ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿಯಲ್ಲಿ ದಲೈ ಲಾಮಾ

Last Updated 18 ಜುಲೈ 2013, 6:25 IST
ಅಕ್ಷರ ಗಾತ್ರ

ಹಾವೇರಿ: ಮುಂಡಗೋಡಕ್ಕೆ ಹೋಗುವ ಮಾರ್ಗದಲ್ಲಿ ಕೆಲಕಾಲ ನಗರದ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ ಬೌದ್ಧ ಧರ್ಮಗುರು ದಲೈ ಲಾಮಾ ಅವರನ್ನು ಜಿಲ್ಲಾಡಳಿತ  ಸ್ವಾಗತಿಸಿತು.

ಶಿವಮೊಗ್ಗದಿಂದ ಮುಂಡಗೋಡಕ್ಕೆ ಹೋಗುವ ಸಂದರ್ಭದಲ್ಲಿ ದಲೈ ಲಾಮಾ ಅವರು ಸ್ವಲ್ಪ ಕಾಲ ತಂಗಲು ಪ್ರವಾಸಿ ಮಂದಿರಕ್ಕೆ ಆಗಮಿಸಿದಾಗ, ಜಿಲ್ಲಾಧಿಕಾರಿ ಪಾಂಡುರಂಗ ನಾಯಕ, ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ, ಜಿ.ಪಂ. ಸಿಇಒ ಉಮೇಶ ಕುಸುಗಲ್, ಉಪವಿಭಾಗಾಧಿಕಾರಿ ಕೆ.ಚನ್ನಬಸಪ್ಪ, ತಹಶೀಲ್ದಾರ್ ಶಿವಲಿಂಗು, ಡಿವೈಎಸ್‌ಪಿ ಸಿ.ಸಿ.ಪಾಟೀಲ, ಸಿಪಿಐ ಪಂಪಾಪತಿ ಅವರು ಹಾವೇರಿಯ ಏಲಕ್ಕಿ ಮಾಲೆ ಹಾಕಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಜತೆ ಕುಶಲೋಪರಿ ವಿಚಾರ ಮಾಡಿದ ದಲೈ ಲಾಮಾ ಅವರು, ಜಿಲ್ಲೆಯ ಅಧಿಕಾರಿಗಳ ಪರಿಚಯ ಮಾಡಿಕೊಂಡರು. ನಂತರ ಪ್ರವಾಸಿ ಮಂದಿರದೊಳಗೆ ಐದು ನಿಮಿಷಗಳ ಕಾಲ ವಿಶ್ರಾಂತಿ ಪಡೆದು ವಾಪಸ್ಸು ಮುಂಡಗೋಡಕ್ಕೆ ಪ್ರಯಾಣ ಬೆಳೆಸಲು ಸಜ್ಜಾದರು.

ಬಿಗಿ ಬಂದೋಬಸ್ತ್ ನಡುವೆಯೇ ಅಧಿಕಾರಿಗಳ ಜೊತೆ ಛಾಯಾಚಿತ್ರಕ್ಕೆ ದಲೈ ಲಾಮಾ ಪೋಸ್ ನೀಡಿದರು. ಪ್ರವಾಸಿ ಮಂದಿರದಲ್ಲಿದ್ದ ಹಿರಿಯ ಅಧಿಕಾರಿಗಳು ಹಾಗೂ ಅಧಿಕಾರಿ ವರ್ಗದ ವಾಹನ ಚಾಲಕರು ಅವರ ಜತೆ ನಿಂತು ಫೋಟೋ ತೆಗೆಸಿಕೊಳ್ಳಲು ಮುಂದಾದರು. ದಲೈ ಲಾಮಾ ಅವರು ಎಲ್ಲರನ್ನು ನಸು ನಗುತ್ತಲೇ ಹತ್ತಿರ ಕರೆದು ಅವರ ಹೆಗಲ ಮೇಲೆ ಕೈಯಿಟ್ಟು ಫೋಟೋ ತೆಗಿಸಿಕೊಂಡರು. ನಂತರ ಎಲ್ಲರತ್ತ ಕೈ ಬೀಸಿ ಮುಂಡಗೋಡದತ್ತ ಪ್ರಯಾಣ ಬೆಳೆಸಿದರು.

ದಲೈ ಲಾಮಾ ಸ್ವಾಗತಿಸಲು ಬಂದಿದ್ದ ಅಧಿಕಾರಿಗಳು, `ಅವರನ್ನು ಕಂಡ ಮಾತನಾಡಿದ ನಾವುಗಳೇ ಧನ್ಯರು' ಎಂದು ಮಾತನಾಡುತ್ತಿದ್ದರಲ್ಲದೇ, ಫೋಟೋಗ್ರಾಫರ್‌ಗಳಿಗೆ ನನ್ನ ಫೋಟೋ ತೆಗೆದಿದ್ದರೆ ನಮಗೆ ನೀಡುವಂತೆ ಮನವಿ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಡಿವೈಎಸ್‌ಪಿ ರ‌್ಯಾಂಕಿಂಗ್ ಅಧಿಕಾರಿಗಳ ಭದ್ರತೆ ಒದಗಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT