್ ತಾನಾಗಿಯೇ ಸಮ್ಮೇಳನ ನೀಡಬೇಕಿತ್ತು ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT