ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿಯಲ್ಲಿ ಶೀಘ್ರವೇ `ಹೈಮಾಸ್ಟ್ ಬೆಳಕು'

Last Updated 17 ಡಿಸೆಂಬರ್ 2012, 7:27 IST
ಅಕ್ಷರ ಗಾತ್ರ

ಹಾವೇರಿ: ಮೂಲ ಸೌಕರ್ಯಗಳ ಕೊರತೆಯ ನಡುವೆ ಜಿಲ್ಲಾ ಕೇಂದ್ರವಾದ ಹಾವೇರಿ ನಗರಲ್ಲಿ ಹೈಮಾಸ್ಟ್ ದೀಪಗಳ ಬೆಳಕು ಶೀಘ್ರದಲ್ಲಿಯೇ ಜಗಮಘಿಸಲಿದೆ.ನಗರದ ಬಹುತೇಕ ಕಡೆಗಳಲ್ಲಿ ಸರಿಯಾದ ಬೀದಿ ದೀಪ ಇಲ್ಲ. ಸಮರ್ಪಕ ಬೀದಿ ದೀಪ ಅಳವಡಿಸುವಂತೆ ಜನರು ಆಗ್ರಹವೂ ನಿಂತಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಸ್ವಲ್ಪಮಟ್ಟಿಗಾದರೂ ಪರಿಹಾರ ಕಂಡುಕೊಳ್ಳಲು ನಗರಸಭೆ ಮುಂದಾಗಿದೆ.

ಅದರ ಪರಿಣಾಮವೇ ನಗರದ ಪ್ರಮುಖ ವೃತ್ತಗಳಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗುತ್ತಿದ್ದು, ಇನ್ನೂ ಮುಂದೆ ಹಗಲು ಮತ್ತು ರಾತ್ರಿ ನಡುವಿನ ವ್ಯತ್ಯಾಸ ಗೊತ್ತಾಗದಷ್ಟು ಬೆಳಕು ರಾತ್ರಿ ಸಮಯದಲ್ಲಿ ನಗರದಾದ್ಯಂತ ಗೋಚರಿಸಲಿದೆ ಎಂಬ ವಿಶ್ವಾಸವನ್ನು ನಗರಸಭೆ ಅಧಿಕಾರಿಗಳು ವ್ಯಕ್ತಪಡಿಸುತ್ತಿದ್ದಾರೆ.

16 ಹೈಮಾಸ್ಟ್ ದೀಪ: ನಗರದಲ್ಲಿ ಈವರೆಗೆ ಕೇವಲ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣ ಹೊರತು ಪಡಿಸಿದರೆ ಈವರೆಗೆ ನಗರದ ಯಾವ ಪ್ರದೇಶದಲ್ಲಿಯೂ ಹೈಮಾಸ್ಟ್ ದೀಪಗಳು ಇರಲಿಲ್ಲ. ಮರ್ಕ್ಯೂರಿ ಬಲ್ಬಗಳೇ ಸಾಮಾನ್ಯವಾಗಿ ಕಾಣಸಿಗುತ್ತಿದ್ದವು. ಈಗ ನಗರಸಭೆ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣ ಅಭಿವೃದ್ಧಿ ಅನುದಾನದಲ್ಲಿ ನಗರದಾದ್ಯಂತ 16 ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗುತ್ತಿದೆ.

ಸುಮಾರು 65ರಿಂದ 70 ಲಕ್ಷ ರೂ.ವೆಚ್ಚದಲ್ಲಿ ಎರಡು ರೀತಿಯ ಹೈಮಾಸ್ಟ್ ದೀಪಗಳನ್ನು ಹಾಕಲಾಗುತ್ತದೆ. ಅವುಗಳಲ್ಲಿ ಎರಡು ಪ್ರಕಾರದ ಅಂದರೆ, 16 ಹಾಗೂ 12 ಮೀಟರ್ ಎತ್ತರದ ಕಂಬಗಳಲ್ಲಿ ಹೈಮಾಸ್ಟ್ ದೀಪಗಳಿವೆ. 16 ಮೀಟರ್ ಕಂಬದಲ್ಲಿ 8 ದೀಪಗಳು, 12 ಮೀಟರ್ ಕಂಬದಲ್ಲಿ  4 ದೀಪಗಳಿರುತ್ತವೆ.

16 ಮೀಟ್‌ರ್‌ನ 8 ಹಾಗೂ 12 ಮೀಟರ್‌ನ 8 ಕಂಬಗಳನ್ನು ಹಾಕಲಾಗುತ್ತದೆ. 16 ಮೀಟರ್ ಕಂಬವೊಂದಕ್ಕೆ ಏಳು ಲಕ್ಷ ರೂಪಾಯಿ, 12 ಮೀಟರ್ ಕಂಬವೊಂದಕ್ಕೆ ಐದು ಲಕ್ಷ ರೂಪಾಯಿ ವೆಚ್ಚ ಮಾಡಲಾಗುತ್ತದೆ ಎಂದು ಹೇಳುತ್ತಾರೆ ನಗರಸಭೆ ಅಧ್ಯಕ್ಷ ಜಗದೀಶ ಮಲಗೋಡ.

ಎಲ್ಲೆಲ್ಲಿ ಹೈಮಾಸ್ಟ್ ದೀಪ: ನಗರದ ಹದಿನಾರು ಕಡೆಗಳಲ್ಲಿ ಈ ಹೈಮಾಸ್ಟ್ ದೀಪಗಳನ್ನು ಹಾಕುವ ಕಾರ್ಯ ಪ್ರಗತಿಯಲ್ಲಿದ್ದು, ಅವುಗಳಲ್ಲಿ ಹುತಾತ್ಮ ಮೈಲಾರ ಮಹಾದೇವ, ಮಹಾತ್ಮಾ ಗಾಂಧಿ ವೃತ್ತ, ಜಯಪ್ರಕಾಶ ನಾರಾಯಣ ವೃತ್ತ, ಜೆ.ಎಚ್.ಪಟೇಲ್ ವೃತ್ತ, ಬಸವೇಶ್ವರ ವೃತ್ತ, ದುಂಡಿ ಬಸವೇಶ್ವರ ವೃತ್ತ, ಶಿವರಾಮ ಕಾರಂತ ವೃತ್ತ, ಗುತ್ತಲ ವೃತ್ತ, ಹುಕ್ಕೇರಿಮಠ ವೃತ್ತ, ಸಿಂದಗಿಮಠ ವೃತ್ತ ಪ್ರಮುಖವಾಗಿವೆ.

ಈಗಾಗಲೇ ಎಲ್ಲ ವೃತ್ತಗಳಲ್ಲಿ ಕಂಬಗಳನ್ನು ಅಳವಡಿಸುವ ಕಾರ್ಯ ಮುಗಿದಿದ್ದು, ದೀಪಗಳ ಜೋಡಣಾ ಕಾರ್ಯ ಪ್ರಗತಿಯಲ್ಲಿದೆ. ಇನ್ನೊಂದು ವಾರದಲ್ಲಿ ದೀಪಗಳ ಅಳವಡಿಸುವ ಕಾರ್ಯವೂ ಮುಗಿಯಲಿದೆ ಎಂದು ಹೇಳುತ್ತಾರೆ ಹೈಮಾಸ್ಟ್ ದೀಪ ಅಳವಡಿಸುವ ಗುತ್ತಿಗೆ ಪಡೆದ ಹುಬ್ಬಳ್ಳಿಯ ಹಿರೇಗೌಡರ.

ನಿರ್ವಹಣೆ ಮುಖ್ಯ: ನಗರದಲ್ಲಿ 60-70 ಲಕ್ಷ ರೂಪಾಯಿ ಖರ್ಚು ಮಾಡಿ ಹೈಮಾಸ್ಟ್ ದೀಪದ ಬೆಳಕು ನೀಡುತ್ತಿರುವ ನಗರಸಭೆ ಕಾರ್ಯ ಶ್ಲಾಘನೀಯ. ಆದರೆ, ಅವುಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕಾದ ಅಗತ್ಯವಿದೆ ಎಂದು ಹೇಳುತ್ತಾರೆ ನಗರದ ನಿವಾಸಿ ರಾಮಣ್ಣ ಅಗಡಿ.

ನಗರದ ಬಸ್ ನಿಲ್ದಾಣ ಬಳಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಅಳವಡಿಸಲಾದ ಹೈಮಾಸ್ಟ್ ದೀಪ ಸುಮಾರು ಆರೇಳು ತಿಂಗಳು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದ್ದರೂ ಅದರ ಬಗ್ಗೆ ಗಮನಹರಿಸಿರಲಿಲ್ಲ. ನಗರದ ಸಾರ್ವಜನಿಕರು, ಮಾಧ್ಯಮದವರು  ದುರಸ್ತಿಗಾಗಿ ಒತ್ತಾಯ ಮಾಡಿದಾಗ ಅದನ್ನು ದುರಸ್ತಿಗೊಳಿಸಲಾಯಿತು. ಅದೇ ಪ್ರವೃತ್ತಿ ಈ   ಹೈಮಾಸ್ಟ್ ದೀಪಗಳ ನಿರ್ವಹಣೆಯಲ್ಲಿ ಮುಂದುವರೆಸದೇ, ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕೆಂದು ಎಂದು ಅವರು ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT