ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ಜಿಲ್ಲಾ ಪಂಚಾಯಿತಿ : ರೂ 544.02 ಕೋಟಿ ಬಜೆಟ್ ಮಂಡನೆ

Last Updated 15 ಜೂನ್ 2012, 6:10 IST
ಅಕ್ಷರ ಗಾತ್ರ

ಹಾಸನ: ಹಾಸನ ಜಿಲ್ಲಾ ಪಂಚಾಯಿತಿಯ 2012- 13ನೇ ಸಾಲಿನ ಬಜೆಟ್ ಅನ್ನು ಜಿ.ಪಂ. ಅಧ್ಯಕ್ಷ ಬಿ.ಆರ್. ಸತ್ಯನಾರಾಯಣ ಗುರುವಾರ ಮಂಡಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಜಿ.ಪಂ.ನ 544.02 ಕೋಟಿ ರೂಪಾಯಿಯ ಬಜೆಟ್ ಅನ್ನು ಮಂಡಿಸಲಾಯಿತು. ಕಳೆದ ವರ್ಷ 524.93 ಕೋಟಿ ರೂಪಾಯಿಯ ಬಜೆಟ್ ಮಂಡಿಸ ಲಾಗಿತ್ತು. ಇದಕ್ಕೆ ಹೋಲಿಸಿದರೆ ಈ ವರ್ಷ ಸುಮಾರು 20ಕೋಟಿ ರೂಪಾಯಿ ಹೆಚ್ಚು ಅನುದಾನವನ್ನು ನಿರೀಕ್ಷಿಸಿದಂತಾಗಿದೆ.

ಒಟ್ಟಾರೆ ಅನುದಾನದಲ್ಲಿ ಯೋಜನಾ ಕಾರ್ಯಕ್ರಮ ಗಳಿಗೆ 177.68 ಕೋಟಿ ರೂಪಾಯಿ ಹಾಗೂ ಯೋಜನೇತರ ಕಾರ್ಯಕ್ರಮಗಳಿಗೆ 366.33 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ.

ಯೋಜನಾ ವೆಚ್ಚದಲ್ಲಿ ಪ್ರಥಮಿಕ ಮತ್ತು ಸೆಕೆಂಡರಿ ಸಾಮಾನ್ಯ ಶಿಕ್ಷಣಕ್ಕೆ ಗರಿಷ್ಠ 43.68 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ನಂತರದ ಸ್ಥಾನಗಳನ್ನು ಕ್ರಮವಾಗಿ ಸಣ್ಣ ನೀರಾವರಿ (30.95 ಕೋಟಿ), ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮ, (26.02 ಕೋಟಿ), ಕುಟುಂಬ ಕಲ್ಯಾಣ ಕಾರ್ಯಕ್ರಮ (16.11 ಕೋಟಿ) ಹಾಗೂ ಅಂಗವಿಕಲರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಕಾರ್ಯಕ್ರಮಗಳಿಗೆ (11.40 ಕೋಟಿ) ಮೀಸಲಿಡಲಾಗಿದೆ. ಯೋಜನಾ ವೆಚ್ಚದಲ್ಲಿ ಸಂಬಳಕ್ಕಾಗಿಯೇ  41.68 ಕೋಟಿ ರೂಪಾಯಿ ವೆಚ್ಚವಾಗಲಿದೆ.

ಯೋಜನೇತರ ವೆಚ್ಚಗಳಲ್ಲಿ ಸಾಮಾನ್ಯ ಶಿಕ್ಷಣಕ್ಕೆ ಗರಿಷ್ಠ 247.90 ಕೋಟಿ ರೂಪಾಯಿ ವೆಚ್ಚವಾಗಲಿದೆ. ಉಳಿದಂತೆ ವೈದ್ಯಕೀಯ ಮತ್ತು ಜನಾರೋಗ್ಯ (32.46 ಕೋಟಿ), ಪೌಷ್ಠಿಕ ಆಹಾರ (16.01 ಕೋಟಿ) ಹಾಗೂ ಇತರ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳಿಗೆ 13.29 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ಹಣ ಬಿಡುಗಡೆಗೆ ಒತ್ತಾಯ: ಬರ ಕಾಮಗಾರಿಗಾಗಿ ಶಾಸಕರ ನೇತೃತ್ವದ ಕ್ರಿಯಾ ಸಮಿತಿಗಳಿಗೆ ಬಿಡುಗಡೆ ಮಾಡಿದ ತಲಾ 30ಲಕ್ಷ ರೂಪಾಯಿ ಅನುದಾನದಲ್ಲಿ ತಮ್ಮ ಕ್ಷೇತ್ರದಲ್ಲಿ ಯಾವುದೇ ಕಾಮಗಾರಿ ಕೈಗೊಂಡಿಲ್ಲ. ಹಣ ಬಿಡುಗಡೆ ಮಾಡಿಸಲು ಶಾಸಕರ ಮೇಲೆ ಒತ್ತಡ ಹೇರಬೇಕು ಎಂದು ಅನೇಕ ಸದಸ್ಯರು ಜಿ.ಪಂ. ಅಧ್ಯಕ್ಷರನ್ನು ಒತ್ತಾಯಿಸಿದರು.

`ಈ ಅನುದಾನವನ್ನು ನಂಬಿ ಈಗಾಗಲೇ 16 ಕೊಳವೆ ಬಾವಿಗಳನ್ನು ಕೊರೆಯಿಸಿದ್ದೇವೆ, ಈವರೆಗೆ ಹಣ ನೀಡಿಲ್ಲ~ ಎಂದು ಬಿಜೆಪಿಯ ಲಕ್ಷ್ಮಣ ದೂರಿದರೆ, ನಮ್ಮ ಕ್ಷೇತ್ರದಲ್ಲಿ ಎಲ್ಲೆಲ್ಲಿ ಕೊಳವೆ ಬಾವಿ ತೋಡಿಸಬೇಕು ಎಂದು ನಾವು ನೀಡಿದ್ದ ವರದಿಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಬದಲಾವಣೆ ಮಾಡಿ ಕ್ರಿಯಾ ಸಮಿತಿಗೆ ನೀಡಿದ್ದಾರೆ. ಅದಕ್ಕೆ ಅಧಿಕಾರ ಕೊಟ್ಟವರು ಯಾರು ಎಂದು ಜಿ.ಪಂ. ಮಾಜಿ ಅಧ್ಯಕ್ಷ ಹುಚ್ಚೇಗೌಡ ಪ್ರಶ್ನಿಸಿದರು. ತಮ್ಮ ಕ್ಷೇತ್ರದಲ್ಲೂ ಕೊಳವೆ ಬಾವಿ ಕೊರೆಯಿಸಿಲ್ಲ ಎಂದೂ ಅವರು ದೂರಿದರು.

ಈ ಬಗ್ಗೆ ಮಾತನಾಡಿದ ಅಧ್ಯಕ್ಷ ಬಿ.ಆರ್. ಸತ್ಯನಾರಾಯಣ, `ಹಣ ಬಿಡುಗಡೆ ಮಾಡುವಂತೆ ಶಾಸಕರ ಮೇಲೆ ಒತ್ತಡ ಹೇರುವ ಅಧಿಕಾರ ಜಿಲ್ಲಾ ಪಂಚಾಯಿತಿಗೆ ಇಲ್ಲ. ಶಾಸಕರು ಮತ್ತು ಜಿ.ಪಂ. ಸದಸ್ಯರ ಮಧ್ಯೆ ಉತ್ತಮ ಬಾಂಧವ್ಯ ಇದ್ದರೆ ಹಣ ಬಿಡುಗಡೆಯಾಗುತ್ತದೆ.

ಕೆಲವು ಕಡೆ ಬಾಂಧವ್ಯ ಇಲ್ಲದೆ ಸಮಸ್ಯೆಯಾಗಿದೆ. ಆದರೆ ಸರ್ಕಾರ ಜಿಲ್ಲಾಧಿಕಾರಿ ಅವರಿಗೆ ಮೂರು ಕೋಟಿ ರೂಪಾಯಿ ನೀಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಅದನ್ನು ಬಿಡುಗಡೆ ಮಾಡಲು ಲಿಖಿತವಾಗಿ ಸೂಚಿಸಿದರೆ ಬಿಡುಗಡೆ ಮಾಡಲು ಸಿದ್ಧ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಉಸ್ತುವಾರಿ ಸಚಿವರ ಮೇಲೆ ಒತ್ತಡ ಹೇರುವ ಕೆಲಸವನ್ನು ಮಾಡಬೇಕು ಎಂದು ಬಿಜೆಪಿ ಸದಸ್ಯರನ್ನು ಒತ್ತಾಯಿಸಿದರು.

ಶಾಸಕರ ನೇತೃತ್ವದ ಸಮಿತಿ ಹಾಗೂ ಜಿ.ಪಂ. ಸದಸ್ಯರ ಮಧ್ಯೆ ಇಂಥ ಸಮಸ್ಯೆ ಬರಬಹುದು ಎಂಬ ನಿರೀಕ್ಷೆ ಮೊದಲೇ ಇದ್ದುದರಿಂದ ಸರ್ಕಾರ ನೇರವಾಗಿ ಜಿ.ಪಂ.ಗೆ 14.40 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಈ ಹಣದಿಂದಲೇ ಈಗಾಗಲೇ ಕೆಲವು ಕೊಳವೆ ಬಾವಿಗಳನ್ನು ತೆಗೆಸಿದ್ದೇವೆ, ಅಗತ್ಯ ಇರುವಲ್ಲಿ ಇನ್ನಷ್ಟು ಹಣ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಂಜನ್ ಕುಮಾರ್ ಭರವಸೆ ನೀಡಿದರು.

ಜಿ.ಪಂ. ಉಪಾಧ್ಯಕ್ಷೆ ಸುಲೋಚನಾ ರಾಮಕೃಷ್ಣ, ಸ್ಥಾಯಿ ಸಮಿತಿ ಸದಸ್ಯ ಎಸ್.ದ್ಯಾವಯ್ಯ, ಸ್ವಾಮಿಗೌಡ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT